ವಿಧಾನಸೌಧ ಇನ್ನೊಂದು ತಿಂಗಳು ಆಡಳಿತ ಯಂತ್ರ ಸ್ತಬ್ಧ..!

ಬೆಂಗಳೂರು: ರಾಜ್ಯದಲ್ಲಿ ವಿಧಾನಪರಿಷತ್ 25 ಸ್ಥಾನಗಳ ಚುನಾವಣೆ ಘೋಷಣೆಯಾದ ಕಾರಣ ನೀತಿ ಸಂಹಿತೆ ಜಾರಿಯಲ್ಲಿದೆ.ಚುನಾವಣೆ ಹಿನ್ನೆಲೆಯಲ್ಲಿ ಆಡಳಿತದ ಶಕ್ತಿಕೇಂದ್ರ ವಿಧಾನಸೌಧ ಸೇರಿದಂತೆ ಇಡೀ ಆಡಳಿತಯಂತ್ರ ಇನ್ನು ಒಂದು ತಿಂಗಳವರೆಗೆ ಸ್ತಬ್ದಗೊಳ್ಳಲಿದೆ.

ನಿನ್ನೆಯಿಂದಲೇ ನೀತಿ ಸಂಹಿತೆ ಜಾರಿಯಲ್ಲಿದ್ದು ಡಿ.10ರವರೆಗೆ ಯಾವುದೇ ರೀತಿಯ ಯೋಜನೆಗಳು, ಆಶ್ವಾಸನೆ ಭರವಸೆಗಳನ್ನು ಮತದಾರರಿಗೆ ನೀಡುವಂತಿಲ್ಲ ಎಂದು ಚುನಾವಣಾ ಆಯೋಗ ಸೂಚನೆ ನೀಡುವುದರಿಂದ ಆಡಳಿತ ಯಂತ್ರ ಸ್ಥಗಿತಗೊಳ್ಳಲಿದೆ.ಇಂದು ನಡೆಯಬೇಕಾಗಿದ್ದ ಇಂಧನ ಸಚಿವ ಸುನೀಲ್ ಕುಮಾರ್ ಅವರ ಸುದ್ದಿಗೋಷ್ಠಿಯನ್ನು ಕೊನೆ ಕ್ಷಣದಲ್ಲಿ ರದ್ದುಪಡಿಸಲಾಯಿತು.

ನಾಳೆ ಕಲಬುರಗಿಯಲ್ಲಿ ಹಮ್ಮಿಕೊಂಡಿದ್ದ ಉದ್ಯಮಿಯಾಗು ಉದ್ಯೋಗ ನೀಡು ಹಾಗೂ ಕೈಗಾರಿಕಾ ಅದಾಲತ್ ಕಾರ್ಯಗಾರವನ್ನು ಮುಂದೂಡಲಾಗಿದೆ. ಮತದಾರರ ಮೇಲೆ ಪರಿಣಾಮ ಬೀರಲಾಗುವ ಯಾವುದೇ ಆಮೀಷ, ಆಶ್ವಾಸನೆ ಭರವಸೆಗಳನ್ನು ನೀಡದಂತೆ ಚುನಾವಣಾ ಆಯೋಗ ಕಟ್ಟುನಿಟ್ಟಿನ ನಿರ್ಬಂಧ ಹಾಕಿದೆ. ಹೀಗಾಗಿ ಒಂದು ತಿಂಗಳ ಕಾಲ ಆಡಳಿತಯಂತ್ರ ಸ್ಥಗಿತಗೊಳ್ಳಲಿದೆ.

ಇಂದು ಕೂಡ ವಿಧಾನಸೌಧಕ್ಕೆ ಬೆರಳೆಣೆಕೆಯಷ್ಟು ಶಾಸಕರು ಆಗಮಿಸಿದ್ದರೆ ಯಾವುದೆ ಸಚಿವರು ತಲೆ ಹಾಕಿರಲಿಲ್ಲ. ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ, ಪರಿಶೀಲನೆ ಬಳಿಕ ಕನಿಷ್ಠ ಪಕ್ಷ ಸಚಿವರು, ಶಾಸಕರು ಸೇರಿದಂತೆ ಎಲ್ಲಾ ಪಕ್ಷಗಳ ಮುಖಂಡರು ಚುನಾವಣಾ ಕಾರ್ಯದಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಒಟ್ಟು 25 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿರುವುದರಿಂದ ಎಲ್ಲಾ ರಾಜಕೀಯ ಪಕ್ಷಗಳು ಈ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿವೆ.

ಹೀಗಾಗಿ ಎಲ್ಲ ಪಕ್ಷದವರು ಪ್ರಚಾರ ತೊಡಗಿಸಿಕೊಳ್ಳುವುದರಿಂದ ಪತ್ರಿಕಾ ಗೋಷ್ಠಿ, ಸಭೆ-ಸಮಾರಂಭಗಳಿಗೆ ಆಯೋಗ ಕಡಿವಾಣ ಹಾಕಲಿದೆ.ಅದರಲ್ಲೂ ಆಡಳಿತರೂಢ ಬಿಜೆಪಿ 25 ಕ್ಷೇತ್ರಗಳಲ್ಲಿ ಕನಿಷ್ಠ 15 ಕ್ಷೇತ್ರಗಳನ್ನು ಗೆಲ್ಲಲೇಬೇಕೆಂದು ಪಣತೊಟ್ಟಿದೆ.

ಹೀಗಾಗಿ ಜಿಲ್ಲಾ ಉಸ್ತುವಾರಿ ಸಚಿವರುಗಳು, ಶಾಸಕರು ಸೇರಿದಂತೆ ಎಲ್ಲಾ ಪದಾಕಾರಿಗಳು ತಮ್ಮ ತಮ್ಮ ಕ್ಷೇತ್ರದಲ್ಲೇ ಬೀಡುಬಿಟ್ಟು ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಿದ್ದಾರೆ. ಇದೆಲ್ಲದರ ಪರಿಣಾಮ ಇನ್ನು ಒಂದು ತಿಂಗಳ ಕಾಲ ಆಡಳಿತಯಂತ್ರ ಸ್ತಬ್ದಗೊಳ್ಳಲಿದೆ.

ಪ್ರಜಾಮನ ನ್ಯೂಸ್ ಡೆಸ್ಕ್.

prajamana.com 9448797745

You May Also Like

error: Content is protected !!