೮೦ ಗುಡಿಸಲು, ೨೦೦ ಮತದಾರರು 300ಹೆಚ್ಚು ಜನರು ವಾಸಿಸುವ ಗ್ರಾಮ
ಮೂಲಭೂತ ಸೌಲಭ್ಯಗಳನ್ನೇ ಕಾಣದ ಜನರು
ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಪ್ರತಿನಿತ್ಯ ಶಾಪ ಹಾಕುತ್ತಿರುವ ಈ ಗ್ರಾಮದ ಮಹಿಳೆಯರು..
ಕೊರಟಗೆರೆ: ರಾಜ್ಯ ಅಭಿವೃದ್ಧಿಯಾಗಬೇಕಾದರೆ ಪ್ರತಿಯೊಂದು ಹಳ್ಳಿಯೂ ಅಭಿವೃದ್ಧಿಯಾಗಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ರಾಜ್ಯದ ಅನೇಕ ಹಳ್ಳಿಗಳು ಮೂಲಭೂತ ಸೌಲಭ್ಯಗಳಿಲ್ಲದೇ ಕುಂಠಿತವಾಗಿವೆ. ಇದಕ್ಕೆ ನಿದರ್ಶನವೆಂಬಂತೆ ಕೊರಟಗೆರೆ ತಾಲ್ಲೂಕಿನ ಸಿ.ಎನ್ ದುರ್ಗ ಹೋಬಳಿಯ ಕುರಂಕೋಟೆ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಒಳಪಡುವ ಬಿಕ್ಕೆಗುಟ್ಟೆ ಗ್ರಾಮ ಒಂದೇ ಒಂದು ಸೌಲಭ್ಯ ಇಲ್ಲದೆ ಬಳಲುತ್ತಿದೆ.
ಬಿಕ್ಕೆಗುಟ್ಟೆ ಮಜಿರೆ ಗ್ರಾಮದಲ್ಲಿ ಮೂಲಭೂತ ಸೌಕರ್ಯಗಳೇ ಮರೀಚಿಕೆಯಾಗಿದ್ದು, ಊರಿನ ತುಂಬೆಲ್ಲಾ ಗುಡಿಸಲುಗಳೇ ತುಂಬಿರುವ ಗ್ರಾಮವಾಗಿದೆ.
ಅಧಿಕಾರಿಗಳು, ಜನಪ್ರತಿನಿಧಿಗಳು ದಿನಕ್ಕೊಂದು ಕಾರ್ಯಕ್ರಮ ಮಾಡುತ್ತಾ ಭರವಸೆ ನೀಡುವುದರಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಇಂಥ ಗ್ರಾಮಗಳ ಬಗ್ಗೆ, ಅಭಿವೃದ್ಧಿಯ ಬಗ್ಗೆ ತಲೆಕೆಡಿಸಿಕೊಂಡಿಲ್ಲ.
ಬಿಕ್ಕೆಗುಟ್ಟೆ ಮಜಿರೆ ಗ್ರಾಮದ ಗುಡಿಸಲುಗಳಿಗೆ ಬಾಗಿಲುಗಳು ಇಲ.. ವಿದ್ಯುತ್ ಇಲ್ಲ, ಶೌಚಾಲಯಗಳಂತೂ ಮೊದಲೇ ಇಲ್ಲ.
ಇಲ್ಲಿನ ಸ್ಥಳೀಯ ಮಹಿಳೆಯೊಬ್ಬರು ಮಾತನಾಡಿ, ಪ್ರತಿನಿತ್ಯ ಬೆಳಗ್ಗಿನಿಂದ ಸಂಜೆವರೆಗೂ ಕೂಲಿ ಮಾಡಿ, ಅದೇ ಹಣದಲ್ಲಿ ನಮ್ಮ ಜೀವನ ಸಾಗಿಸಬೇಕು. ಮೊದಲೇ ಬೆಲೆಯೇರಿಕೆಯಿಂದಾಗಿ ಜೀವನ ಮಾಡುವುದೇ ಕಷ್ಟವಾಗಿದೆ. ಇನ್ನೂ ಎಲ್ಲಿಂದ ಸ್ವಂತ ಹಣದಿಂದ ಮನೆ ಕಟ್ಟಲು, ಶೌಚಾಲಯ ನಿರ್ಮಿಸಿಕೊಳ್ಳಲು ಸಾಧ್ಯ ಎಂದು ತಮ್ಮ ಅಳಲನ್ನು ತೋಡಿಕೊಂಡರು.
