ಬೆಂಗಳೂರು, ತುಮಕೂರಲ್ಲಿ ಥಂಡಿ ಜತೆಗೆ ಹೆಚ್ಚಾಗುತ್ತಿದೆ ಶೀತ,ಕೆಮ್ಮು ಕಫ, ಜ್ವರ..!

ತುಮಕೂರು: ನಗರದಲ್ಲಿ ಕಳೆದ ಐದಾರು ದಿನಗಳಿಂದ ಚಳಿಯ ವಾತಾವರಣ ಇರುವುದರಿಂದ ವೈರಲ್‌ ಕಾಯಿಲೆಗಳಿಂದ ಬಳಲುವವರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ವಿಶೇಷವಾಗಿ ಚಳಿ ಮತ್ತು ಮಂಜಿನ ವಾತಾವರಣದ ಹಿನ್ನೆಲೆಯಲ್ಲಿ ಅಸ್ತಮಾ, ಉಬ್ಬಸ ಸೇರಿದಂತೆ ಶ್ವಾಸಕೋಶ ಸಂಬಂಧಿ ರೋಗಿಗಳ ಸಂಖ್ಯೆಯೂ ಹೆಚ್ಚುವ ಸಾಧ್ಯತೆಯಿದೆ ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ.

ಜನರಲ್ಲಿ ಜ್ವರ, ಕೆಮ್ಮು, ಕಫ, ಶೀತ, ಉಸಿರಾಟದ ತೊಂದರೆ ಮುಂತಾದ ಸಮಸ್ಯೆಗಳು ಹೆಚ್ಚಾಗಿ ಕಂಡುಬರುತ್ತಿದೆ. ಬಹುತೇಕ ಆಸ್ಪತ್ರೆಗಳ ಹೊರ ರೋಗಿ ವಿಭಾಗಕ್ಕೆ ಭೇಟಿ ನೀಡುತ್ತಿರುವವರ ಸಂಖ್ಯೆ ಎರಡು ಪಟ್ಟು ಹೆಚ್ಚಾಗಿದೆ

ಈ ವಾತಾವರಣದಲ್ಲಿ ಅನಿವಾರ್ಯ ಇದ್ದರೆ ಮಾತ್ರ ಮನೆಯಿಂದ ಹೊರಗೆ ಬರಬೇಕು. ಹೊರ ಬಂದಾಗ ಮಾಸ್ಕ್‌ ಧಾರಣೆ, ಸಾಮಾಜಿಕ ಅಂತರ, ಕೈ ಶುದ್ಧತೆ ಕಾಪಾಡಿಕೊಳ್ಳಬೇಕು. ಹೊರಗಿನ ಕರಿದ ಪದಾರ್ಥಗಳ ಸೇವನೆ ಸಲ್ಲದು. ಬಿಸಿಯಾಗಿರುವ ಆಹಾರವನ್ನು ಮಾತ್ರ ಸೇವಿಸಬೇಕು. ತಣ್ಣನೆಯ ಆಹಾರ ಸೇವಿಸಬಾರದು ಎಂದು ಅವರು ಹೇಳುತ್ತಾರೆ.

ಸ್ವಯಂ ವೈದ್ಯರಾಗಬೇಡಿ:

ಕೋವಿಡ್‌ ಇನ್ನೂ ಇರುವ ಹಿನ್ನೆಲೆಯಲ್ಲಿ ಮತ್ತು ವೈರಲ್‌ ಕಾಯಿಲೆಗಳ ಆರಂಭದ ಲಕ್ಷಣಗಳು ಮತ್ತು ಕೋವಿಡ್‌ನ ಗುಣಲಕ್ಷಣಗಳಲ್ಲಿ ಸಾಮ್ಯತೆ ಹೊಂದಿರುವ ಕಾರಣ ಜನರು ಸ್ವಯಂ ವೈದ್ಯರಾಗದೇ ಆಸ್ಪತ್ರೆಗಳಿಗೆ ತೆರಳಿ ವೈದ್ಯರು ಸೂಚಿಸಿದ ಔಷಧಿ ಪಡೆದುಕೊಳ್ಳುವುದು ಒಳ್ಳೆಯದು ಎಂದು ಅವರು ಸಲಹೆ ನೀಡುತ್ತಾರೆ.

