ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆಯಲು ಎಲ್ಲರು ಕೈಜೋಡಿಸಿ : ರಾಘವೇಂದ್ರ ಶೆಟ್ಟಿಗಾರ್

ತುಮಕೂರು : ಮಹಿಳೆಯರು ಮತ್ತು ಮಕ್ಕಳಿಗೆ ಕಾನೂನು ಅರಿವು ಮೂಡಿಸುವ ಮೂಲಕ ದೌರ್ಜನ್ಯಗಳಿಗೆ ಒಳಗಾಗದಂತೆ ತಡೆಯಲು ಎಲ್ಲರೂ ಕೈಜೋಡಿಸಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿಗಳಾದ ರಾಘವೇಂದ್ರ ಶೆಟ್ಟಿಗಾರ್ ತಿಳಿಸಿದರು.

ರಾಷ್ಟ್ರೀಯ ಮಹಿಳಾ ಆಯೋಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಹಯೋಗದೊಂದಿಗೆ ನಗರದ ಕನ್ನಡ ಭವನದಲ್ಲಿಂದು ಕಾನೂನು ಅರಿವಿನ ಮುಖಾಂತರ ಮಹಿಳಾ ಸಬಲೀಕರಣ ಕುರಿತು ಆಯೋಜಿಸಲಾಗಿದ್ದ ಕಾನೂನು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಮಹಿಳೆಯರ ಹಕ್ಕುಗಳನ್ನು ರಕ್ಷಿಸುವುದು ಹಾಗೂ ಗೌರವಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು.

ತೊಟ್ಟಿಲನ್ನು ತೂಗುವ ಕೈ ದೇಶವನ್ನೂ ಆಳಬಲ್ಲದು ಎಂಬ ಮಾತಿನಂತೆ ಇಂದಿನ ದಿನಗಳಲ್ಲಿ ಮಹಿಳೆಯು ಎಲ್ಲಾ ಕ್ಷೇತ್ರಗಳಲ್ಲಿ ತನ್ನ ಛಾಪನ್ನು ಮೂಡಿಸಿದ್ದಾಳೆ. ಆದರೂ ಸಹ ಮಹಿಳಾ ಸಬಲೀಕರಣ ಸಾಧ್ಯವಾಗಿಲ್ಲ. ಸಂವಿಧಾನದಲ್ಲಿ ಎಲ್ಲರಿಗೂ ಸಮಾನ ಅವಕಾಶ ನೀಡಿ, ಪ್ರತ್ಯೇಕ ಸ್ಥಾನಮಾನಗಳನ್ನು ನೀಡಿದ್ದರೂ ಸಹ ದೌರ್ಜನ್ಯ ಪ್ರಕರಣಗಳ ಸಂಖ್ಯೆ ಏರುತ್ತಲೇ ಇವೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು ಮಹಿಳಾ ದೌರ್ಜನ್ಯಗಳಾಗದಂತೆ ತಡೆದಾಗ ಮಾತ್ರ ಸಾಮಾಜಿಕ ಸಮಾನತೆ ಸಾಧ್ಯವೆಂದು ತಿಳಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಕಾರಾಗೃಹದ ಅಧೀಕ್ಷಕಿ ಶಾಂತಮ್ಮ ಇತ್ತೀಚಿನ ದಿನಗಳಲ್ಲಿ ಶೇ.೩೫ರಷ್ಟು ಪೋಕ್ಸೋ ಪ್ರಕರಣಗಳು ದಾಖಲಾಗುತ್ತಿದ್ದು, ಮಕ್ಕಳಲ್ಲಿ ಕಾನೂನಿನ ಬಗ್ಗೆ ಅರಿವು ಮೂಡಿಸುವುದು ಅತ್ಯವಶ್ಯವಾಗಿದೆ. ಮಕ್ಕಳಿಗೆ ಯಶಸ್ವಿ ಮಹಿಳೆಯರ ಹಾಗೂ ಯಶಸ್ಸನ್ನು ಪಡೆಯುವಲ್ಲಿ ವಿಫಲರಾದ ಮಹಿಳೆಯರ ತಪ್ಪುಗಳ ಬಗ್ಗೆ ಅರಿವು ಮೂಡಿಸಬೇಕು ಎಂದರು.

