ರಾಜ್ಯದಲ್ಲಿ ವಿದ್ಯುತ್ ಕಡಿತ ಇಲ್ಲ: ಸಿಎಂ ಬೊಮ್ಮಯಿ

ಬೆಂಗಳೂರು: ‘ರಾಜ್ಯದಲ್ಲಿ ಕಲ್ಲಿದ್ದಲು ದಾಸ್ತಾನು ಇದೆ.

ಆದ್ದರಿಂದ, ಯಾವುದೇ ರೀತಿಯ ವಿದ್ಯುತ್‌ ಕಡಿತ ಇಲ್ಲ. ಮುಂದಿನ ದಿನಗಳಲ್ಲಿಯೂ ವಿದ್ಯುತ್‌ ಕಡಿತ ಆಗದಂತೆ ನೋಡಿಕೊಳ್ಳಲಾಗುವುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ರಾಜ್ಯದಲ್ಲಿ ವಿದ್ಯುತ್‌ ಉತ್ಪಾದನೆ, ಬೇಡಿಕೆ ಮತ್ತು ಕಲ್ಲಿದ್ದಲು ಪರಿಸ್ಥಿತಿಯ ಬಗ್ಗೆ ಇಂಧನ ಇಲಾಖೆಯ ಅಧಿಕಾರಿಗಳ ಜೊತೆ ಮಂಗಳವಾರ ರಾತ್ರಿ ನಡೆಸಿದ ತುರ್ತು ಅವಲೋಕನ ಸಭೆಯ ಬಳಿಕ ಮಾತನಾಡಿದ ಅವರು, ‘ಸದ್ಯ ರಾಜ್ಯದಲ್ಲಿ 98,863 ಟನ್ ಕಲ್ಲಿದ್ದಲು ದಾಸ್ತಾನಿದೆ’ ಎಂದರು.

‘ದೆಹಲಿಯಲ್ಲಿ ಕೇಂದ್ರ ಕಲ್ಲಿದ್ದಲು ಸಚಿವರನ್ನು ನಾನು ಭೇಟಿ ಮಾಡಿ ಚರ್ಚೆ ನಡೆಸಿದ ಬಳಿಕ ದೆಹಲಿಯಿಂದ ರಾಜ್ಯಕ್ಕೆ ಎರಡು ರೇಕ್‌ ಕಲ್ಲಿದ್ದಲು ಹೆಚ್ಚು ಬಂದಿದೆ. ಈಗ ಪ್ರತಿ ದಿನ 10 ರೇಕ್‌ ಬರುತ್ತಿದೆ. ಹೆಚ್ಚುವರಿಯಾಗಿ ಇನ್ನೂ ಮೂರು ರೇಕ್‌ ಕಲ್ಲಿದ್ದಲು ಅವಶ್ಯಕತೆ ಇದೆ’ ಎಂದರು.

‘ಸಿಂಗರೇಣಿಯಿಂದ ಇನ್ನೂ ಎರಡು ರೇಕ್‌ ಕಲ್ಲಿದ್ದಲು ಕೊಡುತ್ತೇವೆ ಎಂದಿದ್ದಾರೆ. ಅವರಿಗೆ ಸ್ವಲ್ಪ ಹಣ ಪಾವತಿಸಬೇಕಾಗಿದೆ. ಗುರುವಾರ ಆ ಹಣ ಪಾವತಿಸಲಾಗುವುದು. ಬಳಿಕ ತೆಲಂಗಾಣ ಮುಖ್ಯಮಂತ್ರಿ ಜೊತೆ ಮಾತನಾಡುತ್ತೇನೆ. ಕೇಂದ್ರ ಕಲ್ಲಿದ್ದಲು ಸಚಿವರ ಜೊತೆಗೂ ಮಾತನಾಡಿ ಇನ್ನೂ ಎರಡು ಹೆಚ್ಚವರಿ ರೇಕ್‌ ಪಡೆಯಲು ವ್ಯವಸ್ಥೆ ಮಾಡುತ್ತೇವೆ’ ಎಂದರು.

