ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ ಯಶಸ್ಸಿಗೆ ವಿಶೇಷ ಅಭಿಯಾನ: ಜಿಲ್ಲಾಧಿಕಾರಿ

ತುಮಕೂರು: ಭಾರತ ಸರ್ಕಾರವು ಜಾರಿಗೆ ತಂದಿರುವ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯ ಯಶಸ್ಸಿಗೆ ಪಶುಸಂಗೋಪನೆ ಹಾಗೂ ಮೀನುಗಾರಿಕೆ ಇಲಾಖೆಗಳು ಬ್ಯಾಂಕ್‌ಗಳ ಸಹಕಾರದೊಂದಿಗೆ ಜಿಲ್ಲೆಯಲ್ಲಿ ಮುಂದಿನ ಮೂರು ತಿಂಗಳುಗಳ ಕಾಲ ಜಿಲ್ಲಾ ಮಟ್ಟದ ವಿಶೇಷ ಅಭಿಯಾನವನ್ನು ಪ್ರಾರಂಭಿಸುವಂತೆ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಸೂಚಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಿದ ಕಿಸಾನ್ ಕ್ರೆಡಿಟ್ ಕಾರ್ಡ್ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಪಶುಸಂಗೋಪನೆ ಮತ್ತು ಮೀನುಗಾರಿಕೆಯಲ್ಲಿ ತೊಡಗಿಸಿಕೊಂಡ ಎಲ್ಲಾ ಅರ್ಹರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಭಾರತ ಸರ್ಕಾರವು ನೀಡಿರುವ ಯೋಜನೆಯ ಅನುಷ್ಠಾನ ಸೂಚನೆಗಳನ್ವಯ ಜಿಲ್ಲಾ ಮಟ್ಟದ ಅಭಿಯಾನವನ್ನು ಚಾಲನೆಗೊಳಿಸಲು ನಿರ್ದೇಶನ ನೀಡಿದರು.

ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಡಿ ಅರ್ಹರಿಗೆ ಹೈನುಗಾರಿಕೆ, ಕುರಿ-ಮೇಕೆ/ ಹಂದಿ/ ಕೋಳಿ ಸಾಕಾಣಿಕೆ ಸೇರಿದಂತೆ ಮೀನುಗಾರಿಕೆ ಉಪ ಕಸುಬುಗಳನ್ನು ಕೈಗೊಳ್ಳಲು ಅವಶ್ಯಕತೆಯಿರುವ ಸಾಲ ಸೌಲಭ್ಯವನ್ನು ಕಲ್ಪಿಸಲು ನಿಯಮಾನುಸಾರ ಕ್ರಮವಹಿಸಬೇಕು. ಬ್ಯಾಂಕ್‌ಗಳೊಂದಿಗೆ ಸಮನ್ವಯ ಸಾಧಿಸಿ ಹೆಚ್ಚಿನ ಪ್ರಚಾರ ನೀಡಿ ಸಾಲ ಸೌಲಭ್ಯವನ್ನು ನಿಗಧಿತ ಗುರಿಯಂತೆ ಅರ್ಹರಿಗೆ ಒದಗಿಸಿ ವಿಶೇಷ ಅಭಿಯಾನವನ್ನು ಯಶಸ್ವಿಗೊಳಿಸಬೇಕು ಎಂದು ಸಭೆಯಲ್ಲಿ ಹಾಜರಿದ್ದ ಪಶುಸಂಗೋಪನೆ, ಮೀನುಗಾರಿಕೆ ಮತ್ತು ಬ್ಯಾಂಕ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ನಬಾರ್ಡ್ ತಯಾರಿಸಿರುವ 2022-23ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಸಾಲ ಸಾಮರ್ಥ್ಯದ ಸಮಗ್ರ ದಾಖಲೆಯಾದ ಪೊಟೆನ್ಶಿಯಲ್ ಲಿಂಕ್ಡ್ ಕ್ರೆಡಿಟ್ ಪ್ಲಾನ್ (ಪಿಎಲ್‌ಪಿ) ಅನ್ನು ಬಿಡುಗಡೆ ಮಾಡಲಾಯಿತು.

ಸಭೆಯಲ್ಲಿ ಉಪವಿಭಾಗಾಧಿಕಾರಿ ಅಜಯ್, ಮೀನುಗಾರಿಕೆ ಇಲಾಖೆ ಉಪನಿರ್ದೇಶಕ ಟಿ.ಎಸ್. ವಿಶ್ವನಾಥ್, ಪಶುಪಾಲನಾ ಇಲಾಖೆ ಉಪನಿರ್ದೇಶಕ ಡಾ.ಜಿ.ವಿ. ಜಯಣ್ಣ, ನಬಾರ್ಡ್ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕಿ ಕೀರ್ತಿ ಪ್ರಭಾ, ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ವ್ಯಸ್ಥಾಪಕ ಯಲ್ಲೂರ್ಕರ್ ಹಾಗೂ ಪ್ರಮುಖ ಬ್ಯಾಂಕ್‌ಗಳ ಅಧಿಕಾರಿಗಳು ಸೇರಿದಂತೆ ಇತರರು ಭಾಗವಹಿಸಿದ್ದರು.

You May Also Like

error: Content is protected !!