ಹೆಚ್ಚಿದ ನೇತ್ರದಾನ: ಅಪ್ಪು ಆದರ್ಶ ಜೀವಂತ!

ಪುನೀತ್ ಅಗಲಿದ ಒಂದು ವಾರದಲ್ಲಿ 6 ಮಂದಿಯಿಂದ 12 ಕಣ್ಣುಗಳ ದಾನ/ 45 ಮಂದಿಯಿಂದ ನೇತ್ರದಾನಕ್ಕೆ ವಾಗ್ದಾನ

ನಟ ಸಾರ್ವಭೌಮ ಪುನೀತ್ ರಾಜ್‌ಕುಮಾರ್ ಅವರ ಅಭಿಮಾನಿಗಳ ಅಭಿಮಾನಕ್ಕೆ ಸರಿಸಾಟಿಯೇ ಇಲ್ಲ! ಅಭಿಮಾನಿಗಳು ಕೇವಲ ಅಭಿಮಾನಕ್ಕೆ ಮಾತ್ರ ಸೀಮಿತವಾಗಿಲ್ಲ. ಅವರ ಜೀವನ ಶೈಲಿ, ಸರಳತೆಯನ್ನು ತಮ್ಮ ಜೀವನದಲ್ಲಿಯೂ ಅಳವಡಿಸಿಕೊಂಡು ನೇತ್ರದಾನದಂತಹ ಮಹತ್ವದ ನಿರ್ಧಾರ ಕೈಗೊಳ್ಳುವ ಮೂಲಕ ಪುನೀತ್ ಅವರ ಆದರ್ಶಗಳನ್ನು ಜೀವಂತಗೊಳಿಸುತ್ತಿದ್ದಾರೆ.

ಹೌದು, ಅಪ್ಪು’ ನಿಧನದ ನಂತರ ತುಮಕೂರು ಜಿಲ್ಲೆಯಲ್ಲಿ ನೇತ್ರ ದಾನ ಮಾಡುವವರ ಸಂಖ್ಯೆ ಹೆಚ್ಚುತ್ತಿದೆ. ಅಕ್ಟೋಬರ್ ೨೯ರಂದು ಪುನೀತ್ ರಾಜ್‌ಕುಮಾರ್ ನಮ್ಮನ್ನೆಲ್ಲ ಅಗಲಿದ್ದು, ಅವರ ಅಗಲಿಕೆ ಬಳಿಕ ಜಿಲ್ಲೆಯಲ್ಲಿ ಒಂದೇ ವಾರದಲ್ಲಿ 6 ಮಂದಿ 12 ನೇತ್ರಗಳನ್ನು ದಾನ ಮಾಡಿದ್ದಾರಲ್ಲದೆ 45 ಮಂದಿ ತಮ್ಮ ಮರಣಾ ನಂತರ ಕಣ್ಣುಗಳನ್ನು ದಾನ ಮಾಡಲು ನೋಂದಣಿ ಮಾಡಿಕೊಂಡಿದ್ದಾರೆ.

ನೇತ್ರಗಳನ್ನು ದಾನ ಮಾಡಿದ 6 ಮಂದಿಗಳ ಪೈಕಿ ಚಿಕ್ಕನಾಯಕನಹಳ್ಳಿ ತಾಲೂಕಿನ ಕುಗ್ರಾಮವಾದ ದಸೂಡಿಯ ವ್ಯಕ್ತಿಯೊಬ್ಬರು ನೇತ್ರ ದಾನ ಮಾಡಲು ನೋಂದಣಿ ಪ್ರಕ್ರಿಯೆ ಮಾಡಿಕೊಳ್ಳದಿದ್ದರೂ, ಅವರ ಕುಟುಂಬಸ್ಥರು ನೇತ್ರಗಳನ್ನು ದಾನ ಮಾಡಿರುವುದು ವಿಶೇಷವಾಗಿದೆ. ಇನ್ನು ತುಮಕೂರು ತಾಲೂಕಿನಲ್ಲಿ 4 ಮಂದಿ ತಮ್ಮ ನೇತ್ರಗಳನ್ನು ದಾನ ಮಾಡಿರುವುದು ಮತ್ತೊಂದು ವಿಶೇಷ.

