ತುಮಕೂರು-ಬೆಂಗಳೂರು ರೈಲು ಪ್ರಯಾಣಿಕರಿಗೆ ಸಿಹಿಸುದ್ದಿ

ತುಮಕೂರು: ಬೆಂಗಳೂರು- ತುಮಕೂರು ರೈಲು ಮಾರ್ಗದ ವಿದ್ಯುದೀಕರಣ ಕಾಮಗಾರಿ ಮುಕ್ತಾಯಗೊಂಡಿದೆ. ಈ ಮಾರ್ಗದಲ್ಲಿ ಮೆಮು ರೈಲುಗಳನ್ನು ಓಡಿಸಲು ಇಲಾಖೆ ಚಿಂತನೆ ನಡೆಸಿದ್ದು, ಇದರಿಂದ ಉಭಯ ನಗರಗಳ ನಡುವೆ ಸಂಚಾರ ನಡೆಸುವ ಜನರಿಗೆ ಸಹಾಯಕವಾಗಲಿದೆ.

ಚಿಕ್ಕಬಣಾವರ-ಹುಬ್ಬಳ್ಳಿ ನಡುವಿನ ಮಾರ್ಗದ ವಿದ್ಯುದೀಕರಣ ಭಾಗವಾಗಿ ಬೆಂಗಳೂರು-ತುಮಕೂರು ನಡುವಿನ 69.47 ಕಿ. ಮೀ. ರೈಲು ಮಾರ್ಗವನ್ನು ವಿದ್ಯುದೀಕರಣ ಮಾಡಲಾಗಿದೆ. ಕಾಮಗಾರಿ ಪೂರ್ಣಗೊಂಡಿದ್ದು, ರೈಲುಗಳ ಪ್ರಾಯೋಗಿಕ ಸಂಚಾರ ನಡೆಯುತ್ತಿದೆ.

ಕಾಮಗಾರಿ ಪೂರ್ಣಗೊಂಡ ಬಳಿಕ ಎಲೆಕ್ಟ್ರಿಕ್ ಲೋಕೋಮೋಟಿವ್ ಮೂಲಕ ಪ್ರಾಯೋಗಿಕ ಪರೀಕ್ಷೆಗಳನ್ನು ನಡೆಸಿ ದಾಖಲೆಗಳನ್ನು ಮಾಡಲಾಗುತ್ತಿದೆ. ರೈಲ್ವೆ ಸುರಕ್ಷತಾ ಆಯುಕ್ತರ ಪರಿಶೀಲನೆಗೆ ದಾಖಲೆಗಳ ಮೂಲಕ ಪ್ರಸ್ತಾವನೆ ಸಲ್ಲಿಸಲಾಗುತ್ತದೆ” ಎಂದು ಅಧಿಕಾರಿಗಳು ಹೇಳಿದ್ದಾರೆ.

ರೈಲ್ವೆ ಸುರಕ್ಷತಾ ಆಯುಕ್ತರು ಮಾರ್ಗದ ಪರಿಶೀಲನೆ ನಡೆಸಿ ರೈಲು ಸಂಚಾರಕ್ಕೆ ಒಪ್ಪಿಗೆ ನೀಡಿದ ಬಳಿಕ ಮಾರ್ಗದಲ್ಲಿ ಮೆಮು ರೈಲುಗಳನ್ನು ಓಡಿಸಲಾಗುತ್ತದೆ ಎಂದು ನೈಋತ್ಯ ರೈಲ್ವೆಯ ಅಧಿಕಾರಿಗಳು ಹೇಳಿದ್ದಾರೆ. ಮೆಮು ರೈಲು ಸಂಚಾರ ಆರಂಭವಾದರೆ ಪ್ರತಿದಿನ ಸಂಚಾರ ನಡೆಸುವ ಜನರಿಗೆ ಅನುಕೂಲವಾಗಲಿದೆ.

ಒಟ್ಟು 856.76 ಕೋಟಿ ಮೊತ್ತದಲ್ಲಿ ಚಿಕ್ಕಬಣಾವರ-ಹುಬ್ಬಳ್ಳಿ ರೈಲ್ವೆ ಮಾರ್ಗವನ್ನು ವಿದ್ಯುದೀಕರಣ ಮಾಡಲಾಗುತ್ತಿದೆ. ರೈಲ್ವೆ ವಿಕಾಸ ನಿಗಮ ಸೇರಿದಂತೆ ವಿವಿಧ ಸಂಸ್ಥೆಗಳು ವಿದ್ಯುದೀಕರಣ ಕಾಮಗಾರಿಯನ್ನು ಕೈಗೊಂಡಿವೆ.

2022ರ ಮಾರ್ಚ್ ವೇಳೆಗೆ ಬೀರೂರು-ಚಿಕ್ಕಜಾಜೂರು, ತುಮಕೂರು-ಕರಡಿ ಸೆಕ್ಷನ್ ವಿದ್ಯುದೀಕರಣ ಪೂರ್ಣಗೊಳ್ಳಲಿದೆ. ಚಿಕ್ಕಜಾಜೂರು-ಹುಬ್ಬಳ್ಳಿ ನಡುವಿನ ಕಾಮಗಾರಿ ನಡೆಯುತ್ತಿದೆ. 2022ರ ಡಿಸೆಂಬರ್ ವೇಳೆಗೆ ಎಲ್ಲಾ ಕಾಮಗಾರಿ ಪೂರ್ಣಗೊಳ್ಳುವ ವಿಶ್ವಾಸವಿದೆ.

