ದೇವೇಗೌಡರ ಮೊಮ್ಮಗ ಪರಿಷತ್ ಚುನಾವಣಾ ಕಣಕ್ಕೆ?

ಹಾಸನ: ವಿಧಾನ ಪರಿಷತ್‌ನ 25 ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿದೆ. ಡಿಸೆಂಬರ್ 10ರಂದು ಚುನಾವಣೆ ನಡೆಯಲಿದ್ದು, ಡಿಸೆಂಬರ್ 14 ರಂದು ಫಲಿತಾಂಶ ಪ್ರಕಟವಾಗಲಿದೆ. ಯಾರಿಗೆ ಟಿಕೆಟ್ ನೀಡಬೇಕು ಎಂದು ಮೂರು ಪಕ್ಷಗಳಲ್ಲಿ ಚರ್ಚೆಗಳು ಆರಂಭವಾಗಿವೆ.

ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಸದಸ್ಯರನ್ನು ಆಯ್ಕೆ ಮಾಡಲು ಚುನಾವಣೆ ನಡೆಯುತ್ತಿದೆ.
25 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು, ಹೆಚ್ಚು ಸ್ಥಾನಗಳನ್ನು ಗೆಲ್ಲಲು ಮೂರು ಪಕ್ಷಗಳು ತಯಾರಿ ಆರಂಭಿಸಿವೆ.

ಹಾಸನ ಜಿಲ್ಲೆಯಲ್ಲಿ ಎಂ. ಎ. ಗೋಪಾಲಸ್ವಾಮಿ ಅವರ ಸದಸ್ಯತ್ವದ ಅವಧಿ ಪೂರ್ಣಗೊಳ್ಳಲಿದ್ದು, ಒಂದು ಸ್ಥಾನಕ್ಕೆ ಚುನಾವಣೆ ನಡೆಯುತ್ತಿದೆ. ಜೆಡಿಎಸ್‌ ಭದ್ರಕೋಟೆಯಾಗಿರುವ ಹಾಸನದಲ್ಲಿ ಒಂದು ಸ್ಥಾನಕ್ಕೆ ಯಾರಿಗೆ ಟಿಕೆಟ್ ಸಿಗಲಿದೆ? ಎಂಬುದು ಕುತೂಹಲದ ಪ್ರಶ್ನೆಯಾಗಿದೆ.

ಎಚ್. ಡಿ. ದೇವೇಗೌಡರ ಮೊಮ್ಮಗ ಮತ್ತು ಎಚ್. ಡಿ. ರೇವಣ್ಣ, ಭವಾನಿ ದಂಪತಿಗಳ ಪುತ್ರ ಸೂರಜ್ ರೇವಣ್ಣ ಹೆಸರು ಪ್ರಬಲವಾಗಿ ಕೇಳಿ ಬರುತ್ತಿದೆ. ಎಚ್. ಡಿ. ರೇವಣ್ಣ ಮತ್ತೊಬ್ಬ ಪುತ್ರ ಪ್ರಜ್ವಲ್ ರೇವಣ್ಣ ಈಗಾಗಲೇ ಹಾಸನ ಕ್ಷೇತ್ರದ ಸಂಸದರು.

ವಿಧಾನ ಪರಿಷತ್‌ಗೆ ಸ್ಪರ್ಧೆ?


ಸೂರಜ್ ರೇವಣ್ಣ ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧೆ ಮಾಡಲಿದ್ದಾರೆ ಎಂಬ ಸುದ್ದಿಗಳು ಹಬ್ಬಿವೆ. ಹಾಸನದಲ್ಲಿ ನಡೆಯುವ ಪಕ್ಷದ ಸಭೆಗಳು, ಸಾರ್ವಜನಿಕ ಕಾರ್ಯಕ್ರಮದಲ್ಲಿ ಆಗಾಗ ಸೂರಜ್ ಕಾಣಿಸಿಕೊಳ್ಳುತ್ತಿದ್ದಾರೆ. ಸ್ಥಳೀಯ ಸಂಸ್ಥೆಗಳಿಗೆ ಪರಿಷತ್ ಸದಸ್ಯರ ಆಯ್ಕೆಗೆ ನಡೆಯುವ ಚುನಾವಣೆಯಲ್ಲಿ ಸೂರಜ್‌ ರೇವಣ್ಣಗೆ ಟಿಕೆಟ್ ನೀಡಲಾಗುತ್ತದೆ ಎಂಬ ಸುದ್ದಿಗಳು ಹಬ್ಬಿವೆ. ಆದರೆ ಪಕ್ಷದ ಯಾವುದೇ ನಾಯಕರು ಈ ಕುರಿತು ಇದುವರೆಗೂ ಪ್ರತಿಕ್ರಿಯೆ ನೀಡಿಲ್ಲ.

ಇಬ್ಬರಲ್ಲಿ ಯಾರಿಗೆ ಟಿಕೆಟ್?

ವಿಧಾನ ಪರಿಷತ್ ಚುನಾವಣೆಗೆ ಭವಾನಿ ರೇವಣ್ಣ, ಸೂರಜ್ ರೇವಣ್ಣ ಹೆಸರು ಬಲವಾಗಿ ಕೇಳಿ ಬರುತ್ತಿದೆ. ಆದರೆ ಇಬ್ಬರಲ್ಲಿ ಯಾರಿಗೆ ಟಿಕೆಟ್ ಸಿಗಲಿದೆ? ಎಂಬುದು ಇನ್ನೂ ಖಚಿತವಾಗಿಲ್ಲ. ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರು ಇನ್ನೂ ಯಾರಿಗೆ ಟಿಕೆಟ್ ನೀಡಬೇಕು ಎಂದು ಅಂತಿಮ ತೀರ್ಮಾನ ಕೈಗೊಂಡಿಲ್ಲ. ರೇವಣ್ಣ ಕುಟುಂಬ ಸದಸ್ಯರಿಗೆ ಟಿಕೆಟ್ ನೀಡಿದರೆ ಪಕ್ಷದ ಕಾರ್ಯಕರ್ತರು ಅಸಮಾಧಾನಗೊಳ್ಳಬಹುದು ಎಂಬ ಲೆಕ್ಕಾಚಾರವೂ ನಡೆಯುತ್ತಿದೆ.

ಡಾ. ಸೂರಜ್ ರೇವಣ್ಣ ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧೆ ಮಾಡಿದರೆ ದೇವೇಗೌಡರ ಕುಟುಂಬದ ಮತ್ತೊಬ್ಬ ಸದಸ್ಯರು ರಾಜಕೀಯಕ್ಕೆ ಬಂದಂತೆ ಆಗುತ್ತದೆ. ಎಚ್. ಡಿ. ರೇವಣ್ಣ ಹೊಳೆನರಸೀಪುರದ ಶಾಸಕರು, ಪ್ರಜ್ವಲ್ ರೇವಣ್ಣ ಹಾಸನದ ಸಂಸದರು, ಭವಾನಿ ರೇವಣ್ಣ ಹಾಸನ ಜಿಲ್ಲಾ ಪಂಚಾಯಿತಿ ಸದಸ್ಯರು. ಎಚ್. ಡಿ. ಕುಮಾರಸ್ವಾಮಿ (ಚನ್ನಪಟ್ಟಣ), ಅನಿತಾ ಕುಮಾರಸ್ವಾಮಿ (ರಾಮನಗರ) ಶಾಸಕರು. ಎಚ್. ಡಿ. ದೇವೇಗೌಡರು ರಾಜ್ಯಸಭಾ ಸದಸ್ಯರು.

You May Also Like

error: Content is protected !!