ಕರೋನ ವಿರುದ್ಧ ಹೋರಾಡಲು ಸಾಂಪ್ರದಾಯಿಕ ಬಿಸಿ ರಸಂ ಸೇವಿಸಿ..

ಕೋವಿಡ್​-19ನ ಆತಂಕ ಒಂದು ಕಡೆಯಾದರೆ, ಇದ್ದಕ್ಕಿದ್ದಂತೆ ಶುರುವಾಗುವ ಮಳೆ ಇನ್ನೊಂದೆಡೆ. ಬಿಸಿಲಿನ ನಡುವೆ ಮಳೆಯ ಬೆಸುಗೆ ಮನಸ್ಸಿಗೆ ಮುದ ನೀಡುವುದು ಹೌದು, ಆರೋಗ್ಯದ ಬದಲಾವಣೆಗೆ ಕಾರಣವೂ ಹೌದು. ಈ ನಿಟ್ಟಿನಲ್ಲಿ ನಿಮ್ಮ ರೋಗ ನಿರೋಧಕ ಶಕ್ತಿಯನ್ನು ವೃದ್ಧಿ ಮಾಡಿಕೊಳ್ಳಲು ಸಾಂಪ್ರದಾಯಿಕ ಹುಣಸೇ, ಬೆಳ್ಳುಳ್ಳಿ ರಸಂ ನಿಮ್ಮ ನೆರವಿಗೆ ಬರುತ್ತದೆ. ನಿರಂತರವಾಗಿ ನಿಮ್ಮ ಆಹಾರದಲ್ಲಿ ಈ ರಸಂ ಅಳವಡಿಸಿಕೊಂಡರೆ ಕೊರೊನಾ ವೈರಸ್​ ನಿಮ್ಮ ಬಳಿ ಸುಳಿಯುವ ಸಾಧ್ಯತೆ ತೀರಾ ಕಡಿಮೆ. ಅಪ್ಪಟ ಅಡುಗೆ ಮನೆಯ ರಾಜನಂತೆ ರಾರಾಜಿಸುವ ಈ ರಸಂ ಬಾಯಿಗೂ ರುಚಿ, ದೇಹಕ್ಕೂ ಹಿತ ಮತ್ತು ಕೊರೊನಾದಿಂದ ರಕ್ಷಾ ಕವಚದಂತೆಯೂ ಕೆಲಸ ಮಾಡುತ್ತದೆ. ರೋಗನಿರೋಧಕ ಶಕ್ತಿ ವೃದ್ಧಿಸುವ ಹುಣಸೆ, ಬೆಳ್ಳುಳ್ಳಿ ರಸಂ ಒಮ್ಮೆಯಾದರೂ ನೀವು ಪ್ರಯತ್ನಿಸಲೇಬೇಕು.

ಇದರಲ್ಲಿರುವ ಬೆಳ್ಳುಳ್ಳಿ, ಹುಣಸೆ ಹಣ್ಣು ಮತ್ತು ಕರಿಬೇವಿನ ಎಲೆ ನಿಮ್ಮ ಬಾಯಿಗೂ ರುಚಿ ನೀಡುವುದಲ್ಲೇ ಕರುಳಿನ ಆರೋಗ್ಯಕ್ಕೂ ಪ್ರಯೋಜನಕಾರಿ. ಡಯೆಟಿಷಿಯನ್​ ಆಗಿ ಅಭ್ಯಾಸ ಮಾಡುತ್ತಿರುವ ಪ್ರಿಯಾಂಕಾ ಸಿಂಗ್​ ಅವರು ಕೋವಿಡ್ 19 ವಿರುದ್ಧ ಹೋರಾಡಲು ಅದ್ಭುತವಾದ ಸಾಂಪ್ರದಾಯಿಕ ರಸಂ ರೆಸಿಪಿ ಬಗ್ಗೆ ತಿಳಿಸಿಕೊಟ್ಟಿದ್ದಾರೆ. ಅದನ್ನು ಇಲ್ಲಿ ಗಮನಿಸಿ.

