ಅವ್ಯವಸ್ಥೆಯ ತಾಣವಾದ ಕೊರಟಗೆರೆ ತಾಲ್ಲೂಕು ಕ್ರೀಡಾಂಗಣ

ಕೊರಟಗೆರೆ: ಪಟ್ಟಣದಲ್ಲಿ ತಾಲ್ಲೂಕು ಆಡಳಿತಕ್ಕೆ ಸೇರಿದ ಕ್ರೀಡಾಂಗಣವಿದೆ. ಆದರೆ, ಅದು ಸದ್ಯ ಅನಾಥವಾಗಿದ್ದು, ಅಲ್ಲಿ ಯಾರು, ಏನು ಬೇಕಾದರೂ ಮಾಡಬಹುದು ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ವಿಶಾಲವಾದ ಮೈದಾನ, ಒಳಾಂಗಣ ಕ್ರೀಡಾಂಗಣವು ನೇರವಾಗಿ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯ ಸುಪರ್ದಿನಲ್ಲಿ ಬರುತ್ತದೆ. ಅವ್ಯವಸ್ಥೆಯ ಆಗರವಾಗಿರುವ ಈ ಕ್ರೀಡಾಂಗಣಕ್ಕೆ ವಿದ್ಯುತ್ ಸೌಲಭ್ಯವಿಲ್ಲ. ಕುಡಿಯುವ ನೀರಂತೂ ಮೊದಲೇ ಇಲ್ಲ, ಜೊತೆಗೆ ಕಾಂಪೌಂಡ್ ಗೋಡೆಗಳಿಗೆ ಗೇಟ್‌ಗಳು ಇರುವುದಿಲ್ಲ. ಕ್ರೀಡಾಪಟುಗಳಿಗೆ ಅಭ್ಯಾಸ ಮಾಡಲು ಅಂಕಣಗಳು ಹಾಳಾದ ಸ್ಥಿತಿಯಲ್ಲಿವೆ.

ಕ್ರೀಡಾಪಟುಗಳಿಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಕ್ರೀಡಾ ಸಾಮಗ್ರಿಗಳನ್ನು ಒದಗಿಸಿಲ್ಲ. ಕ್ರೀಡಾಂಗಣದ ಕಾಂಪೌಂಡ್‌ಗೆ ಗೇಟ್‌ಗಳು ಇಲ್ಲದೇ ಇರುವುದರಿಂದ ಕುಡುಕರ ತಾಣವಾಗಿ ಇಸ್ಪೀಟ್ ಜೂಜು ಆಡುವವರ ಮತ್ತು ಅನೈತಿಕ ಚಟುವಟಿಕೆ ನಡೆಸುವವರ ತಾಣವಾಗಿ ಮಾರ್ಪಟ್ಟಿದೆ.

ವಿಶಾಲವಾದ ಕ್ರೀಡಾಂಗಣದ ಗೋಡೆಗಳಿಗೆ ಗೇಟ್‌ಗಳು ಇಲ್ಲದಿರುವುದರಿಂದ ಯಾರು, ಯಾವಾಗ ಬೇಕಾದರೂ ಮೈದಾನಕ್ಕೆ ಹೋಗಿ ಬರಬಹುದು. ಮನುಷ್ಯರಷ್ಟೇ ಅಲ್ಲ, ಬೀದಿ ನಾಯಿಗಳು, ಬಿಡಾಡಿ ದನಗಳು, ಹಂದಿಗಳು ಕೂಡ ಓಡಾಡಿಕೊಂಡಿರುತ್ತವೆ.

ಪ್ರತಿ ವರ್ಷ ಗಣರಾಜ್ಯೋತ್ಸವ ದಿನ, ಸ್ವಾತಂತ್ರ್ಯ ದಿನೋತ್ಸವ ದಿನದಂದು ಎಲ್ಲವೂ ಸುವ್ಯವಸ್ಥಿತವಾಗಿರುತ್ತದೆ. ಅದು ಮುಗಿದ ನಂತರ ಮತ್ತದೇ ಅವ್ಯವಸ್ಥೆಯ ತಾಣವಾಗಿ ಬದಲಾಗುತ್ತದೆ.

ಕ್ರೀಡಾಂಗಣಕ್ಕೆ ಲಕ್ಷಾಂತರ ರೂಪಾಯಿ ಆದಾಯ ಬರುತ್ತದೆ. ಕ್ರೀಡಾ ಚಟುವಟಿಕೆಗಳು, ವಸ್ತು ಪ್ರದರ್ಶನ, ರಾಜಕೀಯ ಪಕ್ಷಗಳ ಸಮಾವೇಶ, ಸಂಘ ಸಂಸ್ಥೆಗಳು ಆಯೋಜಿಸುವ ಕಾರ್ಯಕ್ರಮಗಳಿಂದ ಬಾಡಿಗೆ ಬರುತ್ತದೆ. ಹೀಗಿದ್ದರೂ ಕ್ರೀಡಾಂಗಣದ ನಿರ್ವಹಣೆಗೇಕೇ ಆಸಕ್ತಿ ತೋರುತ್ತಿಲ್ಲ ಎನ್ನುವುದು ಜನರ ಪ್ರಶ್ನೆಯಾಗಿದೆ.

