ಕೆರೆಯಂತಾದ ರಸ್ತೆಗಳು. ತಾಲೂಕು ಆಡಳಿತಕ್ಕೆ ಹಿಡಿಶಾಪ ಹಾಕುತ್ತಿರುವ ಜನರು

॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒

ತುರುವೇಕೆರೆ: ತಾಲೂಕಿನ ಡೊಂಕಿಹಳ್ಳಿಯ ಸುಮಾರು ಇನ್ನೂರು ಮೀಟರ್ ಗೂ ಹೆಚ್ಚು ಉದ್ದದ ರಸ್ತೆ ಸಂಪೂರ್ಣ ಹಾಳಾಗಿದ್ದು ಗುಂಡಿಗಳಿಂದ ಕೂಡಿದೆ. ಒಂದೆರೆಡು ಅಡಿಗಳಿಗೂ ಹೆಚ್ಚು ಆಳದ ಗುಂಡಿಗಳು ಇವೆ. ಇಲ್ಲಿ ಜನರು ವಾಹನಗಳಲ್ಲಿ ಇರಲಿ ನಡೆದುಕೊಂಡು ಹೋಗುವುದೂ ಆಗದ ಸ್ಥಿತಿ ಇದೆ ಎಂದು ಟಿಎಪಿಸಿಎಂಎಸ್ ನ ನಿರ್ದೇಶಕ ಡಿ.ಪಿ.ರಾಜು ದೂರಿದ್ದಾರೆ.

ತಾಲೂಕು ಕೇಂದ್ರದಿಂದ ನಮ್ಮ ಗ್ರಾಮಕ್ಕೆ ವಾಹನಗಳು ಬರಲು ಸಾಧ್ಯವಾಗುತ್ತಿಲ್ಲ. ಗ್ರಾಮದ ಆರಂಭದಿಂದ ಅಂತ್ಯದ ವರೆಗೂ ಹತ್ತಾರುಗುಂಡಿಗಳು ಬಿದ್ದಿರುವ ಕಾರಣ ಅಪಘಾತ ಸಾಮಾನ್ಯವಾಗಿದೆ. ಅದೆಷ್ಟೋ ಮಂದಿ ವಾಹನಗಳಿಂದ ಬಿದ್ದು ಕೈಕಾಲು ಮುರಿದುಕೊಂಡಿದ್ದಾರೆ. ವಾಹನಗಳು ನಜ್ಜು ನಜ್ಜಾಗಿವೆ ಎಂದು ಹೇಳಿದ್ದಾರೆ.

ರಸ್ತೆ ಕಿರಿದಾಗಿದ್ದು ಹತ್ತಾರು ವರ್ಷಗಳ ಹಿಂದೆಯೇ ನಿರ್ಮಿಸಿರುವ ಒಂದೆರೆಡು ಮನೆಗಳ ತೆರವು ಮಾಡಿದಲ್ಲಿ ರಸ್ತೆ ವಿಸ್ತಾರವಾಗುವುದು ಅಲ್ಲದೇ ಸುಗಮ ಸಂಚಾರಕ್ಕೆ ಅನುವಾಗುವುದು. ರಸ್ತೆಯ ಬದಿಯೇ ಇರುವ ಮನೆಗಳ ಮಾಲೀಕರಿಗೆ ಆಶ್ರಯ ಯೋಜನೆಯಲ್ಲಿ ಅನುದಾನ ಬಿಡುಗಡೆ ಮಾಡಿಸಿದರೆ ಮನೆಯ ಮಾಲೀಕರು ಈಗಿರುವ ತಮ್ಮ ಮನೆಗಳನ್ನು ತೆರವುಗೊಳಿಸಿ ಬೇರೆಡೆ ಮನೆ ನಿರ್ಮಿಸಿಕೊಳ್ಳುವರು ಎಂದು ಡಿ.ಪಿ.ರಾಜು ಹೇಳಿದ್ದಾರೆ.

ರಸ್ತೆಯ ಬದಿಯೇ ಇರುವ ಮನೆಯ ಮಾಲೀಕರೊಂದಿಗೆ ಸಂಬಂಧಿಸಿದ ಅಧಿಕಾರಿಗಳು ಸೌಹಾರ್ದಯುತವಾಗಿ ಮಾತನಾಡಿದಲ್ಲಿ ಸಮಸ್ಯೆ ಬಗೆಹರಿದು ಉತ್ತಮ ಗುಣ ಮಟ್ಟದ ರಸ್ತೆ ನಿರ್ಮಾಣ ಆಗಲು ಸಾಧ್ಯವಾಗಲಿದೆ. ರಸ್ತೆ ನಿರ್ಮಾಣ ಕಾಮಗಾರಿ ಆಗುವ ಮುನ್ನ ಸದ್ಯ ಬಿದ್ದಿರುವ ಗುಂಡಿಗಳನ್ನು ಜೆಲ್ಲಿ ಕಲ್ಲುಗಳಿಂದ ಮುಚ್ಚಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ಬೇಜವಾಬ್ದಾರಿತನ ತೋರಿದಲ್ಲಿ ಮುಂದಾಗುವ ಅಪಘಾತ ಮತ್ತು ಅನಾಹುತಗಳಿಗೇ ಅಧಿಕಾರಿಗಳೇ ಜವಾಬ್ದಾರಿ ಹೊರಬೇಕಾಗುತ್ತದೆ. ರಸ್ತೆಯ ಮಧ್ಯದಲ್ಲಿರುವ ಗುಂಡಿಗಳಲ್ಲಿ ಮಳೆ ನೀರು ತುಂಬಿರುವುದರಿಂದ ವಾಹನ ಸವಾರರು ಗುಂಡಿಗಳನ್ನು ಅರಿಯದೇ ಬೀಳುವಂತಾಗಿದೆ. ಆದ್ದರಿಂದ ಕೂಡಲೇ ಗುಂಡಿಗಳನ್ನು ಮುಚ್ಚಿಸಬೇಕು ಎಂದು ಡಿ.ಪಿ.ರಾಜು ಒತ್ತಾಯಿಸಿದ್ದಾರೆ.

You May Also Like

error: Content is protected !!