ಆದಾಯದ ಸಿಹಿ ಉಣಬಡಿಸುವ ಜೇನು ಸಾಕಾಣಿಕೆ!

ಕೃಷಿ ವಲಯದಲ್ಲಿನ ಹಲವು ಹೊಸ ಪ್ರಯೋಗಗಳಂತೆ ಸಮಗ್ರ ಕೃಷಿಯೊಂದಿಗೆ ಜೇನು ಕೃಷಿಯೂ ಬೆಸೆದುಕೊಂಡಿದೆ. ಇತ್ತೀಚಿನ ದಿನಗಳಲ್ಲಿ ಜನಪ್ರಿಯವಾಗುತ್ತಿರುವ ಜೇನು ಸಾಕಾಣಿಕೆಯು ಕೃಷಿ ವಲಯಕ್ಕೆ ಚೈತನ್ಯ ತುಂಬುತ್ತಿದ್ದು, ಆದಾಯ ತರಬಲ್ಲ ಉದ್ಯೋಗವಾಗಿದೆ.

ಕೃಷಿ ಲಾಭದಾಯಕವಲ್ಲವೆಂದು ಕೃಷಿ ವಲಯವನ್ನೇ ತ್ಯಜಿಸಿ ನಗರದತ್ತ ಮುಖ ಮಾಡುತ್ತಿರುವವರ ನಡುವೆ ಕೃಷಿಯಲ್ಲೇ ನಮ್ಮ ಕಾಯಕ ಎಂದವರಿಗೆ ಜೇನು ಕೃಷಿ ಸಿಹಿಯನ್ನುಣಬಡಿಸಿದೆ. ಉನ್ನತ ಶಿಕ್ಷಣ ಮಾಡಿ ನಿರುದ್ಯೋಗದಿಂದ ಬೇಸತ್ತವರಿಗೆ, ಕಂಪನಿಗಳಲ್ಲಿ ಉತ್ತಮ ಸಂಬಳವಿದ್ದರೂ ಹುದ್ದೆಗೆ ಹೊಂದಿಕೊಳ್ಳಲಾಗದೆ ಕೆಲಸವನ್ನೇ ತ್ಯಜಿಸಿ ಬಂದ ಅದೆಷ್ಟೋ ಮಂದಿಗೆ, ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕೆಂದ ನಾರಿ ಮಣಿಯರ ಬದುಕಿಗೆ ಜೇನು ಕೃಷಿ ಖುಷಿ ನೀಡಿದೆ.

ಭಾರತ ದೇಶ ಎಲ್ಲಾ ಕ್ಷೇತ್ರಗಳಲ್ಲಿಯೂ ಪ್ರಗತಿ ಹೊಂದುತ್ತಿದ್ದು, ಸರ್ಕಾರವು ಜೇನು ಕೃಷಿಗೂ ಸಹಾಯಧನ, ಪ್ರೋತ್ಸಾಹಧನ, ಜೇನು ಸಾಕಾಣಿಕೆ ತರಬೇತಿ ನೀಡುವ ಮೂಲಕ ಉತ್ತೇಜನ ನೀಡುತ್ತಿದೆ. ಇದರಿಂದ ಬಹುತೇಕರು ತೆಂಗು, ಬಾಳೆ, ಅಡಕೆಯಂತಹ ಮುಖ್ಯ ವಾಣಿಜ್ಯ ಬೆಳೆಗಳ ಜೊತೆಗೆ ಜೇನು ಕೃಷಿಯನ್ನೂ ಅಳವಡಿಸಿಕೊಂಡು ವರ್ಷ ಪೂರ್ತಿ ಆದಾಯ ತರುವ ಉಪಕಸುಬನ್ನಾಗಿಸಿಕೊಂಡು ಜೀವನ ಕಟ್ಟಿಕೊಂಡಿದ್ದಾರೆ.

