ತುಮಕೂರಿನ KSRTC ವಿಭಾಗೀಯ ನಿಯಂತ್ರಣಾಧಿಕಾರಿ ದಂಡಕ್ಕೆ ಗುರಿ..!

ತುಮಕೂರು: ನಿಲುಗಡೆ ಸ್ಥಳದಲ್ಲಿ ಬಸ್‌ ನಿಲ್ಲಿಸದೆ ತಮ್ಮ ಅನುಕೂಲಕ್ಕೆ ತಕ್ಕಂತೆ ಬಸ್‌ ನಿಲ್ಲಿಸಿ ಪ್ರಯಾಣಿಕರಿಗೆ ತೊಂದರೆ ಕೊಡುವ ಬಸ್‌ ಚಾಲಕರು, ನಿರ್ವಾಹಕರು ಹಾಗೂ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಕರ್ನಾಟಕ ರಾಜ್ಯ ಗ್ರಾಹಕ ನ್ಯಾಯಾಲಯ ನೀಡಿರುವ ಪ್ರಕರಣವೊಂದರ ತೀರ್ಪು ಎಚ್ಚರಿಕೆಯ ಕರೆಗಂಟೆಯಾಗಿದೆ.

ಚಾಲಕ ಮತ್ತು ನಿರ್ವಾಹಕ ಬಸ್‌ ನಿಲ್ಲಿಸದೆ ಸೇವಾ ನ್ಯೂನ್ಯತೆ ಎಸಗಿದ ತಪ್ಪಿಗೆ ಕೆಎಸ್ಸಾರ್ಟಿಸಿ ತುಮಕೂರು ವಿಭಾಗೀಯ ನಿಯಂತ್ರಣಾಧಿಕಾರಿ ದಂಡ ತೆರಬೇಕಾಗಿದೆ! ಇದು ದೇಶದ ಸಾರಿಗೆ ಇತಿಹಾಸದಲ್ಲೇ ಪ್ರಪ್ರಥಮ ಪ್ರಕರಣವೆಂದು ಬಿಂಬಿತವಾಗುತ್ತಿದೆ.

ನಿಗದಿತ ನಿಲ್ದಾಣದಲ್ಲಿ ಬಸ್‌ ನಿಲ್ಲಿಸದೆ ಚಾಲಕ, ನಿರ್ವಾಹಕ ಸೇವಾ ನ್ಯೂನ್ಯತೆ ಎಸಗಿದ್ದಕ್ಕೆ ದೂರುದಾರ ಮಹಿಳಾ ಗ್ರಾಹಕಿ ವಿಜಯ ಬಾಯಿ ಎಲ್‌. ಅವರಿಗೆ 8,010 ರೂ. ಪರಿಹಾರ ನೀಡುವಂತೆ ಕೆಎಸ್ಸಾರ್ಟಿಸಿ ತುಮಕೂರು ವಿಭಾಗೀಯ ನಿಯಂತ್ರಣಾಧಿಕಾರಿ ಬಸವರಾಜುಗೆ ರಾಜ್ಯ ಗ್ರಾಹಕ ನ್ಯಾಯಾಲಯ ನಿರ್ದೇಶಿಸಿದೆ.

ಏನಿದು ಪ್ರಕರಣ?: ತುಮಕೂರು ನಗರದ ಎಚ್‌ಎಂಟಿ ಬಳಿ ಬಸ್‌ ನಿಲುಗಡೆ ಮಾಡಬೇಕೆಂಬುದು ಗೋಕುಲ ಬಡಾವಣೆ, ಬಡ್ಡಿಹಳ್ಳಿ, ಮಹಾಲಕ್ಷ್ಮೀ ನಗರ ಹಾಗೂ ಶ್ರೀನಗರ ಬಡಾವಣೆಯ ಸಾವಿರಾರು ಮಂದಿಯ ಬೇಡಿಕೆಯಾಗಿತ್ತು. ಹಿಂದೆ ಬಸ್‌ ನಿಲ್ಲಿಸುತ್ತಿದ್ದರು. ಆದರೆ, ಅಪಘಾತದ ನೆಪವೊಡ್ಡಿ ಎಚ್‌ಎಂಟಿ ನಿಲುಗಡೆ ಸ್ಥಳದಲ್ಲಿ ಬಸ್‌ ನಿಲುಗಡೆ ರದ್ದುಗೊಳಿಸಲಾಗಿತ್ತು.

