ವೇಶ್ಯಾವಾಟಿಕೆ ನಡೆದ ವಸತಿಗೃಹಕ್ಕೆ ಎಸ್.ಪಿ.ಭೇಟಿ ಪರಿಶೀಲನೆ

ತುಮಕೂರು:ಸೋಮವಾರ ರಾತ್ರಿ ವೇಶ್ಯಾವಾಟಿಕೆ ಅಡ್ಡೆಯ ಮೇಲೆ ಪೊಲೀಸರು ದಾಳಿ ನಡೆಸಿದ್ದ ವಸತಿಗೃಹಕ್ಕೆ ಇಂದು ಭೇಟಿ ನೀಡಿದ್ದ ಜಿಲ್ಲಾ ಪೊಲೀಸ್ ರಾಹುಲ್ ಕುಮಾರ್ ಶಹಾಪುರವಾಡ್ ಪರಿಶೀಲನೆ ನಡೆಸಿದರು.

ಮಹಿಳಾ ಮತ್ತು ಮಕ್ಕಳ ರಕ್ಷಣಾ ಸಮಿತಿಯ ದೂರು ಹಾಗೂ ಒಡನಾಡಿ ಸಂಸ್ಥೆಯ ಮಾಹಿತಿ ಮೇರೆಗೆ ಕ್ಯಾತ್ಸಂದ್ರದ ವಸತಿಗೃಹವೊಂದರ ಮೇಲೆ ದಾಳಿ ನಡೆಸಿದ ಪೊಲೀಸರು,ಕಲ್ಕತಾ ಮೂಲದ ಐವರು ಯುವತಿಯರನ್ನು ರಕ್ಷಿಸಿದ್ದು, ಇಬ್ಬರು ಯುವಕರನ್ನು ಬಂಧಿಸಿದ್ದಾರೆ.ಈ ಹಿನ್ನೆಲೆಯಲ್ಲಿ ಇಂದು ಕ್ಯಾತ್ಸಂದ್ರದ ಸದರಿ ವಸತಿಗೃಹಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಎಸ್ಪಿ, ಅವರು ಪೊಲೀಸರಿಂದ ತಪ್ಪಿಸಿಕೊಳ್ಳಲು ವೇಶ್ಯಾವಾಟಿಕೆ ನಡೆಸುವವರು ಮಾಡಿರುವ ಖತರನಾಕ್ ಐಡಿಯಾ ಕಂಡು ಬೆಕ್ಕಸಬೆರಗಾಗಿದ್ದಾರೆ. ಪೊಲೀಸರಿಂದ ತಪ್ಪಿಸಿಕೊಳ್ಳಲು ಡ್ರಸಿಂಗ್ ಟೇಬಲ್‌ನ ಅಡಿಯಲ್ಲಿಯೇ ಅಡಗುತಾಣ ನಿರ್ಮಿಸಿಕೊಂಡು, ಅವಿತುಕೊಳ್ಳಲು ಅವಕಾಶ ಕಲ್ಪಿಸಿದ್ದು ಕಂಡು ಬಂದಿದೆ.

ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಎಸ್ಪಿ ರಾಹುಲ್‌ಕುಮಾರ ಶಹಾಪುರವಾಡ್,ಮಹಿಳಾ ಮತ್ತು ಮಕ್ಕಳ ರಕ್ಷಣಾಧಿಕಾರಿ ಶ್ರೀಮತಿ ವಾಸಂತಿ ಉಪ್ಪಾರ್ ಮತ್ತು ಒಡನಾಡಿ ಸಂಸ್ಥೆಯ ಮಾಹಿತಿ ಮೇರೆಗೆ ಪಿ.ಎಸ್.ಐ ಅವಿನಾಶ್ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿದ್ದಾರೆ.ವಸತಿ ಗೃಹದ ಕೆಲ ಭಾಗವನ್ನು ಒಡೆದು ಹಾಕಲಾಗಿದ್ದು,ಪಾಳುಬಿದ್ದ ಕಟ್ಟಡದಂತಿರುವುದರಿಂದ ಸಾರ್ವಜನಿಕರ ಗಮನ ಕಡಿಮೆ.ಇದನ್ನೇ ಬಂಡವಾಳ ಮಾಡಿಕೊಂಡು ಈ ರೀತಿಯ ದೃಷ್ಕೃತದಲ್ಲಿ ತೊಡಗಿರುವುದು ಕಂಡು ಬಂದಿದೆ. ಇಬ್ಬರು ಯುವಕರನ್ನು ಬಂಧಿಸಿದ್ದು, ಕಲ್ಕತ್ತಾ ಮೂಲದ ಐವರು ಯುವತಿಯರನ್ನು ರಕ್ಷಿಸಲಾಗಿದೆ ಎಂದು ವಿವರ ನೀಡಿದರು.

ಕ್ಯಾತ್ಸಂದ್ರ ಪೊಲೀಸರಿಗಿಂತ ಮೊದಲೇ ಬೇರೆ ಬೇರೆ ಸಂಸ್ಥೆ ಮಾಹಿತಿ ದೊರೆತ್ತಿದ್ದು, ಈ ಸಂಬಂಧ ಸ್ಥಳೀಯ ಪೊಲೀಸರಿಂದ ವಿವರ ಕೇಳಲಾಗುವುದು. ನಗರದಲ್ಲಿ ಇಂತಹ ಪ್ರಕರಣಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಲಾಗುವುದು ಎಂದು ಎಸ್.ಪಿ. ರಾಹುಲ್ ಕುಮಾರ್ ಶಹಪೂರ್‌ವಾಡ್ ತಿಳಿಸಿದರು.

ಪ್ರಜಾಮನ ನ್ಯೂಸ್ ಡೆಸ್ಕ್.

prajamana.com 9448797745

You May Also Like

error: Content is protected !!