ಗ್ರಾಮದ ಹೆಣ್ಣು ಮಕ್ಕಳು ಇಂದಿಗೂ ಕೂಡ ಬಹಿರ್ದೆಸೆಗೆ ಹೊರಗಡೆ ಹೋಗುವ ಪದ್ಧತಿ ಕಣ್ಮುಂದೆ ಕಾಣುತ್ತದೆ.
ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ನಾಚಿಕೆ ಆಗುವ ಸಂಗತಿ ಇದಾಗಿದೆ. ಗ್ರಾಮೀಣ ಪ್ರದೇಶಗಳಿಗೆ ಒಂದು ಬಾರಿಯೂ ಭೇಟಿ ಕೊಡದ ಅಧಿಕಾರಿಗಳು ಆದೇಶವನ್ನು ಮಾತ್ರ ಪಾಲಿಸಿ ಎನ್ನುತ್ತಾರೆ. ಇನ್ನೂ ಚುನಾವಣೆ ಹತ್ತಿರ ಬಂದಾಗ ಮಾತ್ರ ಆಶ್ವಾಸನೆಯಲ್ಲಿ ಮನೆ ಕಟ್ಟಿಕೊಡುವ ಜನಪ್ರತಿನಿಧಿಗಳು.
ಶಾಸಕರು, ಮಂತ್ರಿಗಳು. ಇಂತಹ ವಾತಾವರಣದಲ್ಲಿ ಗ್ರಾಮಗಳ ಅಭಿವೃದ್ಧಿ ಹೇಗೆ ಸಾಧ್ಯ ಎನ್ನುತ್ತಾರೆ ಬಿಕ್ಕೆಗುಟ್ಟೆ ಗ್ರಾಮದ ಜನರು.
ಬಿಕ್ಕೆಗುಟ್ಟೆ ಗ್ರಾಮದಲ್ಲಿ ಹುಟ್ಟಿ ಬೆಳೆದು, ಕೊರತಗೆರೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿರುವ ದೊಡ್ಡ ಸಿದ್ದಯ್ಯನವರು ತಮಗೂ ಆ ಊರಿಗೂ ಸಂಬಂದನೇ ಇಲ್ಲ ಎಂಬ ರೀತಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ಮನಸ್ಸು ಮಾಡಿದರೆ ಈ ಗ್ರಾಮವನ್ನು ಗುಡಿಸಲು ಮುಕ್ತ ಗ್ರಾಮವಾಗಿ ನಿರ್ಮಿಸಬಹುದಿತ್ತು ಎಂಬುದು ಇಲ್ಲಿನ ಜನರ ಅಭಿಪ್ರಾಯ.
ಗ್ರಾಮ ವಾಸ್ತವ್ಯ ಕೇವಲ ಪ್ರವಾಸ ಮಾಡುವ ಕಾರ್ಯಕ್ರಮವಾಗಿದೆ. ಏಕೆಂದರೆ ಸ್ವಲ್ಪ ದಿನಗಳ ಹಿಂದೆಯಷ್ಟೇ ಗ್ರಾಮ ವಾಸ್ತವ್ಯ ಮಾಡಿದ ಗ್ರಾಮದ ಪಕ್ಕದ ಗ್ರಾಮವಿದು . ಆಗಲೂ ಇಲ್ಲಿನ ಜನರ ಗೋಳು ಅರಿತು ಸ್ಪಂದಿಸಿದವರು ಯಾರೂ ಇಲ್ಲ. ಕೇವಲ ಮಜಾ ಮಾಡಲು ಬಂದು ಹೋಗುತ್ತಾರೆ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದರು.