ವಾಗ್ದಾನವಿಲ್ಲದಿದ್ದರೂ ನೇತ್ರದಾನ:-

ನೇತ್ರದಾನ ಮಾಡಲು ಇಚ್ಛೆ ಇಲ್ಲದವರು ಹಾಗೂ ನೇತ್ರದಾನಕ್ಕೆ ಆಸ್ಪತ್ರೆಯಲ್ಲಿ ವಾಗ್ದಾನ(ನೋಂದಣಿ) ಮಾಡಿಕೊಳ್ಳದಿರುವವರೂ ನೇತ್ರದಾನಕ್ಕೆ ಮುಂದಾಗುತ್ತಿದ್ದಾರೆ. ವ್ಯಕ್ತಿಯು ಮೃತಪಟ್ಟ ಬಳಿಕ ಆತನ ಕುಟುಂಬಸ್ಥರು ಕರೆ ಮಾಡಿ ನೇತ್ರದಾನ ಮಾಡಲು ಮುಂದೆ ಬರುತ್ತಿದ್ದಾರೆ.

ನೇತ್ರದಾನದ ನೋಂದಣಿ ಪ್ರಕ್ರಿಯೆ ಸುಲಭ:-

ಮರಣದ ನಂತರ ನೇತ್ರದಾನ ಮಾಡುವ ನೋಂದಣಿ ಪ್ರಕ್ರಿಯೆ ತುಂಬಾ ಸುಲಭ. ಜಿಲ್ಲಾಸ್ಪತ್ರೆ ಸೇರಿದಂತೆ ಪ್ರತಿ ತಾಲೂಕು ಆಸ್ಪತ್ರೆಗಳಲ್ಲಿಯೂ ನೇತ್ರ ವಿಭಾದಲ್ಲಿ ನೋಂದಣಿ ಮಾಡಿಕೊಳ್ಳಬಹುದಾಗಿದೆ. ನೋಂದಣಿಗೆ ಸಂಬಂಧಿಸಿದಂತೆ ನಮೂನೆಯಲ್ಲಿ ಹೆಸರು ಮತ್ತು ವಿಳಾಸವನ್ನು ನೋಂದಣಿ ಮಾಡಿಕೊಳ್ಳಬೇಕು. ನೋಂದಣಿ ಬಳಿಕ ಆಸ್ಪತ್ರೆಯಿಂದ ಕಾರ್ಡ್ ನೀಡಲಾಗುವುದು. ಕಾರ್ಡ್‌ನಲ್ಲಿ ಸಂಪರ್ಕದ ಮೊಬೈಲ್ ಸಂಖ್ಯೆ ವಿವರ ಇರಲಿದ್ದು, ಸಾವಿನ ಬಳಿಕ ಕುಟುಂಬಸ್ಥರು ಮಾಹಿತಿ ನೀಡಿದರೆ ಆಸ್ಪತ್ರೆಯಿಂದ ವೈದ್ಯರು ಸ್ಥಳಕ್ಕೆ ಬಂದು ನೇತ್ರಗಳನ್ನು ತೆಗೆದುಕೊಳ್ಳಲಿದ್ದಾರೆ.

ನೇತ್ರದಾನಕ್ಕೆ ವಯಸ್ಸಿನ ಹಂಗಿಲ್ಲ:-

ಆರೋಗ್ಯವಂತ ವ್ಯಕ್ತಿ ಸೇರಿದಂತೆ ದೃಷ್ಟಿದೋಷವುಳ್ಳವರು ಸಹ ನೇತ್ರವನ್ನು ದಾನ ಮಾಡಬಹುದಾಗಿದೆ. ವಿಷ ಸೇವಿಸಿ ಅಥವಾ ವಿಷಪೂರಿತ ಹಾವುಗಳು ಕಚ್ಚಿ ಸಾವನ್ನಪ್ಪಿದ್ದವರ ಕಣ್ಣುಗಳು ದಾನಕ್ಕೆ ಅರ್ಹವಲ್ಲ. ನೇತ್ರ ದಾನ ಮಾಡುವವರ ಮತ್ತು ದಾನ ಪಡೆದವರ ಮಾಹಿತಿಯನ್ನು ಗೌಪ್ಯವಾಗಿ ಇಡಲಾಗುವುದು.

