ಆರೆಸ್ಸೆಸ್‌ ಟೀಕೆ ಹಿಂದೆ ಎಚ್‌ಡಿಕೆ ಸ್ಕೆಚ್‌; ಮುಸ್ಲಿಂ ಮತ ಸೆಳೆಯುವ ಪ್ಲ್ಯಾನ್‌!

ಬೆಂಗಳೂರು: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿರುದ್ಧ ಇದ್ದಕ್ಕಿದ್ದಂತೆ ಟೀಕಾಸ್ತ್ರ ಪ್ರಯೋಗಿಸುತ್ತಿರುವ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರ ಈ ನಡೆಯ ಹಿಂದೆ ರಾಜಕೀಯ ತಂತ್ರಗಾರಿಕೆಯ ಛಾಯೆ ಕಾಣಿಸಿದೆ.

ಬಿಡದಿಯ ತೋಟದ ಮನೆಯಲ್ಲಿ ಜೆಡಿಎಸ್‌ ಅಲ್ಪಸಂಖ್ಯಾತರ ಘಟಕದ ಕಾರ್ಯಾಗಾರ ನಡೆಸಿದ ಕುಮಾರಸ್ವಾಮಿ ಅದರ ಪೆಂಡಾಲ್‌ ತೆಗೆಯುವ ಮೊದಲೇ ಇಂಥದೊಂದು ಹೇಳಿಕೆ ನೀಡಿದ್ದಾರೆ. ಹಾಗಾಗಿ ಇದರ ಮರ್ಮ ಅರ್ಥ ಮಾಡಿಕೊಳ್ಳುವುದು ಕ್ಲಿಷ್ಟಕರ ಸಂಗತಿ ಅಲ್ಲವೇ ಅಲ್ಲ! ಜೆಡಿಎಸ್‌ ಪುನರ್‌ ಸಂಘಟನೆ ಸಂಬಂಧ ಕುಮಾರಸ್ವಾಮಿ ಅವರು ವಿನೂತನ ಹೆಜ್ಜೆ ಇಟ್ಟಿದ್ದಾರೆ. ಈ ನಿಟ್ಟಿನಲ್ಲಿ ಮಹಿಳಾ, ಯುವ, ಅಲ್ಪಸಂಖ್ಯಾತ ಇನ್ನಿತರ ಘಟಕಗಳ ಕಾರ್ಯಾಗಾರ ನಡೆಸಿದ್ದಾರೆ. ವಾಸ್ತವದಲ್ಲಿ ಜೆಡಿಎಸ್‌ನ ಈ ಪ್ರಯತ್ನದ ಬಗ್ಗೆ ಮುಖ್ಯವಾಹಿನಿಯಲ್ಲಿ ಚರ್ಚೆಯಾಗಬೇಕಿತ್ತು. ಆದರೆ, ಆರ್‌ಎಸ್‌ಎಸ್‌ ಕುರಿತು ಕುಮಾರಸ್ವಾಮಿ ಮಾಡಿರುವ ಟೀಕೆಯೇ ಬಿಸಿಯೇರಿಸುತ್ತಿದೆ. ಹಾಗಿದ್ದರೆ ಸಂಘಟನೆ ಸಂಬಂಧ ಅಷ್ಟೊಂದು ಪರಿಶ್ರಮ ವಹಿಸಿ ಸತತ ಸಭೆ ನಡೆಸಿದ ಕುಮಾರಸ್ವಾಮಿ ಅವರಿಗೆ ಇದರ ಬಗ್ಗೆ ಅರಿವಿರಲಿಲ್ಲವಾ? ತಮ್ಮ ಹೇಳಿಕೆಯ ಪರಿಣಾಮದ ಬಗ್ಗೆ ಯೋಚಿಸಿರಲಿಲ್ಲವಾ? ಖಂಡಿತವಾಗಿಯೂ ಇದರ ಪ್ಲಸ್‌, ಮೈನಸ್‌ ಬಗ್ಗೆ ಅರಿವಿದ್ದೇ ಮಾತನಾಡಿರುತ್ತಾರೆ. ಅದರಲ್ಲಿಯೇ ಜೆಡಿಎಸ್‌ನ ರಾಜಕೀಯ ಲೆಕ್ಕಾಚಾರದ ಮಜಕೂರಿಯಿದೆ.

