ಹಗಲೆಲ್ಲಾ ಕಾದಿದಕ್ಕೆ ರಾತ್ರಿ ವ್ಯಾಕ್ಸಿನ್ ಬಂತು


ಹುಳಿಯಾರು: ಹಗಲೆಲ್ಲಾ ಕೋವಿಡ್ ವಾಕ್ಸಿನ್ ಈಗ ಬರುತ್ತದೆ ಆಗ ಬರುತ್ತದೆಂದು ಕಾದು ಕೊನೆಗೆ ಪಟ್ಟು ಹಿಡಿದು ರಾತ್ರಿ ವ್ಯಾಕ್ಸಿನ್ ಹಾಕಿಸಿಕೊಂಡು ಮನೆಗೆ ತೆರಳಿದ ಘಟನೆ ಹುಳಿಯಾರು ಹೋಬಳಿಯ ಕುರಿಹಟ್ಟಿ ಗ್ರಾಮದಲ್ಲಿ ಶುಕ್ರವಾರ ಜರುಗಿದೆ.

ಶುಕ್ರವಾರ ಜಿಲ್ಲೆಯಾದ್ಯಂತ ವಿಶೇಷ ವ್ಯಾಕ್ಸಿನ್ ಮೇಳ ಹಮ್ಮಿಕೊಂಡ ಪರಿಣಾಮ ಕುರಿಹಟ್ಟಿ ಗ್ರಾಮದಲ್ಲೂ ವ್ಯಾಕ್ಸಿನ್ ಹಾಕಲಾಗುವುದು ಎಂದು ಅಲ್ಲಿನ ಆಶಾ ಕಾರ್ಯಕರ್ತೆ ಮನೆಮನೆಗೆ ತೆರಳಿ ಮಾಹಿತಿ ನೀಡಿದ್ದಾರೆ. ಅಲ್ಲದೆ ಹೋಬಳಿಯ ಗಾಣದಾಳು ಗ್ರಾಮ ಪಂಚಾಯ್ತಿಯಿಂದ ಪಿಡಿಓ ಟಾಂ ಟಾಂ ಸಹ ಹೊಡೆಸಿ ಪ್ರಚಾರ ಮಾಡಿದ್ದಾರೆ.

ಪರಿಣಾಮ ವ್ಯಾಕ್ಸಿನ್ ಹಾಕಿಸಿಕೊಳ್ಳಲು ವೃದ್ಧರು, ಮಹಿಳೆಯರು ಸೇರಿದಂತೆ ೧೮ ವರ್ಷ ಮೇಲ್ಪಟ್ಟ ನೂರಾರು ಮಂದಿ ಮುಂಜಾನೆಯೇ ಅಲ್ಲಿನ ಶಾಲೆಯ ಹತ್ತಿರ ಜಮಾಯಿಸಿದ್ದಾರೆ. ತೋಟದಮನೆಯಿಂದ ಎರಡ್ಮೂರು ಕಿಮೀ ನಡೆದುಕೊಂಡು ಸಹ ಹೋಗಿದ್ದಾರೆ. ಮನೆಯಲ್ಲಿ ಸಣ್ಣ ಮಕ್ಕಳನ್ನು ಬಿಟ್ಟು ಹೋಗಿದ್ದಾರೆ. ಕೃಷಿಯ ಕೆಲಸ ಕಾರ್ಯಗಳನ್ನು ಬದಿಗಿತ್ತಿ ವ್ಯಾಕ್ಸಿನ್‌ಗಾಗಿ ಸರತಿ ಸಾಲಿನಲ್ಲಿ ನಿಂತಿದ್ದಾರೆ. ಆದರೆ ಮಧ್ಯಾಹ್ನ ಸಮೀಪಿಸಿದರೂ ಕುರಿಹಟ್ಟಿಗೆ ವ್ಯಾಕ್ಸಿನ್ ಬರಲಿಲ್ಲ.

ಇದರಿಂದ ಬೇಸತ್ತ ಜನರು ಅಲ್ಲಿನ ಆಶಾ ಕಾರ್ಯಕರ್ತೆ ಹಾಗೂ ಗ್ರಾಪಂ ಸದಸ್ಯರನ್ನು ಜನರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ನೀವು ಪ್ರಚಾರ ಮಾಡಿದರಿಂದ ಕೆಲಸ ಕಾರ್ಯ ಬಿಟ್ಟು ಬಂದಿದ್ದು ವ್ಯಾಕ್ಸಿನ್ ಹಾಕಿಸಿಕೊಳ್ಳದೆ ಹಿಂದಿರುಗುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಕೊನೆಗೆ ತಹಸೀಲ್ದಾರ್ ಆದಿಯಾಗಿ ಕುರಿಹಟ್ಟಿಗೆ ವ್ಯಾಕ್ಸಿನ್ ತಲುಪದ ಬಗ್ಗೆ ಪರಿಶೀಲಿಸಿದಾಗ ಹುಳಿಯಾರು ಪಂಚಾಯ್ತಿಯವರೇ ಬಂದ ಅಷ್ಟೂ ವ್ಯಾಕ್ಸಿನ್‌ಗಳನ್ನು ಬಳಸಿಕೊಂಡಿರುವುದು ಬೆಳಕಿಗೆ ಬಂದಿದೆ.

