ಮೈಸೂರು: ಮೈಸೂರು- ಚಾಮರಾಜನಗರ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿಗೆ ನಡೆಯುವ ಚುನಾವಣೆಯಲ್ಲಿ ಜಾತ್ಯತೀತ ಜನತಾದಳ ಹಾಗೂ ಬಿಜೆಪಿ ತನ್ನದೇ ಆದ ದಾಳವನ್ನು ಉರುಳಿಸಿದ್ದು, ಅವು ಯಶಸ್ವಿಯಾಗುವುದು ಅನುಮಾನ ಎನ್ನಲಾಗುತ್ತಿದೆ.
ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡರನ್ನು ಪಕ್ಷದಲ್ಲೇ ಉಳಿಸಿಕೊಳ್ಳಲು ಜೆಡಿಎಸ್ ಶ್ರಮಿಸುತ್ತಿದ್ದು, ಅದರ ಭಾಗವಾಗಿ ಜಿಟಿಡಿ ಪತ್ನಿ ಲಲಿತಾ ದೇವೇಗೌಡರಿಗೆ ವಿಧಾನ ಪರಿಷತ್ತಿಗೆ ಟಿಕೆಟ್ ನೀಡಲು ಮುಂದಾಗಿದೆ. ಜತೆಗೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಹುಣಸೂರು ಕ್ಷೇತ್ರದಿಂದ ಜಿ.ಟಿ.ಡಿ. ಪುತ್ರ, ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಜಿ.ಡಿ.ಹರೀಶ್ ಗೌಡ ಅವರಿಗೂ ಟಿಕೆಟ್ ನೀಡುವ ಭರವಸೆ ನೀಡಿದೆ. ಇದು ತಮ್ಮನ್ನು ಕಟ್ಟಿ ಹಾಕುವ ಪ್ರಯತ್ನ ಎಂದು ಭಾವಿಸಿ ಜಿಟಿಡಿ ಅವರು ಇದಕ್ಕೆ ಒಪ್ಪಿಲ್ಲ ಎನ್ನಲಾಗಿದೆ.
ನನ್ನ ಕುಟುಂಬದವರು ಎಂಎಲ್‌ಸಿ ಚುನಾವಣೆಯಲ್ಲಿ ಕಣಕ್ಕಿಳಿಯುವ ಪ್ರಶ್ನೆಯೇ ಇಲ್ಲ. ಜೆಡಿಎಸ್‌ನವರು ನನ್ನನ್ನು ದೂರವಿರಿಸಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಪಕ್ಷದ ಅಧ್ಯಕ್ಷರನ್ನು ನೇಮಿಸಿದ್ದಾರೆ. ನನ್ನ ಗಮನಕ್ಕೆ ಬಾರದೆ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಕುಮಾರಸ್ವಾಮಿ ಬಂದು ಹೋಗಿದ್ದಾರೆ.
– ಜಿ.ಟಿ.ದೇವೇಗೌಡ, ಶಾಸಕ