ರಾಜ್ಯದಲ್ಲಿ 18 ಸಾವಿರ ಜೇನು ಸಾಕಾಣಿಕೆಗಾರರು 5.81 ಲಕ್ಷ ಕೆ.ಜಿ. ಉತ್ತಮ ಗುಣಮಟ್ಟದ ಜೇನುತುಪ್ಪ ಉತ್ಪಾದಿಸುತ್ತಿದ್ದು, 8.14 ಕೋಟಿ ರೂ.ಗಳ ವಹಿವಾಟು ನಡೆಸಲಾಗುತ್ತಿದೆ. ಜಿಲ್ಲೆಯಲ್ಲಿಯೂ ಸುಮಾರು 35೦೦ ರೈತರು ಜೇನು ಕೃಷಿ ಅಳವಡಿಸಿಕೊಂಡಿದ್ದಾರೆ.

ಕೇವಲ ತುಪ್ಪಕ್ಕಾಗಿ ಜೇನು ಕೃಷಿಯಲ್ಲ;-

ಜೇನು ಸಾಕಾಣಿಕೆ ಕೇವಲ ಜೇನು ತುಪ್ಪ ಮತ್ತು ಮೇಣದ ಸಲುವಾಗಿ ಮಾತ್ರ ಎನ್ನುವ ಅಭಿಪ್ರಾಯವಿದೆ. ಆದರೆ, ತೋಟಗಾರಿಕೆ ಇಲಾಖೆ ತಜ್ಞರ ಪ್ರಕಾರ ಶೇ.7೦ರಷ್ಟು ಆಹಾರ ಬೆಳೆಗಳು, ಶೇ.8೦ಕ್ಕೂ ಹೆಚ್ಚು ಹಣ್ಣು ತರಕಾರಿ ಮತ್ತು ಅರಣ್ಯ ಬೆಳೆಗಳು ಹಾಗೂ ಶೇ.5೦ಕ್ಕಿಂತಲೂ ಹೆಚ್ಚು ಬೀಜದಿಂದ ವಂಶಾಭಿವೃದ್ಧಿ ಹೊಂದುವ ಸಸ್ಯಗಳು ಪರಾಗ ಸ್ವರ್ಶಕ್ಕಾಗಿ ಜೇನುನೊಣಗಳನ್ನೇ ಅವಲಂಬಿಸಿವೆ. ಸ್ನೇಹ ಮತ್ತು ಸಂಘಜೀವಿಗಳಾಗಿರುವ ಜೇನುನೊಣಗಳು ಗಿಡ-ಬಳ್ಳಿಗಳಿಂದ ಮಕರಂದ ಸಂಗ್ರಹಿಸಿ ಜೇನು ಉತ್ಪಾದಿಸುತ್ತವೆ. ಜೇನುಗಳ ಜೊತೆಗಿನ ಒಡನಾಟ ಮನಸ್ಸಿಗೆ ಮುದ ನೀಡುವುದಲ್ಲದೆ ಜೇನು ಉತ್ಪನ್ನಗಳಲ್ಲಿ ವೈದ್ಯಕೀಯ ಅಂಶಗಳಿರುವುದೂ ಜೇನು ಸಾಕಾಣಿಕೆಯ ಮಹತ್ವ ಹೆಚ್ಚಾಗಿದೆ. ಭೂಮಿಯ ಮೇಲೆ ಇರುವ ವಿವಿಧ ಬಗೆಯ ಕೀಟಗಳಲ್ಲಿ ಜೇನುನೊಣಗಳು ಮಾನವನಿಗೆ ಬಹುಪಯೋಗಕಾರಿಯಾಗಿವೆ. ಭಾರತದಲ್ಲಿ ಔಷಧಿ ತಯಾರಿಕೆ, ಆಹಾರ ಪದಾರ್ಥಗಳು, ಬೇಕರಿ ಉತ್ಪನ್ನಗಳು ಹಾಗೂ ಸೌಂದರ್ಯವರ್ಧಕಗಳಲ್ಲಿ ಹೆಚ್ಚಾಗಿ ಜೇನಿನ ಬಳಕೆಯಾಗುತ್ತಿದೆ. ಜೇನು ಸಾಗಾಣಿಕೆಯ ಮುಖ್ಯ ಉದ್ದೇಶ ಬೆಳೆಗಳಲ್ಲಿ ಪರಾಗಸ್ಪರ್ಷ ಹೆಚ್ಚಿಸುವುದು ಹಾಗೂ ಜೇನು ಮತ್ತು ಮೇಣ ಉತ್ಪಾದಿಸುವುದಾಗಿದೆ.