ಇಂದಿನ ಮಕ್ಕಳು ಅತಿಯಾದ ಮೊಬೈಲ್ ಬಳಕೆಯಿಂದಾಗಿ ತಪ್ಪುದಾರಿ ಹಿಡಿಯುತ್ತಿದ್ದು, ಪೋಷಕರು ಈ ಬಗ್ಗೆ ಎಚ್ಚರ ವಹಿಸಬೇಕು. ಅವಶ್ಯಕತೆಗಿಂತ ಹೆಚ್ಚಾಗಿ ಮೊಬೈಲ್ ಬಳಕೆ ಮಾಡುವುದನ್ನು ತಡೆಯುವುದು ಹಾಗೂ ಇನ್ನಿತರ ಅನುಮಾನಾಸ್ಪದ ನಡವಳಿಕೆಗಳ ಬಗ್ಗೆ ಗಮನಹರಿಸಬೇಕು ಎಂದು ಹೇಳಿದರು.

ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ವಾಸಂತಿ ಉಪ್ಪಾರ್ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡುತ್ತಾ ಜನರು ಕೇವಲ ಆಸ್ತಿ, ಹಣ ಇನ್ನಿತರ ಐಶಾರಾಮಿ ಜೀವನಕ್ಕೆ ಪ್ರಾಮುಖ್ಯತೆ ನೀಡದೆ ಪ್ರತಿಯೊಬ್ಬರು ಪ್ರೀತಿ, ವಿಶ್ವಾಸದಿಂದ ಬದುಕಿದಾಗಷ್ಟೆ ಸಾರ್ಥಕ ಜೀವನ ಸಾಧ್ಯವೆಂದು ತಿಳಿಸಿದರಲ್ಲದೆ ಪೋಷಕರು ತಮ್ಮ ಮಕ್ಕಳನ್ನು ಪ್ರೀತಿ, ಕಾಳಜಿಯಿಂದ ಬೆಳೆಸಬೇಕು. ಇದರಿಂದ ಮಕ್ಕಳು ಯಾವುದೇ ತಪ್ಪುಗಳು ಅಥವಾ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗದೆ ಉತ್ತಮ ಜೀವನವನ್ನು ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.

ವಿದ್ಯೋದಯ ಕಾನೂನು ಕಾಲೇಜಿನ ಸಹಾಯಕ ಪ್ರಾಚಾರ್ಯ ದ್ಯಾನ ಬಸವರಾಜು ಅವರು ಮಹಿಳೆಯರ ಆಸ್ತಿ ಹಕ್ಕುಗಳು ಮತ್ತು ವಕೀಲರಾದ ಬೇಬಿ ಕವಿತಾ ಅವರು ಕೌಟುಂಬಿಕ ದೌರ್ಜನ್ಯದಿಂದ ಮಹಿಳಾ ಸಂರಕ್ಷಣಾ ಕಾಯ್ದೆ, ಪೋಕ್ಸೋ ಕಾಯ್ದೆ, ಮಹಿಳೆ ಮತ್ತು ಮಕ್ಕಳ ಕಳ್ಳ ಸಾಗಾಣಿಕೆ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಶ್ರೀಧರ್, ವಿವಿಧ ತಾಲ್ಲೂಕುಗಳ ಅಂಗನವಾಡಿ/ಆಶಾ ಕಾರ್ಯಕರ್ತೆಯರು, ಶಿಕ್ಷಕರು ಹಾಗೂ ಮತ್ತಿತರರು ಭಾಗವಹಿಸಿದ್ದರು.

You May Also Like

error: Content is protected !!