ಮಾಜಿ ಶಾಸಕ ಬಿ.ಸುರೇಶ್‍ಗೌಡರಿಗೆ ಸವಾಲು ಎಸೆದ ಶಾಸಕ ಡಿ.ಸಿ.ಗೌರಿಶಂಕರ್ !

ತುಮಕೂರು : ತುಮಕೂರು ಗ್ರಾಮಾಂತರ ಕ್ಷೇತ್ರಕ್ಕೆ ಹರಿಯಬೇಕಿರುವ 972 ಎಂಸಿಎಫ್‍ಟಿ ನೀರನ್ನು ಹರಿಸಿದರೆ ನಾನು ನಿಮ್ಮ ಮುಂದೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ, ನೀರು ಹರಿಸದಿದ್ದರೆ ಕ್ಷೇತ್ರಬಿಟ್ಟು ಹೋಗುತ್ತೀರಾ ಎಂದು ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್ ಮಾಜಿ ಶಾಸಕ ಬಿ.ಸುರೇಶ್‍ಗೌಡರಿಗೆ ಸವಾಲು ಹಾಕಿದರು.
ನಗರದ ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಆಗಲಿ ಅಥವಾ ಸಚಿವರಾದ ಗೋವಿಂದ ಕಾರಜೋಳ ಅವರಾಗಲೀ ಯಾರಿಂದಾದರೂ ಸರಿಯೇ ಗ್ರಾಮಾಂತರಕ್ಕೆ ಹರಿಯಬೇಕಿರುವ 972 ಎಂಸಿಎಫ್‍ಟಿ ನೀರನ್ನು ಹರಿಸಿದರೆ ನಾನು ನಿಮ್ಮ ಮುಂದೆ ಸ್ಪರ್ಧಿಸುವುದಿಲ್ಲ, ಇಲ್ಲದಿದ್ದರೆ ಕ್ಷೇತ್ರ ಬಿಟ್ಟು ಹೋಗಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವೃಷಭಾವತಿಯಿಂದ ನೀರು:
ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರಕ್ಕೆ ಬೆಂಗಳೂರು ಭಾಗದ ವೃಷಭಾವತಿ ನದಿಯಿಂದ ಕುಡಿಯುವ ನೀರಿನ ಉದ್ದೇಶಕ್ಕೆ ನೀರು ಪೂರೈಸಲು 500 ಕೋಟಿ ರೂ. ಯೋಜನೆ ರೂಪಿಸಲಾಗಿದೆ ಇದಕ್ಕಾಗಿ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.
ಮೊದಲ ಹಂತದಲ್ಲಿ 11 ಕೆರೆಗಳು ಸೇರಿದಂತೆ ಒಟ್ಟು 25 ಕೆರೆಗಳಿಗೆ ಕುಡಿಯುವ ನೀರು ಪೂರೈಸಲು ಡಿಪಿಆರ್‍ಗೆ ಅನುಮೋದನೆ ನೀಡಲಾಗಿದ್ದು, ಮಾನವೀಯ ದೃಷ್ಠಿಯಿಂದ ಜನರ ಹಾಗೂ ರೈತರ ಕಷ್ಟಕ್ಕೆ ಸ್ಪಂದಿಸಿದ ಜಿಲ್ಲಾ ಸಚಿವರಿಗೆ ಅಭಿನಂದನೆ ಸಹಜ ಎಂದರು.
ಒಟ್ಟು 82 ಕೆರೆಗಳಿಗೆ ಡಿಪಿಆರ್ ಆಗಿದ್ದು, ತುಮಕೂರು ಗ್ರಾಮಾಂತರ ಕ್ಷೇತ್ರದ 25 ಕೆರೆಗಳು ಇದರಲ್ಲಿ ಸೇರಿದ್ದು, ಈ ಯೋಜನೆ ಪೂರ್ಣಗೊಂಡರೆ ಈ ಭಾಗದ ಜನರ ನೀರಿನ ಸಮಸ್ಯೆ ನಿವಾರಣೆಯಾಗಲಿದೆ. ಮಾಜಿ ಶಾಸಕ ಬಿ.ಸುರೇಶಗೌಡ ಅವರು ವೃಷಭಾವತಿ ನೀರು ಹರಿಸುವ ಯೋಜನೆಗೆ ಅಡ್ಡಗಾಲು ಹಾಕಿ ಕೆಲಸ ಕೆಡಿಸಬಾರದು ಎಂಬ ಬುದ್ದಿಮಾತು ಹೇಳಿದರು.
ರಾಜಕಾರಣ ಚುನಾವಣೆ ಸಂದರ್ಭಕ್ಕೆ ಮಾತ್ರ ಸೀಮಿತವಾಗಿರಲಿ. ಕುಡಿಯುವ ನೀರು ಹಾಗೂ ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ರಾಜಕಾರಣ ಮಾಡುವುದು ಸರಿಯಲ್ಲ, ಹೆಬ್ಬೂರು-ಗೂಳೂರು ಏತ ನೀರಾವರಿ ಯೋಜನೆ ಅವೈಜ್ಞಾನಿಕ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹೇಳಿಕೆ ನೀಡಿರುವುದು ಶೇ.100ರಷ್ಟು ಸತ್ಯವಾಗಿದೆ. ಈ ಮಾತನ್ನು ಕಳೆದ 2 ವರ್ಷಗಳ ಹಿಂದೆ ನಾನು ಹೇಳಿದ್ದೆ ಎಂದು ಸಮರ್ಥಿಸಿಕೊಂಡರು.