ಪುನೀತ್ ಆದರ್ಶ ಪಾಲಿಸೋಣ:-

ನಟ ಪುನೀತ್ ರಾಜ್ ಕುಮಾರ್ ಅವರ ಆದರ್ಶಗಳಂತೆ ನೇತ್ರ ಹಾಗೂ ಅಂಗಾಂಗಳನ್ನು ದಾನ ಮಾಡುವುದರಿಂದ ಅಂಗಹೀನರಿಗೆ ನೆರವಾಗಲಿದೆ. ನೇತ್ರದಾನ ಸಂಬಂಧಿಸಿದಂತೆ ಜಿಲ್ಲಾಸ್ಪತ್ರೆಯಲ್ಲಿ ಡಾ. ದಿನೇಶ್ ಕುಮಾರ್ ಅವರನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಲಾಗಿದೆಯಲ್ಲದೆ ಪ್ರತಿ ತಾಲೂಕು ಆಸ್ಪತ್ರೆಯಲ್ಲಿಯೂ ನೇತ್ರ ತಜ್ಞರಿದ್ದಾರೆ. ಅವರನ್ನು ಸಂಪರ್ಕಿಸುವ ಮೂಲಕ ಕಣ್ಣುಗಳನ್ನು ದಾನ ಮಾಡಲು ವಾಗ್ದಾನ ಮಾಡಿಕೊಳ್ಳಬಹುದಾಗಿದೆ. ದಾನ ಮಾಡಿದ ನೇತ್ರಗಳನ್ನು ಬೆಂಗಳೂರಿನ ಲಯನ್ಸ್ ಐ ಬ್ಯಾಂಕ್ ಮೂಲಕ ಸೂಕ್ತವಾದ ವ್ಯಕ್ತಿಗೆ ಕಸಿ (ಟ್ರಾನ್ಸ್‌ಪ್ಲಾಂಟ್) ಮಾಡಲಾಗುವುದು. ಒಬ್ಬ ವ್ಯಕ್ತಿಯ ನೇತ್ರಗಳಿಂದ ನಾಲ್ಕು ಮಂದಿಗೆ ದೃಷ್ಠಿ ದಾನ ನೀಡಿದಂತಾಗುತ್ತದೆ. ಹಾಗಾಗಿ ಎಲ್ಲರೂ ಪುನೀತ್ ರಾಜ್‌ಕುಮಾರ್ ಆದರ್ಶಗಳನ್ನು ಪಾಲಿಸುವ ಮುಖೇನ ಹೆಚ್ಚು ಹೆಚ್ಚು ನೇತ್ರಗಳನ್ನು ದಾನ ಮಾಡಲು ಮುಂದಾಗಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗೇಂದ್ರಪ್ಪ ತಿಳಿಸಿದ್ದಾರೆ.

ಅಪ್ಪು ಅಗಲಿಕೆ ಬಳಿಕ ಅಭಿಮಾನಿಗಳು ಆತ್ಮಹತ್ಯೆಗೆ ಶರಣಾಗಿರುವುದು ಒಂದೆಡೆಯಾದರೆ, ಅವರ ಆದರ್ಶಗಳನ್ನೇ ಮೈಗೂಡಿಸಿಕೊಂಡ ಅದೆಷ್ಟೋ ಮಂದಿ ನೇತ್ರದಾನಕ್ಕೆ ಮುಂದಾಗುತ್ತಿದ್ದಾರೆ. ಯಾರೂ ಸಹ ಪುನೀತ್ ಅಗಲಿಕೆಯಿಂದಾಗಿ ಆತ್ಮಹತ್ಯೆ ದಾರಿ ತುಳಿಯದೆ, ಅವರ ಆದರ್ಶಗಳಂತೆ ನಡೆಯಬೇಕು ಎಂಬುದು ಎಲ್ಲರ ಆಶಯ.

You May Also Like

error: Content is protected !!