ಮಾದರಿ ಗ್ರಾಮ, ಅಮೃತ ಗ್ರಾಮ, ಸ್ವಚ್ಚ ಗ್ರಾಮ, ಶೌಚಾಲಯ ಮುಕ್ತ ಗ್ರಾಮ ಇವೆಲ್ಲವೂ ಬರೀ ನೆಪ ಮಾತ್ರಕ್ಕೆ ಅಷ್ಟೇ ಎಂಬ ಅನುಮಾನ ಇಲ್ಲಿನ ಜನರಲ್ಲಿ ಕಾಡುತ್ತಿದೆ.
ಇನ್ನು ಮುಂದಾದರೂ ಅಧಿಕಾರಿಗಳು, ಜನಪ್ರತಿನಿಧಿಗಳು ಎಚ್ಚೆತ್ತು ಬಿಕ್ಕೆಗುಟ್ಟೆ ಗ್ರಾಮಕ್ಕೆ ಸೂಕ್ತ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕಾಗಿದೆ.

ವಸತಿ ನೀಡುವ ವ್ಯವಸ್ಥೆ ಮಾಡುತ್ತೇವೆ
ಬಿಕ್ಕೆಗುಟ್ಟೆ ಗ್ರಾಮದಲ್ಲಿ ಅನೇಕ ಗುಡಿಸಲುಗಳು ಇವೆ. ಇನ್ನೂ ಕೆಲವರಿಗೆ ಅಂಬೇಡ್ಕರ್ ವಸತಿ ಯೋಜನೆಯಡಿ ಮನೆಯನ್ನು ನೀಡಿದ್ದೇವೆ. ಪ್ರಸ್ತುತ ಶಿಥಿಲಗೊಂಡ ಮನೆಗಳ ಫಲಾನುಗಳ ಪಟ್ಟಿಯನ್ನು ಕುರಂಕೋಟೆ ಗ್ರಾಂ.ಪಂ.ನಿಂದ ತಯಾರಿಸಿ ಸರ್ಕಾರಕ್ಕೆ ಕಳಿಸಿದ್ದೇವೆ. ಸರ್ಕಾರದಿಂದ ಆದೇಶ ಬಂದ ನಂತರ ವಸತಿ ಕೊಡುವ ವ್ಯವಸ್ಥೆ ಮಾಡುತ್ತೇವೆ. ಇ-ಸ್ವತ್ತು ಸೇರಿದಂತೆ ಗ್ರಾಮದ ಪ್ರತಿಯೊಂದು ಮನೆಗೂ ಎಲ್ಲಾ ರೀತಿಯ ದಾಖಲಾತಿಗಳನ್ನು ಗ್ರಾಂ.ಪಂ. ಮಟ್ಟದಲ್ಲಿ ನೀಡಲಾಗಿದೆ. ಇ-ಸ್ವತ್ತು ಎಂಬ ದಾಖಲೆಯ ಬಗ್ಗೆ ಗ್ರಾಮದ ಜನರಿಗೆ ಮಾಹಿತಿ ಗೊತ್ತಿಲ್ಲ ಅನಿಸುತ್ತೆ. ಆದರೆ ಪಂಚಾಯಿತಿ ಮಟ್ಟದಲ್ಲಿ ಎಲ್ಲಾ ದಾಖಲೆಗಳು ಇವೆ. ಬೆಸ್ಕಾಮ ಇಲಾಖೆಯವರು ಮನೆ ಇರುವವರಿಗೆ ವಿದ್ಯುತ್ ವ್ಯವಸ್ಥೆ ಕಲ್ಪಿಸಿದ್ದು, ಜನರು ವಿದ್ಯುತ್ ಬಿಲ್ ಪಾವತಿಸಿಲ್ಲ ಎಂಬ ಕಾರಣಕ್ಕಾಗಿ ಲೈನ್ ಕಟ್ ಮಾಡಿಕೊಂಡು ಹೋಗಿದ್ದಾರೆ. ಇ-ಬೆಳಕು ಯೋಜನೆಯಡಿ ಗ್ರಾಮಕ್ಕೆ ವಿದ್ಯುತ್ ನೀಡಲು ಕ್ರಮ ಕೈಗೊಳ್ಳುತ್ತೇವೆ. ಗುಡಿಸಲು ಮುಕ್ತ ಗ್ರಾಮ ಮಾಡಲು ಸರ್ಕಾರದಿಂದ ನಿವೇಶನಗಳು ಬಂದ ಕೂಡಲೇ ಅರ್ಹ ಫಲಾನುಭವಿಗಳಿಗೆ ಹಂಚಿಕೆ ಮಾಡುತ್ತೇವೆ.
