ತುಮಕೂರಿನಲ್ಲಿ ರಂಗಪ್ರಯೋಗಗಳು ಶ್ರೀಮಂತ

ತುಮಕೂರು: ತುಮಕೂರಿನಲ್ಲಿ ರಂಗಪ್ರಯೋಗಗಳು ಶ್ರೀಮಂತವಾಗುತ್ತಿದೆ ಎಂದು ಬೆಳ್ಳಿ ಬ್ಲೆಡ್ ಬ್ಯಾಂಕ್‌ನ ಬೆಳ್ಳಿ ಲೋಕೇಶ್ ಪ್ರಶಂಸಿಸಿದರು.

ಅವರು ತುಮಕೂರಿನ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಝೆನ್ ಟೀಮ್ ಆಯೋಜಿಸಿದ್ದ ಶಿವಮೊಗ್ಗ ರಂಗಾಯಣದ ಹಕ್ಕಿ ಕಥೆ ನಾಟಕಕ್ಕೆ ಚೆಂಡೆ ಬಾರಿಸುವುದರ ಮೂಲಕ ಚಾಲನೆ ನೀಡಿ ಮಾತನಾಡಿದರು.

ಪೌರಾಣಿಕ, ಸಾಮಾಜಿಕ, ಐತಿಹಾಸಿಕ ಹಾಗೂ ಪ್ರಯೋಗಾತ್ಮಕ ನಾಟಕಗಳು ಹೆಚ್ಚುತ್ತಿದ್ದು ರಂಗಭೂಮಿಗೆ ಹೊಸ ಭಾಷ್ಯ ಬರೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಗುಬ್ಬಿ ವೀರಣ್ಣ, ಮಾಸ್ಟರ್ ಹಿರಣ್ಣಯ್ಯ ಮುಂತಾದ ರಂಗ ದಿಗ್ಗಜರು ತುಮಕೂರಿನಲ್ಲಿ ರಂಗಭೂಮಿಗೆ ದೊಡ್ಡ ಕೊಡುಗೆಯನ್ನು ನೀಡಿದ್ದು ಅದರ ಮುಂದುವರಿಕೆಯಾಗಿ ಹಲವಾರು ತಂಡಗಳು ತುಮಕೂರಿನಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದರು.

ಇಂತಹ ಮಳೆಯಲ್ಲೂ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಪ್ರೇಕ್ಷಕರು ಆಗಮಿಸಿರುವುದು ಒಳ್ಳೆಯ ಬೆಳವಣಿಗೆ ಎಂದು ಶ್ಲಾಘಿಸಿದರು. ಮಕ್ಕಳ ನಾಟಕ ಸೇರಿದಂತೆ ಎಲ್ಲಾ ವರ್ಗದ ನಾಟಕಗಳಿಗೆ ಪ್ರೇಕ್ಷಕರು ಬರುತ್ತಿರುವುದು ಆಶಾದಾಯಕ ಬೆಳವಣಿಗೆ ಎಂದರು.

ತುಮಕೂರು ನಗರದಲ್ಲಿ ನಿರಂತರವಾಗಿ ರಂಗಚಟುವಟಿಕೆಗಳು ನಡೆಯುತ್ತಿವೆ. ಹಾಗೆಯೇ ಹೊಸ ಹೊಸ ಪ್ರಯೋಗಗಳು ನಡೆಯುತ್ತಿದೆ. ಇವತ್ತಿನ ಪಪ್ಪೆಟ್ ಮಕ್ಕಳನ್ನು ಹೊಸದೊಂದು ಲೋಕಕ್ಕೆ ಕೊಂಡೊಯ್ಯುತ್ತದೆ ಎಂದು ತಿಳಿಸಿದರು.

ರಂಗ ಚಟುವಟಿಕೆಯಲ್ಲಿ ತೊಡಗಿಕೊಂಡವರು ಪ್ರೇಕ್ಷಕರಿಗೆ eನಾರ್ಜನೆ, ಮನರಂಜನೆ ನೀಡುತ್ತಿದ್ದು ಹೊಸ ತಲೆಮಾರನ್ನು ಪ್ರಭಾವಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಇಂತಹ ಪ್ರಯೋಗಗಳನ್ನು ನಿರಂತರವಾಗಿ ನಡೆಯಲಿ ಎಂದು ಆಶಿಸಿದರು.