ಕುರಿಹಟ್ಟಿ ಗ್ರಾಮವು ಗಾಣಧಾಳು ಪಂಚಾಯ್ತಿಗೆ ಸೇರುತ್ತದೆ. ಗಾಣಧಾಳು ಗ್ರಾಪಂನ ಎಲ್ಲಾ ಹಳ್ಳಿಗಳೂ ಹೊಯ್ಸಲಕಟ್ಟೆ ಆಸ್ಪತ್ರೆ ವ್ಯಾಪ್ತಿಗೆ ಸೇರುತ್ತದೆ. ಆದರೆ ಕುರಿಹಟ್ಟಿ ಗ್ರಾಮ ಮಾತ್ರ ಹುಳಿಯಾರು ಆಸ್ಪತ್ರೆಗೆ ಸೇರುತ್ತದೆ. ಹಾಗಾಗಿ ಹೊಯ್ಸಲಕಟ್ಟೆ ಆಸ್ಪತ್ರೆಯವರು ತಮ್ಮ ವ್ಯಾಪ್ತಿಯಲ್ಲಿಲ್ಲ ಕುರಿಹಟ್ಟಿ ಗ್ರಾಮಕ್ಕೆ ವ್ಯಾಕ್ಸಿನ್ ಕಳುಹಿಸಿಲ್ಲ. ಹುಳಿಯಾರು ಪಂಚಾಯ್ತಿ ವ್ಯಾಪ್ತಿಯಲಿಲ್ಲ ಎನ್ನುವ ನೆಪವೊಡ್ಡಿ ಕುರಿಹಟ್ಟಿಗೆ ವ್ಯಾಕ್ಸಿನ್ ಕಳುಹಿಸದೆ ಮುಖ್ಯಾಧಿಕಾರಿ ಪೂರ್ತಿ ಬಳಸಿದ್ದಾರೆ.

ಈ ಆಸ್ಪತ್ರೆ ಮತ್ತು ಪಂಚಾಯ್ತಿ ವ್ಯಾಪ್ತಿಯ ಕಿತ್ತಾಟದಲ್ಲಿ ಕುರಿಹಟ್ಟಿ ಗ್ರಾಮಕ್ಕೆ ವ್ಯಾಕ್ಸಿನ್ ತಲುಪದೆ ಜನರ ತಿಂಡಿಊಟ ಬಿಟ್ಟು ಕಾಯುವಂತಾಯಿತು. ತಹಸೀಲ್ದಾರ್ ಅವರು ಅಸಲಿ ಸಮಸ್ಯೆ ಪತ್ತೆ ಹಚ್ಚುವಷ್ಟರಲ್ಲಿ ಹುಳಿಯಾರು ಪಪಂ ಮುಖ್ಯಾಧಿಕಾರಿ ವ್ಯಾಕ್ಸಿನ್ ಖಾಲಿ ಮಾಡಿದ್ದರು. ಹಾಗಾಗಿ ಕುರಿಹಟ್ಟಿಗೆ ಮಾತು ಕೊಟ್ಟಂತೆ ವ್ಯಾಕ್ಸಿನ್ ಕೊಡುವುದು ತಹಸೀಲ್ದಾರ್ ಅವರಿಗೆ ತಲೆಬಿಸಿಯಾಯಿತು. ಮತ್ತೊಂದು ಕ್ಯಾಂಪ್ ಮಾಡಿ ವ್ಯಾಕ್ಸಿನ್ ಹಾಕುತ್ತೇವೆಂದರೂ ಕುರಿಹಟ್ಟಿ ಗ್ರಾಮದ ಜನರು ಮಾತ್ರ ಕೇಳಲು ತಯಾರಿರಲಿಲ್ಲ.

ರಾತ್ರಿಯಾದರೂ ಸರಿ ವ್ಯಾಕ್ಸಿನ್ ಹಾಕಿಸಿಕೊಳ್ಳದೆ ಇಲ್ಲಿಂದ ಕದಲುವುದಿಲ್ಲ ಎಂದು ಬಿಗಿ ಪಟ್ಟು ಹಿಡಿದರು. ಕೊನೆಗೆ ತಹಸೀಲ್ದಾರ್ ತೇಜಸ್ವಿನಿ ಅವರು ರಾತ್ರಿ ೭-೩೦ ಕ್ಕೆ ಆರೋಗ್ಯ ಸಿಬ್ಬಂದಿ ಸಹಿತ ಕುರಿಹಟ್ಟಿಗೆ ೧೫೦ ವ್ಯಾಕ್ಸಿನ್ ಕಳುಹಿಸಿಕೊಟ್ಟರು. ರಾತ್ರಿ ೯ ಗಂಟೆಯವರೆವಿಗೂ ವ್ಯಾಕ್ಸಿನ್ ಹಾಕಲಾಯಿತಾದರೂ ಇನ್ನೂ ಐವತ್ತರವತ್ತು ಮಂದಿ ಬಾಕಿ ಇರುವಾಗಲೇ ವ್ಯಾಕ್ಸಿನ್ ಖಾಲಿಯಾಯಿತು. ಕೊನೆಗೆ ಮತ್ತೊಂದು ದಿನ ಖಂಡಿತ ಪ್ರತ್ಯೇಕ ಕ್ಯಾಂಪ್ ಮಾಡಿ ವ್ಯಾಕ್ಸಿನ್ ಹಾಕುತ್ತೇವೆ ಸಹಕರಿಸಿ ಎಂದು ಅಲ್ಲಿನ ಪಂಚಾಯ್ತಿ ಸದಸ್ಯರು ಹಾಗೂ ಆಶಾ ಕಾರ್ಯಕರ್ತೆಯರು ಮನವಿ ಮಾಡಿ ಉಳಿದ ಜನರನ್ನು ಅಲ್ಲಿಂದ ಕಳುಹಿಸಿ ಶುಕ್ರವಾರದ ವ್ಯಾಕ್ಸಿನ್ ಮೇಳ ಮುಗಿಸಿದರು.

     

ಪ್ರಜಾಮನ ನ್ಯೂಸ್ ಡೆಸ್ಕ್.

prajamana.com 9448797745

You May Also Like

error: Content is protected !!