ಎಲ್ಲರೂ ಶಿಕ್ಷಣಕ್ಕಾಗಿ ತಮ್ಮ ಕೈಲಾದ ಸಹಾಯ ಮಾಡಿ; ಹರೇಕಳ ಹಾಜಬ್ಬ

ಶಿರಾ :ದೇಶದ ಅಭಿವೃದ್ದಿಯಲ್ಲಿ ಶಿಕ್ಷಣದ ಪಾತ್ರ ಅಮೂಲ್ಯ. ಶಿಕ್ಷಣದಿಂದ ಮಾತ್ರ ಉತ್ತಮ ವ್ಯಕ್ತಿ ರೂಪುಗೊಳ್ಳಲು ಸಾಧ್ಯ. ಸಮಾಜಕ್ಕೆ ಈ ದೇಶಕ್ಕೆ ಏನನ್ನಾದರೂ ಕೊಡುಗೆ ಕೊಡಬೇಕಾದರೆ ಶಿಕ್ಷಣ ಎನ್ನುವುದು ಅತಿ ಅವಶ್ಯ. ಆದ್ದರಿಂದ ಎಲ್ಲರೂ ಶಿಕ್ಷಣಕ್ಕಾಗಿ ತಮ್ಮ ಕೈಲಾದ ಸಹಾಯ ಮಾಡಿ ಎಂದು ಹರೇಕಳ ಹಾಜಬ್ಬ ಹೇಳಿದರು.

ಅವರು ನಗರದ ಶ್ರೀ ಲಕ್ಷ್ಮೀ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ವರ್ಧಮಾನ್ ಪಬ್ಲಿಕ್ ಶಾಲೆ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಅವರಿಗೆ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಜೀವನದಲ್ಲಿ ಗುರಿ ಇಟ್ಟುಕೊಂಡು ಮುನ್ನಡೆಯಬೇಕು. ಕಠಿಣ ಶ್ರಮವಹಿಸಿ ಶಿಕ್ಷಣ ಪಡೆದರೆ ತಮಗೂ ಹಾಗೂ ಸಮಾಜಕ್ಕೂ ಒಳ್ಳೆಯ ಹೆಸರು ಬರುತ್ತದೆ ಎಂದ ಅವರು ಕುಗ್ರಾಮ ಹರೇಕಳ ಎಂಬ ಗ್ರಾಮದಲ್ಲಿ ಬಡ ಕುಟುಂಬದಲ್ಲಿ ಹುಟ್ಟಿದ ನಾನು ಶಿಕ್ಷಣಕ್ಕಾಗಿ ತಮ್ಮ ಕೈಲಾದ ಸಹಾಯ ಮಾಡಿದೆ. ನನ್ನ ಸೇವೆ ಗುರ್ತಿಸಿ ಕೇಂದ್ರ ಸರಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ. ಅದೇ ರೀತಿ ಶಿರಾ ನಗರದ ವರ್ಧಮಾನ್ ಶಾಲೆಯವರು ನನ್ನನ್ನು ಕರೆದು ಸನ್ಮಾನಿಸಿದ್ದಾರೆ ಅವರಿಗೂ ನಾನೂ ಚಿರಋಣಿಯಾಗಿದ್ದೇನೆ ಎಂದರು.

ಶಾಸಕ ಡಾ. ಸಿ.ಎಂ.ರಾಜೇಶ್ ಗೌಡ ಮಾತನಾಡಿ ಹಣ ಅಂತಸ್ತು ಕೆಲವೇ ವರ್ಷಕ್ಕೆ ಸೀಮಿತಿವಾಗಿರುತ್ತದೆ. ಆದರೆ ನಾವು ಮಾಡುವ ವೈಯಕ್ತಿಕ ಸಾಧನೆ ಶಾಶ್ವತವಾಗಿರುತ್ತವೆ. ಆ ರೀತಿಯಲ್ಲಿ ಹರೇಕಳ ಹಾಜಬ್ಬ ಅವರು ಸ್ವಂತ ದುಡಿಮೆಯಿಂದ ಸಾದಾರಣ ಜೀವನ ಮಾಡಿ. ಮುಂದಿನ ಪೀಳಿಗೆಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ತಮ್ಮ ಊರಿನ ಸರಕಾರಿ ಶಾಲೆಯ ಅಭಿವೃದ್ದಿಗಾಗಿ ತಾನು ಕಿತ್ತಲೆ ಹಣ್ಣು ಮಾರಿ ಬಂದ ದುಡಿಮೆ ಹಣದಲ್ಲಿ ಜೀವನ ಸಾಗಿಸಲು ಬೇಕಾದ ಹಣ ಇಟ್ಟುಕೊಂಡು ಉಳಿದೆಲ್ಲಾ ಹಣವನ್ನು ಶಾಲೆಯ ಕಟ್ಟಡಕ್ಕೆ ನೀಡಿ ಎಲ್ಲರಿಗೂ ಮಾದರಿಯಾಗಿದ್ದಾರೆ. ಇವರ ಸೇವೆಯನ್ನು ಮೆಚ್ಚಿ ಕೇಂದ್ರ ಸರಕಾರಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ. ಜೀವನದಲ್ಲಿ ತಾವು ಒಂದು ಉತ್ತಮ ಹಂತದಲ್ಲಿ ಇದ್ದು ಸಮಾಜ ಸೇವೆ ಮಾಡಬೇಕೆಂದಿಲ್ಲ. ಎಲ್ಲರೂ ಅವರವರ ಹಂತದಲ್ಲಿ ತಮ್ಮ ಕೈಲಾದ ಸೇವೆ ಮಾಡಬೇಕು ಎಂದರು.

ಅಭಿನಂದನಾ ಸಮಾರಂಭದಲ್ಲಿ ವರ್ಧಮಾನ್ ಪಬ್ಲಿಕ್ ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ಸಂಜಯ್.ಎಸ್.ಗೌಡ, ಕಾರ್ಯದರ್ಶಿ ಕಪಿಲ್‌ದೇವ್, ಪ್ರಾಂಶುಪಾಲರಾದ ಪ್ರಿಯಾಂಕ, ಶಿಕ್ಷಕಿಯರಾದ ಸುಭಾಷಿನಿ, ದಿವ್ಯ, ಗೀತ, ರಮ್ಯ, ಓಬರಾಜು, ಸುಜಾತ, ಸಹನ ಸೇರಿದಂತೆ ಹಲವರು ಹಾಜರಿದ್ದರು.

You May Also Like

error: Content is protected !!