ಜೆಡಿಎಸ್‌ ಈ ಹಿಂದೆ ಎರಡು ಬಾಡಿ ಕಾಂಗ್ರೆಸ್‌ನೊಂದಿಗೆ ಸೇರಿ ಸರಕಾರ ರಚಿಸಿತ್ತು. ಒಮ್ಮೆ ಬಿಜೆಪಿಯೊಂದಿಗೂ ಮೈತ್ರಿ ಮಾಡಿಕೊಂಡಿತ್ತು. ಅಷ್ಟಕ್ಕೂ 20:20 ಸರಕಾರದ ಪ್ರಯೋಗದ ಮೂಲಕ ಎಚ್‌.ಡಿ.ಕುಮಾರಸ್ವಾಮಿ ರೂಪದಲ್ಲಿ ರಾಜ್ಯಕ್ಕೆ ಜನಪ್ರಿಯ ಮುಖ್ಯಮಂತ್ರಿಯನ್ನು ಕೊಟ್ಟ ಶ್ರೇಯಸ್ಸು ಬಿಜೆಪಿಗೇ ಸಲ್ಲಬೇಕು. ಸಂದರ್ಭಾನುಸಾರ ಕಾಂಗ್ರೆಸ್‌, ಬಿಜೆಪಿಯೊಂದಿಗೆ ಸ್ನೇಹ ಬೆಳಸಿದ್ದ ಜೆಡಿಎಸ್‌ ಇತಿಹಾಸದ ಬಗ್ಗೆ ವಿವರಿಸಿ ಹೇಳುವ ಅಗತ್ಯ ಕಾಣಿಸುವುದಿಲ್ಲ. ಇದರ ಹೊರತಾಗಿ ಆರ್‌ಎಸ್‌ಎಸ್‌ ವಿರುದ್ಧ ಕಿಡಿಕಿಡಿಯಾಗಿ ಎಚ್‌ಡಿಕೆ ನೀಡಿದ ಹೇಳಿಕೆಯ ಒಳಮರ್ಮ ಅರ್ಥ ಮಾಡಿಕೊಳ್ಳಲು ಅಗೆದು ಬಗೆದು ನೋಡಬೇಕಾಗಿಲ್ಲ. ಜೆಡಿಎಸ್‌ಗೆ ಮುಂದಿನ ಚುನಾವಣೆಯಲ್ಲಿ ‘ತ್ರಿಕೋನ ಸರಣಿ’ ಆಡುವಾಸೆ. ಅದರಿಂದಾಗಿ ಅತಂತ್ರ ವಿಧಾನಸಭೆ ಸೃಷ್ಟಿಯಾದರೆ ರೊಟ್ಟಿ ಜಾರಿ ತುಪ್ಪದಲ್ಲಿ ಬಿದ್ದಂತಾಗಲಿದೆ. ಇದು ಈಗಾಗಲೇ ಸಾಕಷ್ಟು ಬಾರಿ ಚರ್ಚೆಯಾದ ಚರ್ವಿತ ಚರ್ವಣ ಸೂತ್ರವಾದರೂ ಜೆಡಿಎಸ್‌ ಅಸ್ತಿತ್ವ ಮಾತ್ರ ಇದರಲ್ಲೇ ಇದೆ. ಮುಂದಿನ ಬಾರಿಯೂ ಕಿಂಗ್‌ ಮೇಕರ್‌ ಪಾತ್ರ ವಹಿಸಬೇಕಾದರೆ ಜೆಡಿಎಸ್‌ಗೆ ತನ್ನ ಸಾಂಪ್ರದಾಯಿಕ ವೋಟ್‌ ಬ್ಯಾಂಕ್‌ ಜತೆಗೆ ಮುಸ್ಲಿಂ ಬಾಂಧವರ ವಿಶ್ವಾಸವೂ ಬೇಕಾಗುತ್ತದೆ. ಜಮೀರ್‌ ಅಹ್ಮದ್‌, ಇಕ್ಬಾಲ್‌ ಅನ್ಸಾರಿ ಮತ್ತಿತರ ಅಲ್ಪಸಂಖ್ಯಾತ ಮುಖಂಡರು ಕಾಂಗ್ರೆಸ್‌ನತ್ತ ಹೊರಟ ನಂತರ ಈ ವಿಭಾಗದಲ್ಲಿ ಜೆಡಿಎಸ್‌ ಸೊರಗಿದೆ. ಅದಕ್ಕಾಗಿ ಸಿ.ಎಂ.ಇಬ್ರಾಹಿಂ ಅವರನ್ನು ವಾಪಸ್‌ ಕರೆತರುವ ಕಸರತ್ತು ಚಾಲ್ತಿಯಲ್ಲಿದೆ. ಇದರ ನಡುವೆ ಅಲ್ಪಸಂಖ್ಯಾತರ ಕಾರ್ಯಾಗಾರಕ್ಕೆ ತೆರೆ ಬೀಳುತ್ತಿದ್ದಂತೆ ಬಿಜೆಪಿಯ ಅಂಗಸಂಸ್ಥೆ ಆರ್‌ಎಸ್‌ಎಸ್‌ ವಿರುದ್ಧ ಎಚ್‌ಡಿಕೆ ತಿರುಗಿ ಬಿದ್ದಿದ್ದಾರೆ. ಅದಕ್ಕೆ ಅವರು ನಿರೀಕ್ಷಿಸಿದಂತೆಯೇ ಬಿಜೆಪಿ ಕಡೆಯಿಂದ ಪ್ರತಿಕ್ರಿಯೆ ಬಂದಿದೆ. ಅಲ್ಲಿಗೆ ಕುಮಾರಸ್ವಾಮಿ ಹೂಡಿದ ಬಾಣ ಗುರಿ ತಲುಪಿದೆ ಎಂದೇ ಅರ್ಥ.

ಪ್ರಜಾಮನ ನ್ಯೂಸ್ ಡೆಸ್ಕ್.

prajamana.com 9448797745

You May Also Like

error: Content is protected !!