ಸಹಕಾರಿ ಬ್ಯಾಂಕ್‌ಗಳು ಕಡಿಮೆ ಬಡ್ಡಿ ದರದಲ್ಲಿ ಅರ್ಹರಿಗೆ ಸಾಲ ಕೊಡಲು ಮುಂದಾಗಿ: ಶ್ರೀ ಸಿದ್ದಲಿಂಗ ಸ್ವಾಮೀಜಿ

ತುಮಕೂರು- ನಗರದ ಬಾವಿಕಟ್ಟೆ ಆರ್ಕೆಡ್ ಹಿಂಭಾಗದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಸ್ನೇಹ ಸಂಗಮ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತದ ಆಡಳಿತ ಕಚೇರಿ ಕಟ್ಟಡವನ್ನು ಸಿದ್ದಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ಲೋಕಾರ್ಪಣೆಗೊಳಿಸಿದರು.

ಬ್ಯಾಂಕ್ ನೂತನ ಕಟ್ಟಡವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದ ಸಿದ್ದಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿ, ಸಹಕಾರಿ ಬ್ಯಾಂಕ್‌ಗಳು ಕಡಿಮೆ ಬಡ್ಡಿ ದರದಲ್ಲಿ ಅರ್ಹರಿಗೆ ಸಾಲ ಕೊಡಲು ಮುಂದಾಗಬೇಕು. ಹಾಗೆಯೇ ಸಹಕಾರಿ ಬ್ಯಾಂಕ್‌ಗಳಲ್ಲಿ ಸಾಲ ಪಡೆದವರು ತೀರಿಸುವ ಶಕ್ತಿಯನ್ನು ಹೊಂದಿರಬೇಕು. ಗ್ರಾಹಕರು ಮನೆ ಕಟ್ಟಲು, ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸಾಲ ಮಾಡುತ್ತಾರೆ. ಈ ಎಲ್ಲ ಸೌಲಭ್ಯಗಳನ್ನು ಸಹಕಾರಿ ಬ್ಯಾಂಕ್‌ಗಳು ಹೊಂದಿರಬೇಕು. ಈ ನಿಟ್ಟಿನಲ್ಲಿ ಸ್ನೇಹ ಸಂಗಮ ಸಹಕಾರಿ ಬ್ಯಾಂಕ್ ಕಾರ್ಯೋನ್ಮುಖವಾಗಿರುವುದು ಸಂತೋಷಕರ ಸಂಗತಿ ಎಂದರು.

ಸ್ನೇಹ ಸಂಗಮ ಸಹಕಾರಿ ಸಂಸ್ಥೆ ಇನ್ನು ಹೆಚ್ಚು ಹೆಚ್ಚು ಶಾಖೆಗಳನ್ನು ಹೊಂದಿ, ಇನ್ನು ಉತ್ತಮ ಮಟ್ಟಕ್ಕೆ ಬೆಳೆಯಲಿ ಎಂದು ಆಶಿಸಿದರು.

ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸದಾ ನಗುಮುಖ ಹೊಂದಿರಬೇಕು. ಬ್ಯಾಂಕ್‌ಗಳಿಗೆ ಬರುವ ಗ್ರಾಹಕರಿಗೆ ಸೇವಾ ಮನೋಭಾವದಿಂದ ಕೆಲಸ ಕಾರ್ಯ ಮಾಡಿಕೊಡಬೇಕು ಎಂದು ಅವರು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ಮಾತನಾಡಿ, ಸಂಸ್ಥೆ ಬಹಳ ಉತ್ತಮವಾಗಿ ಕೆಲಸ ಮಾಡುತ್ತಿದೆ. ದಿನಗಳಲ್ಲಿ ರಾಜ್ಯಮಟ್ಟದಲ್ಲಿ ಅತ್ಯಂತ ಉನ್ನತ ಮಟ್ಟಕ್ಕೆ ಈ ಸೌಹಾರ್ದ ಸಹಕಾರಿ ಸಂಸ್ಥೆ ಬೆಳೆದಿರುವುದು ಸಂತಸಕರ ಎಂದರು.

ಸಹಕಾರಿ ಬ್ಯಾಂಕ್‌ಗಳು ಉಳ್ಳವರಿಗೆ ಸಾಲ ಕೊಡುವ ಬದಲು ಆರ್ಥಿಕವಾಗಿ ದುರ್ಬಲ ಹೊಂದಿರುವವರಿಗೆ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಸಾಲ ಕೊಡುವ ಮುಖೇನ ಅವರ ಆರ್ಥಿಕ ಸಬಲತೆಗೆ ಮುಂದಾಗಬೇಕು ಎಂದು ಅವರು ಸಲಹೆ ನೀಡಿದರು.

ಸಹಕಾರಿಯ ನಗದು ಕೊಠಡಿ ಉದ್ಘಾಟಿಸಿದ ಹಿರೇಮಠಾಧ್ಯಕ್ಷರಾದ ಡಾ. ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಈ ಸಹಕಾರಿ ಸಂಸ್ಥೆ ೩ಜಿ ಕಲ್ಚರನ್ನು ಅಳವಡಿಸಿಕೊಂಡು ಬೆಳೆದಿದೆ. ನಿರೀಕ್ಷೆಗೂ ಮೀರಿ ಬ್ಯಾಂಕ್ ಆಡಳಿತ ಕಚೇರಿ ಸುಸಜ್ಜಿತವಾಗಿ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ನಿರ್ಮಿಸಲಾಗಿದೆ. ಬ್ಯಾಂಕ್ ಅಧ್ಯಕ್ಷರು, ನಿರ್ದೇಶಕರು ಹಾಗೂ ಸಿಬ್ಬಂದಿ ತಪಸ್ಸಿನೋಪಾದಿಯಲ್ಲಿ ಕೆಲಸ ಮಾಡಿದ್ದರ ಫಲ ಇಂದು ಸುಸಜ್ಜಿತ ಬ್ಯಾಂಕ್ ಆಡಳಿತ ಕಚೇರಿ ನಿರ್ಮಾಣವಾಗಿದೆ ಎಂದರು.