ದೊಡ್ಡಸಿದ್ದಯ್ಯ, ಕಾರ್ಯನಿರ್ವಹಣಾಧಿಕಾರಿ ಕೊರಟಗೆರೆ ತಾಲ್ಲೂಕು ಪಂಚಾಯಿತಿ ..
ಕಾಡು ಪ್ರಾಣಿಗಳಿಗೆ ಆಹಾರವಾಗುವ ಭೀತಿ
ನಾವು ಬಿಕ್ಕೆಗುಟ್ಟೆ ಗ್ರಾಮದಲ್ಲಿ ಗುಡಿಸಲು ಕಟ್ಟಿಕೊಂಡು ಸುಮಾರು ೧೯-೨೦ ವರ್ಷಗಳಿಂದ ವಾಸ ಮಾಡುತ್ತಿದ್ದೇವೆ. ಅಧಿಕಾರಿಗಳು ಬರುತ್ತಾರೆ, ಹೋಗುತ್ತಾರೆ ಅಷ್ಟೇ. ವೊಟರ್ ಐಡಿ ಒಂದಿದೆ, ಆದರೆ ರೇಷನ್ ಕಾರ್ಡ್ ಇಲ್ಲ. ವೊಟ್ ಹಾಕಲು ಮಾತ್ರ ನಾವು ಬದುಕಿದ್ದೇವೆ. ನಮ್ಮ ಗುಡಿಸಿಲಿಗೆ ಸರಿಯಾಗಿ ಬಾಗಿಲಿಲ್ಲ. ಕಾಡು ಪ್ರಾಣಿಗಳು ಬಂದರೆ ಅವುಗಳಿಗೆ ಆಹಾರವಾಗುತ್ತೆವೆ.
ಲಕ್ಕಮ್ಮ, ಬಿಕ್ಕೆಗುಟ್ಟೆ ಗ್ರಾಮದ ಮಹಿಳೆ
ತಹಶೀಲ್ದಾರ್‌ರಿಂದ ಭರವಸೆ
ಸ್ವಲ್ಪ ದಿನಗಳ ಹಿಂದೆ ತಹಶೀಲ್ದಾರ್ ಮೇಡಂ ಅವರು ನಮ್ಮ ಗ್ರಾಮಕ್ಕೆ ಭೇಟಿ ನೀಡಿ ನಮ್ಮ ಕಷ್ಟಗಳಿಗೆ ಸ್ಪಂದಿಸುವ ಭರವಸೆ ನೀಡಿದ್ದಾರೆ. ಅನೇಕ ವರ್ಷಗಳಿಂದ ನಾವು ಗುಡಿಸಲು ಕಟ್ಟಿಕೊಂಡು ಬದುಕು ಸಾಗಿಸುತ್ತಿದ್ದೇವೆ. ಮನೆ ಕೊಡಿ ಎಂದು ಕೇಳಿದರೆ ನಾಳೆ ಆಗತ್ತೆ, ನಾಡಿದ್ದು ಆಗತ್ತೆ ಎಂದು ಪೊಳ್ಳು ಭರವಸೆಯನ್ನು ಗ್ರಾಂ.ಪಂ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ನೀಡುತ್ತಾರೆ. ಯಾವುದೇ ಅಧಿಕಾರಿಗಳು ನಮ್ಮ ಗ್ರಾಮಕ್ಕೆ ಭೇಟಿ ನೀಡಿ ನಮ್ಮ ಕಷ್ಟವನ್ನು ಆಲಿಸಿಲ್ಲ. ತಹಶೀಲ್ದಾರ್ ಒಬ್ಬರು ಸ್ಪಂದಿಸಿದ್ದಾರೆ.