ಜೇನುನೊಣಗಳ ಬಗೆಗಳು:

ದೇಶದಲ್ಲಿ ೪ ದೇಶಿಯ ತಳಿ ಮತ್ತು ೧ ವಿದೇಶಿ ತಳಿ ಸೇರಿದಂತೆ ಒಟ್ಟು ೫ ಬಗೆಯ ಜೇನು ನೊಣಗಳಿವೆ. ಮುಖ್ಯವಾಗಿ ತುಡುಬೆ, ಕಡ್ಡಿ/ಕೋಲು, ಹೆಜ್ಜೇನು, ಮುಜೆಂಟಿ, ಪಾಶ್ಚಿಮಾತ್ಯ ತುಡುಬೆ ಜೇನು(ವಿದೇಶಿ) ತಳಿ ಜೇನುಗಳಿದ್ದು ತುಡುಬೆ, ಮುಜೆಂಟಿ ಮತ್ತು ಪಾಶ್ಚಿಮಾತ್ಯ ತುಡುಬೆ ಜೇನುಗಳು ಸಾಕುತಳಿಗಳಾಗಿವೆ. ಜಿಲ್ಲೆಯಲ್ಲಿ ಹೆಚ್ಚು ರೈತರು ಕೃಷಿ ಜೊತೆಗೆ ತುಡುಬೆ ಜೇನು ಸಾಕಾಣಿಕೆಯನ್ನು ಉಪ ಕಸುಬಾಗಿಸಿಕೊಂಡಿದ್ದಾರೆ.

ಜೇನುಕೃಷಿಯ ಮಹತ್ವ:

ಜೇನುಗಾರಿಕೆಯು ಸುಮಾರು ೩ ಸಾವಿರ ವರ್ಷಗಳಿಂದ ಬಳಕೆಯಲ್ಲಿರುವ ಗ್ರಾಮೀಣ ಉಪಕಸುಬಾಗಿದೆ. ರಾಜ್ಯದಲ್ಲಿ ಜೇನುಗಾರಿಕೆಯು ಕೃಷಿ/ ತೋಟಗಾರಿಕೆ ಅರಣ್ಯ ಆಧಾರಿತವಾಗಿದ್ದು, ರೈತ ಸಮುದಾಯಕ್ಕೆ ಹೆಚ್ಚಿನ ಆದಾಯ ತರುವಂತಹ ಉಪ ಕಸುಬಾಗಿದೆ. ಕೃಷಿ ಬೆಳೆಗಳಲ್ಲಿ ಜೇನು ನೊಣಗಳಿಂದ ಪರಾಗಸ್ಪರ್ಶವಾಗುವುದರಿಂದ ಅಧಿಕ ಹಾಗೂ ಉತ್ತಮ ಗುಣಮಟ್ಟದ ಇಳುವರಿ ಪಡೆಯಬಹುದಾಗಿದೆ.

ಭೂರಹಿತ/ ಸಣ್ಣ/ ಅತಿಸಣ್ಣ ರೈತ ಕಾರ್ಮಿಕರು, ಮಹಿಳೆಯರು, ಅಂಗವಿಕಲರೂ ಸಹ ಜೇನುಗಾರಿಕೆಯನ್ನು ಕೈಗೊಳ್ಳಬಹುದಾಗಿದೆ. ಅಲ್ಲದೆ ಹೂ, ತರಕಾರಿ, ಕಾಫಿ, ಕೃಷಿ ಬೆಳೆಗಳಲ್ಲಿ, ಗುಡ್ಡಗಾಡು ಪ್ರದೇಶಗಳು ಹಾಗೂ ಮನೆಯಂಗಳದಲ್ಲಿಯೂ ಸಹ ಜೇನು ಕೃಷಿಯನ್ನು ಪ್ರಾರಂಭಿಸಬಹುದಾಗಿದೆ. ಜೇನುಗಾರಿಕೆಯು ಜನಪ್ರಿಯವಾಗುತ್ತಿರುವ ಬಹು ಉಪಯೋಗಿ ಸಣ್ಣ ಕೈಗಾರಿಕೆ ಉದ್ಯಮವಾಗಿದ್ದು, ಹೆಚ್ಚಿನ ಬಂಡವಾಳವಿಲ್ಲದೆ ಜೇನುಗಾರಿಕೆ ಮಾಡಬಹುದಾಗಿದೆ. ಜೇನು ಸಾಕಾಣಿಕೆ ಆರಂಭಿಸುವ ಮೊದಲು ಅದರ ಪರಿಚಯ ಮತ್ತು ಸೂಕ್ತ ಮಾರ್ಗದರ್ಶನ ಪಡೆಯುವುದು ಅತಿ ಅವಶ್ಯಕ.

