ಆಸ್ಪತ್ರೆಗೆ ಗುರುತಿಸಿದ್ದ ಸ್ಥಳದಲ್ಲಿನ ಅನಧಿಕೃತ ಕಾರ್ಖಾನೆ, ತೆಂಗಿನ ಸಸಿಗಳ ತೆರವು


ಹುಳಿಯಾರು: 1೦೦ ಹಾಸಿಗೆಯುಳ್ಳ ಸರ್ಕಾರಿ ಆಸ್ಪತ್ರೆ ನಿರ್ಮಿಸುವ ಸಲುವಾಗಿ ಹುಳಿಯಾರು-ಶಿರಾ ರಸ್ತೆಯ ಕಂಪನಹಳ್ಳಿ ಸಮೀಪ ಗುರುತಿಸಿದ್ದ ಗೋಮಾಳದಲ್ಲನ ಅನಧಿಕೃತ ಕಾರ್ಖಾನೆ ಹಾಗೂ ತೆಂಗಿನ ಸಸಿಗಳನ್ನು ಗುರುವಾರ ತಹಸೀಲ್ದಾರ್ ಸಮ್ಮುಖದಲ್ಲಿ ತೆರವು ಮಾಡಲಾಯಿತು.

ಸಚಿವ ಜೆ.ಸಿ.ಮಾಧುಸ್ವಾಮಿ ಅವರ ಸೂಚನೆ ಮೇರೆಗೆ ನೂತನ ಆಸ್ಪತ್ರೆ ನಿರ್ಮಿಸುವ ಸಲುವಾಗಿ ಇತ್ತಿಚೆಗಷ್ಟೆ ಡಿಎಚ್‌ಒ ನಾಗೇಂದ್ರಪ್ಪ ಅವರು ಹುಳಿಯಾರು ಸುತ್ತಮುತ್ತ 3 ಸ್ಥಳಗಳನ್ನು ವೀಕ್ಷಿಸಿದರು. ಅಂತಿಮವಾಗಿ ಕಂಪನಹಳ್ಳಿ ಸಮೀಪದ ಗೌಡಗೆರೆ ಸರ್ವೆ ನಂಬರ್ 22 ಸೂಕ್ತವಾದ ಸ್ಥಳವೆಂದು ನಿರ್ಧರಿಸಿದ್ದರು.

ಡಿಎಚ್‌ಒ ನಾಗೇಂದ್ರಪ್ಪ ಅವರು ಭೇಟಿ ನೀಡಿದ್ದ ಸಂರ್ಭದಲ್ಲಿ ಸ್ಥಗಿತಗೊಂಡಿದ್ದ ಇಟ್ಟಿಗೆ ಕಾರ್ಖಾನೆ ಒಂದನ್ನು ಬಿಟ್ಟರೆ ಮತ್ತೇನು ಅಲ್ಲಿರಲಿಲ್ಲ. ಆದರೆ ದಿಡೀರ್ ಕಳೆದ ಎರಡ್ಮೂರು ದಿನಗಳ ಹಿಂದಷ್ಟೆ 2 ಎಕರೆ ಭೂಮಿಯನ್ನು ಸಮತಟ್ಟು ಮಾಡಿಸಿ ಐವತ್ತಕ್ಕೂ ಹೆಚ್ಚು ತೆಂಗಿನ ಸಸಿಗಳನ್ನು ನೆಡಲಾಗಿತ್ತು.

ಈ ಬಗ್ಗೆ ಊರು ಬಂದ ಹಿನ್ನೆಲೆಯಲ್ಲಿ ಗುರುವಾರ ತಹಸೀಲ್ದಾರ್ ತೇಜಸ್ವಿನಿ ಹಾಗೂ ಡಿವೈಎಸ್‌ಪಿ ಚಂದನ್‌ಕುಮಾರ್ ನೇತೃತ್ವದಲ್ಲಿ ಕಂದಾಯ ಹಾಗೂ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಸರ್ವೆ ನಂಬರ್ ೨೨ ರಲ್ಲಿದ್ದ ಅನಧಿಕೃತ ಇಟ್ಟಿಗೆ ಕಾರ್ಖಾನೆ ಹಾಗೂ ತೆಂಗಿನ ಸಸಿಗಳನ್ನು ತೆರವು ಮಾಡಲಾಯಿತಲ್ಲದೆ ತಾಲೂಕು ಸರ್ವೆಯರ್ ಅವರಿಗೆ ಸರ್ವೆ ಮಾಡಿ ಗೋಮಾಳದ ಬೌಂಡರಿ ಫಿಕ್ಸ್ ಮಾಡುವಂತೆ ಸೂಚಿಸಿದರು.