ಈ ಹಿಂದೆ ಸಾಹುಕಾರ ದೇವೋಭವ ಎಂಬ ಕಾಲವಿತ್ತು. ಆದರೆ ಈಗ ಕಾಲ ಬದಲಾಗಿದ್ದು, ಸಹಕಾರ ದೇವೋಭವ ಎಂಬಂತಾಗಿದೆ. ಬಡವರು, ಮಧ್ಯಮ ವರ್ಗದವರು ಸೇರಿದಂತೆ ಎಲ್ಲ ವರ್ಗದ ಜನರ ಆರ್ಥಿಕ ಏಳ್ಗೆಗೆ ಸಹಕಾರಿ ಸಂಸ್ಥೆಗಳು ಮಹತ್ವದ ಪಾತ್ರ ವಹಿಸುತ್ತಿವೆ ಎಂದರು.

ಸ್ನೇಹ ಸಂಗಮ ಸೌಹಾರ್ದ ಕ್ಷೇತ್ರಕ್ಕೆ ಹೊಸ ಹೆಸರು ತಂದು ಕೊಡಲಿ, ಉತ್ತಮ ಪ್ರಗತಿ ಸಾಧಿಸಲಿ ಎಂದು ಶ್ರೀಗಳು ಆಶಿಸಿದರು.

ಸ್ನೇಹ ಸಂಗಮ ಸಹಕಾರಿ ಸಂಸ್ಥೆ ನಿರ್ಮಿಸಿರುವ ನೂತನ ಆಡಳಿತ ಮಂಡಳಿ ಕಚೇರಿ ಸುಸಜ್ಜಿತ ಅತ್ಯಾಧುನಿಕ ಸೌಲಭ್ಯವುಳ್ಳ ಲಾಕರ್ ಸೌಲಭ್ಯವನ್ನು ಹೊಂದಿದೆ ಎಂದು ಅವರು ಹೇಳಿದರು.

ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿದ್ದ ನೊಣವಿನಕೆರೆಯ ಶ್ರೀ ಕರಿಬಸವ ದೇಶೀಕೇಂದ್ರ ಶಿವಯೋಗೀಶ್ವರ ಸ್ವಾಮೀಜಿ ಗಣಪತಿ ಪೂಜಾ ಕಾರ್ಯಕ್ರಮವನ್ನು ನೆರವೇರಿಸಿದರು. ನಿರ್ದೇಶಕರ ಕೊಠಡಿಯನ್ನು ಸಿದ್ದರಬೆಟ್ಟದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು.

ಸ್ನೇಹ ಸಂಗಮ ಸಹಕಾರಿ ಸಂಸ್ಥೆ ನಿರ್ಮಿಸಿರುವ ನೂತನ ಆಡಳಿತ ಮಂಡಳಿ ಕಚೇರಿ ಸುಸಜ್ಜಿತ ಅತ್ಯಾಧುನಿಕ ಸೌಲಭ್ಯವುಳ್ಳ ಲಾಕರ್ ಸೌಲಭ್ಯ, ಅತ್ಯುತ್ತಮವಾದ ಮೀಟಿಂಗ್ ಸಭಾಂಗಣ, ನಗದು ಕೊಠಡಿಯನ್ನು ಹೊಂದಿದೆ.

ಸಮಾರಂಭದ ಅಧ್ಯಕ್ಷತೆಯನ್ನು ಸ್ನೇಹ ಸಂಗಮ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತದ ಅಧ್ಯಕ್ಷ ಬಿ.ಎಸ್. ಮಂಜುನಾಥ್ ವಹಿಸಿದ್ದರು. ಸಂಸದ ಜಿ.ಎಸ್. ಬಸವರಾಜು, ಶಾಸಕ ಜಿ.ಬಿ. ಜ್ಯೋತಿಗಣೇಶ್, ಬ್ಯಾಂಕ್ ಉಪಾಧ್ಯಕ್ಷ ಹೆಚ್.ಆರ್. ನಾಗೇಶ್, ಟಿಎಂಸಿಸಿ ಅಧ್ಯಕ್ಷ ಎನ್.ಎಸ್. ಜಯಕುಮಾರ್, ಮೇಯರ ಬಿ.ಜಿ. ಕೃಷ್ಣಪ್ಪ, ಟೂಡಾ ಅಧ್ಯಕ್ಷ ಬಾವಿಕಟ್ಟೆ ನಾಗಣ್ಣ, ರವಿಶಂಕರ್ ಹೆಬ್ಬಾಕ, ಬ್ಯಾಂಕ್ ನಿರ್ದೇಶಕರುಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

ಪ್ರಜಾಮನ ನ್ಯೂಸ್ ಡೆಸ್ಕ್.

prajamana.com 9448797745

You May Also Like

error: Content is protected !!