ಕ್ರೀಡಾಂಗಣಕ್ಕೆ ರಾತ್ರಿ ಕಾವಲುಗಾರರನ್ನು ನೇಮಿಸಿಲ್ಲ. ಇನ್ನು ಮುಂದೆಯಾದರೂ ಇಲಾಖೆಯವರು ಸೂಕ್ತ ಕ್ರಮವಹಿಸಿ ಕ್ರೀಡಾಂಗಣದ ಅಭಿವೃದ್ಧಿಗಾಗಿ ಗಮನ ಹರಿಸಬೇಕಿದೆ ಎಂದು ಕೊರಟಗೆರೆಯ ನಾಗರೀಕರು, ಕ್ರೀಡಾಪಟುಗಳು, ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.

ಕ್ರೀಡಾಂಗಣಕ್ಕೆ ಮೂಲಭೂತ ಸೌಕರ್ಯ ಕಲ್ಪಿಸುವಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಬೇಜವಾಬ್ದಾರಿ, ಕರ್ತವ್ಯದಲ್ಲಿ ನಿರ್ಲಕ್ಷ್ಯತನ ತೋರುತ್ತಿದ್ದಾರೆ. ಇದುವರೆವಿಗೂ ಒಂದೇ ಒಂದು ತಾಲ್ಲೂಕ್ ಕ್ರೀಡಾಂಗಣ ಸಮಿತಿ ಸಭೆ ಕರೆದಿಲ್ಲ. ಈ ಕ್ರೀಡಾಂಗಣ ಸಮಿತಿಗೆ ಶಾಸಕರು ಅಧ್ಯಕ್ಷರಾಗಿರುತ್ತಾರೆ. ಕ್ರೀಡಾಂಗಣ ಸಮಿತಿಯ ಖಾತೆಗೆ ಪ್ರತಿ ವರ್ಷ ರೂ. 4,೦೦ ಲಕ್ಷಗಳಂತೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಅನುದಾನವನ್ನು ಕ್ರೀಡಾಂಗಣ ನಿರ್ವಹಣೆ ಹಾಗೂ ಮೂಲಭೂತ ಸೌಕರ್ಯಕ್ಕಾಗಿ ನೀಡಲಾಗುತ್ತದೆ. ಈ ಅನುದಾನದಲ್ಲಿ ಶಾಸಕರು ಹಾಗೂ ಅಧ್ಯಕ್ಷರು ತಾಲ್ಲೂಕು ಕ್ರೀಡಾಂಗಣ ಸಮಿತಿ ಇವರ ಅನುಮತಿ ಪಡೆದು ಕ್ರೀಡಾಂಗಣದಲ್ಲಿ ಮೂಲಭೂತ ಸೌಕರ್ಯ ಕಲ್ಪಿಸುವಲ್ಲಿ ತುಮಕೂರಿನ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ವಿಫಲರಾಗಿದ್ದಾರೆ.


ಜಿ.ವಿ.ವೀರೇಂದ್ರ ಪ್ರಸಾದ್, ಅಧ್ಯಕ್ಷರು, ಗ್ರಾಮೀಣ ಮಾಹಿತಿ ತಂತ್ರಾಜ್ಞಾನ ಕೇಂದ್ರ ಹಾಗೂ ಯುವಜನ ಅಭಿವೃದ್ಧಿ ಸಂಸ್ಥೆ.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಯುಕ್ತರ ಸುತ್ತೋಲೆಯಂತೆ ಜಿಲ್ಲಾ ಮತ್ತು ತಾಲ್ಲೂಕ್ ಕ್ರೀಡಾಂಗಣಗಳು, ಕ್ರೀಡಾಂಗಣ ನಿರ್ವಹಣೆಗಾಗಿ ಹೊರಗುತ್ತಿಗೆ/ ಸೇವಾಗುತ್ತಿಗೆ ಆಧಾರದಲ್ಲಿ ಭದ್ರತಾ ಸಿಬ್ಬಂದಿಯನ್ನು ತಲಾ 8 ಗಂಟೆಗಳ ಪಾಳಗಳಲ್ಲಿ ದಿನ ಇದಕ್ಕೆ 3 ಜನ ಸಿಬ್ಬಂದಿಗಳನ್ನು ನೇಮಿಸಲು ಆದೇಶಿಸಿದ್ದರೂ ಕೊರಟಗೆರೆ ತಾಲ್ಲೂಕ್ ಕ್ರೀಡಾಂಗಣಕ್ಕೆ ಭದ್ರತಾ ಸಿಬ್ಬಂದಿಯನ್ನು ನೇಮಕ ಮಾಡದೇ ಕರ್ತವ್ಯ ಲೋಪ ಎಸಗಿದ್ದಾರೆ. ಇವರ ವಿರುದ್ಧ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಶಿಸ್ತು ಕ್ರಮ ಜರುಗಿಸಬೇಕು.

ಜಿ.ಟಿ.ವೆಂಕಟೇಶ್ವರ್, ಕಾರ್ಯದರ್ಶಿ, ಗ್ರಾಮೀಣ ಮಾಹಿತಿ ತಂತ್ರಾಜ್ಞಾನ ಕೇಂದ್ರ ಹಾಗೂ ಯುವಜನ ಅಭಿವೃದ್ಧಿ ಸಂಸ್ಥೆ.

ಪ್ರಜಾಮನ ನ್ಯೂಸ್ ಡೆಸ್ಕ್.

prajamana.com 9448797745

You May Also Like

error: Content is protected !!