ಎಸ್.ಪಿ ಮುದ್ದಹನುಮೇಗೌಡ ಕುಣಿಗಲ್ ನಿಂದ ಕಣಕ್ಕೆ! ಶಾಸಕ ರಂಗನಾಥ್​ ಏನು ಮಾಡುತ್ತಾರೆ?

ತುಮಕೂರು: ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್​- ಜೆಡಿಎಸ್​ ಮೈತ್ರಿ ಅಭ್ಯರ್ಥಿಯಾಗಿದ್ದ ಮಾಜಿ ಪ್ರಧಾನಿ ದೇವೇಗೌಡರಿಗಾಗಿ ನನ್ನ ಸ್ಥಾನ ತ್ಯಾಗ ಮಾಡಿದ್ದೆ. ಕುಣಿಗಲ್ ಶಾಸಕ ಡಾ.ರಂಗನಾಥ್ ಅವರು ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ನನಗಾಗಿ ಸ್ಥಾನ ತ್ಯಾಗ ಮಾಡಲಿ ಎಂದು ಮಾಜಿ ಸಂಸದ ಮುದ್ದಹನುಮೇಗೌಡ ಸವಾಲು ಹಾಕಿದ್ದಾರೆ.

ಕುಣಿಗಲ್​ನಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ನಾನು ಕುಣಿಗಲ್ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ಇಚ್ಚಿಸಿದ್ದೇನೆ. 2019ರ ಚುನಾವಣೆ ವೇಳೆ ವರಿಷ್ಠರು ಆಶ್ವಾಸನೆ ಕೊಟ್ಟಿದ್ದರು. ಆದರೆ, ದುರಾದೃಷ್ಟವಶಾತ್ ಈಡೇರಿಸಿಲ್ಲ ಎಂದರು.

ಕಾಂಗ್ರೆಸ್​ ನಾಯಕರಾದ ರಾಹುಲ್ ಗಾಂಧಿ, ಕೆ.ಸಿ.ವೇಣುಗೋಪಾಲ್ ನನ್ನನ್ನು ರಾಜ್ಯಸಭಾ ಸದಸ್ಯರನ್ನಾಗಿ ಮಾಡುವುದಾಗಿ ಭರವಸೆ ನೀಡಿದ್ದರು. ಕೊಟ್ಟ ಮಾತನ್ನು ಉಳಿಸಿಕೊಂಡಿಲ್ಲ. ಆದರೂ ನಾನೂ ಅಸಮಾಧಾನ ವ್ಯಕ್ತಪಡಿಸಿಲ್ಲ. ನಾನು ರಾಜಕೀಯ ಸನ್ಯಾಸಿಯಾಗಿಲ್ಲ. ಸಮಯಕ್ಕಾಗಿ ಕಾಯುತ್ತಿದ್ದೇನೆ ಎಂದರು.

ಕುಣಿಗಲ್ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ. ಇಲ್ಲಿಂದ ಸ್ಪರ್ಧೆ ಮಾಡಬೇಕೆಂದು ಗಂಭೀರವಾಗಿ ಪರಿಗಣಿಸಿದ್ದೇನೆ. ರಾಜ್ಯ ಉಸ್ತುವಾರಿ ಸುರ್ಜೆವಾಲಾರಿಗೂ ಈ ಬಗ್ಗೆ ತಿಳಿಸಿದ್ದೇನೆ. ರಾಜ್ಯದ ಮುಖಂಡರ ಮುಂದೆಯೂ ಬೇಡಿಕೆ ಇಟ್ಟಿದ್ದೇನೆ. ಹಾಲಿ ಶಾಸಕರಿರುವುದರಿಂದ ಟಿಕೆಟ್ ಕೊಡಲು ಸಾಧ್ಯವಿಲ್ಲ ಎಂದು ಮುಖಂಡರು ಹೇಳುತ್ತಿದ್ದಾರೆ. ಈ ಹಿಂದೆ ನಾನು ಕುಣಿಗಲ್ ಕ್ಷೇತ್ರದಿಂದ 2 ಬಾರಿ ಆಯ್ಕೆಯಾಗಿದ್ದೆ. ಹೀಗಾಗಿ ಟಿಕೆಟ್​ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಹಾಲಿ ಸಂಸದನಾಗಿದ್ದರೂ ನನಗೆ ಟಿಕೆಟ್ ತಪ್ಪಿಸಿ ದೇವೇಗೌಡರನ್ನು ಕಣಕ್ಕೆ ಇಳಿಸಿದ್ದರು. ನಾನು ಅಂದು ತ್ಯಾಗ ಮಾಡಿದ್ದಕ್ಕೆ ಇಂದು ಕುಣಿಗಲ್ ಶಾಸಕರು ತ್ಯಾಗ ಮಾಡಲಿ ಎಂದಿದ್ದಾರೆ.

ಪ್ರಜಾಮನ ನ್ಯೂಸ್ ಡೆಸ್ಕ್.

prajamana.com 9448797745

You May Also Like

error: Content is protected !!