3ನೇ ಅಲೆ ಹೆಚ್ಚಾದರೆ ಶಾಲೆ ಸ್ಥಗಿತದ ಬಗ್ಗೆ ನಿರ್ಧಾರ; ಬಿ. ಸಿ. ನಾಗೇಶ್

ದಾವಣಗೆರೆ: ಕೊರೊನಾ ಸೋಂಕಿನ ಮೂರನೇ ಅಲೆ ಹೆಚ್ಚಾದರೆ ರಾಜ್ಯದಲ್ಲಿ ಶಾಲೆಗಳನ್ನು ಮತ್ತೆ ಸ್ಥಗಿತಗೊಳಿಸುವ ಕುರಿತಂತೆ ಸಮಾಲೋಚನೆ ನಡೆಸಿ ನಿರ್ಧಾರ ತೆಗೆದುಕೊಳ್ಳಲಾಗುವುದು” ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದರು.

ದಾವಣಗೆರೆ ನಗರದಲ್ಲಿ ಗುರುವಾರ ಮಾತನಾಡಿದ ಅವರು, “ಗಾಳಿಬೀಡು ನವೋದಯ ಶಾಲೆಯ ವಿದ್ಯಾರ್ಥಿಗಳಲ್ಲಿ ಕೊರೊನಾ ಸೋಂಕು ಪತ್ತೆ ಆಗಿದ್ದು, ಅಲ್ಲಿ ಇಬ್ಬರಿಗೆ ಜ್ವರ ಬಂದಿತ್ತು. ಬಳಿಕ ಪರೀಕ್ಷೆ ಮಾಡಿದಾಗ 31 ವಿದ್ಯಾರ್ಥಿಗಳಲ್ಲಿ ಲಕ್ಷಣ ಕಂಡು ಬಂದಿವೆ. ಯಾರಿಗೂ ಯಾವುದೇ ತೊಂದರೆಯಿಲ್ಲ” ಎಂದು ಸ್ಪಷ್ಟಪಡಿಸಿದರು.

ರಾಜ್ಯದಲ್ಲಿ 48 ಸಾವಿರ ಶಾಲೆಗಳಿವೆ. ಒಂದು ಶಾಲೆಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಶಾಲೆ ಆರಂಭಿಸಲಾಗಿದೆ ಎಂಬ ಕಾರಣಕ್ಕೆ ಸೋಂಕು ಬಂದಿಲ್ಲ. ಪೋಷಕರಿಂದಲೂ ಬಂದಿರಬಹುದು. ಮಕ್ಕಳನ್ನು ಸಿನಿಮಾಕ್ಕೆ ಕರೆದುಕೊಂಡು ಹೋಗುತ್ತಾರೆ. ಪಾನಿಪೂರಿ ತಿನ್ನಲು ಪೋಷಕರು ಕರೆದೊಯ್ಯುತ್ತಾರೆ. ಯಾವುದೋ ಒಂದು ಶಾಲೆಯಲ್ಲಿ ಸೋಂಕು ಬಂದಿದೆ ಎಂದಾಕ್ಷಣ ಎಲ್ಲೆಡೆಯಲ್ಲಿಯೂ ಇದೇ ಪರಿಸ್ಥಿತಿ ಎಂದು ಬಿಂಬಿಸುವುದು ಬೇಡ” ಎಂದರು.

ಈಗಾಗಲೇ ಕೊರೊನಾ ಸೋಂಕು ಪತ್ತೆಯಾಗಿರುವ ಶಾಲೆಗೆ ಮೂರು ದಿನ ರಜೆ ಘೋಷಿಸಲಾಗಿದೆ. ಮೂರು ದಿನಗಳ ಬಳಿಕ ಸ್ಯಾನಿಟೈಸ್ ಮಾಡಿ ಮತ್ತೆ ಶಾಲೆ ಆರಂಭಿಸಲಾಗುತ್ತದೆ. ಬಹುತೇಕ ಜಿಲ್ಲೆಗಳಲ್ಲಿ ಪಾಸಿಟಿವಿಟಿ ದರ ಶೇಕಡಾ 1ಕ್ಕಿಂತ ಕಡಿಮೆ ಇದೆ. ಹಾಗಾಗಿ ಶಾಲೆಗಳಲ್ಲಿ ಎಲ್ಲಾ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಯಾರೂ ಭಯಪಡುವ ಸ್ಥಿತಿ ಇಲ್ಲ” ಎಂದು ಸಚಿವರು ತಿಳಿಸಿದರು.

