ಜೆಡಿಎಸ್‌ನಲ್ಲಿ ಪಕ್ಷಾಂತರ ಪರ್ವ..! ತುಮಕೂರಿನಲ್ಲಿ ‘ತೆನೆ’ ಇಳಿಸಿ ‘ಕೈ’ ಹಿಡಿಯಲು ನಾಯಕರು ಸಜ್ಜು

ತುಮಕೂರು: ‘ಕಿಂಗ್‌ ಮೇಕರ್‌’ ಖ್ಯಾತಿಯ ಪ್ರಾದೇಶಿಕ ಪಕ್ಷ ಜೆಡಿಎಸ್‌ಗೆ ತನ್ನ ಭದ್ರ ಕೋಟೆಯಲ್ಲೇ ನೆಲೆ ಕಳೆದುಕೊಳ್ಳುವ ಆತಂಕ ಎದುರಾಗಿದೆ. ಪಕ್ಷ ಸಂಘಟನೆ ದುರ್ಬಲಗೊಳ್ಳುತ್ತಿದೆ ಎಂಬ ಮಾತುಗಳ ನಡುವೆಯೇ ಹಾಲಿ – ಮಾಜಿ ಶಾಸಕರನ್ನು ಒಳಗೊಂಡಂತೆ ಪಕ್ಷದ ನಾನಾ ನಾಯಕರು ತೆನೆ ಇಳಿಸಿ ‘ಕೈ’ ಹಿಡಿಯುವ ಮನಸ್ಸು ಮಾಡಿದ್ದು, ಕಾಂಗ್ರೆಸ್‌ ಮುಖಂಡರೊಂದಿಗೆ ಸಂಪರ್ಕದಲ್ಲಿದ್ದಾರೆ. ಹಾಗಾಗಿ ಮುಂಬರುವ ವಿಧಾನಸಭೆ ಚುನಾವಣೆಗೂ ಮುನ್ನ ಹಲವು ನಾಯಕರು ಜೆಡಿಎಸ್‌ ತೊರೆಯುವುದು ಖಚಿತವಾಗಿದೆ.

ಕೋಲಾರ ಶಾಸಕ ಕೆ. ಶ್ರೀನಿವಾಸಗೌಡ ಜೆಡಿಎಸ್‌ಗೆ ರಾಜೀನಾಮೆ ನೀಡಿದ್ದು, ಕಾಂಗ್ರೆಸ್‌ಗೆ ಸೇರುವುದಾಗಿ ಅಧಿಕೃತವಾಗಿಯೇ ಘೋಷಿಸಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದ ಶಾಸಕ, ಮಾಜಿ ಸಚಿವ ಜಿ. ಟಿ. ದೇವೇಗೌಡರು ಕೂಡ ಪಕ್ಷ ಬಿಡುವುದನ್ನು ಬಹಿರಂಗಗೊಳಿಸಿದ್ದಾರೆ. ಇವರಿಬ್ಬರ ಬೆನ್ನಲ್ಲೇ ತುಮಕೂರು, ರಾಮನಗರ, ಮಂಡ್ಯ, ಹಾಸನ ಸೇರಿದಂತೆ ಜೆಡಿಎಸ್‌ನ ಭದ್ರ ನೆಲೆಯಾಗಿರುವ ಹಳೆ ಮೈಸೂರು ಪ್ರಾಂತ್ಯದಲ್ಲಿ ಜೆಡಿಎಸ್‌ ನಾಯಕರ ಪಕ್ಷಾಂತರ ಪರ್ವಕ್ಕೆ ಮುಹೂರ್ತ ಸನಿಹವಾಗುತ್ತಿದೆ.

