ಮೈಸೂರು ದಸರಾ ಉದ್ಘಾಟಿಸಲಿದ್ದಾರೆ ಎಸ್. ಎಂ. ಕೃಷ್ಣ

ಮೈಸೂರು, : ಮೈಸೂರು ದಸರಾ 2021ರ ಉದ್ಘಾಟಕರ ಹೆಸರು ಅಂತಿಮವಾಗಿದೆ. ಬಿಜೆಪಿ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ದಸರಾ ಉದ್ಘಾಟಿಸಲಿದ್ದಾರೆ.

ಮಂಗಳವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಎಸ್. ಎಂ. ಕೃಷ್ಣ (89) ಹೆಸರನ್ನು ಅಂತಿಮಗೊಳಿಸಲಾಗಿದೆ. ಅಕ್ಟೋಬರ್ 7ರಂದು ಈ ಬಾರಿಯ ದಸರಾಕ್ಕೆ ಚಾಲನೆ ಸಿಗಲಿದೆ. ಈಗಾಗಲೇ ಮೈಸೂರಿನಲ್ಲಿ ಸಿದ್ಧತೆಗಳು ನಡೆಯುತ್ತಿವೆ.

ಅಕ್ಟೋಬರ್ 7ರಿಂದ ಆರಂಭವಾಗಲಿರುವ ನಾಡಹಬ್ಬ ದಸರಾ ಮಹೋತ್ಸವವನ್ನು ಉದ್ಘಾಟಿಸಲು ಹಿರಿಯ ಮುತ್ಸದ್ಧಿ, ಮಾಜಿ ಮುಖ್ಯಮಂತ್ರಿ ಶ್ರೀ ಎಸ್. ಎಂ. ಕೃಷ್ಣ ರವರಿಗೆ ಆಹ್ವಾನ ನೀಡಲು ರಾಜ್ಯಸರ್ಕಾರ ನಿರ್ಧರಿಸಿದೆ ಎಂದು ಮುಖ್ಯಮಂತ್ರಿಗಳ ಅಧಿಕೃತ ಖಾತೆಯಿಂದ ಟ್ವೀಟ್ ಮಾಡಲಾಗಿದೆ.

ಅಕ್ಟೋಬರ್ 7ರಿಂದ 15ರ ತನಕ ಈ ಬಾರಿಯ ಮೈಸೂರು ದಸರಾ ಮಹೋತ್ಸವ ನಡೆಯಲಿದೆ. ಕೋವಿಡ್ ಕಾರಣದಿಂದಾಗಿ ಸರಳವಾಗಿ ದಸರಾ ನಡೆಯಲಿದ್ದು, ಅಕ್ಟೋಬರ್ 15ರಂದು ಜಂಬೂ ಸವಾರಿ ಸಹ ಅರಮನೆ ಆವರಣದಲ್ಲಿ ಮಾತ್ರ ನಡೆಯಲಿದೆ.

ಅಕ್ಟೋಬರ್ 7ರಂದು ಬೆಳಗ್ಗೆ 8.15ರಿಂದ 8.45ರ ಶುಭ ಮುಹೂರ್ತದಲ್ಲಿ ಚಾಮುಂಡಿ ಬೆಟ್ಟದಲ್ಲಿ 2021ನೇ ಸಾಲಿನ ದಸರಾವನ್ನು ಉದ್ಘಾಟನೆ ಮಾಡಲಾಗುತ್ತದೆ. ಅರಮನೆ ಆವರಣದಲ್ಲಿ ಪ್ರತಿದಿನ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಯುವ ದಸರಾ, ದಸರಾ ಆಹಾರ ಮೇಳ ಸೇರಿದಂತೆ ವಿವಿಧ ಕಾರ್ಯಕ್ರಮಗಳು ರದ್ದಾಗಿವೆ.

ಅಕ್ಟೋಬರ್ 15ರ ಸಂಜೆ 4.36 ರಿಂದ 4.44ರ ತನಕ ನಂದಿ ಪೂಜೆ ನಡೆಯಲಿದೆ. ಬಳಿಕ ಸಂಜೆ 5 ರಿಂದ 5.36ರ ತನಕ ಜಂಬೂ ಸವಾರಿ ನಡೆಯಲಿದೆ. ಈ ಬಾರಿಯ ದಸರಾದಲ್ಲಿ ಪಾಲ್ಗೊಳ್ಳುವ 8 ಆನೆಗಳು ಈಗಾಗಲೇ ಮೈಸೂರಿಗೆ ಆಗಮಿಸಿದ್ದು, ಅರಮನೆಯ ಆವರಣದಲ್ಲಿ ತಾಲೀಮು ನಡೆಸುತ್ತಿವೆ.

ಬಿಗಿ ಪೊಲೀಸ್ ಭದ್ರತೆ;

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಹಿನ್ನಲೆಯಲ್ಲಿ ಮೈಸೂರು ನಗರದಾದ್ಯಂತ ಪೊಲೀಸ್ ಭದ್ರತೆಯನ್ನು ಕೈಗೊಳ್ಳಲಾಗಿದೆ ಎಂದು ಮೈಸೂರು ನಗರ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ ಹೇಳಿದ್ದಾರೆ.

