ಚಳಿಗಾಲದಲ್ಲಿ ನಮ್ಮ ದೇಹದ ಆರೋಗ್ಯವನ್ನು ಕಾಪಾಡುವಲ್ಲಿ ಕಿತ್ತಳೆ ಹಣ್ಣಿನ ಪಾತ್ರವೇನು ಎಂಬುವುದರ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ. ಹೆಚ್ಚಿನ ಸಿಟ್ರೆಸ್ ಹಣ್ಣುಗಳನ್ನು ತಿನ್ನಲು ಚಳಿಗಾಲ ಸೂಕ್ತವಾದ ಸಮಯ.
ಅಂತಹ ಹಣ್ಣುಗಳಲ್ಲಿ ಕಿತ್ತಳೆ ಹಣ್ಣು ಇನ್ನಷ್ಟು ಉತ್ತಮ. ಅದು ಕೇವಲ ನಿಮ್ಮ ನಾಲಗೆ ಮಾತ್ರ ರುಚಿ ನೀಡುವುದಿಲ್ಲ, ನಿಮ್ಮ ಆರೋಗ್ಯವನ್ನು ಕೂಡ ಹೆಚ್ಚಿಸುತ್ತದೆ. ಚಳಿಗಾಲದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೆ, ಚರ್ಮ ಶುಷ್ಕವಾಗಿರುತ್ತದೆ ಮತ್ತು ಜೀರ್ಣಾಂಗ ವ್ಯವಸ್ಥೆಯು ದುರ್ಬಲವಾಗಿರುತ್ತದೆ. ಈ ಸಮಸ್ಯೆಗಳನ್ನು ನಿವಾರಿಸಲು ಕಿತ್ತಳೆ ಹಣ್ಣಿನ ಸೇವನೆ ಅತ್ಯಂತ ಪ್ರಯೋಜನಕಾರಿ. ಹಾಗಾದರೆ ಚಳಿಗಾಲದಲ್ಲಿ ನಮ್ಮ ದೇಹದ ಆರೋಗ್ಯವನ್ನು ಕಾಪಾಡುವಲ್ಲಿ ಕಿತ್ತಳೆ ಹಣ್ಣಿನ ಪಾತ್ರವೇನು ಎಂಬುವುದರ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ.
ಚಳಿಗಾಲದಲ್ಲಿ ಕಿತ್ತಳೆ ಹಣ್ಣಿನ ಉಪಯೋಗಗಳು
- ತೂಕ ಇಳಿಸಲು ಸಹಕಾರಿ
ಕಿತ್ತಳೆ ಹಣ್ಣು ಅತ್ಯಧಿಕ ಫೈಬರನ್ನು ಹೊಂದಿದೆ, ಇದು ತೂಕ ಇಳಿಸಲು ಮಾತ್ರವಲ್ಲ, ಜೀರ್ಣಕ್ರೀಯೆಯನ್ನು ಕೂಡ ಸುಧಾರಿಸುತ್ತದೆ. ಅದರಲ್ಲಿರುವ ಕರಗುವ ಫೈಬರ್‍ಗಳು ಬೇಗನೆ ಹಸಿವಾಗುವುದನ್ನು ತಡೆಯುತ್ತವೆ, ಹಾಗಾಗಿ ಕ್ಯಾಲೊರಿ ಸೇವನೆಯ ಪ್ರಮಾಣ ಕಡಿಮೆಯಾಗಿ, ತೂಕ ಇಳಿಸಲು ಸಹಾಯವಾಗುತ್ತದೆ. ಕಿತ್ತಳೆ ಹಣ್ಣಿನ ತಿರುಳಿನಲ್ಲಿ ಹೆಚ್ಚು ಫೈಬರ್ ಇರುತ್ತದೆ.
- ವಿಟಮಿನ್ ಸಿ ಅಂಶ ಚರ್ಮದ ಮತ್ತು ಒಟ್ಟಾರೆ ಆರೋಗ್ಯವನ್ನು ವೃದ್ಧಿಸುತ್ತದೆ
ನಿಮ್ಮ ರೋಗ ನಿರೋಧಕ ವ್ಯವಸ್ಥೆ, ಚರ್ಮದ ಆರೋಗ್ಯ ಮತ್ತು ಜೀರ್ಣಾಂಗ ವ್ಯವಸ್ಥೆಯು ಚಳಿಗಾಲದಲ್ಲಿ ದುರ್ಬಲವಾಗಿರುತ್ತದೆ. ಕಿತ್ತಳೆ ಹಣ್ಣಿನಲ್ಲಿ ಇರುವ ವಿಟಮಿನ್ ಸಿ ರೋಗಕಾರಕಗಳ ವಿರುದ್ಧ ಪ್ರತಿರೋಧವನ್ನು ಹೆಚ್ಚಿಸುತ್ತದೆ. ಕಿತ್ತಳೆ ಹಣ್ಣು ನಿಮ್ಮ ಚರ್ಮದ ಆರೋಗ್ಯವನ್ನು ಕೂಡ ಕಾಪಾಡುತ್ತದೆ.