ಕೋವಿಡ್‌ನಿಂದ ಶಾಲಾ ಮಕ್ಕಳು ತುಂಬಾನೇ ತೊಂದರೆ ಅನುಭವಿಸಿದ್ದಾರೆ. ಇದು ಎಲ್ಲರಿಗೂ ಗೊತ್ತಿರುವ ಸಂಗತಿಯೇ. ಸದ್ಯಕ್ಕೆ ಪಠ್ಯ ಕಡಿತಗೊಳಿಸುವ ಪ್ರಸ್ತಾಪ ನಮ್ಮ ಮುಂದೆ ಇಲ್ಲ. ಪಠ್ಯ ಕಡಿಮೆಗೊಳಿಸಿದರೆ ಮುಂಬರುವ ದಿನಗಳಲ್ಲಿ ಮಕ್ಕಳಿಗೆ ಕಷ್ಟವಾಗಲಿದೆ. ಶನಿವಾರವೂ ಪೂರ್ತಿ ಪ್ರಮಾಣದಲ್ಲಿ ಶಾಲೆ ನಡೆಸಬೇಕೋ, ಭಾನುವಾರವೂ ತೆರೆಯಬೇಕೆಂಬ ಬಗ್ಗೆ ಸಮಾಲೋಚನೆ ನಡೆಸಿ ನಿರ್ಧಾರಕ್ಕೆ ಬರಲಾಗುವುದು” ಎಂದರು.

“ಈಗ ಹೆಚ್ಚೇನೂ ದಿನಗಳು ಶಾಲೆಗಳು ಬಂದ್ ಆಗಿಲ್ಲ. ಕೇವಲ 35 ದಿನ ತಡವಾಗಿರಬಹುದು. ದಸರಾ ಬಂದ ಕಾರಣ ರಜೆ ಘೋಷಿಸಲಾಗಿತ್ತು. ಈಗ ಪೂರ್ಣಪ್ರಮಾಣದಲ್ಲಿಯೇ ಪಠ್ಯಕ್ರಮ ಭೋದಿಸಲಾಗುತ್ತದೆ. ಇದಕ್ಕೆ ಶಿಕ್ಷಕರು ಸಜ್ಜಾಗಿದ್ದಾರೆ. ಅವರೂ ಸಹ ಮಕ್ಕಳಿಗೆ ಪಾಠ ಮಾಡಲು ಉತ್ಸುಹಕರಾಗಿದ್ದಾರೆ” ಎಂದು ಶಿಕ್ಷಣ ಸಚಿವರು ತಿಳಿಸಿದರು.

“ಮುಂದಿನ ಶೈಕ್ಷಣಿಕ ವರ್ಷದಿಂದ ನೂತನ ಶಿಕ್ಷಣ ನೀತಿ ಜಾರಿ ಮಾಡಲಾಗುವುದು. ಇದಕ್ಕೆ ಬೇಕಾದ ತಯಾರಿ ಈಗಾಗಲೇ ಶುರುವಾಗಿದೆ. ಈ ಸಂಬಂಧ ಮದನ್ ಗೋಪಾಲ್ ನೇತೃತ್ವದಲ್ಲಿ ಟಾಸ್ಕ್ ಪೋರ್ಸ್ ರಚನೆಯಾಗಿದೆ. 0-1, 3, 9 ತರಗತಿಗಳನ್ನು ಪ್ರಾರಂಭಿಸಲು ಸಿದ್ಧತೆ ನಡೆದಿದೆ” ಎಂದರು.

“ಶಿಕ್ಷಕರ ತರಬೇತಿ ಎಲ್ಲ ಮುಗಿದರೆ ನೂತನ ಪಠ್ಯಕ್ರಮ ಪ್ರಾರಂಭ ಮಾಡಲಾಗುತ್ತದೆ. ಅವರು ಪರೀಕ್ಷೆಗಳನ್ನು ನಡೆಸುವ ಕುರಿತಂತೆ ಈಗಲೇ ಏನನ್ನೂ ಹೇಳಲಾಗದು. ಡಿಸೆಂಬರ್ ಬಳಿಕ ಈ ಬಗ್ಗೆ ಆಗಿನ ಪರಿಸ್ಥಿತಿ ನೋಡಿಕೊಂಡು ನಿರ್ಧಾರ ತೆಗೆದುಕೊಳ್ಳಲಾಗುವುದು. ಖಾಸಗಿ ಶಾಲೆಗಳಲ್ಲಿ ಹೆಚ್ಚಿನ ಶುಲ್ಕ ಪಡೆಯುವ ಬಗ್ಗೆ ದೂರುಗಳು ಬಂದಿವೆ. ಈ ಬಗ್ಗೆ ವಿಚಾರ ಮಾಡುತ್ತೇವೆ” ಎಂದು ಮಾಹಿತಿ ನೀಡಿದರು.

“ಬಿ. ಎಸ್. ಯಡಿಯೂರಪ್ಪ ಕೊರೊನಾದಂಥ ಸಂಕಷ್ಟದ ಪರಿಸ್ಥಿತಿಯಲ್ಲಿಯೂ ಸಿಎಂ ಆಗಿ ಉತ್ತಮ ಕೆಲಸ ಮಾಡಿದ್ದಾರೆ. ಅದೇ ರೀತಿಯಲ್ಲಿ ಈಗ ಬಸವರಾಜ ಬೊಮ್ಮಾಯಿ ಉತ್ತಮ ಕಾರ್ಯ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಂಧಗಿ ಹಾಗೂ ಹಾನಗಲ್ ಉಪಚುನಾವಣೆಯಲ್ಲಿ ಗೆಲ್ಲುವ ಭರವಸೆ ಇದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಜಾಮನ ನ್ಯೂಸ್ ಡೆಸ್ಕ್.

prajamana.com 9448797745

You May Also Like

error: Content is protected !!