ಬಿಟ್ ಕಾಯಿನ್ ಪ್ರಕರಣದಲ್ಲಿ ಭಾಗಿಯಾಗಿರುವವರ ಹೆಸರನ್ನು ಬಹಿರಂಗಪಡಿಸಿ: ಡಾ.ಜಿ.ಪರಮೇಶ್ವರ್

ತುಮಕೂರು: ಬಿಟ್ ಕಾಯಿನ್ ಪ್ರಕರಣದಲ್ಲಿ ಭಾಗಿಯಾಗಿರುವವರ ಹೆಸರನ್ನು ಬಹಿರಂಗಪಡಿಸಬೇಕು ಎಂದು ಮಾಜಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

ಈಗಾಗಲೇ ಸರ್ಕಾರ ಬಿಟ್ ಕಾಯಿನ್ ಪ್ರಕರಣದ ತನಿಖೆ ನಡೆಸುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಮಾಹಿತಿಗಳನ್ನು ಕಲೆ ಹಾಕಿದೆ. ಹಾಗಾಗಿ ಯಾವ ಪಕ್ಷದ ರಾಜಕಾರಣಿಗಳು ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂಬುದನ್ನು ಜನತೆಗೆ ತಿಳಿಸಬೇಕು ಎಂದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾವಿರಾರು ಕೋಟಿ ರೂ. ಹಗರಣ ಇದಾಗಿದೆ. ಈ ಹಗರಣದಲ್ಲಿ ಕಾಂಗ್ರೆಸ್‌ನವರು ಭಾಗಿಯಾಗಿದ್ದಾರೆಯೇ ಅಥವಾ ಭಾರತೀಯ ಜನತಾಪಾರ್ಟಿಯವರು ಭಾಗಿಯಾಗಿದ್ದಾರೆಯೇ ಎಂಬುದನ್ನು ಬಹಿರಂಗಪಡಿಸಿ. ಇಲ್ಲದಿದ್ದರೆ ವಿನಾ ಕಾರಣ ನಾವು ಮತ್ತು ನೀವು ಪರಸ್ಪರ ಕೆಸರೆರಚಾಡುವ ಕೆಲಸ ಮಾಡಬೇಕಾಗುತ್ತದೆ ಎಂದರು.

ಈಗಾಗಲೇ ಪ್ರಕರಣದ ಪ್ರಮುಖ ಆರೋಪಿ ಎಂದೇ ಹೇಳಲಾಗುತ್ತಿರುವ ಶ್ರೀಕಿಯನ್ನು ಬಂಧಿಸಿ ತನಿಖೆ ನಡೆಸಲಾಗುತ್ತಿದೆ. ಆತ ಹಲವರ ಹೆಸರುಗಳನ್ನು ಹೇಳುತ್ತಿದ್ದಾನೆ ಎಂಬ ಮಾಹಿತಿ ಇದೆ. ಆದ್ದರಿಂದ ಆ ಹೆಸರುಗಳನ್ನು ಬಹಿರಂಗಪಡಿಸಿ ಎಂದು ಅವರು ಆಗ್ರಹಿಸಿದರು.

ರಾಜ್ಯದ ಆಡಳಿತ ಚುಕ್ಕಾಣಿ ಹಿಡಿದಿರುವವರೆ ಇದಕ್ಕೆಲ್ಲ ಕಾರಣೀಭೂತರಾಗಬೇಕಾಗುತ್ತದೆ. ಹಾಗಾಗಿ ನಾವು ಒತ್ತಾಯ ಮಾಡುತ್ತಿದ್ದೇವೆ ಅಷ್ಟೆ. ಇದನ್ನು ರಾಜಕೀಯ ಉದ್ದೇಶ ಎಂದು ಸರ್ಕಾರ ಭಾವಿಸಬಾರದು. ಮುಖ್ಯಮಂತ್ರಿಗಳ ಬಳಿ ಏನು ಮಾಹಿತಿ ಇದೆಯೋ ಅದನ್ನು ಬಹಿರಂಗಪಡಿಸಬೇಕು ಎಂದರು.

ನಮ್ಮ ದೇಶದ ಕಾನೂನಿನಲ್ಲಿ ವರ್ಚ್ಯುಯಲ್ ಕರೆನ್ಸಿ ವರ್ಗಾವಣೆಗೆ ಅವಕಾಶ ಇಲ್ಲ. ಹಾಗಾಗಿ ಖಂಡಿತವಾಗಿಯೂ ಅವ್ಯವಹಾರ ನಡೆದಿದೆ. ಯಾರ ಹೆಸರಿಗೆ ಹಣ ವರ್ಗಾವಣೆ ಆಗಿದೆ, ಯಾರು ತೆಗೆದುಕೊಂಡಿದ್ದಾರೆ ಎಂಬುದು ರಾಜ್ಯದ ಜನತೆಗೆ ತಿಳಿಯಬೇಕಿದೆ ಎಂದರು.

ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಏನಿತ್ತು, ಯಾರು ಹಗರಣ ಮಾಡಿದ್ದಾರೆ ಎನ್ನುವುದನ್ನಾದರೂ ಹೇಳಿ. ಅದನ್ನು ಬಿಟ್ಟು ಸುಖಾ ಸುಮ್ಮನೆ ದೂಷಣೆ ಮಾಡುವ ಕೆಲಸ ಮಾಡಬಾರದು. ರಾಜ್ಯದ ಆಡಳಿತ ನಡೆಸುತ್ತಿರುವ ನಿಮ್ಮ ಮೇಲೆ ಜನತೆಗೆ ಸತ್ಯಾಂಶ ತಿಳಿಸುವ ಜವಾಬ್ದಾರಿ ಇದೆ ಎಂದರು.

ರಾಜ್ಯ ಪೊಲೀಸ್ ಇಲಾಖೆಯಲ್ಲಿ ತಂತ್ರಜ್ಞಾನದ ಬಗ್ಗೆ ಜ್ಞಾನ ಹೊಂದಿರುವ ಅಧಿಕಾರಿಗಳು ಇದ್ದಾರೆ. ಅವರನ್ನು ಬಳಸಿಕೊಂಡು ತಪ್ಪಿತಸ್ಥರನ್ನು ಪತ್ತೆಹಚ್ಚುವ ಕೆಲಸ ಮಾಡಬೇಕು ಎಂದು ಅವರು ಸಲಹೆ ಮಾಡಿದರು.

ಪ್ರಜಾಮನ ನ್ಯೂಸ್ ಡೆಸ್ಕ್.

prajamana.com 9448797745

You May Also Like

error: Content is protected !!