ಕ್ಯಾತ್ಸಂದ್ರ ಅಥವಾ ಬಟವಾಡಿಯಲ್ಲಿ ಇಳಿದು ತಮ್ಮ ಸ್ಥಳಗಳಿಗೆ ಆಟೋದಲ್ಲಿ ದುಬಾರಿ ಬಾಡಿಗೆ ನೀಡಿ ತೆರಳಬೇಕಾಗಿದ್ದ ಪರಿಸ್ಥಿತಿ ಪ್ರಯಾಣಿಕರದ್ದಾಗಿತ್ತು. ಇದನ್ನು ಪ್ರಶ್ನಿಸಿ ವಕೀಲ ರಮೇಶ್‌ ನಾಯಕ್‌ ಎಲ್‌ 2018ರ ಆಗಸ್ಟ್‌ನಲ್ಲಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು

ಪಿಐಎಲ್‌ನಲ್ಲಿ ಅರ್ಜಿದಾರರ ಪರ ತೀರ್ಪು ಬಂದರೂ 2018ರ ಅಕ್ಟೋಬರ್‌ನಲ್ಲಿ ಕೆಎಸ್ಸಾರ್ಟಿಸಿ ಬಸ್‌ವೊಂದರ ಚಾಲಕ, ನಿರ್ವಾಹಕ ನಿಗದಿತ ನಿಲುಗಡೆ ಸ್ಥಳದಲ್ಲಿ ಬಸ್‌ ನಿಲ್ಲಿಸದೆ ಸೇವಾ ಲೋಪ ಎಸಗಿದ್ದರು. ವಿಜಯ ಬಾಯಿ ಎಲ್‌. ಎಂಬುವರು ಈ ಬಗ್ಗೆ ಗ್ರಾಹಕರ ನ್ಯಾಯಾಲಯದ ಮೆಟ್ಟಿಲೇರಿದ್ದರು.

2019ರ ಜುಲೈನಲ್ಲಿ ಜಿಲ್ಲಾ ಗ್ರಾಹಕ ನ್ಯಾಯಾಲಯ ವಿಜಯ ಬಾಯಿ ಅವರಿಗೆ 15,010 ರೂ. ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶಿಸಿತ್ತು. ಆಗ ವಿಭಾಗೀಯ ನಿಯಂತ್ರಣಾಕಾರಿ ಮೇಲ್ಮನವಿ ಸಲ್ಲಿಸಿದ್ದರು.

ಇದೀಗ ರಾಜ್ಯ ಗ್ರಾಹಕ ನ್ಯಾಯಾಲಯ ಜಿಲ್ಲಾ ಗ್ರಾಹಕ ನ್ಯಾಯಾಲಯದ ತೀರ್ಪನ್ನು ಎತ್ತಿ ಹಿಡಿದಿದ್ದು, ಪರಿಹಾರ ಮೊತ್ತದಲ್ಲಿ 7,000 ರೂ ಕಡಿತ ಮಾಡಿ 8,010 ರೂ. ನೀಡುವಂತೆ ಆದೇಶಿಸಿದೆ. ಈ ಪ್ರಕರಣ ಸಾರಿಗೆ ಇಲಾಖೆ ಅಧಿಕಾರಿಗಳು, ನೌಕರರಿಗೆ ಪಾಠವೂ ಆಗಿದೆ. ವಿಜಯ ಬಾಯಿ ಪರ ಹೈಕೋರ್ಟ್‌ ವಕೀಲ ರಮೇಶ್‌ ನಾಯಕ್‌ ಎಲ್‌ ವಾದ ಮಾಡಿದ್ದರು.

ಎಲ್ಲೆಂದರಲ್ಲಿ ಬಸ್ ನಿಲುಗಡೆ ಮಾಡುವ ಹಾಗೂ ಸೂಕ್ತ ಬಸ್ ನಿಲ್ದಾಣದಲ್ಲಿ ಬಸ್ ನಿಲುಗಡೆ ಮಾಡದೆ ಇರುವ ಚಾಲಕರಿಗೆ ಇದು ಪಾಠ ಎಂದೇ ಪರಿಗಣಿಸಲಾಗಿದೆ. ತುಮಕೂರಿನ ಈ ಉದಾಹರಣೆ, ಇಡೀ ರಾಜ್ಯದ ಸರ್ಕಾರಿ ಬಸ್ ವ್ಯವಸ್ಥೆಯ ಪರಾಮರ್ಶೆಗೆ ಹಾಗೂ ಸುಧಾರಣೆಗೆ ದಾರಿಯಾಗಲಿ.

ಪ್ರಜಾಮನ ನ್ಯೂಸ್ ಡೆಸ್ಕ್.

prajamana.com 9448797745

You May Also Like

error: Content is protected !!