ಮಳೆ ಬಂದರೆ ಕೆಸರು ಗದ್ದೆಯಾದ ರಸ್ತೆ


ಹುಳಿಯಾರು: ಹುಳಿಯಾರು ಹೋಬಳಿಯ ದಸೂಡಿ ಗ್ರಾಪಂ ವ್ಯಾಪ್ತಿಯ ದಬ್ಬಗುಂಟೆ ಗ್ರಾಮದ ಬೆಂಚಿಹಟ್ಟಿ ರಸ್ತೆಯು ಅನೇಕ ವರ್ಷಗಳಿಂದ ದುರಸ್ತಿಯಾಗದೆ ಸಂಪೂರ್ಣವಾಗಿ ಹದಗೆಟ್ಟಿದೆ. ಸಾರ್ವಜನಿಕರ ಸಂಚಾರಕ್ಕೆ ಸಂಚಕಾರ ಉಂಟಾಗಿದ್ದರೂ ಜನಪ್ರತಿನಿಧಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ.

ಬೆಳ್ಳಾರದಿಂದ ಬೆಂಚಿಹಟ್ಟಿ ಕ್ರಾಸ್ ವರೆಗಿನ ೧೦ ಕಿಮೀ ರಸ್ತೆಯಲ್ಲಿ ಬೆಳ್ಳಾರಿಂದ ೫ ಕಿಮೀ ವರೆವಿಗೆ ರಸ್ತೆ ಡಾಂಬರೀಕರಣ ಮಾಡಿದ್ದಾರೆ. ಉಳಿದ ೫ ಕಿಮೀ. ರಸ್ತೆ ಬಾಕಿ ಉಳಿದಿದ್ದು ಈ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಪರಿಣಾಮ ರಸ್ತೆಯ ಓಡಾಡಲಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಅದರ್‍ಲಲೂ ದಬ್ಬಗುಂಟೆ ಬಸ್ ನಿಲ್ದಾಣದ ರಸ್ತೆ ತೀರಾ ಅದ್ವಾನವಾಗಿದೆ. ಮಳೆಗಾಲದಲ್ಲಿ ಬಿದ್ದ ಮಳೆಯ ನೀರು ಈ ರಸ್ತೆಯ ಮೇಲೆ ನಿಂತು ರಸ್ತೆಯು ಕೆಸರು ಗದ್ದೆಯಾಗಿ ಮಾರ್ಪಡುತ್ತದೆ. ವೃದ್ಧರು, ಮಕ್ಕಳು, ವಿದ್ಯಾರ್ಥಿಗಳು ಕೆಸರು ಸಿಡಿಸಿಕೊಂಡು ಓಡಾಡುವ ಅನಿವಾರ್ಯತೆ ನಿರ್ಮಾಣವಾಗಿದೆ. ಬೈಕ್ ಸವಾರರು ಬಿದ್ದು ಎದ್ದು ಓಡಾಡುತ್ತಿದ್ದಾರೆ.

ಈ ರಸ್ತೆ ದುರಸ್ತಿಗೆ ಗ್ರಾಮಸ್ಥರು ಹಲವಾರು ವರ್ಷಗಳಿಂದ ಸಾಕಷ್ಟು ಬಾರಿ ಮನವಿ ಮಾಡಿದರೂ ಜನಪ್ರತಿನಿಧಿ ಮತ್ತು ಅಧಿಕಾರಿಗಳು ಇಬ್ಬರೂ ಈ ಬಗ್ಗೆ ಗಮನ ಹರಿಸದೆ ನಿರ್ಲಕ್ಷ್ಯಿಸಿದ್ದಾರೆ. ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಗೆ ಈ ರಸ್ತೆ ಸೇರ್ಪಡೆಗೊಳಿಸಿ ಡಾಂಬರೀಕರಣ ಮಾಡಿದರೆ ಐದಾರು ಹಳ್ಳಿಗಳ ಸಾವಿರಾರು ಜನರ ಸುಗಮ ಸಂಚಾರಕ್ಕೆ ನೆರವಾಗುತ್ತದೆ. ಇನ್ನಾದರೂ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

   