ಮೈಸೂರಿನಲ್ಲಿ ಮಂಗಳವಾರ ಮಾತನಾಡಿದ ಪೊಲೀಸ್ ಆಯುಕ್ತರು, “ಮೈಸೂರು ದಸರಾ ಸಮೀಪಿಸುತ್ತಿದ್ದು, ಸಾರ್ವಜನಿಕರು ಅನಾಮಧೇಯ ವ್ಯಕ್ತಿಗಳು, ವಸ್ತುಗಳು ಕಂಡು ಬಂದರೆ ಕೂಡಲೇ ಪೊಲೀಸರಿಗೆ ಮಾಹಿತಿ‌ ನೀಡಿ ಸಹಕರಿಸಬೇಕು” ಎಂದು ಮನವಿ ಮಾಡಿದ್ದಾರೆ.

ದಸರಾ ಆನೆಗಳು;

ಮೈಸೂರು ದಸರಾದ ಪ್ರಮುಖ ಆಕರ್ಷಣೆ ಜಂಬೂ ಸವಾರಿ. ಈ ಬಾರಿಯೂ ಸಹ ಚಿನ್ನದ ಅಂಬಾರಿಯನ್ನು 56 ವರ್ಷದ ಅಭಿಮನ್ಯು ಆನೆ ಹೊರಲಿದೆ. ಉಳಿದಂತೆ ವಿಕ್ರಮ, ಅಶ್ವತ್ಥಾಮ, ಲಕ್ಷ್ಮೀ, ಚೈತ್ರಾ, ಕಾವೇರಿ, ಧನಂಜಯ, ಗೋಪಾಲಸ್ವಾಮಿ ಆನೆಗಳು ದಸರಾದಲ್ಲಿ ಪಾಲ್ಗೊಳ್ಳುತ್ತಿವೆ.

ಎಸ್. ಎಂ. ಕೃಷ್ಣ ಪರಿಚಯ;

1932ರಲ್ಲಿ ಮಂಡ್ಯ ಜಿಲ್ಲೆಯ ಸೋಮನಹಳ್ಳಿಯಲ್ಲಿ ಎಸ್. ಎಂ. ಕೃಷ್ಣ ಜನಿಸಿದರು. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪದವಿ ಪಡೆದರು. ಬೆಂಗಳೂರಿನ ಸರ್ಕಾರಿ ಕಾಲೇಜಿನಲ್ಲಿ ಕಾನೂನು ಪದವಿ ಪಡೆದರು.

1962ರಲ್ಲಿ ಮೊದಲ ಬಾರಿಗೆ ವಿಧಾನಸಭೆಗೆ ಆಯ್ಕೆಯಾದರು. 1968ರಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಗೊಂಡರು. 1971ರಲ್ಲಿ ಮತ್ತೊಮ್ಮೆ ಸಂಸದರಾದರು.

ಕಾಂಗ್ರೆಸ್ ಪಕ್ಷದಲ್ಲಿದ್ದ ಎಸ್. ಎಂ. ಕೃಷ್ಣ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಗೊಂಡರು. ಸಚಿವರಾಗಿ, 1989 ರಿಂದ 1992ರ ತನಕ ವಿಧಾನಸಭೆ ಸ್ಪೀಕರ್ ಆಗಿ ಕಾರ್ಯ ನಿರ್ವಹಣೆ ಮಾಡಿದರು. ಕರ್ನಾಟಕದ ಉಪಮುಖ್ಯಮಂತ್ರಿಯಾಗಿಯೂ ಕೆಲಸ ನಿರ್ವಹಣೆ ಮಾಡಿದರು.

1996ರಲ್ಲಿ ಕರ್ನಾಟಕದ 16ನೇ ಮುಖ್ಯಮಂತ್ರಿಯಾದರು. 2004-2008ರ ತನಕ ಮಹಾರಾಷ್ಟ್ರದ ರಾಜ್ಯಪಾಲರಾಗಿ ಕಾರ್ಯ ನಿರ್ವಹಿಸಿದರು. ಯುಪಿಎ ಸರ್ಕಾರದ ಅವಧಿಯಲ್ಲಿ ವಿದೇಶಾಂಗ ಸಚಿವರಾರಿ ಕಾರ್ಯ ನಿರ್ವಹಣೆ ಮಾಡಿದರು.

ಬಳಿಕ ಕಾಂಗ್ರೆಸ್ ಪಕ್ಷ ತೊರೆದ ಎಸ್. ಎಂ. ಕೃಷ್ಣ ಬಿಜೆಪಿ ಸೇರಿದರು. ವಯೋಸಹಜ ಕಾರಣದಿಂದಾಗಿ ಈಗ ಸಕ್ರಿಯ ರಾಜಕಾರಣದಿಂದ ಕೃಷ್ಣ ದೂರ ಉಳಿದಿದ್ದಾರೆ.

ಪ್ರಜಾಮನ ನ್ಯೂಸ್ ಡೆಸ್ಕ್.

prajamana.com 9448797745

You May Also Like

error: Content is protected !!