ಪತ್ರಕರ್ತರ ಸೋಗಿನಲ್ಲಿದ್ದ ಖತರ್‌ನಾಕ್ ಕಾರುಗಳ್ಳರ ಬಂಧಿಸಿದ ತುಮಕೂರು ಪೋಲೀಸ್

ತುಮಕೂರು: ಪತ್ರಕರ್ತನ ಸೋಗಿನಲ್ಲಿ ಕರ್ನಾಟಕ, ಗೋವಾ, ತಮಿಳುನಾಡು ರಾಜ್ಯಗಳಲ್ಲಿ ಕಾರುಗಳನ್ನು ಕಳ್ಳತನ ಮಾಡುತ್ತಿದ್ದ ಅಂತರರಾಜ್ಯ ಖತರ್‌ನಾಕ್ ಕಾರುಗಳ್ಳರನ್ನು ಬಂಧಿಸಿ, ಸುಮಾರು 5೦ ಲಕ್ಷ ರೂ. ಬೆಲೆಯ 7 ಕಾರುಗಳನ್ನು ಹಾಗೂ 2.5೦ ಲಕ್ಷ ರೂ. ನಗದನ್ನು ವಶಪಡಿಸಿಕೊಂಡಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪುರ್‌ವಾಡ್ ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತುಮಕೂರು ನಗರದ ಕ್ಯಾತ್ಸಂದ್ರ ಪೊಲೀಸ್ ಠಾಣೆ ಸರಹದ್ದಿನ ಮಂಚಕಲ್‌ಕುಪ್ಪೆ ಗ್ರಾಮದಲ್ಲಿ ರಸ್ತೆ ಬದಿ ನಿಲ್ಲಿಸಿದ್ದ ಮಾರುತಿ ಸ್ವಿಫ್ಟ್ ಕಾರನ್ನು ಜುಲೈ 2 ರಂದು ರಾತ್ರಿ ಮತ್ತು ಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯ ಬಡ್ಡಿಹಳ್ಳಿ ಮುಖ್ಯರಸ್ತೆಯಲ್ಲಿ ನಿಲ್ಲಿಸಿದ್ದ ಬ್ರೀಜ್ಜಾ ಕಾರನ್ನು ಜು.24 ರಂದು ರಾತ್ರಿ ಕಳವು ಮಾಡಿಕೊಂಡು ಹೋಗಿದ್ದ ಪ್ರಕರಣಗಳು ದಾಖಲಾಗಿದ್ದವು ಎಂದರು.


ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ಜಿಲ್ಲಾ ಹೆಚ್ಚುವರಿ ಎಸ್ಪಿ ಉದೇಶ್ ಮತ್ತು ತುಮಕೂರು ಉಪ ವಿಭಾಗದ ಡಿವೈಎಸ್ಪಿ ಹೆಚ್.ಶ್ರೀನಿವಾಸ್ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ತಮಿಳುನಾಡು ರಾಜ್ಯದ ಪರಮೇಶ್ವರನ್ (40) ಎಂಬ ಕಾರುಗಳ್ಳನನ್ನು ಬಂಧಿಸಿದ್ದು, ಈತನಿಂದ ಕಾರು ಖರೀದಿಸಿದ ಹಕಿಂ ಅಲಿಯಾಸ್ ಹಕಿಂ ಬಾಷಾ (45) ಎಂಬುವರನ್ನು ಬಂಧಿಸಿದ್ದಾರೆ ಎಂದರು.
ಆರೋಪಿ ಪರಮೇಶ್ವರನ್ ತಮಿಳುನಾಡಿನ ಕೊಯಮತ್ತೂರು, ಮೆಟ್ಟುಪಾಳಯಂ, ದಿಂಡಿಗಲ್‌ಗಳಲ್ಲಿ ಸುಮಾರು 5೦ ಲಕ್ಷ ರೂ. ಬೆಲೆ ಬಾಳುವ 4 ಬ್ರೀಜ್ಜಾ ಕಾರುಗಳು ಮತ್ತು ೩ ಮಾರುತಿ ಸ್ವಿಫ್ಟ್ ಕಾರುಗಳು ಸೇರಿ 7 ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು.
ಕಾರು ಕಳ್ಳತನ ಮಾಡಲು ಪ್ರೆಸ್ ಎಂಬ ಸ್ಟಿಕ್ಕರ್ ಹಾಕಿಕೊಂಡು ಪ್ರೆಸ್ ಸಬ್ ಎಡಿಟರ್ ಎಂಬ ಗುರುತಿನ ಚೀಟಿ ಇಟ್ಟುಕೊಂಡು ಕಾರುಗಳನ್ನು ಕಳ್ಳತನ ಮಾಡಿ ಪೊಲೀಸರಿಂದ ತಪ್ಪಿಸಿಕೊಳ್ಳುತ್ತಿದ್ದನು. ಪೊಲೀಸರಿಗೆ ಅನುಮಾನ ಬಾರದಂತೆ ಕಾಲ್ ಗರ್ಲ್ಸ್ ಹೆಣ್ಣು ಮಕ್ಕಳನ್ನು ತನ್ನೊಂದಿಗೆ ಕಾರಿನಲ್ಲಿ ಕರೆದುಕೊಂಡು ಹೋಗಿ ಪೊಲೀಸರಿಂದ ತಪ್ಪಿಸಿಕೊಳ್ಳುತ್ತಿದ್ದ. ಆ ನಂತರ ಕಾಲ್‌ಗರ್ಲ್ಸ್ ಹೆಣ್ಣುಮಕ್ಕಳಿಗೆ ಹಣಕೊಟ್ಟು ಕಳುಹಿಸುತ್ತಿದ್ದ ಎಂದು ವಿವರಿಸಿದರು.


ಆರೋಪಿಗಳ ಪತ್ತೆಗಾಗಿ ಕಾರ್ಯಾಚರಣೆ ನಡೆಸಿದ ಪೊಲೀಸ್ ತಂಡ ತುಮಕೂರು, ಬೆಂಗಳೂರು ನಗರ, ಬೆಂಗಳೂರು ಹೊರವಲಯ, ಕರ್ನಾಟಕದ ನೆರೆ ರಾಜ್ಯಗಳ ಗಡಿ ಪ್ರದೇಶಗಳಲ್ಲಿನ ಹೆದ್ದಾರಿಗಳಲ್ಲಿ ಅಗತ್ಯ ಮಾಹಿತಿಗಳನ್ನು ಸಂಗ್ರಹಿಸಿ, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪರಮೇಶ್ವರನ್ ಪತ್ರಕರ್ತನೆಂದು ಹೇಳಿಕೊಂಡು ಕದ್ದ ಕಾರುಗಳಲ್ಲಿ ಟೋಲ್‌ಗಳಲ್ಲಿ ನಿರಾಯಾಸವಾಗಿ ದಾಟಿ ಪೊಲೀಸರಿಗೂ ಕಣ್ತಪ್ಪಿಸಿ ಹೋಗುತ್ತಿದ್ದ ಈತನ ವಿರುದ್ಧ 26 ಕೇಸುಗಳು ದಾಖಲಾಗಿವೆ ಎಂದರು.
ಸುದ್ದಿಗೋಷ್ಠಿಯಲ್ಲಿ ತುಮಕೂರು ನಗರ ಡಿವೈಎಸ್ಪಿ ಹೆಚ್.ಶ್ರೀನಿವಾಸ್, ಕುಣಿಗಲ್ ಡಿವೈಎಸ್ಪಿ ಜಿ.ಆರ್.ರಮೇಶ್, ಕ್ಯಾತ್ಸಂದ್ರ ಸಿಪಿಐ ಚನ್ನೇಗೌಡ, ಕುಣಿಗಲ್ ಸಿಪಿಐ ಗುರುಪ್ರಸಾದ್ ಹಾಜರಿದ್ದರು.

ಪ್ರಜಾಮನ ನ್ಯೂಸ್ ಡೆಸ್ಕ್.

prajamana.com 9448797745

You May Also Like

error: Content is protected !!