ಭಾರತದಲ್ಲಿ ಹಿಂದಿನಿಂದಲೂ ದೊರೆಯುವ ಮಸಾಲೆ ಪದಾರ್ಥಗಳು ನಮ್ಮ ಅಡುಗೆ ಮನೆಯಲ್ಲಿ ಸರ್ವೇ ಸಾಮಾನ್ಯವಾಗಿ ಇದ್ದೇ ಇರುತ್ತವೆ. ಹುಣಸೆ ಹಣ್ಣು, ಟೊಮ್ಯಾಟೋ, ಕರಿಬೇವಿನ ಎಲೆ, ಬೆಳ್ಳುಳ್ಳಿ ಮತ್ತು ಕರಿಮೆಣಸು ನಿಮ್ಮ ರಸಂ ರುಚಿಯನ್ನು ಹೆಚ್ಚಿಸುವುದಲ್ಲದೇ ದೇಹದಲ್ಲಿ ರೋಗನಿರೋಧಕ ಶಕ್ತಿ ವೃದ್ಧಿಸುತ್ತವೆ.

ರಸಂ ಮಾಡಲು ಬೇಕಾಗುವ ಸಾಮಗ್ರಿಗಳು

ಹುಣಸೆ ಹಣ್ಣು 1 ಟೇಬಲ್​ ಸ್ಪೂನ್​

ಸಣ್ಣದಾಗಿ ಹೆಚ್ಚಿಟ್ಟುಕೊಂಡ ಟೊಮ್ಯಾಟೋ 1

ಕರಿಬೇವಿನ ಎಲೆ 10 ರಿಂದ 12 ಎಸಳು

ಬೆಳ್ಳುಳ್ಳಿ 4-5 ಎಸಳು

ಅರಿಶಿನ ಅರ್ಧ ಚಮಚ

ಕೆಂಪು ಒಣ ಮೆಣಸಿನಕಾಯಿ 2

ಒಗ್ಗರಣೆಗೆ

ಜೀರಿಗೆ 1 ಟೀ ಸ್ಪೂನ್​

ಇಂಗು ಅರ್ಧ ಟೀ ಸ್ಪೂನ್

ಹೆಚ್ಚಿಟ್ಟುಕೊಂಡ ಕರಿಬೇವಿನ ಎಲೆ 1 ಟೇಬಲ್ ಸ್ಪೂನ್

ಎಣ್ಣೆ 1 ಟೇಬಲ್ ಸ್ಪೂನ್

ಸಾಸಿವೆ 1 ಟೀ ಸ್ಪೂನ್

ಸಾಂಪ್ರದಾಯಿಕ ರಸಂ ಮಾಡುವ ವಿಧಾನ

  • ಮೊದಲಿಗೆ 2 ಕೆಂಪು ಮೆಣಸಿನಕಾಯಿಯನ್ನು ಎಣ್ಣೆ ಹಾಕದೇ ಸಣ್ಣ ಉರಿಯಲ್ಲಿ ಹುರಿದುಕೊಳ್ಳಿ. ಬರೀ ಮೆಣಸಿನ ಕಾಯಿ ಹುರಿದರೇ ಘಾಟಾಗುತ್ತದೆ. ಆದ್ದರಿಂದ ಇದರ ಜೊತೆಗೆ ಕರಿ ಮೆಣಸು, ಜೀರಿಗೆ, ಬೆಳ್ಳುಳ್ಳಿ ಮತ್ತು ಕರಿಬೇವಿನ ಎಲೆ ಸೇರಿಸಿ ಬಿಸಿ ಮಾಡಿಕೊಳ್ಳಿ. ಹೆಚ್ಚು ಬಿಸಿ ಮಾಡಿ ಹುರಿಯಬೇಡಿ.
  • ಬಳಿಕ ಈ ಮಸಾಲೆ ಪದಾರ್ಥಗಳನ್ನು ತಣ್ಣಗಾಗಲು ಬಿಡಿ. ಆ ನಂತರ ಇದನ್ನು ಮಿಕ್ಸಿ ಜಾರಿಗೆ ಹಾಕಿ ಪುಡಿ ಮಾಡಿಕೊಳ್ಳಬೇಕು.
  • ಈಗ ಸ್ಟೌ ಹಚ್ಚಿ ಒಂದು ಕಡಾಯಿ ಇಡಿ. ಇದಕ್ಕೆ ಎಣ್ಣೆ ಹಾಕಿ ಬಿಸಿ ಮಾಡಿ. ಸಣ್ಣಗೆ ಹೆಚ್ಚಿರುವ ಟೊಮ್ಯಾಟೋ, ಉಳಿದುಕೊಂಡಿರುವ ಕರಿಬೇವಿನ ಎಲೆ, ಅರಿಶಿನ, ಮತ್ತು ಉಪ್ಪು ಸೇರಿಸಿ 3-4 ನಿಮಿಷಗಳ ಕಾಲ ಬೇಯಿಸಿಕೊಳ್ಳಿ.
