ಭೂ ಹಗರಣ ವಿಚಾರದಲ್ಲಿ ಬಿಜೆಪಿಯ ಜಾಣಮೌನ ಒಳ ಒಪ್ಪಂದಕ್ಕೆ ಕಾರಣ : ಕಾಂಗ್ರೆಸ್ ಮುಖಂಡ ಹೊನ್ನಗಿರಿಗೌಡ ವಾಗ್ದಾಳಿ.

ಗುಬ್ಬಿ: ಕೋಟ್ಯಾಂತರ ಬೆಲೆ ಬಾಳುವ ಸರ್ಕಾರಿ ಜಮೀನು ಕಬಳಿಕೆ ಪ್ರಕರಣದಲ್ಲಿ ಉನ್ನತ ತನಿಖೆಗೆ ಆಗ್ರಹಿಸಿದರೂ ಸರ್ಕಾರ ಗಂಭೀರವಾಗಿ ಪರಿಗಣಿಸದಿರುವುದು ಗಮನಿಸಿದರೆ ಗುಬ್ಬಿ ಶಾಸಕರ ಜೊತೆ ಬಿಜೆಪಿ ಒಳ ಒಪ್ಪಂದ ಮಾಡಿಕೊಂಡಿದೆ ಎಂದು ಕಾಂಗ್ರೆಸ್ ಹೊನ್ನಗಿರಿಗೌಡ ನೇರ ಆರೋಪಿಸಿದರು.

ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಸುದ್ದಿ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ರಾಜ್ಯಸಭಾ ಚುನಾವಣೆಯಲ್ಲಿ ಮತ ಹಾಕಿದ ಕೃತಜ್ಞತೆ ಈ ರೀತಿ ತೋರಿಸಿಕೊಳ್ಳುತ್ತಿರುವ ಬಿಜೆಪಿ ಭೂ ಕಬಳಿಕೆ ಪ್ರಕರಣ ಉನ್ನತ ತನಿಖೆಗೆ ಜಾಣ ಮೌನ ವಹಿಸಿದೆ ಎಂದು ಟೀಕಿಸಿದರು.

450 ಎಕರೆ ಸರ್ಕಾರಿ ಜಮೀನು ಗುಳುಂ ಮಾಡಿದ ಪ್ರಕರಣ ಸೇರಿದಂತೆ ಬಗರ್ ಹುಕುಂ ಸಮಿತಿ ಮೂಲಕ ಮಂಜೂರಾದ ಜಮೀನುಗಳ ಬಗ್ಗೆ ಕೂಡಾ ಉನ್ನತ ಮಟ್ಟದ ತನಿಖೆಗೆ ಒಳಪಡಿಸಬೇಕಿದೆ. ಸರ್ಕಾರಿ ನೌಕರರು, ಅಧಿಕಾರಿಗಳು ಈ ಭ್ರಷ್ಟಾಚಾರಕ್ಕೆ ಮುಂದಾಗಿದ್ದಾರೆ ಎಂದರೆ ಪಟ್ಟ ಭದ್ರ ಹಿತಾಸಕ್ತಿ ಕೈವಾಡಗಳು ಸಾಕಷ್ಟಿದೆ. ಕಾಣದ ಕಿಂಗ್ ಪಿನ್ ಗಳ ಹೆಸರು ಬಯಲಿಗೆ ಬರಲು ಉನ್ನತ ತನಿಖೆಗೆ ಸರ್ಕಾರ ಮುಂದಾಗಲೇಬೇಕು ಎಂದು ಆಗ್ರಹಿಸಿದರು.

ಶಾಸಕರ ಹಿಂಬಾಲಕರು ಈ ಹಗರಣದಲ್ಲಿ ಸಿಕ್ಕಿಕೊಂಡಿದ್ದಾರೆ. ಈ ಬಗ್ಗೆ ಎಲ್ಲಾ ಮುಖಂಡರು ಆರೋಪಿಸಿದ್ದಾರೆ. ಆದರೂ ಈ ಹಗರಣ ನಾನೇ ಬಯಲಿಗೆ ತಂದೆ ಎನ್ನುವುದು ನೈತಿಕತೆ ಇರುವವರು ಮಾತನಾಡುವ ಮಾತಲ್ಲ ಎಂದು ವ್ಯಂಗ್ಯವಾಡಿದ ಅವರು ಬಿಜೆಪಿಯ ಮೂವರು ಮಂತ್ರಿಗಳು ಇದ್ದರೂ ಈ ಬಗ್ಗೆ ತುಟಿ ಬಿಚ್ಚಿಲ್ಲ. ಇವೆಲ್ಲಾ ಗಮನಿಸಿದರೆ ಶಾಸಕರಿಗೆ ಬಿಜೆಪಿ ಬೆನ್ನಿಗೆ ನಿಂತಿದೆ ಎಂದು ನೇರ ಆರೋಪ ಮಾಡಿ ಇದೇ ತಿಂಗಳ 25 ರಂದು ಬೃಹತ್ ಪ್ರತಿಭಟನೆ ಕಾಂಗ್ರೆಸ್ ನಡೆಸಲಿದೆ. ಸರ್ಕಾರಕ್ಕೆ ಒತ್ತಾಯಿಸಿ ಕಾನೂನಾತ್ಮಕ ಹೋರಾಟ ಸಹ ನಡೆಸುತ್ತೇವೆ ಎಂದು ಎಚ್ಚರಿಸಿದರು.

