ಈ ಬಾರಿ ಮದಲೂರು ಕೆರೆ ತುಂಬುವ ಆಶಾಭಾವನೆ ಇದೆ: ಡಾ.ಸಿ.ಎಂ.ರಾಜೇಶ್ ಗೌಡ

ತಾಲ್ಲೂಕಿನ ಅಜ್ಜೇನಹಳ್ಳಿ, ಚಿಕ್ಕಗೂಳ, ನ್ಯಾಯಗೆರೆ, ಯಲಿಯೂರು ಕೆರೆಗಳಿಗೆ ಬಾಗಿನ ಅರ್ಪಣೆ

ಶಿರಾ: ಮದಲೂರು ಕೆರೆ ತುಂಬಿದರೆ. ಶಿರಾ ತಾಲ್ಲೂಕಿನ ಹುಲಿಕುಂಟೆ, ಗೌಡಗೆರೆ, ಕಸಬಾ ಹೋಬಳಿಗಳ ಅಂತರ್ಜಲ ಮಟ್ಟ ಹೆಚ್ಚಿ ರೈತರ ಕೊಳವೆಬಾವಿಗಳಲ್ಲಿ ನೀರು ಹೆಚ್ಚಲಿದೆ. ಈ ನಿಟ್ಟಿನಲ್ಲಿ ಹೇಮಾವತಿ ನೀರನ್ನು ಮದಲೂರು ಕೆರೆಗೆ ಹರಿಸಲಾಗುತ್ತಿದ್ದು, ಈ ಬಾರಿ ಕೆರೆ ತುಂಬುವ ಆಶಾಭಾವನೆ ಇದೆ ಎಂದು ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ಹೇಳಿದರು.

ಅವರು ಸೋಮವಾರ ತಾಲ್ಲೂಕಿನ ಮದಲೂರು ಕೆರೆಗೆ ನೀರು ಹರಿಯುವ ಕಾಲುವೆಯ ಮಾರ್ಗ ಮಧ್ಯೆ ಬರುವ ಅಜ್ಜೇನಹಳ್ಳಿ, ಚಿಕ್ಕಗೂಳ, ನ್ಯಾಯಗೆರೆ ಕೆರೆಗಳಿಗೆ ಹಾಗೂ ಬಹುಗ್ರಾಮ ಕುಡಿಯುವ ನೀರು ಯೋಜನೆಯ ಯಲಿಯೂರು ಕೆರೆಗಳಿಗೆ ಗಂಗಾಪೂಜೆ ನೆರವೇರಿಸಿ ಬಾಗಿನ ಅರ್ಪಿಸಿ ಮಾತನಾಡಿದರು. ಈ ಬಾರಿ ಜುಲೈ 29 ರಿಂದಲೇ ಹೇಮಾವತಿ ನೀರನ್ನು ಹರಿಸಿದ ಪರಿಣಾಮ ತಾಲ್ಲೂಕಿನ ಕಳ್ಳಂಬೆಳ್ಳ, ಶಿರಾ ದೊಡ್ಡ ಕೆರೆಗಳು ತುಂಬಿ ಕೋಡಿ ಹರಿದಿವೆ. ಜೊತೆಗೆ ಉತ್ತಮ ಮಳೆಯಾದ ಪರಿಣಾಮ ಮದಲೂರು ಕೆರೆ ಹಾಗೂ ಮಾರ್ಗಮಧ್ಯೆ ಬರುವ ಬಹುತೇಕ ಕೆರೆಗಳು ತುಂಬಿ ಉಳಿದ ಕೆರೆಗಳು ತುಂಬುವ ಹಂತದಲ್ಲಿವೆ. ಆದ್ದರಿಂದ ಮದಲೂರು ಕೆರೆಗೆ ಹೇಮಾವತಿ ನೀರು ಹರಿಯುವಾಗ ಯಾರು ಅಡೆತಡೆ ಮಾಡಬೇಡಿ ಎಂದರು.

ವಿಧಾನ ಪರಿಷತ್ ಸದಸ್ಯ ಚಿದಾನಂದ್ ಎಂ.ಗೌಡ ಅವರು ಮಾತನಾಡಿ ಹೇಮಾವತಿ ನೀರು ಹಾಗೂ ವರುಣನ ಆಶೀರ್ವಾದದಿಂದ ಇಂದು ಕೆರೆ ಕೋಡಿ ಬಿದ್ದಿದ್ದು, ಪ್ರತಿ ವರ್ಷವೂ ಸಹ ಇದೆ ರೀತಿ ಎಲ್ಲಾ ಕೆರೆಗಳು ಕೋಡಿ ಬೀಳಲಿ ಎಂದು ಆಶಿಸಿ, ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಶಿರಾ ತಾಲ್ಲೂಕಿನ ೬೫ ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿ ಈಗಾಗಲೇ ಪ್ರಾರಂಭವಾಗಿದೆ. ಮಾಧುಸ್ವಾಮಿಯವರು ಮಾತು ಕೊಟ್ಟಂತೆ ಎಲ್ಲಾ 65 ಕೆರೆಗಳಿಗೆ ಅರ್ಧದಷ್ಟು ಕೆರೆ ತುಂಬಿಸುವ ಕೆಲಸವನ್ನು ಅತಿಶೀಘ್ರದಲ್ಲಿ ಆಗುತ್ತದೆ ಎಂದರು.

