ಪ್ರಥಮ, ದ್ವಿತೀಯ ಭಾಷೆಯಾಗಿ ಕನ್ನಡ ಕಡ್ಡಾಯ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್

ಬೆಂಗಳೂರು: ರಾಜ್ಯದ ಎಲ್ಲಾ ಶಾಲೆಗಳಲ್ಲೂ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯನ್ನಾಗಿ ಕಲಿಸುವುದನ್ನು ಕಡ್ಡಾಯಗೊಳಿಸಿರುವ ರಾಜ್ಯ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ನಾಲ್ಕನೇ ತರಗತಿ ವಿದ್ಯಾರ್ಥಿನಿಯು ಕರ್ನಾಟಕ ಹೈಕೋರ್ಟ್‌ನಲ್ಲಿ ಮನವಿ ಸಲ್ಲಿಸಿದ್ದು, ರಾಜ್ಯ ಸರ್ಕಾರಕ್ಕೆ ನ್ಯಾಯಾಲಯವು ಪ್ರತಿಕ್ರಿಯಿಸುವಂತೆ ನೋಟಿಸ್‌ ಜಾರಿ ಮಾಡಿದೆ.

ಕನ್ನಡ ಭಾಷಾ ಕಲಿಕಾ ಕಾಯಿದೆ-2015 ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್‌ಇ) ಮತ್ತು ಭಾರತೀಯ ಪ್ರೌಢಶಿಕ್ಷಣ ಸರ್ಟಿಫಿಕೇಟ್ ನ (ಐಸಿಎಸ್‌ಇ) ನೋಂದಾಯಿತ ಶಾಲೆಗಳಿಗೂ ಅನ್ವಯಿಸುವುದನ್ನು ಪ್ರಶ್ನಿಸಿ ವಿದ್ಯಾರ್ಥಿನಿ ಕೀರ್ತನಾ ಸುರೇಶ್ ಸಲ್ಲಿಸಿರುವ ಮನವಿಯ ವಿಚಾರಣೆಯನ್ನು ನ್ಯಾಯಮೂರ್ತಿ ಆರ್‌ ದೇವದಾಸ್ ನೇತೃತ್ವದ ಪೀಠ ನಡೆಸಿದ್ದು, ವಿಚಾರಣೆಯನ್ನು ಮೂರು ವಾರಗಳ ಕಾಲ ಮುಂದೂಡಲಾಗಿದೆ.

ವಕೀಲ ಸುವಿದತ್ ಎಂ ಎಸ್ ಅವರ ಮೂಲಕ ಸಲ್ಲಿಸಲಾಗಿರುವ ಮನವಿಯಲ್ಲಿ ‘ರಾಜ್ಯ ಸರ್ಕಾರದ ಕಾಯಿದೆಯು ಸಂವಿಧಾನದ 14ನೇ ವಿಧಿಯ ಜೊತೆಗೆ 19 (1) (ಜಿ), 21 ಮತ್ತು 301ನೇ ವಿಧಿಯನ್ನು ಉಲ್ಲಂಘಿಸುತ್ತದೆ. ಅಲ್ಲದೇ, ಇದು ಕಳೆದ ವರ್ಷದ ಜುಲೈ 29ರಂದು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿರುವ ರಾಷ್ಟ್ರೀಯ ಶಿಕ್ಷಣ ನೀತಿಗೆ 2020ರ ಗುರಿ ಮತ್ತು ಉದ್ದೇಶಗಳಿಗೆ ವಿರುದ್ಧವಾಗಿದೆ’ ಎಂದು ತಿಳಿಸಲಾಗಿದೆ.

ಕನ್ನಡ ಭಾಷಾ ಕಲಿಕಾ ಕಾಯಿದೆ 2015 ಅನ್ನು ಅಸಾಂವಿಧಾನಿಕ, ಕಾನೂನುಬಾಹಿರವಾಗಿದೆ ಎಂದು ಘೋಷಿಸಬೇಕು ಎಂದು ಕೋರಲಾಗಿದೆ. ಉದ್ಯೋಗದ ನಿಮಿತ್ತ ಮೇಲಿಂದ ಮೇಲೆ ವರ್ಗಾವಣೆಯಾಗುವವರು ತಮ್ಮ ಮಕ್ಕಳನ್ನು ಸಾಮಾನ್ಯವಾಗಿ ಸಿಬಿಎಸ್ಇ ಅಥವಾ ಐಸಿಎಸ್ಇ ನೋಂದಾಯಿತ ಶಾಲೆಗೆ ಸೇರಿಸುತ್ತಾರೆ. ಒಂದೊಮ್ಮೆ ಮಧ್ಯಂತರದಲ್ಲಿ ವರ್ಗಾವಣೆಯಾದರೂ ಬೇರೆ ಸ್ಥಳದಲ್ಲಿ ಅವರ ಕಲಿಕೆಗೆ ಯಾವುದೇ ತೊಂದರೆಯಾಗದಿರಲಿ ಎಂಬುದಕ್ಕಾಗಿ ಹೀಗೆ ಮಾಡಲಾಗುತ್ತದೆ ಎಂದು ಅರ್ಜಿದಾರರು ಹೇಳಿದ್ದಾರೆ. ಅಲ್ಲದೆ ‘ಎರಡನೇ ಭಾಷೆಯನ್ನಾಗಿ ಮಗು ಕನ್ನಡ ಕಲಿಯುವುದು ಕಡ್ಡಾಯವಾದರೆ ಒಂದೊಮ್ಮೆ ಅವರು ಮುಂದಿನ ವರ್ಷ ಬೇರೆ ರಾಜ್ಯಕ್ಕೆ ವರ್ಗಾವಣೆಯಾದರೆ ಅವರಿಗೆ ಅತಂತ್ರ ಸ್ಥಿತಿ ಎದುರಾಗಲಿದೆ’ ಎಂದು ಹೇಳಲಾಗಿದೆ.

