ಸಾಮಾಜಿಕ ಸ್ವಾಸ್ಥ್ಯ ಸುಸ್ಥಿರವಾಗಿರಲು ಪೊಲೀಸರ ಪಾತ್ರ ಮಹತ್ತರವಾದುದು: ನ್ಯಾಯಾಧೀಶ ಜಿ.ಎಸ್. ಸಂಗ್ರೇಶಿ

ತುಮಕೂರು: ಸಮಾಜದಲ್ಲಿ ಸಾಮಾಜಿಕ ಸ್ವಾಸ್ಥ್ಯ ಸುಸ್ಥಿರವಾಗಿರಲು ಪೊಲೀಸರ ಪಾತ್ರ ಮಹತ್ತರವಾದುದಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಜಿ.ಎಸ್. ಸಂಗ್ರೇಶಿ ತಿಳಿಸಿದರು.

ಜಿಲ್ಲಾ ಪೊಲೀಸ್ ಕಚೇರಿ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಪೊಲೀಸ್ ಹುತಾತ್ಮರ ದಿನಾಚರಣೆಯಲ್ಲಿ ಹುತಾತ್ಮರ ಪುತ್ಥಳಿಗೆ ಪುಷ್ಪಗುಚ್ಛ ಅರ್ಪಿಸಿ ಮಾತನಾಡಿದ ಅವರು, ಪೊಲೀಸರು ದೈಹಿಕ, ಮಾನಸಿಕ, ಸಾಮಾಜಿಕ, ರಾಜಕೀಯ ಒತ್ತಡಗಳ ನಡುವೆಯೂ ಸಮಾಜದಲ್ಲಿ ಶಾಂತಿ ನೆಲೆಸಲು ಶಿಸ್ತುಬದ್ಧವಾಗಿ ಕಾರ್ಯನಿರ್ವಹಿಸುತ್ತಾರೆ. ಪೊಲೀಸರ ಕರ್ತವ್ಯ ನಿಷ್ಠೆಯಿಂದ ಸಮಾಜದಲ್ಲಿ ಶಾಂತಿಯುತ ಮತ್ತು ನೆಮ್ಮದಿ ಜೀವನ ನಡೆಸಲು ಸಾಧ್ಯವಾಗಿದೆ ಎಂದರು.

ಪೊಲೀಸ್ ಶಿಸ್ತಿನ ಇಲಾಖೆಯಾಗಿದ್ದು, ನ್ಯಾಯಾಂಗ ಮತ್ತು ಪೊಲೀಸ್ ಇಲಾಖೆ ಪರಸ್ಪರವಾಗಿ ಕೆಲಸ ಮಾಡುತ್ತಿದೆ. ಎರಡೂ ಗುರುತರ ಜವಾಬ್ದಾರಿಯಿಂದ ಕಾರ್ಯನಿರ್ವಹಿಸುತ್ತವೆ ಎಂದರು.

ಸಮಾಜಘಾತುಕ ಶಕ್ತಿಯನ್ನು ತೊಡೆದು ಹಾಕುವುದರ ಜೊತೆಗೆ ಪೊಲೀಸರು ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಸಮಾಜಕ್ಕೆ ಮಾದರಿಯಾಗಿದ್ದಾರೆ. ಅಪಘಾತ ಸೇರಿದಂತೆ ಇನ್ನಿತರ ಘಟನೆಗಳಲ್ಲಿ ಪೊಲೀಸರು ಮಾನವೀಯ ಮೌಲ್ಯ ತೋರಿ ಜನರ ಪ್ರಾಣ ರಕ್ಷಿಸುವ ಕೆಲಸ ಮಾಡುತ್ತಿದ್ದಾರೆ. ತಮ್ಮ ಕುಟುಂಬಕ್ಕಿಂತಲೂ ಹೆಚ್ಚಾಗಿ ಸಮಾಜದ ಸ್ವಾಸ್ಥ್ಯ ಕಾಪಾಡಲು ಹಗಲಿರುಳೆನ್ನದೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದರು.

ಚೀನಾ-ಭಾರತ ಗಡಿ ಭಾಗದಲ್ಲಿ 1959ರಲ್ಲಿ ನಡೆದ ಯುದ್ಧದ ದಾಳಿಯಲ್ಲಿ 1೦ ಪೊಲೀಸರು ವೀರ ಮರಣ ಹೊಂದಿದು, ಅವರ ನೆನಪಿಗಾಗಿ ಹಾಗೂ ದೇಶ ವಿರೋಧಿ ಕೃತ್ಯಗಳನ್ನೆಸಗುವ ದುಷ್ಕರ್ಮಿಗಳ ವಿರುದ್ಧ ಧೀರತನದಿಂದ ಹೋರಾಡಿ ಪ್ರಾಣ ಸಮರ್ಪಿಸಿದ ಪೊಲೀಸರ ಸವಿನೆನಪಿಗಾಗಿ ಹುತಾತ್ಮರ ದಿನಾಚರಣೆ ಆಚರಿಸಿಕೊಂಡು ಬರಲಾಗುತ್ತಿದೆ ಎಂದರು.