ಬೆಂಚಿಹಟ್ಟಿಗೆ ಹೋಗುವ ರಸ್ತೆ ದಬ್ಬಗುಂಟೆ ಬಸ್‌ನಿಲ್ದಾಣದಲ್ಲಿ ತೀರ ಹದಗೆಟ್ಟಿದ್ದು ಓಡಾಡದಂತಹ ಪರಿಸ್ಥಿತಿಯಿದೆ. ನಾಲ್ಕು ಚಕ್ರದ ಮಾಹನಗಳು ಬಂದರಂತೂ ಪಾದಚಾರಿಗಳಿಗೆ, ಅಕ್ಕಪಕ್ಕದ ಅಂಗಡಿಗಳಿಗೆ ಕೆಸರು ಸಿಡಿಸಿ ಹೋಗುತ್ತವೆ. ಹಾಗಾಗಿ ಗ್ರಾಪಂಗೆ ಜಲ್ಲಿ ರಸ್ತೆಯನ್ನಾದರೂ ಮಾಡಿ ಕೆಸರು ಆಗದಂತೆ ನೋಡಿಕೊಳ್ಳಿ ಎಂದರೂ ಇನ್ನೂ ಗಮನ ಹರಿಸಿಲ್ಲ

   ಲೋಕೇಶ್‌ರಾವ್, ದಬ್ಬಗುಂಟೆ ನಿವಾಸಿ

ದಬ್ಬಗುಂಟೆಯಲ್ಲಿ ಎಸ್‌ಎಸ್‌ಎಲ್‌ಸಿ ವರೆವಿಗೆ ವಿದ್ಯಾಭ್ಯಾಸ ಮಾಡಲು ಅಕ್ಕಪಕ್ಕದ ಗ್ರಾಮದ ನೂರಾರು ವಿದ್ಯಾರ್ಥಿಗಳು ನಿತ್ಯ ಬರುತ್ತಾರೆ. ಇವರು ಈ ಕೆಸರಿನ ರಸ್ತೆಯ ಮೂಲಕವೇ ಶಾಲೆಗೆ ಹೋಗಿಬರುತ್ತಾರೆ. ಹೀಗೆ ಓಡಾಡುವಾಗ ಸಮವಸ್ತ್ರಕ್ಕೆ ಕೆಸರು ಸಿಡಿಯುವುದನ್ನು ತಪ್ಪಿಸಿಕೊಳ್ಳಲು ಸರ್ಕಸ್ ಮಾಡಿಕೊಂಡು ಓಡಾಡುತ್ತಾರೆ. ಮಕ್ಕಳ ಕಷ್ಟ ನೋಡಿಯಾದರೂ ಸಮಸ್ಯೆಗೆ ಸ್ಪಂಧಿಸಿ

   ರಾಮಕೃಷ್ಣ, ದಬ್ಬಗುಂಟೆ ನಿವಾಸಿ

ಪಂಚಾಯ್ತಿ ಅನುದಾನದಲ್ಲಿ ೫ ಕಿಮೀ ಡಾಂಬರ್ ರಸ್ತೆ ಕಾಮಗಾರಿ ಮಾಡಲಾಗುವುದಿಲ್ಲ. ಸಚಿವರ ಗಮನಕ್ಕೆ ಸಮಸ್ಯೆ ತಂದಿದ್ದು ಡಾಂಬರ್ ರಸ್ತೆ ಮಾಡಿಸಿಕೊಡುವ ಭರವಸೆ ನೀಡಿದ್ದಾರೆ. ಆದರೆ ಜನರ ಓಡಾಟಕ್ಕೆ ತೊಂದರೆಯಾಗದಂತೆ ತಾತ್ಕಾಲಿಕವಾಗಿ ಪರಿಹರಿಸುವ ನಿಟ್ಟಿನಲ್ಲಿ ಪಂಚಾಯ್ತಿಯಲ್ಲಿ ಲಭ್ಯವಿರುವ ಅಲ್ಪ ಹಣದಲ್ಲೇ ನೀರು ನಿಲ್ಲದ ಹಾಗೆ ಶೀಘ್ರದಲ್ಲೇ ಮಾಡಿಕೊಡುತ್ತೇವೆ

     ಡಿ.ಆರ್.ಚಿದಾಂನಂದ್, ಗ್ರಾಪಂ ಅಧ್ಯಕ್ಷರು, ದಸೂಡಿ

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!