ತುಮಕೂರು ಹಾಲು ಒಕ್ಕೂಟದಿಂದ ಹೈದ್ರಬಾದ್, ಜಮ್ಮು ಕಾಶ್ಮಿರಕ್ಕೆ ಹಾಲು ಸರಬರಾಜು

ಶಿರಾ : ರಾಜ್ಯದಲ್ಲಿಯೇ ತುಮಕೂರು ಹಾಲು ಒಕ್ಕೂಟ ಉತ್ತಮವಾದ ಹೆಸರು ಗಳಿಸಿದ್ದು ನಮ್ಮ ಒಕ್ಕೂಟದ ಹಾಲನ್ನು ಹೈದರಾಬಾದ್, ಜಮ್ಮು ಕಾಶ್ಮೀರ ಸೇರಿದಂತೆ ಹಲವರು ರಾಜ್ಯಗಳಿಗೆ ಸರಬರಾಜು ಮಾಡಲಾಗುತ್ತಿದೆ. ಒಕ್ಕೂಟ ರೈತರ ಜೀವನಮಟ್ಟ ಸುಧಾರಿಸಲು ಹಲವಾರು ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ. ಜಿಲ್ಲೆಯ ಸುಮಾರು 1.50 ಲಕ್ಷ ರಾಸುಗಳಿಗೆ ಒಕ್ಕೂಟದ ವತಿಯಿಂದ ವಿಮೆ ಮಾಡಿಸುವ ಗುರಿ ಹೊಂದಲಾಗಿದೆ ಎಂದು ರಾಜ್ಯ ರೇಷ್ಮೆ ಉದ್ಯಮಗಳ ಅಭಿವೃದ್ದಿ ನಿಗಮದ ಅಧ್ಯಕ್ಷ ಹಾಗೂ ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಎಸ್.ಆರ್.ಗೌಡ ಹೇಳಿದರು.
ಅವರು ನಗರದ ಅಂಬೇಡ್ಕರ್ ಭವನದಲ್ಲಿ ಶನಿವಾರ ನಡೆದ ತುಮಕೂರು ಹಾಲು ಒಕ್ಕೂಟದ ಶಿರಾ ತಾಲ್ಲೂಕಿನ ಪ್ರಾದೇಶಿಕ ಸಭೆ ಹಾಗೂ ಹೈನುಗಾರರ ಮಕ್ಕಳಿಗೆ ಪ್ರೋತ್ಸಾಹಧನ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ತುಮಕೂರು ಹಾಲು ಒಕ್ಕೂಟ ಕೋವಿಡ್ ಸಂಕಷ್ಟದ ಸಮಯದಲ್ಲೂ ಹೈನುಗಾರರ ಸಂಕಷ್ಟಕ್ಕೆ ನೆರವಾಗಿದೆ. ಹೈನುಗಾರರು ಗುಣಮಟ್ಟದ ಹಾಲು ಸಂಘಕ್ಕೆ ನೀಡುವ ಮೂಲಕ ಅಭಿವೃದ್ಧಿಗೆ ಸಹಕರಿಸಿ. ಒಕ್ಕೂಟದ ವತಿಯಿಂದ ಶಿರಾ ತಾಲ್ಲೂಕಿನ ಹೈನುಗಾರರ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವ ದೃಷ್ಟಿಯಿಂದ ಸುಮಾರು 200 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. ಹಾಗೂ ಜಿಲ್ಲೆಯ ಸುಮಾರು 223 ವಿದ್ಯಾರ್ಥಿಗಳಿಗೆ ತುಮಕೂರಿನಲ್ಲಿ ವಿದ್ಯಾರ್ಥಿ ನಿಲಯ ಸೌಲಭ್ಯ ಒದಗಿಸಲಾಗಿದೆ. ಮುಂದಿನ ದಿನಗಳಲ್ಲಿ ಸುಮಾರು 500 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ನಿಲಯ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ತುಮಕೂರು ಹಾಲು ಒಕ್ಕೂಟದ ಅಧ್ಯಕ್ಷ ಸಿ.ವಿ.ಮಹಾಲಿಂಗಯ್ಯ ಮಾತನಾಡಿ ತುಮಕೂರು ಹಾಲು ಒಕ್ಕೂಟದಿಂದ ಶೀಘ್ರದಲ್ಲಿಯೇ ತುಮಕೂರಿನಲ್ಲಿ ಮೆಗಾ ಡೇರಿ ಪ್ರಾರಂಭಿಸಲಾಗುವುದು. ಸುಮಾರು 154 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಮೇಗಾ ಡೇರಿಯಲ್ಲಿ ಸುಮಾರು 10 ಲಕ್ಷ ದಿಂದ 15 ಲಕ್ಷ ಲೀ. ಹಾಲು ಶೇಖರಿಸಬಹುದು. ಅಲ್ಲದೇ ಹಲವಾರು ಆಧುನಿಕ ತಂತ್ರಜ್ಞಾನವುಳ್ಳ ಯಂತ್ರಗಳು ಬರಲಿವೆ. ಇದರಿಂದ ಪ್ಯಾಕಿಂಗ್, ಗುಣಮಟ್ಟ ಕಾಪಾಡುವುದು ಸೇರಿದಂತೆ ಹಲವು ವಿಶಿಷ್ಟತೆ ಮೆಗಾ ಡೇರಿಯಲ್ಲಿರುತ್ತದೆ. ಜಿಲ್ಲೆಯಲ್ಲಿ ಪ್ರತಿ ದಿನ 8 ಲಕ್ಷ ಲೀ. ಹಾಲು ಸಂಗ್ರಹವಾಗುತ್ತಿದೆ. ಇದರಲ್ಲಿ ಸುಮಾರು 6 ಲಕ್ಷ ಲೀ. ಹಾಲನ್ನು ಮಾರಾಟ ಮಾಡಲಾಗುತ್ತಿದ್ದು, ಉಳಿದ ಹಾಲನ್ನು ಪೌಡ ಮತ್ತು ಬೆಣ್ಣೆಗೆ ಬಳಸಲಾಗುತ್ತಿದೆ.  ಕೊವಿಡ್ ಸಂದರ್ಭದಲ್ಲಿ ರೈತರಿಂದ ಪಡೆದ ಹಾಲು ಮಾರಾಟವಾಗದಿದ್ದರೂ ಹಾಲನ್ನು ಪೌಡರ್ ಮಾಡಿ ದಾಸ್ತಾನು ಮಾಡಲಾಗಿತ್ತು. ಈಗ ಅವುಗಳನ್ನೆಲ್ಲ ಮಾರಾಟ ಮಾಡಿ ಸಾಲ ತೀರಿಸಲಾಗುತ್ತಿದೆ ಎಂದರು. 

