ಅನ್ಯ ಭಾಷೆ ವ್ಯಾಮೋಹ ಬಿಡಿ, ಕನ್ನಡ ಭಾಷೆ ಬಳಸಿ ಬೆಳೆಸಿ: ಸಚಿವ ಜೆ.ಸಿ. ಮಾಧುಸ್ವಾಮಿ

ತುಮಕೂರು: ಅನ್ಯ ಭಾಷೆ ವ್ಯಾಮೋಹ ಬಿಟ್ಟು ಕನ್ನಡ ಭಾಷೆಯನ್ನು ಬಳಸಿ ಬೆಳೆಸಬೇಕು ಎಂದು ಕಾನೂನು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಸಣ್ಣ ನೀರಾವರಿ ಸಚಿವ ಜೆ.ಸಿ. ಮಾಧುಸ್ವಾಮಿ ಕರೆ ನೀಡಿದರು.

ಜಿಲ್ಲಾಡಳಿತದ ವತಿಯಿಂದ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿಂದು ನಡೆದ ೬೬ನೇ ಕನ್ನಡ ರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ, ಗೌರವ ರಕ್ಷೆ ಸ್ವೀಕರಿಸಿ ಸಂದೇಶ ನೀಡಿದ ಅವರ, ಮಾತೃ ಭಾಷೆಯನ್ನು ಬೆಳೆಸುವುದರ ಜೊತೆ ಜೊತೆಗೇ ನಾಡಿನ ಸಂಸ್ಕೃತಿಯನ್ನು ಉಳಿಸಿ-ಬೆಳೆಸಿ ಉನ್ನತ ಶಿಖರಕ್ಕೆ ಕೊಂಡೊಯ್ಯಬೇಕು ಎಂದರು.

ಕನ್ನಡ ರಾಜ್ಯೋತ್ಸವದ ಆಚರಣೆ ಹೃದಯದ ಆರಾಧನೆಯಾಗಿದೆ. ಸಂಭ್ರಮದ ಸಂಕೇತವಾಗಿದೆ. ಸ್ಪುಟವಾಗಿ ಕನ್ನಡ ಭಾಷೆಯನ್ನು ಮಾತನಾಡುವ ಕೆಲವೇ ಕೆಲವು ಜಿಲ್ಲೆಗಳಲ್ಲಿ ತುಮಕೂರು ಜಿಲ್ಲೆಯೂ ಒಂದಾಗಿರುವುದು ಹೆಮ್ಮೆ ಎಂದರು.

ಕನ್ನಡ ಕಂಪಿನ ಈ ಕನ್ನಡ ರಾಜ್ಯೋತ್ಸವ ಆಚರಣೆ ಕನ್ನಡ ನೆಲದಲ್ಲಿ ಮಾತ್ರ ಸೀಮಿತವಾಗಿಲ್ಲ. ದೇಶ ವಿದೇಶದಲ್ಲಿ ನೆಲೆಸಿರುವ ಕನ್ನಡಿಗರು ಅತ್ಯಂತ ಪ್ರೀತಿ, ಹೆಮ್ಮೆಯಿಂದ ರಾಜ್ಯೋತ್ಸವ ಆಚರಣೆ ಮಾಡುತ್ತಾ, ಅಲ್ಲಿಯೂ ಕನ್ನಡದ ಕಂಪನ್ನು ಪಸರಿಸುತ್ತಿದ್ದಾರೆ ಎಂದು ನುಡಿದರು. ಪ್ರಧಾನ ಮಂತ್ರಿಯವರ ಮಹತ್ವಾಕಾಂಕ್ಷಿ ಜಲಜೀವನ್ ಮಿಷನ್ ಯೋಜನೆಯನ್ನು ಜಿಲ್ಲೆಯಲ್ಲಿ ಯಶಸ್ವಿಯಾಗಿ ಅನುಷ್ಟಾನಗೊಳಿಸಲಾಗುತ್ತಿದೆ. ಇದರಿಂದ ಜಿಲ್ಲೆಯ ಎಲ್ಲಾ ಮನೆ-ಮನೆಗಳಿಗೂ ಶುದ್ಧ ಕುಡಿಯುವ ನೀರನ್ನು ಒದಗಿಸಲಾಗುವುದು. ಈಗಾಗಲೇ ಪ್ರಥಮ ಆದ್ಯತೆ ಮೇರೆಗೆ ನೀರಿನ ಮೂಲವಿರುವ ಹಾಗೂ ಓವರ್ ಹೆಡ್ ಟ್ಯಾಂಕ್ ಹೊಂದಿರುವ ಗ್ರಾಮಗಳ ಮನೆ ಮನೆಗೆ ನಳ ಅಳವಡಿಸುವ ಕಾರ್ಯ ನಡೆಯುತ್ತಿದೆ. ಉಳಿದ ಗ್ರಾಮಗಳಿಗೆ ಓವರ್‌ಹೆಡ್ ಟ್ಯಾಂಕ್ ನಿರ್ಮಿಸಿ ಜಲಜೀವನ್ ಮಿಷನ್ ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು ಎಂದು ಹೇಳಿದರು.