  • ನಂತರ ಇದಕ್ಕೆ ರುಬ್ಬಿಕೊಂಡ ಮಸಾಲೆ ಸೇರಿಸಿ ಮಿಕ್ಸ್ ಮಾಡಿ, ಸಣ್ಣ ಉರಿಯಲ್ಲಿ ಬೇಯಿಸಿಕೊಳ್ಳಬೇಕು.
  • ನಂತರ ಹುಣಸೆ ರಸ ಸೇರಿಸಿ, 2 ಕಪ್ ನೀರು ಹಾಕಿ ಮುಚ್ಚಳ ಮುಚ್ಚಿ 10 ನಿಮಿಷಗಳ ಕಾಲ ಕುದಿಸಿ.
  • ಈಗ ಇನ್ನೊಂದು ಸ್ಟೌ ಮೇಲೆ ಪ್ಯಾನ್ ಇಟ್ಟು, ಎಣ್ಣೆ ಅಥವಾ ತುಪ್ಪ ಹಾಕಿ ಬಿಸಿ ಮಾಡಿಕೊಳ್ಳಿ.
  • ಇದಕ್ಕೆ ಸಾಸಿವೆ ಸೇರಿಸಿ, 1 ಕೆಂಪು ಮೆಣಸಿನಕಾಯಿ ಮತ್ತು ಇಂಗು ಸೇರಿಸಿ ಸಾಸಿವೆ ಚಿಟಗುಟಿಸಿ.
  • ಈಗ ಈ ಒಗ್ಗರಣೆಯನ್ನು ರಸಂ ಮಿಶ್ರಣಕ್ಕೆ ಹಾಕಬೇಕು.
  • ಬಳಿಕ ರಸಂ ಸ್ಟೌ ಆರಿಸಿ, ಇದಕ್ಕೆ ಸಣ್ಣದಾಗಿ ಹೆಚ್ಚಿಟ್ಟುಕೊಂಡ ಕೊತ್ತಂಬರಿ ಸೊಪ್ಪು ಸೇರಿಸಿ. ಸ್ವಲ್ಪ ಕರಿಮೆಣಸಿನ ಪುಡಿಯನ್ನು ಉದುರಿಸಿ.
  • ಇಷ್ಟಾದ್ರೆ ಬಿಸಿ ಬಿಸಿಯಾದ ಸಾಂಪ್ರದಾಯಿಕ ರಸಂ ಅನ್ನದ ಜೊತೆಗೆ ಸವಿಯಲು ಸಿದ್ಧ. ಇಲ್ಲವೇ ಹಾಗೆ ಬಿಸಿಯಾಗಿಯೇ ಸೇವಿಸುವುದು ಕೂಡ ರುಚಿಕರ.

ಸಾಂಪ್ರದಾಯಿಕ ರಸಂ ಸೇವನೆಯ ಪ್ರಯೋಜನಗಳು

ಹಿಂದಿನ ಕಾಲದಿಂದಲೂ ಚಳಿ, ಮಳೆಗಾಲದಲ್ಲಿ ಈ ರಸಂ ಅನ್ನು ರೋಗನಿರೋಧಕ ಶಕ್ತಿ ವೃದ್ಧಿಸಲು ತಯಾರಿಸಲಾಗುತ್ತಿದೆ. ಇದರಲ್ಲಿರುವ ಹುಣಸೆ ಹಣ್ಣು, ಅರಿಶಿನ ಮತ್ತು ಕರಿಬೇವಿನ ಎಲೆ ಆ್ಯಂಟಿ ಫಂಗಲ್ ಗುಣವನ್ನು ಹೊಂದಿದೆ. ಬೆಳ್ಳುಳ್ಳಿ ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಮಾಡಿರುವುದು ತಿಳಿದಿದೆ. ಜ್ವರ ಮತ್ತು ಶೀತಕ್ಕೆ ಈ ರಸಂ ಅತ್ಯುತ್ತಮ ಔಷಧಿಯಂತೆ ಕೆಲಸ ಮಾಡುತ್ತದೆ.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!