ಮುಂದೆ ನೀವು, ಹಿಂದೆ ನಾನು ಡಿ.ಸಿ.ಗೌರಿಶಂಕರ್ ಪ್ಲಾನ್ ಏನು?

ತುಮಕೂರು: ಒಂದು ಕಾಲದಲ್ಲಿ ಜಿಲ್ಲೆಯಲ್ಲಿ ಭದ್ರ ನೆಲೆ ಕಂಡುಕೊಂಡಿದ್ದ ಜೆಡಿಎಸ್‌ನ ಬೇರುಗಳು ದಿನ ಕಳೆದಂತೆ ಸಡಿಲಗೊಳ್ಳುತ್ತಿದ್ದು, ಈಗ ಮಾಜಿ ಸಚಿವ ದಿವಂಗತ ಸಿ.ಚನ್ನಿಗಪ್ಪ ಪುತ್ರರು ಪಕ್ಷ ತೊರೆದು ಕಾಂಗ್ರೆಸ್ ಸೇರುವುದಾಗಿ ಹೇಳುತ್ತಿರುವುದು ಹೊಸ ಬೆಳವಣಿಗೆ.

ತುಮಕೂರು ಗ್ರಾಮಾಂತರ ಕ್ಷೇತ್ರದ ಜೆಡಿಎಸ್ ಶಾಸಕ ಡಿ.ಸಿ.ಗೌರಿಶಂಕರ್ ಸಹೋದರರು ಹಾಗೂ ಚನ್ನಿಗಪ್ಪ ಹಿರಿಯ ಪುತ್ರರಾದ ಅರುಣ್ ಕುಮಾರ್, ವೇಣುಗೋಪಾಲ್ ಪಕ್ಷ ಬಿಟ್ಟು ಹೊರಗೆ ಹೋಗುವುದರ ಹಿಂದೆ ನಾನಾ ಅರ್ಥಗಳು ಧ್ವನಿಸುತ್ತಿವೆ. ಈ ಇಬ್ಬರು ಮುಖಂಡರಷ್ಟೇ ಸ್ವಂತ ನಿರ್ಧಾರ ತಾಳಿದ್ದಾರೆಯೆ? ಗೌರಿಶಂಕರ್ ಜತೆ ಚರ್ಚಿಸದೆ ನಿರ್ಧಾರ ಕೈಗೊಂಡಿದ್ದಾರೆಯೆ? ಪಕ್ಷ ಬಿಡಲು ಶಾಸಕರ ಬೆಂಬಲ ಇಲ್ಲವೆ? ಮೊದಲಾದ ಚರ್ಚೆಗಳು ರಾಜಕೀಯ ವಲಯದಲ್ಲಿ ನಡೆದಿವೆ.

ಗುಬ್ಬಿಯಲ್ಲಿ ಜೆಡಿಎಸ್ ಸಮಾವೇಶ, ಶಾಸಕ ಎಸ್.ಆರ್.ಶ್ರೀನಿವಾಸ್ ಬಂಡಾಯದ ಬೆಳವಣಿಗೆ ಸಂದರ್ಭದಲ್ಲೇ ಗೌರಿಶಂಕರ್ ಕುಟುಂಬದಲ್ಲಿ ನಡೆದಿರುವ ರಾಜಕೀಯ ಚಟುವಟಿಕೆಗಳು ಮಹತ್ವ ಪಡೆದುಕೊಂಡಿವೆ.

ಜಿಲ್ಲೆಯಲ್ಲಿ ಜೆಡಿಎಸ್ ‘ಶಕ್ತಿ’ ಅರಿತಿರುವ ಗೌರಿಶಂಕರ್ ಮೊದಲಿಗೆ ಸಹೋದರರನ್ನು ಕಾಂಗ್ರೆಸ್‌ಗೆ ಕಳುಹಿಸುವುದು. ಅಲ್ಲಿನ ಪರಿಸ್ಥಿತಿ, ವಾತಾವರಣವನ್ನು ಗಮನಿಸಿ, ಸುರೇಶ್‌ಗೌಡ ನಡೆಯನ್ನು ನೋಡಿಕೊಂಡು ಚುನಾವಣೆ ಹತ್ತಿರ ಬಂದಾಗ ಒಂದು ನಿರ್ಧಾರಕ್ಕೆ ಬರುವುದು. ‘ಮುಂದೆ ನೀವು, ಹಿಂದೆ ನಾನು’ ಎಂಬಂತೆ ರಾಜಕೀಯ ಮುನ್ನೋಟವನ್ನು ಗಮನದಲ್ಲಿ ಇಟ್ಟುಕೊಂಡೇ ಸಹೋದರರನ್ನು ಕಾಂಗ್ರೆಸ್‌ನತ್ತ ಕಳುಹಿಸುತ್ತಿದ್ದಾರೆ. ಇದು ಒಂದು ರೀತಿಯಲ್ಲಿ ‘ಟೆಸ್ಟ್ ಡೋಸ್’ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

ಒಂದು ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದಂತೆ. ಸುರೇಶ್‌ಗೌಡ ಕಾಂಗ್ರೆಸ್‌ಗೆ ಬರದಂತೆ ಪರೋಕ್ಷವಾಗಿ ನಿಯಂತ್ರಿಸುವುದು. ಚುನಾವಣೆ ವೇಳೆಗೆ ಕಾಂಗ್ರೆಸ್, ಜೆಡಿಎಸ್- ಎರಡರಲ್ಲಿ ಯಾವ ಪಕ್ಷದಿಂದ ಸ್ಪರ್ಧಿಸಿದರೆ ಸಹಕಾರಿಯಾಗುತ್ತದೆ ಎಂಬುದರ ಮೇಲೆ ನಿರ್ಧಾರ ಕೈಗೊಳ್ಳುವುದು. ಎರಡೂ ಕಡೆಗೂ ಟವೆಲ್ ಹಾಕುವುದು. ಅನುಕೂಲವಾದ ಕೆಡೆ ಕುಳಿತುಕೊಳ್ಳುವ ಜಾಣ್ಮೆ ನಡೆಯಲ್ಲಿ ಸಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಭದ್ರ ನೆಲೆ ಇಲ್ಲವಾಗಿದ್ದು, ಸುರೇಶ್‌ಗೌಡ, ಗೌರಿಶಂಕರ್- ಇಬ್ಬರಲ್ಲಿ ಒಬ್ಬರನ್ನು ಕರೆತಂದು ಪಕ್ಷ ಸಂಘಟಿಸುವ ಯೋಚನೆಯಲ್ಲಿ ಜಿಲ್ಲಾ ನಾಯಕರು ಇದ್ದಾರೆ. ಇಬ್ಬರಲ್ಲಿ ಯಾರು ಬಂದರೆ ಅನುಕೂಲವಾಗುತ್ತದೆ ಎಂಬುದನ್ನು ನೋಡಿಕೊಂಡು ಅವಕಾಶ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ಎಲ್ಲಾ ಬೆಳವಣಿಗೆ ಗಮನಿಸಿದರೆ ಗ್ರಾಮಾಂತರ ಕ್ಷೇತ್ರದಲ್ಲೂ ಪಕ್ಷಾಂತರ ಪರ್ವ ಆರಂಭವಾಗಬಹುದು ಎಂದು ಕಾಂಗ್ರೆಸ್, ಜೆಡಿಎಸ್ ನಾಯಕರು ಹೇಳುತ್ತಿದ್ದಾರೆ.

ಪ್ರಜಾಮನ ನ್ಯೂಸ್ ಡೆಸ್ಕ್.

prajamana.com 9448797745

You May Also Like

error: Content is protected !!