ವಿಹೆಚ್ ಪಿ ಕರೆ ನೀಡಿದ ತುಮಕೂರು ಬಂದ್ ಯಶಸ್ವಿ

ತುಮಕೂರು: ಬಜರಂಗದಳ ಕಾರ್ಯಕರ್ತರಾದ ಮಂಜುಭಾರ್ಗವ್ ಮತ್ತು ಕಿರಣ್ ಮೇಲೆ ನಡೆದ ಹಲ್ಲೆ ಖಂಡಿಸಿ ಹಾಗೂ ಗೋಹತ್ಯಾ ನಿಷೇಧ ಕಾನೂನು ಕಟ್ಟುನಿಟ್ಟಾಗಿ ಆಚರಿಸುವಂತೆ ಒತ್ತಾಯಿಸಿ ವಿಶ್ವಹಿಂದೂಪರಿಷತ್, ಬಜರಂಗದಳ ಸೇರಿದಂತೆ ಹಿಂದೂಪರ ಸಂಘಟನೆಗಳು ಕರೆ ನೀಡಿದ್ದ ತುಮಕೂರು ಯಶಸ್ವಿಗೊಂಡಿದೆ.

ಬೆಳಿಗ್ಗೆಯಿಂದಲೇ ವ್ಯಾಪಾರಸ್ಥರು ಹಾಗೂ ಹೊಟೇಲ್ ಗಳನ್ನು ಮುಚ್ಚಿ ತುಮಕೂರು ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದ್ದವು, ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಬೈಕ್ ರ್‍ಯಾಲಿ ಮೂಲಕ ಆಕ್ರೋಶ ಹೊರಹಾಕಿದರು. ಟೌನ್‌ಹಾಲ್‌ನಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಹಿಂದೂಪರ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದರು.

ನಂತರ ಟೌನ್‌ಹಾಲ್‌ನಿಂದ ಚರ್ಚ್ ಸರ್ಕಲ್‌ವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ವಿಶ್ವ ಹಿಂದೂ ಪರಿಷತ್ ವಿಭಾಗೀಯ ಉಸ್ತುವಾರಿ ಬಸವರಾಜು ಅವರು ಮಾತನಾಡಿ, ನಗರದಲ್ಲಿರುವ ಅನಧಿಕೃತ ಕಸಾಯಿಖಾನೆಗಳನ್ನು ಮುಚ್ಚಿಸಬೇಕು ಹಾಗೂ ಮಂಜು ಭಾರ್ಗವ್‌ಗೆ ಕೊಲೆ ಬೆದರಿಕೆ ಹಾಕಿದ್ದ ಇಸ್ಮಾಯಿಲ್ ಅವರನ್ನು ಬಂಧಿಸುವಂತೆ ಆಗ್ರಹಿಸಿದ ಅವರು, ಹಿಂದೂಗಳನ್ನು ಮುಟ್ಟಿದರೆ ಎಲ್ಲರು ಒಗ್ಗಟ್ಟಾಗುತ್ತಾರೆ ಎನ್ನುವುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದೇವೆ ಎಂದು ಹೇಳಿದರು.