ವರ್ಗಾವಣೆಯ ಉದ್ಯೋಗದಲ್ಲಿರುವ ಪೋಷಕರು ಮತ್ತು ಮಕ್ಕಳಿಗೆ ಅನುಕೂಲವಾಗಿಸುವ ಉದ್ದೇಶದಿಂದಲೇ ಸಿಬಿಎಸ್ಇ/ಐಸಿಎಸ್ಇ ಶಿಕ್ಷಣ ನೀಡಲಾಗುತ್ತಿದೆ. ಒಂದೊಮ್ಮೆ ವರ್ಗಾವಣೆಯಾದರೂ ಆ ಸ್ಥಳದಲ್ಲಿ ಶಿಕ್ಷಣದಲ್ಲಿ ಅವರಿಗೆ ಸಮಸ್ಯೆಯಾಗುವುದಿಲ್ಲ. ಶಿಕ್ಷಣದ ಗುಣಮಟ್ಟ ಮತ್ತು ಕಲಿಕಾ ವಿಧಾನಕ್ಕೆ ಸಂಬಂಧಿಸಿದಂತೆ ಸಮಸ್ಯೆಯಾಗದು ಎಂದು ತಕರಾರು ತೆಗೆಯಲಾಗಿದೆ.

ಕಾಯಿದೆಯ ಅನ್ವಯ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯನ್ನಾಗಿ ಕಲಿಯುವುದು ಕಡ್ಡಾಯವಾದರೆ ಮಕ್ಕಳು ತಾವು ಮಾಡದ ತಪ್ಪಿಗೆ ಭಾರಿ ಸಮಸ್ಯೆ ಎದುರಿಸಬೇಕಾಗುತ್ತದೆ. ಚಿಕ್ಕಂದಿನಿಂದಲೂ ಕನ್ನಡದ ಕಲಿಯದಿರುವುದು ಮತ್ತು ಮಕ್ಕಳ ಪೋಷಕರು ಭಾಷಾ ಅಲ್ಪಸಂಖ್ಯಾತರಾಗಿರುವವರಿಗೆ ಪ್ರಾದೇಶಿಕ ಭಾಷೆ ಬರೆಯುವುದು, ಮಾತನಾಡುವುದು ಮತ್ತು ಓದುವುದು ಕಷ್ಟಸಾಧ್ಯವಾಗಲಿದೆ ಎಂದು ಹೇಳಲಾಗಿದೆ.

ಕನ್ನಡದಲ್ಲಿ ಕಲಿಯುವುದನ್ನು ಕಡ್ಡಾಯಗೊಳಿಸುವುದರಿಂದ ಮಕ್ಕಳ ಪೋಷಕರು ವರ್ಗಾವಣೆಗೊಂಡು ಅಲ್ಲಿಗೆ ಹೋಗಿ ಪುನರ್ ನೆಲೆ ಕಂಡುಕೊಳ್ಳಬೇಕಾಗುತ್ತದೆ. ಅಲ್ಲದೇ, ತಮಗೆ ಪರಿಚಿತವಲ್ಲದ ಪ್ರಾದೇಶಿಕ ಭಾಷೆಯಲ್ಲಿ ಎಲ್ಲವನ್ನೂ ಕಲಿಯುವ ಸ್ಥಿತಿ ನಿರ್ಮಾಣವಾದಾಗ ಮಕ್ಕಳಿಗೆ ಸಮಸ್ಯೆಯಾಗುತ್ತದೆ ಎಂಬುದನ್ನು ಕಾಯಿದೆ ರೂಪಿಸುವಾಗ ಅರ್ಥೈಸಿಕೊಂಡಿಲ್ಲ ಎಂದು ಹೇಳಲಾಗಿದೆ.

“ಆಕ್ಷೇಪಾರ್ಹವಾದ ಕಾಯಿದೆಯು ಅಸಮಾನತೆಯಿಂದ ಕೂಡಿದ್ದು, ಅರ್ಜಿದಾರರ ಮೇಲೆ ಅನಗತ್ಯ ಹೊರೆ ಮತ್ತು ಸಂಕಷ್ಟವನ್ನು ಹೇರುತ್ತದೆ. ಸಂವಿಧಾನದ 19 ಮತ್ತು 30ನೇ ವಿಧಿಯ ಅಡಿಯಲ್ಲಿ ಅವರ ಹಕ್ಕುಗಳ ಮೇಲೆ ಅವಿವೇಕದ ನಿರ್ಬಂಧಗಳನ್ನು ವಿಧಿಸುತ್ತದೆ” ಎಂದು ಹೇಳಲಾಗಿದೆ.

ಪ್ರಜಾಮನ ನ್ಯೂಸ್ ಡೆಸ್ಕ್.

prajamana.com 9448797745

You May Also Like

error: Content is protected !!