ಬಿಟ್‍ಕಾಯಿನ್ ಬಿರುಗಾಳಿಯಲ್ಲಿ ಬೊಮ್ಮಾಯಿ, ಹೊಸ ವರ್ಷಕ್ಕೆ ಯಾರು ಸಿಎಂ..?

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ವಿವಾದದ ಬಿರುಗಾಳಿಯನ್ನೇ ಸೃಷ್ಟಿಸಿರುವ ಬಿಟ್ ಕಾಯಿನ್ ಪ್ರಕರಣದಲ್ಲಿ ಪಕ್ಷಕ್ಕೆ ಹಾನಿ ಉಂಟು ಮಾಡುವ ಸಾಧ್ಯತೆ ಕಂಡುಬಂದರೆ ಮುಜುಗರವನ್ನು ತಪ್ಪಿಸಲು ಈಗಾಗಲೇ ಹೊಸ ನಾಯಕನ ಶೋಧಕ್ಕೆ ದೆಹಲಿ ಬಿಜೆಪಿ ವರಿಷ್ಠರು ಸದ್ದಿಲ್ಲದೆ ಮುಂದಾಗಿರುವುದು ಬೆಳಕಿಗೆ ಬಂದಿದೆ. ಒಂದು ವೇಳೆ ಬಿಟ್ ಕಾಯಿನ್ ಪ್ರಕರಣದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಅವರ ತಲೆದಂಡವಾದರೆ ಪಕ್ಷ, ಸರ್ಕಾರ ಮತ್ತು ಸಂಘ ಪರಿವಾರದ ಜೊತೆ ಸಮನ್ವಯ ಸಾಸುವ ಹಾಗೂ ಯಾವುದೇ ಕಳಂಕವಿಲ್ಲದ ವ್ಯಕ್ತಿಯನ್ನು ಸಿಎಂ ಸ್ಥಾನದಲ್ಲಿ ಕೂರಿಸಲು ಪಕ್ಷದ ವಲಯದಲ್ಲಿ ಚಿಂತನ-ಮಂಥನ ಆರಂಭವಾಗಿದೆ. ಗುಜರಾತ್ ಮಾದರಿ ಅನುಸರಿಸಿ ಎಂದು ಸಂಘಪರಿವಾರದ ನಾಯಕರು ಸಲಹೆ ಮಾಡಿದ್ದಾರೆ. ಒಂದು ವೇಳೆ ಸಿಎಂ ಬದಲಾದರೆ ಇಡೀ ಸಂಪುಟವನ್ನೇ ಬದಲಾಯಿಸಿ ಯುವ ಮತ್ತು ಕ್ಷೇತ್ರದಲ್ಲಿ ಮತದಾರರ ಜೊತೆ ಉತ್ತಮವಾದ ಒಡನಾಟವನ್ನು ಇಟ್ಟುಕೊಂಡಿರುವ ಶಾಸಕರನ್ನು ಸಂಪುಟಕ್ಕೆ ತೆಗೆದುಕೊಳ್ಳಬೇಕೆಂಬ ಅಭಿಪ್ರಾಯ ವ್ಯಕ್ತವಾಗಿದೆ.

ಯಾರಿಗೆ ಒಲಿಯಲಿದೆ ಅದೃಷ್ಟ ?:

                  

ಒಂದು ವೇಳೆ ಬಿಟ್ ಕಾಯಿನ್ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಂಡು ಬೊಮ್ಮಯಿ ಅವರ ತಲೆದಂಡ ಪಡೆದರೆ, ತೆರವಾಗಲಿರುವ ಸ್ಥಾನಕ್ಕೆ ಹಲವರ ಹೆಸರುಗಳು ಪಕ್ಷದ ವಲಯದಲ್ಲಿ ಕೇಳಿ ಬಂದಿವೆ. ಈ ಬಾರಿ ಪ್ರಮುಖವಾಗಿ ಮಾಜಿ ಸಿ.ಎಂ. ಜಗದೀಶ್ ಶೆಟ್ಟರ್, ಗಣಿ ಮತ್ತು ಭೂ ವಿಜ್ಞಾನ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಆಚಾರ್ ಹಾಲಪ್ಪ, ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್ ನಿರಾಣಿ, ಇಂಧನ ಸಚಿವ ವಿ.ಸುನಿಲ್ ಕುಮಾರ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ.ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೆಸರುಗಳು ಮುನ್ನಲೆಗೆ ಬಂದಿವೆ.

ಈಗಾಗಲೇ ಸಂಘಪರಿವಾರದ ಪ್ರಮುಖರು ಶೆಟ್ಟರ್ ಜೊತೆಗೆ ಮಾತುಕತೆಯನ್ನು ನಡೆಸಿದ್ದಾರೆ. ಈ ಹಿಂದೆ ಒಂದು ಬಾರಿ ಸಿ.ಎಂ ಆಗಿ ಸಚಿವರಾಗಿ ಆಡಳಿತದ ಅನುಭವ ಜೊತೆಗೆ ಪಕ್ಷ ಮತ್ತು ಅರ್ ಎಸ್ ಎಸ್ ನಾಯಕರ ಜೊತೆಗೆ ಉತ್ತಮ ಸಂಬಂಧವನ್ನು ಇಟ್ಡುಕೊಂಡಿದ್ದಾರೆ. ಇನ್ನು ಎದುರಿಸಿದ ಮೊದಲ ಚುನಾವಣೆಯಲ್ಲಿ ಗೆದ್ದು, ಸಚಿವರಾಗಿ ಸಜ್ಜನ ಎಂದು ಪಕ್ಷದ ವಲಯದಲ್ಲಿ ಕರೆಸಿಕೊಳ್ಳುತ್ತಿರುವ ಅಚಾರ್ ಹಾಲಪ್ಪ ಹೆಸರು ಕೂಡ ಸಿ.ಎಂ ಹೆಸರು ಚಾಲ್ತೀಯಲ್ಲಿದೆ.

ಕಳೆದ ಒಂದು ವಾರದಿಂದ ಜಗದೀಶ್ ಶೆಟ್ಟರ್ ಗೌಪ್ಯವಾಗಿ ಶಾಸಕರು ಮತ್ತು ಸಚಿವರನ್ನು ಭೇಟಿಯಾಗಿ ಮಾತುಕತೆ ನಡೆಸುತ್ತಿರುವುದು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಉಳಿದಂತೆ ಸಿ.ಟಿ.ರವಿ, ಸುನೀಲ್‍ಕುಮಾರ್, ಪ್ರಹ್ಲಾದ್ ಜೋಷಿ ಮತ್ತಿತರರ ಹೆಸರುಗಳು ಕೇಳಿಬಂದಿವೆಯಾದರೂ ಶಾಸಕರ ಬೆಂಬಲ ಸಿಗುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ. ಹೀಗಾಗಿ ಕೊನೆ ಕ್ಷಣದಲ್ಲಿ ಶೆಟ್ಟರ್ ಇಲ್ಲವೇ ಹಾಲಪ್ಪ ಆಚಾರ್ ಅವರಿಗೂ ಅದೃಷ್ಟ ಕುಲಾಯಿಸಿದರೂ ಅಚ್ಚರಿ ಇಲ್ಲ.

ಪ್ರಜಾಮನ ನ್ಯೂಸ್ ಡೆಸ್ಕ್.

prajamana.com 9448797745

You May Also Like

error: Content is protected !!