‘ಬ್ಲಡಿ ಫೆಲೋಸ್, ನಿಮಗೆ ಹೇಳೋರಿಲ್ವಾ ಕೇಳೋರಿಲ್ವಾ?: ಅಧಿಕಾರಿಗಳ ವಿರುದ್ಧ ಮಾಧುಸ್ವಾಮಿ ಗರಂ

ತುಮಕೂರು: ಜಿಲ್ಲಾ ಪಂಚಾಯಿತಿ ಕೆಡಿಪಿ ಸಭೆಯಲ್ಲಿ ಅಧಿಕಾರಿಗಳ ವಿರುದ್ಧ ಸಚಿವ ಜೆ.ಸಿ ಮಾಧುಸ್ವಾಮಿ ಕಿಡಿಕಾರುವ ಪ್ರಸಂಗ ಮುಂದುವರಿದಿದೆ. ಮಂಗಳವಾರ ನಡೆದ ತುಮಕೂರು ಜಿಲ್ಲಾ ಪಂಚಾಯತ್ ಕೆಡಿಪಿ ಸಭೆಯಲ್ಲಿ ಮಾಧುಸ್ವಾಮಿ ಅವರು ಪಿಆರ್‌ಇಡಿ ಎಂಜಿನಿಯರ್‌ಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ಶಾಲೆಗಳ ಹೊಸ ಕೊಠಡಿಗಳ ಕಾಮಗಾರಿಗಳು ವಿಳಂಬವಾಗುತ್ತಿರುವ ವಿಚಾರ ಪ್ರಸ್ತಾಪಿಸಿದ ಮಾಧುಸ್ವಾಮಿ, ಕೆಲಸಗಳು ಇನ್ನೂ ಮುಗಿಯದೆ ಇರುವುದಕ್ಕೆ ಅಧಿಕಾರಿಗಳ ವಿರುದ್ಧ ಹರಿಹಾಯ್ದರು. ‘ಬ್ಲಡಿ ಫೆಲೋಸ್, ನಿಮಗೆ ಹೇಳೋರಿಲ್ಲ ಕೇಳೋರಿಲ್ವಾ? ನಾನು ನಿನ್ನೆ ಮೊನ್ನೆ ಆರಂಭಿಸಿದ ಕೆಲಸದ ಬಗ್ಗೆ ಕೇಳುತ್ತಿಲ್ಲ. ಮೂರು ವರ್ಷದ ಹಿಂದಿನ ಕೆಲಸ ಕೇಳ್ತಿದ್ದೀನಿ. ಮೂರು ವರ್ಷವಾದ್ರೂ ಕೆಲಸವಾಗಿಲ್ಲ ಅಂದ್ರೆ ಏನು? ಎಂದು ಕೋಪ ವ್ಯಕ್ತಪಡಿಸಿದರು.

2019-20 ರ ಕಾಮಗಾರಿಗಳೇ ಇನ್ನೂ ಮುಗಿದಿಲ್ಲವೆಂದರೆ ಅರ್ಥ ಏನು? 2-3 ವರ್ಷವಾದರೂ ಶಾಲಾ ಕೊಠಡಿ ನಿರ್ಮಾಣ ಕೆಲಸ ಆಗಿಲ್ಲ ನಾನು ಯಾವ ಭಾಷೆ ಬಳಸಬೇಕು? ಇನ್ನು ಮುಂದೆ ಪಿಆರ್‌ಇಡಿಗೆ ಕೆಲಸ ಕೊಡಬೇಡಿ. ಈ ಅಧಿಕಾರಿಯನ್ನು ಸಸ್ಪೆಂಡ್ ಮಾಡಿ ಮನೆಗೆ ಕಳುಹಿಸಿ ಎಂದು ಮಾಧುಸ್ವಾಮಿ ಅವರು ಜಿಲ್ಲಾ ಪಂಚಾಯತ್ ಸಿಇಒ ಅವರಿಗೆ ಸೂಚನೆ ನೀಡಿದರು.

ಕಟ್ಟಡವನ್ನು ಕಟ್ಟುತ್ತಾನೂ ಇಲ್ಲ, ತಿಂದಾಕ್ತಾನೂ ಇಲ್ಲ. ಕೆಲಸ ಮಾಡೋದು ಹಾಳಾಗೋಗ್ಲಿ, ತಿಂದಾಕೋ ಕೆಲಸ ಆದರೂ ಮಾಡಿ ಎಂದು ಅಧಿಕಾರಿ ವಿರುದ್ಧ ಹರಿಹಾಯ್ದರು. ಮಳೆ ಬಂದು ಶಾಲೆ ಸೂರುಗಳು ಸೋರುತ್ತಿವೆ. ಕೊಠಡಿಗಳಿಲ್ಲದೆ ಮಕ್ಕಳಿಗೆ ತೊಂದರೆ ಆಗುತ್ತಿದೆ. ನಾವು ಕೂಗಾಡುವುದರಿಂದ ಪ್ರಯೋಜನವಿಲ್ಲ, ಸಿಇಒ ಅವರೇ. ಅವರ ವಿರುದ್ಧ ಕ್ರಮಕೈಗೊಳ್ಳಿ ಎಂದು ಆಗ್ರಹಿಸಿದರು.

ಪ್ರಜಾಮನ ನ್ಯೂಸ್ ಡೆಸ್ಕ್.

prajamana.com 9448797745

You May Also Like

error: Content is protected !!