ಕಂದಾಯ ಇಲಾಖೆಯಲ್ಲಿಯೂ ಉತ್ತಮ ಕೆಲಸ ಮಾಡಲಾಗುತ್ತಿದೆ. ತಾಲೂಕುವಾರು ಅದಾಲತ್ ನಡೆಸಿ ರೈತರಿಗೆ ಸ್ಥಳದಲ್ಲಿ ಸಮಸ್ಯೆ ಬಗೆಹರಿಸಿ ವಿಲೇವಾರಿ ಮಾಡಲಾಗುತ್ತಿದೆ. ತಾಲೂಕೊಂದರಲ್ಲಿ ತಿಂಗಳಿಗೆ ಎರಡು ಮೂರು ಅದಾಲಾತ್‌ಗಳನ್ನು ನಡೆಸಲಾಗುತ್ತಿದೆ ಎಂದರು.

ಜಿಲ್ಲೆಯ ಕಲೆ-ರಂಗ ಕಲೆಯನ್ನು ಉಳಿಸಿ ಬೆಳೆಸುವ ಕೆಲಸ ಮಾಡುವ ನಿಟ್ಟಿನಲ್ಲಿ ರಂಗಭೂಮಿಯಲ್ಲಿ ಗುರುತಿಸಿಕೊಂಡ ಮಹಾನ್ ವ್ಯಕ್ತಿಗಳ ಹೆಸರಿನಲ್ಲಿ ಭವನಗಳನ್ನು ನಿರ್ಮಾಣ ಮಾಡಲಾಗಿದೆ. ಜಾನಪದ ಕಲೆಗಳನ್ನು ಜೀವಂತವಾಗಿರಿಸಲು ಪ್ರಯತ್ನ ಮಾಡಲಾಗುತ್ತಿದ್ದು, ಜನಪದ ಕ್ಷೇತ್ರದ ಉಳಿಸಿ-ಬೆಳೆಸಲು ಒತ್ತು ಕೊಡಲಾಗಿದೆ ಎಂದರು.

ಕೃಷಿಯಲ್ಲಿಯೂ ಜಿಲ್ಲೆ ಫಲವತ್ಭರಿತವಾಗುತ್ತಿದ್ದು, ಉತ್ತಮ ಮಳೆಯಾಗಿರುವುದರಿಂದ ಪ್ರಸಕ್ತ ವರ್ಷ ಜಿಲ್ಲೆಯಲ್ಲಿ ಶೇ.೯೪ರಷ್ಟು ಬಿತ್ತನೆಯಾಗಿದೆ. ಇದರಿಂದ ನೀರು, ಮೇವಿನ ಕೊರತೆ ಕಾಡುವ ಪ್ರಮೇಯ ಎದುರಾಗುವುದಿಲ್ಲ. ಜಿಲ್ಲೆಯಲ್ಲಿ ತೆಂಗು ಬೆಳೆಯಂತೆಯೇ ಅಡಿಕೆ ಬೆಳೆಯೂ ವ್ಯಾಪಕವಾಗಿ ಹೆಚ್ಚುತ್ತಿದ್ದು, ಅಡಿಕೆ ಬೆಳೆಗೂ ಉತ್ತೇಜನ ನೀಡಲಾಗುತ್ತಿದೆ. ತೋಟಗಾರಿಕೆ ಇಲಾಖೆಯಿಂದ ಶೀಥಲ ಘಟಕ ಮತ್ತು ಹಣ್ಣು ಮಾಗಿಸುವ ಘಟಕಗಳನ್ನು ಸ್ಥಾಪಿಸಲಾಗಿದೆ. ಹೂವಿನ ವ್ಯಾಪಾರವನ್ನು ಪಾರದರ್ಶಕವಾಗಿಸುವ ನಿಟ್ಟಿನಲ್ಲಿ ಶಿರಾದಲ್ಲಿ ಹೂವು ಮಾರುಕಟ್ಟೆ ಪ್ರಾರಂಭಿಸಲಾಗಿದೆ ಎಂದು ಹೇಳಿದರು. ಇದೇ ವೇಳೆ ನಗರದ ಅಹಮದಾಬಾದ್‌ನಲ್ಲಿ ನಡೆದ ಅಖಿಲ ಭಾರತ ೩೦ನೇ ರೈಫಲ್ ಶೂಟಿಂಗ್‌ನಲ್ಲಿ ವಿಜೇತರಾಗಿ ರಾಷ್ಟಮಟ್ಟಕ್ಕೆ ಆಯ್ಕೆಯಾಗಿರುವ ಕ್ರೀಡಾಪಟಗಳನ್ನು ಅಭಿನಂದಿಸಿದರು.

ಕಾರ್ಯಕ್ರಮದಲ್ಲಿ ಶಾಸಕ ಜಿ.ಬಿ. ಜ್ಯೋತಿಗಣೇಶ್, ಮೇಯರ್ ಬಿ.ಜಿ. ಕೃಷ್ಣಪ್ಪ, ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ. ವಿದ್ಯಾಕುಮಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಾಪುರವಾಡ್, ಅಪರ ಜಿಲ್ಲಾಧಿಕಾರಿ ಕೆ.ಚೆನ್ನಬಸಪ್ಪ, ಉಪವಿಭಾಧಿಕಾರಿ ಅಜಯ್, ತಹಸೀಲ್ದಾರ್ ಮೋಹನ್ ಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಶ್ರೀನಿವಾಸ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ. ನಂಜಯ್ಯ, ತೋಟಗಾರಿಕಾ ಉಪ ನಿರ್ದೇಶಕ ರಘು, ಕೃಷಿ ಜಂಟಿ ನಿರ್ದೇಶಕಿ ರಾಜಸುಲೋಚನಾ ಸೇರಿದಂತೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು, ಕನ್ನಡ ಪರ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.

You May Also Like

error: Content is protected !!