ಪೊಲೀಸರ ಹುತಾತ್ಮರ ದಿನಾಚರಣೆ ಎಲ್ಲರಿಗೂ ಪ್ರೇರಣೆಯಾಗಬೇಕೆಂಬ ದೃಷ್ಟಿಯಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಸಾರ್ವಜನಿಕರಿಗೂ ಹುತಾತ್ಮರ ದಿನಾಚರಣೆ ಕಾರ್ಯಕ್ರಮದ ಅರಿವು ಮತ್ತು ಪೊಲೀಸರ ಕರ್ತವ್ಯ ನಿಷ್ಠೆಯನ್ನು ತಿಳಿಸುವುದು ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪುರವಾಡ್ ಮಾತನಾಡಿ, ಚೀನಾ-ಭಾರತ ಗಡಿ ಭಾಗದಲ್ಲಿ ಸಿಆರ್‌ಪಿಎಫ್ ಡಿಎಸ್‌ಪಿ ಕರಣಸಿಂಗ್ ನೇತೃತ್ವದಲ್ಲಿ ಪೊಲೀಸ್ ದಳವು ಕರ್ತವ್ಯ ನಿರ್ವಹಿಸುತ್ತಿದ್ದಾಗ ಚೀನಾ ಸೈನಿಕರಿಂದ ಏಕಾಏಕಿ ದಾಳಿ ನಡೆಸಲಾಗುತ್ತದೆ. ಆ ಸಂದರ್ಭದಲ್ಲಿ ವೈರಿಗಳ ದಾಳಿಗೆ ವಿಚಲಿತರಾಗದೆ ತಮ್ಮ ಪ್ರಾಣದ ಹಂಗು ತೊರೆದು ಕೊನೆಯುಸಿರಿನವರೆಗೂ ಧೈರ್ಯದಿಂದ ಹೋರಾಡಿ ಪ್ರಾಣ ತೆತ್ತ ಭಾರತೀಯ ಪೊಲೀಸ್ ಯೋಧರ ಬಲಿದಾನದ ಸ್ಮರಣೆ ಪ್ರತೀಕವಾಗಿ ಪ್ರತಿ ವರ್ಷ ಅಕ್ಟೋಬರ್ ೨೧ರಂದು ದೇಶಾದ್ಯಂತ ಎಲ್ಲ ಜಿಲ್ಲಾ ಪೊಲೀಸ್ ಕೇಂದ್ರ ಸ್ಥಾನಗಳಲ್ಲಿ ಪೊಲೀಸ್ ಹುತಾತ್ಮರ ದಿನ ಆಚರಿಸಲಾಗುತ್ತದೆ. ಅಲ್ಲದೆ, ದೇಶದಲ್ಲಿ ಆಂತರಿಕ ಶತ್ರುಗಳು ಹಾಗೂ ದೇಶ ವಿರೋಧಿ ಕೃತ್ಯಗಳನ್ನೆಸಗುವ ದುಷ್ಟರ ವಿರುದ್ಧ ಧೀರತನದಿಂದ ಹೋರಾಡಿ ಪ್ರಾಣ ಸಮರ್ಪಿಸಿದ ಪೊಲೀಸರಿಗೂ ಶ್ರದ್ಧಾಂಜಲಿ ಅರ್ಪಿಸುವುದರ ಮೂಲಕ ಈ ದಿನವನ್ನು ಪೊಲೀಸ್ ಹುತಾತ್ಮರ ದಿನವನ್ನಾಗಿ ಆಚರಿಸುತ್ತಿದ್ದೇವೆ ಎಂದು ತಿಳಿಸಿದರು.

ಒಂದು ವರ್ಷದ ಅವಧಿಯಲ್ಲಿ ದೇಶದ ವಿವಿಧ ರಾಜ್ಯಗಳ ಹಾಗೂ ಕೇಂದ್ರ ಪೊಲೀಸ್ ದಳದ ಒಟ್ಟು 377 ಪೊಲೀಸರು ಸೇವೆಯಲ್ಲಿ ಪ್ರಾಣಾರ್ಪಣೆ ಮಾಡಿದ್ದಾರೆ. ಅವರೆಲ್ಲರನ್ನೂ ಇಂದು ಸ್ಮರಿಸಲಾಗುತ್ತಿದೆ ಎಂದರು.

ಇದೇ ವೇಳೆ ಕಾರ್ಯಕ್ರಮದಲ್ಲಿ ಪತ್ರಕರ್ತರ ಪರವಾಗಿ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಚಿ.ನಿ. ಪುರುಷೋತ್ತಮ್ ಹುತಾತ್ಮರಿಗೆ ಪುಷ್ಪಗುಚ್ಛ ಸಮರ್ಪಿಸಿದರು.

ಕಾರ್ಯಕ್ರಮದಲ್ಲಿ ಐಪಿಎಸ್ (ಪ್ರೊಬೆಷನರಿ) ಸಿದ್ಧಾರ್ಥ ಗೋಯಲ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಉದೇಶ್, ಸೇರಿದಂತೆ ಪೊಲೀಸ್ ಇಲಾಖೆಯ ಇನ್ಸ್ಪೆಕ್ಟರ್ ಸೇರಿದಂತೆ ಸಿಬ್ಬಂದಿಗಳು ಇದ್ದರು.

You May Also Like

error: Content is protected !!