ರತ್ನಮ್ಮ, ಬಿಕ್ಕೆಗುಟ್ಟೆ ಗ್ರಾಮದ ಭಕ್ತರು ಮಹಿಳೆ .
ಗ್ರಾಮ ಪಂಚಾಯಿತಿ ವ್ಯಾಪ್ತಿಯಿಂದ ಬಿಕ್ಕೆಗುಟ್ಟೆ ಗ್ರಾಮಕ್ಕೆ ಎಷ್ಟು ಸೌಲಭ್ಯವನ್ನು ಕಲ್ಪಿಸಲು ಸಾಧ್ಯವೋ ಎಲ್ಲವನ್ನು ತಲುಪಿಸುವ ಪ್ರಯತ್ನ ಮಾಡುತ್ತೇವೆ. ಜಲಜೀವನ್ ಮಿಷನ್ ಯೋಜನೆಯಡಿ ಪ್ರತಿಯೊಂದು ಮನೆಗೂ ನಲ್ಲಿ ವ್ಯವಸ್ಥೆ ಮಾಡಿ ಕೊಡುತ್ತೇವೆ.
ಶೈಲಜಾ, ಗ್ರಾ.ಪಂ ಅಧ್ಯಕ್ಷೆ.
ನನಗೆ ಎರಡು ಗ್ರಾಂ.ಪಂ.ಗಳ ಉಸ್ತುವಾರಿಯನ್ನು ವಹಿಸಿದ ಕಾರಣ ಎಲ್ಲಾ ಗ್ರಾಮಗಳಿಗೂ ಭೇಟಿ ನೀಡಲು ಸಾಧ್ಯವಾಗುತ್ತಿಲ್ಲ. ಇದೀಗ ಕುರಂಕೋಟೆ ಗ್ರಾಮ ಪಂಚಾಯ್ತಿ ಅಮೃತ ಗ್ರಾಮ ಯೋಜನೆಗೆ ಆಯ್ಕೆಯಾಗಿದ್ದು, ಆದಷ್ಟು ಬೇಗ ಇಂತಹ ಗುಡಿಸಲುಗಳು ಇರುವ ಗ್ರಾಮಗಳಿಗೆ ಭೇಟಿ ನೀಡಿ ನೂತನ ಮನೆ ಹಾಗೂ ಶೌಚಾಲಯ ನಿರ್ಮಿಸಿಕೊಳ್ಳಲು ಕ್ರಮ ಕೈಗೊಳ್ಳುತ್ತೇವೆ.
ರಂಗನಾಥ್, ಗ್ರಾಂ.ಪಂ, ಪಿಡಿಒ.
(ಇಂತಹ ಕಡು ಬಡ ಕುಟುಂಬಗಳು ಇರುವ ಈ ಗ್ರಾಮದಲ್ಲಿ ವಾಸಿಸಲು ಮನೆಯಿಲ್ಲ, ರಾತ್ರಿಯಾದರೆ ಗುಡಿಸಲ ಒಳಗೆ ಮಲಗಲು ಭಯ, ಇಲ್ಲಿ ಕಾಡು ಪ್ರಾಣಿಗಳ ಹಾವಳಿ ಹೆಚ್ಚು. ಎಲ್ಲದಕ್ಕಿಂತ ಹೆಚ್ಚಾಗಿ ಗ್ರಾಮದ ಹೆಣ್ಣು ಮಕ್ಕಳು ಬಹಿರ್ದೆಸೆಗೆ ಹೋಗಲು ಶೌಚಾಲಯಗಳು ಇಲ್ಲ, ಗ್ರಾಮದ ಎಲ್ಲರೂ ಮಲಗಿದ ಮೇಲೆ ಹೋಗಬೇಕು, ಇಲ್ಲ ಎಲ್ಲರೂ ಬೆಳಿಗ್ಗೆ ಎದ್ದೇಳುವ ಮುಂಚೆ ಹೋಗಬೇಕು. ಅತ್ತ ಕಾಡು ಪ್ರಾಣಿಗಳು ಹಾಗೂ ವಿಷ ಜಂತುಗಳ ಭಯ, ಇತ್ತ ಜನರು ಓಡಾಡುವ ಭಯ. ಈ ಕ್ರಮದ ಹೆಣ್ಣುಮಕ್ಕಳ ಗೋಳು ಕೇಳುವವರು ಯಾರು ಇಲ್ಲ. ಅಧಿಕಾರಿಗಳೇ ನಿಮ್ಮ ಮನೆಯ ಹೆಣ್ಣು ಮಕ್ಕಳಿಗೆ ಇದೇ ಪರಿಸ್ಥಿತಿಯಾದರೆ ಏನು ಮಾಡುತ್ತೀರಾ? ಎಂದು ಎಂದು ಆಕ್ರೋಶ ಹೊರಹಾಕಿದರು.)