- ಶೀತವನ್ನು ತಡೆಯಬಹುದು
ಚಳಿಗಾಲದಲ್ಲಿ ಶೀತ ಮಾಮೂಲಿ. ಕಿತ್ತಳೆ ಹಣ್ಣನ್ನು ತಿನ್ನುವ ಮೂಲಕ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು , ಶೀತವನ್ನು ದೂರ ಇಡುವ ಉಪಾಯಗಳಲ್ಲಿ ಒಂದು. ಹಾರ್ವರ್ಡ್ ಮೆಡಿಕಲ್ ಸ್ಕೂಲ್‍ನ ಹಾರ್ವರ್ಡ್ ಹೆಲ್ತ್ ಪಬ್ಲಿಶಿಂಗ್‍ನಲ್ಲಿ ಪ್ರಕಟವಾದ ಸಂಶೋಧನೆಯ ಪ್ರಕಾರ, ಸಾಮಾನ್ಯ ಶೀತಕ್ಕೆ ವಿಟಮಿನ್ ಸಿ ಉಪಯೋಗಕಾರಿ. ಹಾಗಾಗಿ, ಚಳಿಗಾಲದಲ್ಲಿ ಕಿತ್ತಳೆ ಹಣ್ಣನ್ನು ತಿನ್ನುವುದರಿಂದ ಶೀತವನ್ನು ತಡೆಯಲು ಸಾಧ್ಯ ಆಗಬಹುದು.

- ಹೃದಯದ ಆರೋಗ್ಯ ಕಾಪಾಡುತ್ತದೆ
ಅಮೇರಿಕನ್ ಹಾರ್ಟ್ ಅಸೋಸಿಯೇಶನ್ ಮೂಲದ ಸೈನ್ಸ್ ಡೈಲಿಯಲ್ಲಿ ಪ್ರಕಟವಾದ ಸಂಶೋಧನೆಯೊಂದರ ಪ್ರಕಾರ, ಸಿಟ್ರಸ್ ಹಣ್ಣುಗಳು , ಅದರಲ್ಲೂ ಮುಖ್ಯವಾಗಿ ಕಿತ್ತಳೆ ಮತ್ತು ಗ್ರೇಪ್ ಫ್ರುಟ್‍ಗಳು ಪಾರ್ಶ್ವವಾಯುವಿನ ಅಪಾಯವನ್ನು ಕಡಿಮೆ ಮಾಡಬಹುದು. ಕಿತ್ತಳೆ ಹಣ್ಣಿನಲ್ಲಿ ಇರುವ ಫ್ಲೆವನಾಯಿಡ್‍ಗಳು ಹೃದಯದ ಕಾಯಿಲೆಗಳಿಂದ ರಕ್ಷಣೆ ನೀಡುತ್ತವೆ.
- ಕಿಡ್ನಿ ಕಲ್ಲುಗಳ ಅಪಾಯವನ್ನು ಕಡಿಮೆ ಮಾಡುತ್ತದೆ
ಮೂತ್ರಪಿಂಡದ ಕಲ್ಲುಗಳು ಹುಟ್ಟಿಕೊಳ್ಳಲು ಮೂತ್ರದಲ್ಲಿನ ಸಿಟ್ರೆಟ್ ಕೊರತೆ ಕಾರಣ ಆಗಬಹುದು. ಸಿಟ್ರೆಟ್ ಎಂದರೆ, ಸಾಮಾನ್ಯವಾಗಿ ಕಿತ್ತಳೆ ಹಣ್ಣಿನಂತಹ ಸಿಟ್ರೆಸ್ ಹಣ್ಣುಗಳಲ್ಲಿ ಕಂಡು ಬರುವ ಸಿಟ್ರಿಕ್ ಆಮ್ಲ. ಮೂತ್ರಪಿಂಡದಲ್ಲಿ ಚಿಕ್ಕ ಕಲ್ಲುಗಳನ್ನು ಹೊಂದಿರುವ ರೋಗಿಗಳಿಗೆ ಸಾಮಾನ್ಯವಾಗಿ ಒಂದು ಲೋಟ ಕಿತ್ತಳೆ ಹಣ್ಣಿನ ರಸವನ್ನು ಕುಡಿಯಲು ಶಿಫಾರಸು ಮಾಡಲಾಗುತ್ತದೆ. ಕಿತ್ತಳೆ ರಸವು ಮೂತ್ರದಲ್ಲಿ ಸಿಟ್ರೆಟ್ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ಕಿಡ್ನಿಯಲ್ಲಿ ಕಲ್ಲುಗಳಾಗುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.
ಈ ಚಳಿಗಾಲದಲ್ಲಿ ದೇಹದ ಆರೋಗ್ಯವನ್ನು ಹೆಚ್ಚಿಸಲು ಕಿತ್ತಳೆ ಹಣ್ಣುಗಳನ್ನು ತಿನ್ನಿ .