ಕುಸಿದ ವಿದ್ಯುತ್‌ ಉತ್ಪಾದನೆ: ಕಲ್ಲಿದ್ದಲು ಅಭಾವ ತಲೆದೋರಿರುವುದರಿಂದ ರಾಜ್ಯದ ಪ್ರಮುಖ ಶಾಖೋತ್ಪನ್ನ ಕೇಂದ್ರಗಳಲ್ಲಿ ಬೇಡಿಕೆಗೆ ತಕ್ಕಷ್ಟು ವಿದ್ಯುತ್‌ ಉತ್ಪಾದನೆಯಾಗುತ್ತಿಲ್ಲ ಎಂದು ಮೂಲಗಳು ತಿಳಿಸಿವೆ.

ಪ್ರಮುಖ ಶಾಖೋತ್ಪನ್ನ ಕೇಂದ್ರಗಳಾದ ರಾಯಚೂರು ಶಾಖೋತ್ಪನ್ನ ವಿದ್ಯುತ್‌ ಸ್ಥಾವರ (ಆರ್‌ಟಿಪಿಎಸ್‌), ಬಳ್ಳಾರಿ ಶಾಖೋತ್ಪನ್ನ ಕೇಂದ್ರ (ಬಿಟಿಪಿಎಸ್‌) ಮತ್ತು ಯರಮರಸ್‌ ಶಾಖೋತ್ಪನ್ನವಿದ್ಯುತ್‌ ಸ್ಥಾವರದಿಂದ (ವೈಟಿಪಿಎಸ್‌) ಒಟ್ಟು 5,020 ಮೆಗಾ ವಾಟ್‌ ವಿದ್ಯುತ್‌ ಉತ್ಪಾದನೆಯಾಬೇಕಾಗಿತ್ತು. ಆದರೆ, ಮಂಗಳವಾರ 1,300 ಮೆಗಾ ವಾಟ್‌ಗಿಂತಲೂ ಕಡಿಮೆ ಉತ್ಪಾದನೆಯಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸೌರಶಕ್ತಿ ಮೂಲಕ ವಿದ್ಯುತ್‌ ಕೊರತೆಯನ್ನು ನೀಗಿಸುವ ಪ್ರಯತ್ನ ಮಾಡಲಾಗುತ್ತಿದೆ. 7,300 ಮೆಗಾ ವಾಟ್‌ ಸ್ಥಾಪಿತ ಸಾಮರ್ಥ್ಯದ ಮೂಲಕ 3,500 ಮೆಗಾ ವಾಟ್‌ ಉತ್ಪಾದನೆಯಾಗಿದೆ. ರಾಜ್ಯದಲ್ಲಿ ಮಳೆ ಮತ್ತು ಮೋಡದಿಂದ ಕೂಡಿದ ವಾತಾವರಣ ಇರುವುದರಿಂದ ವಿದ್ಯುತ್ ಉತ್ಪಾದನೆ ಇಳಿಕೆಯಾಗಿದೆ ಎಂದು ಹೇಳಿದ್ದಾರೆ.

ಜಲ ವಿದ್ಯುತ್‌ ಉತ್ಪಾದನೆಯಲ್ಲೂ ಕುಸಿತವಾಗಿದೆ. ಮಂಗಳವಾರ 4,701 ಮೆಗಾ ವಾಟ್ ಉತ್ಪಾದನೆಯಾಗಬೇಕಾಗಿತ್ತು. ಆದರೆ, 1,300 ಮೆಗಾವಾಟ್‌ ಉತ್ಪಾದನೆಯಾಗಿದೆ ಎಂದಿದ್ದಾರೆ.

ಪ್ರಜಾಮನ ನ್ಯೂಸ್ ಡೆಸ್ಕ್.

prajamana.com 9448797745

You May Also Like

error: Content is protected !!