ಸಾಮಾಜಿಕ ಜವಾಬ್ದಾರಿ ಪಾಲಿಸಿ
ನಮ್ಮ ಕೆಲಸ ಯಾವ ನಗರದಲಿ? ಯಾವ ಗ್ರಾಮಗಳಲ್ಲಿ ಏನು ಸಮಸ್ಯೆ ಇದೆ? ಅದನ್ನು ಅಧಿಕಾರಿಗಳ ಗಮನಕ್ಕೆ ತರುವುದು ಹಾಗು ಅಧಿಕಾರಿಗಳು ಅದನ್ನು ಅರ್ಥ ಮಾಡಿಕೊಂಡು ಪರಿಹಾರ ಒದಗಿಸಬೇಕಾಗಿದ್ದು ಅವರ ಕರ್ತವ್ಯ. ಅಧಿಕಾರಿಗಳಿಗೆ ಕಾಣದ ಸಮಸ್ಯೆಗಳು ಪತ್ರಕರ್ತರಿಗೆ ಕಾಣುತ್ತವೆ, ಅದನ್ನ ತಮ್ಮ ಮುಂದಿಟ್ಟಾಗ ಅದಕ್ಕೆ ಸೂಕ್ತ ಪರಿಹಾರ ಒದಗಿಸುವುದು ಅಧಿಕಾರಿಗಳ ಕರ್ತವ್ಯವೇ ಆಗಿರುತ್ತದೆ,
ಇನ್ನಾದರೂ ಬಿಕ್ಕೆಗುಟ್ಟೆ ಗ್ರಾಮಕ್ಕೆ ಮೂಲಭೂತ ಸೌಕರ್ಯಗಳನ್ನು ಒದಗಿಸಿ, ಇದು ನಾನು ಒಬ್ಬ ವರದಿಗಾರನಾಗಿ ಮಾತನಾಡುತ್ತಿಲ್ಲ, ಬದಲಾಗಿ ನಿಮ್ಮ ಮನೆ ಆಗಲಿ ಅಥವಾ ನಮ್ಮ ಮನೆ ಆಗಲಿ, ಯಾರ ಮನೆಯಾದರೂ ಸರಿ. ಹೆಣ್ಣು ಮಕ್ಕಳು ಇದ್ದಾಗ ಒಂದು ಶೌಚಾಲಯ ಇರಲೇಬೇಕು. ಇದು ನಮ್ಮ ನಿಮ್ಮೆಲ್ಲರ ಕರ್ತವ್ಯ.
ಒಬ್ಬ ಪತ್ರಿಕಾ ವರದಿಗಾರನಾಗಿ ಈ ಮಾತನಾಡುತ್ತಿಲ್ಲ ಒಬ್ಬ ಸಾಮಾನ್ಯ ಪ್ರಜೆಯಾಗಿ ಈ ಮಾತನ್ನು ತಮಗೆ ತಿಳಿಸುತ್ತಿದ್ದೇನೆ …
ವರದಿ :- ಹರೀಶ್ ಬಾಬು ಬಿ.ಹೆಚ್ ಕೊರಟಗೆರೆ.