ಅಧ್ಯಕ್ಷತೆ ವಹಿಸಿದ್ದ ಮಹಾನಗರಪಾಲಿಕೆ ಸದಸ್ಯೆ ಗಿರಿಜಾ ಧನಿಯಾಕುಮಾರ್ ಮಾತನಾಡಿ ತುಮಕೂರು ರಂಗಭೂಮಿಯ ತವರೂರು. ತುಮಕೂರು ಜಿಲ್ಲೆಯ ಹಲವಾರು ನಟರು, ನಿರ್ದೇಶಕರು ರಾಜ್ಯ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ ಇದು ಖುಷಿಯ ಸಂಗತಿ ಎಂದರು.

ತುಮಕೂರಿನಲ್ಲಿ ನಾಟಕ ಪ್ರದರ್ಶನಗಳ ಜೊತೆಗೆ ಮಕ್ಕಳ ಬೇಸಿಗೆ ಶಿಬಿರಗಳು, ರಂಗ ಶಿಬಿರಗಳು ನಡೆಯುವಂತಾಗಲಿ. ಆ ಮೂಲಕ ಮಕ್ಕಳಲ್ಲಿ ರಂಗ ಪ್ರಜ್ಞೆ ಮೂಡಿಸುವ ಸಾರ್ಥಕ ಕೆಲಸವನ್ನು ರಂಗ ತಂಡಗಳು ಮಾಡಲಿ ಎಂದರು.

ರಾಜ್ಯದಲ್ಲೇ ಹೆಸರು ವಾಸಿಯಾಗಿರುವ ರಂಗಾಯಣ ಕಲಾವಿದರು ತುಮಕೂರಿಗೆ ಬಂದು ಫ್ಯಾಂಟಸಿ ರೀತಿಯ ನಾಟಕ ಪ್ರದರ್ಶಿಸಿರುವುದು ಅತ್ಯಂತ ಖುಷಿಯ ಸಂಗತಿ. ಇಂದಿನ ಮೊಬೈಲ್, ಯೂಟ್ಯೂಬ್ ಯುಗದಲ್ಲೂ ದೊಡ್ಡ ಸಂಖ್ಯೆಯಲ್ಲಿ ನಾಟಕ ಪ್ರದರ್ಶನಕ್ಕೆ ಬಂದಿರುವುದು ಅತ್ಯಂತ ಆಶಾದಾಯಕ ಬೆಳವಣಿಗೆ ಎಂದರು.

ಓದು, ನಾಟಕ ವೀಕ್ಷಣೆ, ಸಂಗೀತ ಆಲಿಸುವುದು ನಮ್ಮನ್ನು ಬೇರೊಂದು ಲೋಕಕ್ಕೆ ಕರೆದುಕೊಂಡು ಹೋಗುತ್ತದೆ. ಅಲ್ಲದೇ ಸಮಾಜಮುಖಿಯಾಗಿ ಕೆಲಸ ನಿರ್ವಹಿಸಲು ಪ್ರೇರಣೆ ನೀಡುತ್ತದೆ ಎಂದರು.

ಸರ್ಕಾರಗಳು ಕೂಡ ರಂಗ ಕಲೆಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ನೆರವನ್ನು ರಂಗಭೂಮಿಗೂ ಸರ್ಕಾರ ನೀಡಲಿದೆ ಎಂದು ತಿಳಿಸಿದರು.

ಝೆನ್ ಟೀಮ್‌ನ ಉಗಮ ಶ್ರೀನಿವಾಸ್ ಮಾತನಾಡಿ ತುಮಕೂರಿನಲ್ಲಿ ಬಯಲು ಸೀಮೆ ರಂಗಾಯಣ ಸ್ಥಾಪನೆ ಸಂಬಂಧ ನಗರ ಶಾಸಕ ಜ್ಯೋತಿ ಗಣೇಶ್ ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸುತ್ತಿದ್ದಾರೆ. ಆದಷ್ಟು ಬೇಗ ರಂಗಾಯಣ ಸ್ಥಾಪನೆಯಾದರೆ ಮತ್ತಷ್ಟು ರಂಗಪ್ರಯೋಗಗಳು ನಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಕಲಾವಿದ ಹಾಗೂ ಪತ್ರಿಕಾ ಛಾಯಾಗ್ರಾಹಕ ಟಿ.ಹೆಚ್. ಸುರೇಶ್ ಉಪಸ್ಥಿತರಿದ್ದರು. ತೇಜಸ್ವಿನಿ ನಿರೂಪಿಸಿದರು. ಬಳಿಕ ಗಣೇಶ್ ಮಂದಾರ್ತಿ ನಿರ್ದೇಶನದ ಹಕ್ಕಿಕಥೆ ಪಪ್ಪೆಟ್ ನಾಟಕ ನಡೆಯಿತು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!