ಹಿಂದೂ ಯುವಕರ ಶಾಂತಿ ಕಳೆದುಕೊಂಡರೆ ಏನು ಮಾಡಬೇಕು ಎನ್ನುವುದು ಅವರಿಗೆ ಗೊತ್ತಿದೆ ಎಂದ ಅವರು ಶಾಂತಿಯುತವಾಗಿ ಪ್ರತಿಭಟನೆ ಮಾಡುವುದಾಗಿ ಜಿಲ್ಲೆಯ ಪೊಲೀಸರಿಗೆ ಮನವಿ ಮಾಡಿದ್ದೇವು ಅದರಂತೆ ಎಲ್ಲ ಕಾರ್ಯಕರ್ತರು ಶಾಂತಿಯನ್ನು ಕಾಪಾಡಬೇಕು, ಕಾರ್ಯಕರ್ತರು ಏನಾದರೂ ಮಾಡುತ್ತಾರೆ ಎನ್ನುವ ಭಯ ಪೊಲೀಸರಿಗೆ ಇತ್ತು ಆದರೆ ನಮ್ಮ ಹುಡುಗರು ಅದಕ್ಕೆ ಅವಕಾಶ ಕೊಡದೇ ಇದದ್ದಕ್ಕೆ ಅಭಿನಂದನೆ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಶಾಸಕ ಜ್ಯೋತಿಗಣೇಶ್ ಮಾತನಾಡಿದ ಅವರು ಹಿಂದೂಪರ ಸಂಘಟನೆಗಳು ಮಾಡಿರುವ ಭರವಸೆಯನ್ನು ಈಡೇರಿಸುವ ನಿಟ್ಟಿನಲ್ಲಿ ಬೊಮ್ಮಾಯಿ ಅವರ ಸರ್ಕಾರದ ಮೇಲೆ ಭರವಸೆ ಇಡಬೇಕು ಎಂದು ಮನವಿ ಮಾಡಿದ ಅವರು, ಬಜರಂಗದಳ ಕಾರ್ಯಕರ್ತರ ಮೇಲಿನ ಹಲ್ಲೆ ಖಂಡಿಸಿ ನಡೆದ ಬಂದ್ ಹಾಗೂ ಪ್ರತಿಭಟನೆಯಲ್ಲಿ ಶಾಂತಿಯುತವಾಗಿ ಪಾಲ್ಗೊಳ್ಳುವ ಮೂಲಕ ಸಹಕರಿಸಿದ ಜನರಿಗೆ ಹಾಗೂ ವ್ಯಾಪಾರಿಗಳಿಗೆ, ಯುವಕರಿಗೆ ಕೃತಜ್ಞತೆಯನ್ನು ಸಲ್ಲಿಸಿದರು.

ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ಅವರು, ಪೊಲೀಸ್ ವರಿಷ್ಠಾಧಿಕಾರಿಗಳ ನಿರ್ದೇಶನದಂತೆ ಶಾಂತಿಯುತವಾಗಿ ಪ್ರತಿಭಟನೆ ನಡೆಸುವ ಮೂಲಕ ಬೇಡಿಕೆ ಸಲ್ಲಿಸಿದ್ದೀರಿ, ಗೋಹತ್ಯೆ ನಿಷೇಧ ಕಾಯ್ದೆ ಅನ್ವಯ ಗೋರಕ್ಷಣೆ ಮಾಡುವ ನಿಟ್ಟಿನಲ್ಲಿ ಸಿರಾದಲ್ಲಿ ಗೋಶಾಲೆ ತೆರೆಯಲು ಜಾಗ ಗುರುತಿಸಲಾಗಿದೆ ಹಾಗೆಯೇ ಗೋರಕ್ಷಕರು ಪ್ರಾರಂಭಿಸುವ ಗೋಶಾಲೆಗಳಿಗೆ ಸಹಕಾರ ನೀಡುವುದಾಗಿ ಹೇಳಿದ ಅವರು, ನಗರದಲ್ಲಿ ನಡೆಯುತ್ತಿರುವ ಅನಧಿಕೃತ ಕಸಾಯಿಖಾನೆಗಳನ್ನು ನಿಲ್ಲಿಸುವ ನಿಟ್ಟಿನಲ್ಲಿ ಪಾಲಿಕೆ ಆಯುಕ್ತೆ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಚರ್ಚಿಸಿ ಕಾನೂನು ರೀತ್ಯ ಕ್ರಮವಹಿಸುವುದಾಗಿ ತಿಳಿಸಿದರು.

ಈ ವೇಳೆ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್‌ಕುಮಾರ್ ಶಹಪೂರವಾಡ್, ಎಎಸ್ಪಿ ಉದೇಶ್, ಡಿವೈಎಸ್ಪಿ ಶ್ರೀನಿವಾಸ್, ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿನಯ್ ಬಿದರೆ, ಹಿಂದೂಪರ ಸಂಘಟನೆಯ ಮುಖಂಡರಾದ ಜಿ.ಕೆ.ಶ್ರೀನಿವಾಸ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

You May Also Like

error: Content is protected !!