ಬೆಂಗಳೂರು: ನಗರದಲ್ಲಿ ಮತ್ತೊಂದು ನಕಲಿ ಛಾಪಾ ಕಾಗದ ಹಗರಣ ಬೆಳಕಿಗೆ ಬಂದಿದೆ. ಪೂರ್ವ ವಿಭಾಗದ ಡಿಸಿಪಿ ಡಾ.ಶರಣಪ್ಪ ನೇತೃತ್ವದ ಪೊಲೀಸರ ತಂಡ ಎರಡು ಪೊಲೀಸ್ ಠಾಣೆಗಳ ವ್ಯಾಪ್ತಿಯ ನಾಲ್ಕು ಪ್ರದೇಶಗಳ ಮೇಲೆ ದಾಳಿ ನಡೆಸಿ ಐವರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೊಳಪಡಿಸಿದೆ.
ವಿವೇಕನಗರ ಹಾಗೂ ಬ್ಯಾಟರಾಯನಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಐವರ ಮನೆಗಳ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಸಾವಿರಾರು ರೂ. ಬೆಲೆಬಾಳುವ ನಕಲಿ ಛಾಪಾ ಕಾಗದಗಳು, ಪೆನ್ ಡ್ರೈವ್ ಮತ್ತು ಸೀಲ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ. ನಕಲಿ ಛಾಪಾ ಕಾಗದ ಹಗರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಐವರನ್ನು ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದು, ಮತ್ತಷ್ಟು ಮಾಹಿತಿ ಕಲೆ ಹಾಕುವತ್ತ ಗಮನ ಹರಿಸಿದ್ದಾರೆ.
ಅಬ್ದುಲ್ ಕರೀಂ ಲಾಲ್ ತೆಲಗಿ ನಡೆಸಿದ್ದ ಕೋಟ್ಯಂತರ ರೂ.ಮೌಲ್ಯದ ನಕಲಿ ಛಾಪಾ ಕಾಗದ ಹಗರಣ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಆತನ ಬಂಧನದ ನಂತರ ಛಾಪಾ ಕಾಗದ ಬಳಕೆಯ ವಿಧಾನವನ್ನೇ ಬದಲಾಯಿಸಲಾಗಿತ್ತು. ಆದರೂ ಅಲ್ಲೊಂದು ಇಲ್ಲೊಂದು ಕಡೆ ನಕಲಿ ಛಾಪಾ ಕಾಗದ ಹಗರಣ ಬೆಳಕಿಗೆ ಬರುತ್ತಲೆ ಇವೆ.
ಇದೀಗ ಡಿಸಿಪಿ ಶರಣಪ್ಪ ನೇತೃತ್ವದ ಪೊಲೀಸ್ ತಂಡ ಮತ್ತೊಂದು ನಕಲಿ ಛಾಪಾ ಕಾಗದ ಹಗರಣದ ಜಾಲವನ್ನು ಬೇಸಿದ್ದು, ಈ ವಂಚಕರು ಏನೇನು ಕರ್ಮಕಾಂಡ ನಡೆಸಿದ್ದಾರೆ ಎನ್ನುವುದು ಪೊಲೀಸ್ ತನಿಖೆ ನಂತರವಷ್ಟೆ ಬಯಲಾಗಬೇಕಿದೆ.