ಮಧುಮೇಹಿಗಳು ಸಕಾಲದಲ್ಲಿ ಸೂಕ್ತ ಚಿಕಿತ್ಸೆ ಪಡೆಯಿರಿ

ತುಮಕೂರು– ಪ್ರತಿಯೊಬ್ಬರೂ ಸಕಾಲದಲ್ಲಿ ರಕ್ತದೊತ್ತಡ ಹಾಗೂ ಮಧುಮೇಹ ಪರೀಕ್ಷೆ ಮಾಡಿಸಿಕೊಳ್ಳುವ ಮೂಲಕ ಮಧುಮೇಹದಿಂದ ಆಗುವಂತಹ ದುಷ್ಪರಿಣಾಮಗಳನ್ನು ತಡೆಯಲು ಮುಂದಾಗಬೇಕು ಎಂದು ಬೆಂಗಳೂರಿನ ಆಸಾಂಕ್ರಮಿಕ ರೋಗಗಳ ವಿಭಾಗ, ರಾಜ್ಯಕೋಶದ ಉಪನಿರ್ದೇಶಕರಾದ ಡಾ. ರಂಗಸ್ವಾಮಿ ಹೆಚ್.ವಿ. ಸಲಹೆ ನೀಡಿದರು.


ನಗರದ ಜಿಲ್ಲಾಸ್ಪತ್ರೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಸರ್ವೇಕ್ಷಣಾ ಘಟಕದ ವತಿಯಿಂದ ಏರ್ಪಡಿಸಿದ್ದ ವಿಶ್ವ ಮಧುಮೇಹ ದಿನಾಚರಣೆ ಕಾರ್ಯಕ್ರಮಕ್ಕೆ ಜನರ ರಕ್ತ ಪರೀಕ್ಷೆ ಮಾಡುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
3೦ ವರ್ಷ ಮೇಲ್ಪಟ್ಟ ಮಹಿಳೆಯರು ಮತ್ತು ಪುರುಷರು ಸೇರಿದಂತೆ ಪ್ರತಿಯೊಬ್ಬರೂ ಸಕಾಲದಲ್ಲಿ ನಿಯಮಿತವಾಗಿ ರಕ್ತದೊತ್ತಡ ಹಾಗೂ ಮಧುಮೇಹ ಪರೀಕ್ಷೆ ಮಾಡಿಸಿಕೊಳ್ಳಬೇಕು. ಇದರಿಂದ ಮುಂದಾಗುವಂತಹ ದುಷ್ಪರಿಣಾಮಗಳನ್ನು ತಡೆಯಬಹುದಾಗಿದೆ ಎಂದರು.


ಮಧುಮೇಧ ರೋಗ ಬಂದರೆ ಕಣ್ಣು, ಮೂತ್ರ ಹಾಗೂ ಹೃದಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಹಾಗಾಗಿ ಮಧುಮೇಹ ಬರಲು ಅವಕಾಶ ನೀಡದೆ ಕಾಲ ಕಾಲಕ್ಕೆ ಸರಿಯಾಗಿ ತಪಾಸಣೆ ಮಾಡಿಸಿಕೊಳ್ಳುವುದು ಸೂಕ್ತ ಎಂದರು.
ಪ್ರತಿ ವರ್ಷ ನ. 14 ರಂದು ವಿಶ್ವ ಮಧುಮೇಹ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಈ ಬಾರಿ ಮಧುಮೇಹಕ್ಕೆ ಮತ್ತು ಮಧುಮೇಹದ ಆರೈಕೆಗೆ ಅವಕಾಶ ಕಲ್ಪಿಸಬೇಕು ಎಂಬುದು ವಿಶ್ವ ಆರೋಗ್ಯ ಸಂಸ್ಥೆಯ ಘೋಷವಾಕ್ಯವಾಗಿದೆ. ಈ ಘೋಷವಾಕ್ಯ 2021 ರಿಂದ 2023 ರ ವರೆಗೆ ಚಾಲ್ತಿಯಲ್ಲಿರುತ್ತದೆ ಎಂದರು.
ಮಧುಮೇಹಿಗಳನ್ನು ಸಕಾಲದಲ್ಲಿ ಸೂಕ್ತ ಚಿಕಿತ್ಸೆಗೆ ಒಳಪಡಿಸುವುದು, ಚಿಕಿತ್ಸೆಗೆ ಅವಕಾಶಗಳನ್ನು ಕಲ್ಪಿಸುವುದು. ಮಧಮೇಹ ಪತ್ತೆಯಾದವರಲ್ಲಿ ನಿಯಂತ್ರಣಕ್ಕೆ ಸಹಕರಿಸುವುದು ಈ ಘೋಷವಾಕ್ಯದ ಸಾರಾಂಶವಾಗಿದೆ ಎಂದು ಅವರು ಹೇಳಿದರು.
ಮಧುಮೇಹ ನಿಯಂತ್ರಣಕ್ಕಾಗಿ ಜನಜಾಗೃತಿ ಕಾರ್ಯಕ್ರಮವನ್ನು ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗುತ್ತಿದೆ. ನ. 14 ರಿಂದ ನ. 20ರ ವರೆಗೆ ಒಂದು ವಾರ ಕಾಲ ಪೂರ್ವಭಾವಿ ತಪಾಸಣೆ ಮೂಲಕ ಮಧುಮೇಹಿಗಳ ಪತ್ತೆಹಚ್ಚಲು ಸಪ್ತಾಹ ನಡೆಸಲಾಗುತ್ತಿದೆ ಎಂದರು.
ರಾಷ್ಟ್ರೀಯ ಕ್ಯಾನ್ಸರ್, ಮಧುಮೇಹ, ಪಾರ್ಶ್ವವಾಯು ನಿಯಂತ್ರಣ ಕಾರ್ಯಕ್ರಮಗಳು ಇಲಾಖೆಯಡಿ ಇವೆ. ಈ ಕಾರ್ಯಕ್ರಮಗಳ ಅಂಗನವಾಗಿ ಮಧುಮೇಹ ಪೂರ್ವಭಾವಿ ತಪಾಸಣೆಗೆ 3೦ ವರ್ಷ ಮೇಲ್ಪಟ್ಟ ಪ್ರತಿಯೊಬ್ಬರನ್ನೂ ಒಳಪಡಿಸಬೇಕಾಗಿದೆ. ಪ್ರತಿ ವರ್ಷ 30 ವರ್ಷ ಮೇಲ್ಪಟ್ಟವರು ಮಧುಮೇಹ ಮತ್ತು ರಕ್ತದೊತ್ತಡ ಪರೀಕ್ಷೆಗಳನ್ನು ಮಾಡಿಸಿಕೊಳ್ಳಬೇಕು ಎಂದರು.