ತುಮಕೂರಲ್ಲಿ ವಿಧಾನ ಪರಿಷತ್‌ ಸದಸ್ಯ ಬೆಮಲ್‌ ಕಾಂತರಾಜ್‌ ಕಾಂಗ್ರೆಸ್‌ ಕಡೆ ಒಲವು ತೋರಿದ್ದಾರೆ. ಗುಬ್ಬಿ ವಿಧಾನಸಭಾ ಕ್ಷೇತ್ರದ ಶಾಸಕ ಎಸ್‌. ಆರ್‌. ಶ್ರೀನಿವಾಸ್‌ ಕೂಡ ಎಚ್‌. ಡಿ. ಕುಮಾರಸ್ವಾಮಿಯವರ ಬಗ್ಗೆ ನೇರಾನೇರವಾಗಿ ಅಸಮಾಧಾನ ಹೊರ ಹಾಕುತ್ತಿದ್ದಾರೆ. ಅಲ್ಲದೆ ಕಾಂಗ್ರೆಸ್‌ ನಾಯಕರ ಜತೆಗೆ ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ. ಶ್ರೀನಿವಾಸ್‌ ತಂತ್ರಕ್ಕೆ ಪ್ರತಿಯಾಗಿ ಎಚ್‌. ಡಿ. ಕುಮಾರಸ್ವಾಮಿ ಉದ್ಯಮಿಯೊಬ್ಬರಿಗೆ ಕ್ಷೇತ್ರದಲ್ಲಿ ಮಣೆ ಹಾಕುವ ಯೋಚನೆಯಲ್ಲಿದ್ದಾರೆಂದು ತಿಳಿದುಬಂದಿದೆ. ಚಿಕ್ಕನಾಯಕನಹಳ್ಳಿ ಮಾಜಿ ಶಾಸಕ ಸಿ. ಬಿ. ಸುರೇಶ್‌ ಬಾಬು ಸಹ ಪಕ್ಷ ಬಿಟ್ಟು ಕಾಂಗ್ರೆಸ್‌ ಟಿಕೆಟ್‌ಗಾಗಿ ಆ ಪಕ್ಷದ ನಾಯಕರೊಂದಿಗೆ ಮಾತುಕತೆಯಲ್ಲಿ ತೊಡಗಿದ್ದಾರೆ ಎನ್ನಲಾಗಿದೆ.

ಹಾಸನ ಜಿಲ್ಲೆಯ ಅರಕಲಗೋಡು ಶಾಸಕ ಎ. ಟಿ. ರಾಮಸ್ವಾಮಿ, ಕೋಲಾರದಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ವೆಂಕಟ ಶಿವಾರೆಡ್ಡಿ ಜೆಡಿಎಸ್‌ ತೊರೆಯಲಿದ್ದಾರೆಂಬ ಮಾತುಗಳಿವೆ. ವೆಂಕಟ ಶಿವಾರೆಡ್ಡಿ ಬಿಜೆಪಿ ನಾಯಕರೊಂದಿಗೆ ಗುರುತಿಸಿಕೊಳ್ಳುತ್ತಿದ್ದು, ಕಮಲ ಮುಡಿಯುವ ಸಾಧ್ಯತೆಯಿದೆ. ಅಂತೆಯೇ ಮಂಡ್ಯದಲ್ಲಿ ಇಬ್ಬರು ಶಾಸಕರು, ಚಿಕ್ಕಬಳ್ಳಾಪುರದಲ್ಲಿ ಕೆಲವು ನಾಯಕರು ಜೆಡಿಎಸ್‌ಗೆ ಗುಡ್‌ಬೈ ಹೇಳಲಿದ್ದಾರೆಂಬ ಸುದ್ದಿ ಸ್ಥಳೀಯ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಜೆಡಿಎಸ್‌ ಕುಟುಂಬ ರಾಜಕಾರಣವಿರುವ ರಾಮನಗರ ಜಿಲ್ಲೆಯ 4 ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್‌ ಸದೃಢವಾಗಿದ್ದರೂ ನಗರಸಭೆ ಸದಸ್ಯರು ಸೇರಿದಂತೆ ಕೆಲವು ಸ್ಥಳೀಯ ನಾಯಕರನ್ನು ಕಾಂಗ್ರೆಸ್‌ ಸೆಳೆದುಕೊಳ್ಳುತ್ತಿದೆ

ಪ್ರಜಾಮನ ನ್ಯೂಸ್ ಡೆಸ್ಕ್.

prajamana.com 9448797745

You May Also Like

error: Content is protected !!