ತೋಟಗಾರಿಕೆ ಮತ್ತು ಕೃಷಿ ಬೆಳೆಗಳಲ್ಲಿ ಪರಾಗಸ್ಪರ್ಶವು ಅತ್ಯಂತ ಪ್ರಮುಖ ಪ್ರಕ್ರಿಯೆಯಾಗಿದ್ದು, ಈ ಪ್ರಕ್ರಿಯೆಯಲ್ಲಿ ಜೇನುನೊಣಗಳ ಪಾತ್ರವೂ ಅಮೂಲ್ಯವಾಗಿದೆ.

ಜೇನು ಸಾಕಾಣಿಕೆಯಿಂದ ಮುಖ್ಯವಾಗಿ ಸೌತೆ/ಕುಂಬಳ ಬೆಳೆಯಲ್ಲಿ ಇಳುವರಿಯ ಪ್ರಮಾಣ ಶೇ.21-67 ಏಲಕ್ಕಿಯಲ್ಲಿ ಶೇ.9೦-5, ಕಲ್ಲಂಗಡಿ ಶೇ.4೦-9೦, ಲವಂಗ ಬೆಳೆಯಲ್ಲಿ ಶೇ.೫೦-೬೦ ಸೇರಿದಂತೆ ವಿವಿಧ ಬೆಳೆಗಳಲ್ಲಿ ವಿವಿಧ ಪ್ರಮಾಣದಲ್ಲಿ ಇಳುವರಿಯನ್ನು ಹೆಚ್ಚಿಸಿಕೊಂಡು ಲಾಭ ಪಡೆಯಬಹುದಾಗಿದೆ.

ಜೇನುತುಪ್ಪದ ವಿಶೇಷ:-

ಜೇನು ತುಪ್ಪವು ಮಾನವನಿಗೆ ನಿಸರ್ಗ ನೀಡಿರುವ ಕೊಡುಗೆಯಾಗಿದ್ದು, ಅಪಾರ ಔಷಧಿಯ ಗುಣಗಳನ್ನು ಹೊಂದಿದೆ. 1೦೦ ಗ್ರಾಂ ಜೇನುತುಪ್ಪವು 6 ಮೊಟ್ಟೆ, 13೦೦ ಮಿ.ಲೀ. ಹಾಲಿ, 2ಕೆ.ಜಿ. ಹಸಿ ಬಟಾಣಿ, 8೦೦ ಗ್ರಾಂ ಒಣ ದ್ರಾಕ್ಷಿ, 125೦ ಗ್ರಾಂ ಸೇಬಿ, 2 ಕೆ.ಜಿ ಕ್ಯಾರೆಟ್‌ಗೆ ಸಮವಾಗಿದೆ. ಒಟ್ಟಾರೆಯಾಗಿ 1೦೦ ಗ್ರಾಂ ಜೇನುತುಪ್ಪದ ಶಕ್ತಿ 4೦೦ ಕ್ಯಾಲೊರೀಸ್‌ಗೆ ಸಮವಾಗಿದೆ.