ತುಮಕೂರು-ಬೆಂಗಳೂರು ನಡುವೆ ಸಂಚಾರ ನಡೆಸುವ ಜನರು ಹೆಚ್ಚುವರಿ ರೈಲುಗಳನ್ನು ಓಡಿಸುವಂತೆ ಹಿಂದೆಯೇ ರೈಲ್ವೆ ಇಲಾಖೆಗೆ ಮನವಿ ಮಾಡಿದ್ದರು. ಬೆಳಗ್ಗೆ ಮತ್ತು ಸಂಜೆಯ ಅವಧಿಯಲ್ಲಿ ಹೆಚ್ಚು ರೈಲುಗಳು ಬೇಕು ಎಂದು ಆಗ್ರಹಿಸಿದ್ದರು. ಈಗ ಮೆಮು ರೈಲುಗಳನ್ನು ಓಡಿಸಲು ಇಲಾಖೆ ಚಿಂತನೆ ನಡೆಸಿದೆ.

“ಹೆಚ್ಚುವರಿ ರೈಲು ಓಡಿಸಬೇಕು ಎಂಬ ಬೇಡಿಕೆ ಬಗ್ಗೆ ಗಮನ ಗಮನವಿದೆ. ಮೆಮು ರೈಲು ಓಡಿಸುವ ಪ್ರಸ್ತಾವನೆ ಇದೆ. ರೈಲ್ವೆ ಸುರಕ್ಷತಾ ಆಯುಕ್ತರ ಪರಿಶೀಲನೆ ಮುಗಿದ ಬಳಿಕ ಈ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ” ಎಂದು ಅಧಿಕಾರಿಗಳು ಹೇಳಿದ್ದಾರೆ.

ರೈಲ್ವೆ ಸುರಕ್ಷತಾ ಆಯುಕ್ತರು ಮಾರ್ಚ್‌ನಲ್ಲಿ ಹೋಟಗಿ-ಕಲಗುರ್ಕಿ ನಡುವಿನ 125 ಕಿ. ಮೀ. ವಿದ್ಯುದೀಕರಣ ಕಾಮಗಾರಿಯ ಪರಿಶೀಲನೆ ನಡೆಸಿದ್ದರು. ಈ ಮಾರ್ಗದ ಮೂಲಕ ಹುಬ್ಬಳ್ಳಿ ರೈಲ್ವೆ ವಿಭಾಗದಲ್ಲಿ ಈ ಆರ್ಥಿಕ ವರ್ಷದಲ್ಲಿ 288 ಕಿ. ಮೀ. ವಿದ್ಯುದೀಕರಣ ಕಾರ್ಯ ಪೂರ್ಣಗೊಂಡಿದೆ.

ವಿದ್ಯುದೀಕರಣ ಕಾಮಗಾರಿ ಪೂರ್ಣಗೊಂಡು ರೈಲು ಸಂಚಾರ ಆರಂಭವಾದರೆ ಸರ್ಕಾರಕ್ಕೆ ಡೀಸೆಲ್ ದರದ ಉಳಿತಾಯವಾಗಲಿದೆ. 2019ರಲ್ಲಿ ನೈಋತ್ಯ ರೈಲ್ವೆ 10 ರೈಲುಗಳನ್ನು ವಿದ್ಯುದೀಕರಣಗೊಳಿಸುವುದಾಗಿ ಹೇಳಿತ್ತು. ಇದರಿಂದ ವಾರ್ಷಿಕ ಸುಮಾರು ಭಾರೀ ಉಳಿತಾಯವಾಗಲಿದೆ ಎಂದು ಹೇಳಿತ್ತು.

ಇಲೆಕ್ಟ್ರಿಕ್ ಲೋಕೋ ಸಂಚಾರ ಆರಂಭವಾದರೆ ಡೀಸೆಲ್ ಮೇಲಿನ ಖರ್ಚು ಕಡಿಮೆಯಾಗಲಿದೆ. ರೈಲು 300 ಕಿ. ಮೀ. ಸಂಚಾರ ನಡೆಸಲು ಸುಮಾರು 1500 ಲೀಟರ್ ತನಕ ಡೀಸೆಲ್ ಬೇಕು ಎಂದು ಅಂದಾಜಿಸಲಾಗಿದೆ. ಗೂಡ್ಸ್‌ ರೈಲಾದರೆ ಇನ್ನೂ ಹೆಚ್ಚಿನ ಡೀಸೆಲ್ ಅಗತ್ಯವಿದೆ. ಆದ್ದರಿಂದ ರೈಲ್ವೆ ಇಲಾಖೆ ವಿದ್ಯುದೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದೆ.

ಕೊಂಕಣ ರೈಲ್ವೆ ಸಹ ವಿದ್ಯುದೀಕರಣಕ್ಕೆ ಆದ್ಯತೆ ನೀಡಿದೆ. 100 ಕೋಟಿ ವೆಚ್ಚದಲ್ಲಿ 400 ಕಿ. ಮೀ. ಮಾರ್ಗ ವಿದ್ಯುದೀಕರಣ ಕಾಮಗಾರಿ ಕೈಗೊಂಡಿದ್ದು, ಶೀಘ್ರದಲ್ಲೇ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಇದರಿಂದ ಕೇರಳದಿಂದ ಬರುವ ಇಲೆಕ್ಟ್ರಿಕ್ ಲೋಕೊ ಎಂಜಿನ್‌ಗಳು ಮಂಗಳೂರು ಸೆಂಟ್ರಲ್ ಮೂಲಕ ಕಾರವಾರ ತನಕ ಸಂಚಾರ ನಡೆಸಬಹುದಾಗಿದೆ.

ಪ್ರಜಾಮನ ನ್ಯೂಸ್ ಡೆಸ್ಕ್.

prajamana.com 9448797745

You May Also Like

error: Content is protected !!