ತೆಂಗಿನ ಸಸಿಗಳ ತೆರವಿಗೆ ಆಕ್ಷೇಪ

    

ತಹಸೀಲ್ದಾರ್ ಅವರು ಸರ್ವೆ ನಂಬರ್ 22 ರಲ್ಲಿ ಅನಧಿಕೃತವಾಗಿ ನೆಟ್ಟಿದ್ದ ತೆಂಗಿನ ಸಸಿಗಳನ್ನು ತೆರವು ಮಾಡಲು ತೆರಳಿದಾಗ ದಿವಂಗತ ರಾಜೀಬಾಯಿಬಲರಾಮಸಿಂಗ್ ಕುಟುಂಬದವರು ಆಕ್ಷೇಪ ವ್ಯಕ್ತಪಡಿಸಿದರು. 1973 ರಲ್ಲಿ 8 ಎಕರೆ ಜಮೀನು ಮಂಜೂರಾಗಿದ್ದು ಸ್ಕೆಚ್ ಸಹ ಮಾಡಿ 2016 ರಲ್ಲಿ ಖಾತೆ ನಂಬರ್ ಕೊಟ್ಟು ಕಂದಾಯ ಸಹ ಕಟ್ಟಿಸಿಕೊಂಡಿದ್ದಾರೆ. 3 ತಲೆಮಾರಿನಿಂದ ಸಾಗುವಳಿ ಮಾಡಿಕೊಂಡು ಬರುತ್ತಿದ್ದ ಜಮೀನಿನಲ್ಲಿ ಆರ್ಥಿಕ ತೊಂದರೆಯಿಂದ ಸಸಿ ಇಡಲಾಗದೆ ಈಗ ಇಟ್ಟಿದ್ದೇವೆ. ಹಾಗಾಗಿ ತೆರವು ಮಾಡಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರಲ್ಲದೆ ಜೆಸಿಬಿ ಚಕ್ರದ ಕೆಳಗೆ ಕುಳಿತು ತೆರವು ಮಾಡುವುದನ್ನು ತಡೆದರು. ಆದರೆ ಮಂಜೂರಾತಿ ಆದೇಶವನ್ನು ರದ್ದು ಮಾಡಿರುವುದರಿಂದ ತೆರವು ಅನಿವಾರ್ಯ ಎಂದು ತಹಸೀಲ್ದಾರ್ ಪೊಲೀಸ್ ಸಹಕಾರದೊಂದಿಗೆ ತೆರವು ಮಾಡಿದರು.

ಆರು ಮಂದಿಯ ಮೇಲೆ ಪ್ರಕರಣ ದಾಖಲು

    ತಹಸೀಲ್ದಾರ್ ಅವರು ಅನಧಿಕೃತ ತೆಂಗಿನ ಸಸಿಗಳ ತೆರವಿಗೆ ಮುಂದಾದಾಗ ಇಟ್ಟಿಗೆ ಕಾರ್ಖಾನೆಯ ಕರಡಿ ಜಯಣ್ಣ ಅವರು ತಮ್ಮ ಕೂಲಿಕಾರ್ಮಿಕರಿಂದ ಸ್ವಯಂ ತೆರವಿಗೆ ಮುಂದಾದರು. ಅದರೆ ಬಾಲರಾಮ್ ಸಿಂಗ್ ಕುಟುಂಬದವರು ತೆರವು ಮಾಡದೆ ತೆರವಿಗೆ ಅಡ್ಡಿ ಪಡಿಸಿದರು. ಪರಿಣಾಮ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪದ ಮೇಲೆ ಕುಮಾರಸಿಂಗ್, ಪ್ರಮೀಳಾಬಾಯಿ, ಕಮಲಬಾಯಿ ಪದ್ಮಾಬಾಯಿ, ಶಿಲ್ಪ, ಸುಶೀಲಾಬಾಯಿ ಈ ಆರು ಮಂದಿಯ ಮೇಲೆ ಹುಳಿಯಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರಲ್ಲದೆ ಆರೋಪಿಗಳನ್ನು ನ್ಯಾಯಾಲಯದ ವಶಕ್ಕೆ ಕೊಡಲಾಗಿದೆ.
     

You May Also Like

error: Content is protected !!