ಜೇನು ಉತ್ಪಾದನೆ ಮತ್ತು ಉತ್ಪನ್ನಗಳು:-

  • ಒಂದು ಜೇನುಪೆಟ್ಟಿಗೆಯಿಂದ ಸರಾಸರಿ 5 ರಿಂದ 7 ಕೆ.ಜಿ. ಜೇನು ತುಪ್ಪವನ್ನು 4 ರಿಂದ 1೦ ದಿನಗಳ ಅಂತರದಲ್ಲಿ, ಏಪ್ರಿಲ್‌ನಿಂದ ಮೇ ಮಾಹೆಯವರೆಗೆ ಒಟ್ಟು ನಾಲ್ಕು ಬಾರಿ ಬೆಳೆಗಳ ಆಧಾರದ ಮೇಲೆ ಪಡೆಯಬಹುದು.
  • ಒಂದು ಜೇನು ಪೆಟ್ಟಿಗೆಯಿಂದ ಸರಾಸರಿ 2 ರಿಂದ 3 ಮರಿ ಜೇನು ಕುಟುಂಬಗಳನ್ನು ಡಿಸೆಂಬರ್ ಮತ್ತು ಜನವರಿ ಮಾಹೆಗಳಲ್ಲಿ ಪಡೆಯಬಹುದು.
  • ಜೇನುಗಾರಿಕೆಯಿಂದ ಜೇನುತುಪ್ಪ, ರಾಜ ಶಾಹಿ ರಸ ಪರಾಗ. ಜೇನು ವಿಷ ಅಂಟು, ಜೇನು ಮೇಣ ಉತ್ಪಾದನೆಯಾಗುತ್ತದೆ. ಇದನ್ನು ಮನೆ ಔಷಧಿಯಾಗಿ, ಸೌಂದರ್ಯ ವೃದ್ಧಿಗಾಗಿ ಹಾಗೂ ದೇಹದಲ್ಲಿನ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಬಳಸಲಾಗುತ್ತದೆ.
  • ಜೇನು ಮೇಣ ಮತ್ತು ಜೇನು ಅಂಟುಗಳನ್ನು ಬಣ್ಣ ತಯಾರಿಕಾ ಘಟಕಗಳಲ್ಲಿ ಉಪಯೋಗಿಸಲಾಗುತ್ತದೆ.

ಸರ್ಕಾರದಿಂದ ದೊರೆಯುವ ಸಹಾಯಧವನ್ನು ಸದ್ಬಳಕೆ ಮಾಡಿಕೊಂಡು ಕಡಿಮೆ ಬಂಡವಾಳದಿಂದ ಹೆಚ್ಚು ಲಾಭ ಪಡೆಯುವ ಕಸುಬಗಳಲ್ಲಿ ಜೇನು ಕೃಷಿಯೂ ಮುಂಚೂಣಿಯಲ್ಲಿದೆ. ರೈತರು ಹೆಚ್ಚಾಗಿ ಜೇನು ಕೃಷಿ ತರಬೇತಿ ಪಡೆದು ಜೇನು ಕೃಷಿಯನ್ನು ಅಳವಡಿಸಿಕೊಳ್ಳುವಲ್ಲಿ ಮುಂದಾಗಬೇಕು ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಬಿ. ರಘು ತಿಳಿಸಿದ್ದಾರೆ.

ಜೇನು ಕೃಷಿಯು ರೈತರ ಉಪಕಸುಬು ಮಾತ್ರವಲ್ಲದೆ, ಪರೋಕ್ಷವಾಗಿ ಮುಖ್ಯ ಬೆಳೆಗಳ ಇಳುವರಿ ಹೆಚ್ಚು ಮಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಇತ್ತೀಚಿನ ದಿನಗಳಲ್ಲಿ ರೈತರ ಲಾಭದಾಯಕ ಕೃಷಿ ವಿಧಾನವಾಗಿದೆ. ಸಮಗ್ರ ಕೃಷಿಯನ್ನಾಗಿ ಜೇನು ಕೃಷಿಯನ್ನೂ ಅಳವಡಿಸಿಕೊಂಡರೆ ರೈತರು ತಮ್ಮ ಆದಾಯ ಹೆಚ್ಚಿಸಿಕೊಂಡು ಜೇನು ಕೃಷಿಯಲ್ಲಿ ಸಿಹಿ ಕಾಣಬಹುದು.

You May Also Like

error: Content is protected !!