ತುಮಕೂರು ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಾ.ನರಸಿಂಹನ್ ಮಾತನಾಡಿ ತುಮಕೂರು ಹಾಲು ಒಕ್ಕೂಟ ಈ ವರ್ಷ ದಾಖಲೆ ಮಟ್ಟದಲ್ಲಿ ಹಾಲು ಶೇಖರಣೆ ಮಾಡಲಾಗಿದೆ. ಸುಮಾರು 9 ಲಕ್ಷ ಲೀ. ಹಾಲು ಸಂಗ್ರಹಿಸಲಾಗಿದೆ.

ಇದು ಎಲ್ಲಾ ನಮ್ಮ 1771 ಸಂಘದ ಸುಮಾರು 70 ಸಾವಿರ ಹೈನುಗಾರರಿಗೆ ಈ ಯಶಸ್ಸು ಸಲ್ಲಬೇಕು.

ಎಲ್ಲಾ ಹೈನುಗಾರರು ಗುಣಮಟ್ಟದ ಹಾಲನ್ನೇ ನೀಡಿ ಎಂದರು.
ಕಾರ್ಯಕ್ರಮದಲ್ಲಿ ತುಮಕೂರು ಹಾಲು ಒಕ್ಕೂಟದ ಸುಬ್ಬರಾಯಭಟ್, ಶಿರಾ ಶಾಖೆಯ ಉಪ ವ್ಯವಸ್ಥಾಪಕ ಡಿ.ವೀರಣ್ಣ, ಸಹಾಯಕ ವ್ಯವಸ್ಥಾಪಕ ಮಧುಸೂಧನ್, ಶೀಥಲ ಕೇಂದ್ರದ ವ್ಯವಸ್ಥಾಪಕ ತಿಪ್ಪೇಸ್ವಾಮಿ, ಮಾಜಿ ತಾ.ಪಂ. ಉಪಾಧ್ಯಕ್ಷ ರಂಗನಾಥ್ ಗೌಡ, ಶಿರಾ ನಗರ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಈರಣ್ಣ, ವಿಸ್ತರಣಾಧಿಕಾರಿ ದಿವಾಕರ್.ಸಿ.ಆರ್, ಸಮಾಲೋಚಕ ಪ್ರವೀಣ್, ಪಶು ವೈದ್ಯರಾದ ಡಾ.ಶ್ರೀಕಾಂತ್, ಡಾ.ಆದರ್ಶ, ಮುಖಂಡರಾದ ವೀರೇಶ್, ನಿಡಗಟ್ಟೆ ಚಂದ್ರಶೇಖರ್, ಸೇರಿದಂತೆ ಹಲವರು ಹಾಜರಿದ್ದರು.

ಪ್ರಜಾಮನ ನ್ಯೂಸ್ ಡೆಸ್ಕ್.

prajamana.com 9448797745

You May Also Like

error: Content is protected !!