ರಾಜ್ಯ ರೇಷ್ಮೆ ಉದ್ಯಮಗಳ ಅಭಿವೃದ್ದಿ ನಿಗಮದ ಅಧ್ಯಕ್ಷ ಎಸ್.ಆರ್.ಗೌಡ ಮಾತನಾಡಿ ಶಿರಾ ತಾಲ್ಲೂಕಿನ ಮದಲೂರು, ಕಳ್ಳಂಬೆಳ್ಳ, ಶಿರಾ ದೊಡ್ಡ ಕೆರೆ ಸೇರಿದಂತೆ ಮದಲೂರು ಕೆರೆಗೆ ನೀರು ಹರಿಯುವ ಮಾರ್ಗಮದ್ಯದ ಕೆರೆಗಳಿಗೆ ಶಿರಾ ತಾಲ್ಲೂಕಿನ ಎಲ್ಲಾ ಜನಪ್ರತಿನಿಧಿಗಳು ಸರಕಾರದ ಮೇಲೆ ಒತ್ತಡ ತಂದು ಹೇಮಾವತಿ ನೀರು ಹರಿಯಲು ಕಾರಣರಾಗಿದ್ದಾರೆ. ಹೀಗಿದ್ದಾಗ ಮಾಜಿ ಸಚಿವರು, ಹಿರಿಯ ರಾಜಕಾರಣಿಗಳು ಆಗಿರುವ ಟಿ.ಬಿ.ಜಯಚಂದ್ರ ಅವರು ಜನಪ್ರತಿನಿಧಿಗಳಿಗಿಂತ ಮುಂಚೆಯೇ ಹೋಗಿ ತುಂಬಿರುವ ಕೆರೆಗೆ ಬಾಗಿನ ಅರ್ಪಿಸಿರುವುದು ಅವರ ರಾಜಕೀಯ ಹತಾಶೆಯನ್ನು ತೋರ್ಪಡಿಸುತ್ತದೆ ಎಂದರು.

ಈ ಸಂದರ್ಭದಲ್ಲಿ ತೆಂಗು ಮತ್ತು ನಾರು ಅಭಿವೃದ್ದಿ ನಿಗಮದ ಅಧ್ಯಕ್ಷ ಬಿ.ಕೆ.ಮಂಜುನಾಥ್, ಮುದಿಮಡು ಮಂಜುನಾಥ್, ಮದ್ದೇವಳ್ಳಿ ರಾಮಕೃಷ್ಣ, ಯಲಿಯೂರು ಮಂಜುನಾಥ್, ಮಾಜಿ ತಾ.ಪಂ. ಉಪಾಧ್ಯಕ್ಷ ರಂಗನಾಥ್ ಗೌಡ, ಮಾಜಿ ತಾ.ಪಂ. ಸದಸ್ಯ ಹೊನ್ನಗೊಂಡನಹಳ್ಳಿ ಚಿಕ್ಕಣ್ಣ, ತಾಲ್ಲೂಕು ಮಾಜಿ ಬಿಜೆಪಿ ಅಧ್ಯಕ್ಷ ಮಾಲಿ ಮರಿಯಪ್ಪ, ತರೂರು ಬಸವರಾಜ್, ಹೊನ್ನಪ್ಪ, ಅಣ್ಣಪ್ಪ, ರಮೇಶ್, ಭೂಪಸಂದ್ರ ಗ್ರಾ.ಪಂ. ಮಾಜಿ ಅಧ್ಯಕ್ಷ ಕಳ್ಳಿಪಾಳ್ಯ ನಾಗರಾಜು, ಕಳ್ಳಂಬೆಳ್ಳ ಗ್ರಾಮ ಪಂಚಾಯಿತಿ ಸದಸ್ಯರಾದ ವೆಂಕಟೇಶ್ ಶೋಭಾ ನಟರಾಜು, ಹಾಲೇನಹಳ್ಳಿ ಚನ್ನವೀರಪ್ಪ, ಕಳ್ಳಂಬೆಳ್ಳ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮಂಜುಳಾ, ಉಪಾಧ್ಯಕ್ಷರಾದ ಹನುಮಂತರಾಪ್ಪ, ಹಾಲೇನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಪ್ರೇಮಕುಮಾರಿ, ಸದಸ್ಯರಾದ ಲೋಕೇಶ್, ಅಜ್ಜೇನಹಳ್ಳಿ ಕೆರೆ ನಿರ್ವಹಣಾ ಸಂಘದ ಅಧ್ಯಕ್ಷರಾದ ರಾಮಣ್ಣ ಶಿರಾ ಗ್ರಾಮಾಂತರ ಬಿಜೆಪಿ ಅಧ್ಯಕ್ಷರಾದ ರಂಗಸ್ವಾಮಿ, ಬಿಜೆಪಿ ಮುಖಂಡರಾದ ಮದಲೂರು ನರಸಿಂಹಮೂರ್ತಿ, ಲಕ್ಕಪ್ಪ, ಸೇರಿದಂತೆ ಹಲವರು ಹಾಜರಿದ್ದರು.

You May Also Like

error: Content is protected !!