ಗುಬ್ಬಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್.ಎಲ್.ನರಸಿಂಹಯ್ಯ ಮಾತನಾಡಿ ಶಾಸಕರ ಸಹಿ ನಕಲಿ ಆಗಿದೆ ಅಂದರೆ ತಾಲ್ಲೂಕು ಆಡಳಿತ ಹಿಡಿತಕ್ಕೆ ತೆಗೆದುಕೊಳ್ಳುವಲ್ಲಿ ಶಾಸಕರು ಸಮರ್ಥರಾಗಿದ್ದಾರೆ. ಕಾಂಗ್ರೆಸ್ ಸರ್ಕಾರ ಬಡವರಿಗೆ ಜಮೀನು ನೀಡಿ ಸ್ವಾಭಿಮಾನಿ ಬದುಕು ಕಟ್ಟಿಕೊಟ್ಟರೆ, ಅದು ಈ ಮಟ್ಟದ ಹಗರಣಕ್ಕೆ ತುತ್ತಾಗಿರುವುದು ವಿಪರ್ಯಾಸ. 450 ಎಕರೆ ಜಮೀನು ಕಬಳಿಕೆ ಹೊರತಾದ ಸಮಿತಿಯಲ್ಲಿ ಮಂಜೂರಾತಿ ಮಾಡಿರುವ ಜಮೀನು ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಯಬೇಕು. ಈ ಬಗ್ಗೆ ಸರ್ಕಾರಕ್ಕೆ ಒತ್ತಾಯಿಸಿ ದಾಖಲೆ ಸಹಿತ ದೂರು ನೀಡಿ ತನಿಖೆಗೆ ಆಗ್ರಹಿಸುತ್ತೇವೆ ಎಂದರು.

ಕಾಂಗ್ರೆಸ್ ಮುಖಂಡ ಸಲೀಂಪಾಷಾ ಮಾತನಾಡಿ ಕಳೆದ ಹದಿನೈದು ವರ್ಷಗಳಿಂದ ರಜೆಯಲ್ಲಿರುವ ಶಾಸಕರು ಶಾಸಕತ್ವ ನಿರ್ವಹಣೆಯಲ್ಲಿ ಸೋತಿದ್ದಾರೆ. ಕೂಡಲೇ ರಾಜೀನಾಮೆ ಕೊಟ್ಟು ಬಡವರಿಗೆ ನ್ಯಾಯ ಒದಗಿಸಲು ಹೋರಾಟ ಮಾಡಿ ಉನ್ನತ ತನಿಖೆಗೆ ನೀವು ಆಗ್ರಹಿಸಬೇಕು ಎಂದ ಅವರು ನಿಮ್ಮ ಮೇಲೆ ಆರೋಪಿಸಿದವರನ್ನು ಹಾದಿ ಬೀದಿಯಲ್ಲಿ ನಿಂತು ಮಾತನಾಡುತ್ತಾರೆ ಎನ್ನುವುದನ್ನು ಮೊದಲು ಬಿಟ್ಟು ನೈತಿಕ ಜವಾಬ್ದಾರಿತನ ತೋರಿಸಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ನಿಟ್ಟೂರು ಬ್ಲಾಕ್ ಅಧ್ಯಕ್ಷ ನಿಂಬೆಕಟ್ಟೆ ಜಯಣ್ಣ, ಮುಖಂಡರಾದ ಜಿ.ಎಸ್.ಪ್ರಸನ್ನಕುಮಾರ್, ಟಿ.ಆರ್.ಚಿಕ್ಕರಂಗಯ್ಯ, ಮಹಮದ್ ಸಾದಿಕ್, ಜಿ.ವಿ.ಮಂಜುನಾಥ್, ಜಿ.ಎಂ.ಶಿವಾನಂದ್, ತ್ಯಾಗಟೂರು ವಸಂತಮ್ಮ, ರೂಪಾ, ಮಂಜುನಾಥ, ಮಾರಯ್ಯ ಇತರರು ಇದ್ದರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!