ಮಧುಮೇಹ ಪರೀಕ್ಷೆ ಮಾಡಿಸಿಕೊಳ್ಳುವ ಮೂಲಕ ಸಮುದಾಯದಲ್ಲಿ ಉಂಟಾಗುವ ಸಾವು-ನೋವುಗಳನ್ನು ತಡೆಯಲು ಆರೋಗ್ಯ ಇಲಾಖೆಯೊಂದಿಗೆ ಜನಸಾಮಾನ್ಯರು ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಮೋಹನ್‌ದಾಸ್ ಮಾತನಾಡಿ, ಮಧುಮೇಹ ಸಂಪೂರ್ಣ ನಿಯಂತ್ರಣದಲ್ಲಿಟ್ಟುಕೊಳ್ಳಬಹುದಾದ ಕಾಯಿಲೆ. ನಮ್ಮ ಆರೋಗ್ಯ ಶೈಲಿ, ನಮ್ಮ ಹವ್ಯಾಸದ ಮೇಲೆ ಈ ಕಾಯಿಲೆ ಬರುವುದು ಅವಲಂಬಿತವಾಗಿರುತ್ತದೆ. ಜನರು ದಿನನಿತ್ಯ ಜೀವನದಲ್ಲಿ ಆಹಾರ ಪದ್ದತಿ, ದೈಹಿಕ ಚಟುವಟಿಕೆಗಳ ಬಗ್ಗೆ ಅರಿವು ಮೂಡಿಸಿದರೆ ಸಾಕಷ್ಟು ಪ್ರಮಾಣದಲ್ಲಿ ನಿಯಂತ್ರದಲ್ಲಿಟ್ಟುಕೊಳ್ಳಬಹುದು ಎಂದರು.


ಭಾರತ ಮಧುಮೇಹದ ರಾಜಧಾನಿ ಎಂದು ಹೆಸರಾಗಿದೆ. ದೇಶದಲ್ಲಿ ಮಧುಮೇಹ ತುಂಬಾ ಜಾಸ್ತಿಯಾಗುತ್ತಿದೆ. ಮಧುಮೇಹ ನಿಯಂತ್ರಣ ಮಾಡದೇ ಇರುವುದರಿಂದ ಹೆಚ್ಚು ಜನ ಸಾವನ್ನಪ್ಪುತ್ತಿದ್ದಾರೆ ಎಂದ ಅವರು, ಇಂದಿನಿಂದ 7 ದಿನ ಜಿಲ್ಲೆಯ ಎಲ್ಲ ಉಪಕೇಂದ್ರಗಳ ಮಟ್ಟದಲ್ಲಿ 3೦ ವರ್ಷ ತುಂಬಿದ ಮಹಿಳೆಯರು ಮತ್ತು ಪುರುಷರಿಗೆ ಸ್ಕ್ರೀನಿಂಗ್ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಯಾರ ರಕ್ತದಲ್ಲಿ ಸಕ್ಕರೆ ಪ್ರಮಾಣ ಜಾಸ್ತಿ ಇದೆ ಎಂಬುದನ್ನು ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ನೀಡಲಾಗುವುದು ಎಂದು ತಿಳಿಸಿದರು.
ಮಧುಮೇಹ ನಿಯಂತ್ರಣಕ್ಕಾಗಿ ಈ ಕಾರ್ಯಕ್ರಮ ನಡೆಸಲಾಗುತ್ತಿದೆ. ಮಧುಮೇಹ ನಿಯಂತ್ರಣಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಅವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ವೀರಭದ್ರಯ್ಯ, ಡಾ. ಮಂಜುನಾಥ ಗುಪ್ತಾ, ಡಾ. ನಾಗರಾಜ ಪಾಟೀಲ್ ಮತ್ತಿತರರು ಉಪಸ್ಥಿತರಿದ್ದರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!