ದೀಪಾವಳಿಯ ವಾಯು ಮಾಲಿನ್ಯದ ಬಳಿಕ ನಮ್ಮಲ್ಲಿ ಶ್ವಾಸಕೋಶ ಸಂಬಂಧಿ ರೋಗಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗುವುದು ಸಾಮಾನ್ಯ. ಆದರೆ ಈ ಬಾರಿ ದೀಪಾವಳಿಯ ಬಳಿಕವೂ ಮಳೆ, ಚಳಿ ಮತ್ತು ಮಂಜು ಹೆಚ್ಚಿರುವುದು ಶ್ವಾಸಕೋಶ ಸಂಬಂಧಿ ಸಮಸ್ಯೆಗಳ ರೋಗಿಗಳ ಸಂಖ್ಯೆಯನ್ನು ಹೆಚ್ಚು ಮಾಡುವುದು ನಿಶ್ಚಿತ ಎಂದು ವೈದ್ಯರುಗಳು ಹೇಳುತ್ತಾರೆ.

ಚಳಿಯ ಹವೆ ಇದ್ದಾಗ ಶ್ವಾಸಕೋಶ ಮತ್ತು ಹೃದಯ ಸಂಬಂಧಿ ಸಮಸ್ಯೆಗಳು ಹೆಚ್ಚಾಗಿ ವರದಿಯಾಗುತ್ತದೆ. ಖಿನ್ನತೆಯ ಪ್ರಕರಣ ಹೆಚ್ಚಾಗುತ್ತದೆ. ಆದ್ದರಿಂದ ಅಸ್ತಮಾ, ಉಬ್ಬಸದ ರೋಗಿಗಳು ಸಾಕಷ್ಟುಜಾಗೃತೆ ವಹಿಸಬೇಕು. ಸದಾ ಬೆಚ್ಚಗಿನ ಉಡುಗೆ ಧರಿಸುವುದು, ಮನೆಯಲ್ಲಿ ಬೆಚ್ಚಗಿನ ವಾತಾವರಣದಲ್ಲೇ ಇರುವುದಕ್ಕೆ ಆದ್ಯತೆ ನೀಡಬೇಕು. ಕಿವಿಯನ್ನು ಮುಚ್ಚುವ ಮೂಲಕ ದೇಹವನ್ನು ಬೆಚ್ಚಗಿಡಬಹುದು ಎಂದು ಅವರು ಸಲಹೆ ನೀಡುತ್ತಾರೆ.

ಚಿಕುನ್‌ ಗುನ್ಯಾ ಮತ್ತು ಡೆಂಘೀ ಪ್ರಕರಣಗಳು ಅಲ್ಲಲ್ಲಿ ವರದಿಯಾಗುತ್ತಿದೆ. ಆದರೆ ಸೊಳ್ಳೆಯಿಂದ ಬರುವ ಈ ಕಾಯಿಲೆಗಳು ಮಳೆ ನಿಂತ ಬಳಿಕ ಹೆಚ್ಚಾಗುತ್ತದೆ. ಆದ್ದರಿಂದ ಮನೆಯ ಸುತ್ತಮುತ್ತ, ಕೆಲಸ ಮಾಡುವ ಪರಿಸರದಲ್ಲಿ ಎಲ್ಲೂ ನೀರು ನಿಲ್ಲದಂತೆ ನೋಡಿಕೊಳ್ಳಬೇಕು

ಪ್ರಜಾಮನ ನ್ಯೂಸ್ ಡೆಸ್ಕ್.

prajamana.com 9448797745

You May Also Like

error: Content is protected !!