2008-09ರಲ್ಲಿ ಈ ಯೋಜನೆಗಾಗಿ 60 ಕೋಟಿ ವೆಚ್ಚದ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ನಡೆದಿದ್ದು, ಏತನೀರಾವರಿ ಮೂಲಕ ಈ ಭಾಗದ 49 ಕೆರೆಗಳಿಗೆ ನೀರು ತುಂಬಿಸಲು ಯೋಜನೆ ರೂಪಿಸಲಾಗಿತ್ತು. 243.32 ಎಂಸಿಎಫ್‍ಟಿ ನೀರು ನಿಗಧಿಯಾಗಿತ್ತು. ಈ ಭಾಗಕ್ಕೆ ಪೂರ್ಣಪ್ರಮಾಣದಲ್ಲಿ ನೀರು ಪೂರೈಸಲು 972.59 ಎಂಸಿಎಫ್‍ಟಿ ನೀರಿನ ಅಗತ್ಯವಿದ್ದು, ಇದು ಪೂರೈಕೆಯಾಗಲು ಸಾಧ್ಯವಿಲ್ಲ. ಹಾಗಾಗಿ ಇದೊಂದು ಅವೈಜ್ಞಾನಿಕ ಯೋಜನೆ ಎಂದರು.
2014-15ನೇ ಸಾಲಿನಲ್ಲಿ 22 ಕೆರೆಗಳಿಗೆ ಮೊದಲು ನೀರು ಹರಿಸಲಾಗಿದ್ದು, ಆಗ ಬಿ.ಸುರೇಶ್‍ಗೌಡ ಶಾಸಕರಾಗಿದ್ದರು. 2015-16ನೇ ಸಾಲಿನಲ್ಲಿ 182.95, 2016-17ರಲ್ಲಿ 55.03, 2017-18ರಲ್ಲಿ 43.02 ಸೇರಿದಂತೆ ಒಟ್ಟು 581 ಎಂಸಿಎಫ್‍ಟಿಯಷ್ಟು ನೀರು ಹರಿಸಲಾಗಿದೆ. ನಾನು ಶಾಸಕನಾಗಿದ್ದ ಅವಧಿಯಲ್ಲಿ 2018-19ರಲ್ಲಿ 142.99, 2019-20ರಲ್ಲಿ 142.86, 2020-21ರಲ್ಲಿ 205.32, 2021-22ನೇ ಸಾಲಿನಲ್ಲಿ ಅಕ್ಟೋಬರ್ 17ರವರೆಗೆ 149.67 ಎಂಸಿಎಫ್‍ಟಿಯಷ್ಟು ನೀರು ಹರಿಸಿದ್ದು, ಇನ್ನೂ ಒಂದೂವರೆ ತಿಂಗಳ ಕಾಲ ನೀರು ಹರಿಯಲಿದ್ದು, 210 ಎಂಸಿಎಫ್‍ಟಿ ನೀರು ಹರಿಸುವ ಸಾಧ್ಯತೆ ಇದೆ. ಈ ಮೂರು ವರ್ಷದ ಅವಧಿಯಲ್ಲಿ ಒಟ್ಟು 639 ಎಂಸಿಎಫ್‍ಟಿ ನೀರು ಹರಿಸಿದ್ದೇನೆ ಎಂದು ಅಂಕಿ, ಅಂಶಗಳನ್ನೊಳಗೊಂಡ ದಾಖಲೆ ಸಹಿತ ವಿವರಿಸಿದರು.
ತಾಲೂಕಿನ ರೈತರು, ಸಾರ್ವಜನಿಕರು ಇದನ್ನು ಯಾವುದೆ ಕ್ಷಣದಲ್ಲಿ ಪರಿಶೀಲಿಸಿ, ಅಧಿಕಾರಿಗಳಿಂದ ಮಾಹಿತಿ ಪಡೆಯಲಿ ಈ ಬಗ್ಗೆ ಯಾವುದೆ ಸಂದರ್ಭದಲ್ಲಿ ಸಾರ್ವಜನಿಕ ಚರ್ಚೆಗೆ ದಾಖಲೆ ಸಹಿತ ಸಿದ್ಧವಿರುವುದಾಗಿ ಘೋಷಿಸಿದರು.
ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಹೆಬ್ಬೂರು ವ್ಯಾಪ್ತಿಯ 13 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸಲು 4.32 ಕೋಟಿ ಖರ್ಚು ಮಾಡಿ, 2014-15ರಲ್ಲಿ 5 ಎಂಸಿಎಫ್‍ಟಿಯಷ್ಟು ನೀರು ಹರಿದಿದ್ದು, ಉಳಿದ ನಾಲ್ಕು ವರ್ಷಗಳಲ್ಲಿ ಈ ಕೆರೆಗೆ ಒಂದು ಹನಿ ನೀರನ್ನು ಹರಿಸಿಲ್ಲ. ಹೀಗಾಗಿ ಈ ಯೋಜನೆ ಹಣ ಖರ್ಚಾಗಿದ್ದು, ಫೈಲ್ ಆಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ಹಾಲನೂರು ಅನಂತಕುಮಾರ್, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ರಾಮಚಂದ್ರಪ್ಪ, ಮುಖಂಡರಾದ ವಿಜಯಕುಮಾರ್, ಹಿರೇಹಳ್ಳಿ ಮಹೇಶ್, ಮಂಜುನಾಥ್ ಮುಂತಾದವರು ಹಾಜರಿದ್ದರು.

ಪ್ರಜಾಮನ ನ್ಯೂಸ್ ಡೆಸ್ಕ್.

prajamana.com 9448797745

You May Also Like

error: Content is protected !!