ಪಾವಗಡ: ತಾಲ್ಲೂಕಿನ ವೈ.ಎನ್ ಹೊಸಕೋಟೆಯಲ್ಲಿ ಶ್ರೀ ಧರ್ಮಸ್ಥಳದ ನೇತ್ರಾವತಿ ಜ್ಞಾನ ವಿಕಾಸ ಕೇಂದ್ರದ ಮೂಲಕ ಬಾಲ್ಯ ವಿವಾಹ ಮತ್ತು ಸ್ವಚ್ಛತೆಯ ಬಗ್ಗೆ ಪ್ರಾಯೋಗಿಕವಾಗಿ ಬೀದಿ ನಾಟಕದ ಕಾರ್ಯಕ್ರಮವನ್ನು ಸೋಮವಾರ ಹಮ್ಮಿಕೊಳ್ಳಲಾಗಿತ್ತು.ಹಾಗೆಯೇ ನಾಗಲಮಡಿಕೆ ವಲಯದ ಬುಡ್ಡರೆಡ್ಡಿ ವಲಯದ ಚೌಡೇಶ್ವರಿ ಜ್ಞಾನ ವಿಕಾಸ ಕೇಂದ್ರದಲ್ಲಿ ಕಾರ್ಯಕ್ರಮವನ್ನು ನಡೆಸಲಾಯಿತು.
ಇದೇ ವೇಳೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ತಾಲ್ಲೂಕು ಯೋಜನಾಧಿಕಾರಿ ನಂಜುಂಡಿಯವರು ಕಾನೂನಿನಡಿಯಲ್ಲಿ ವಯಸ್ಸಾಗದ ಮಕ್ಕಳಿಗೆ ವಿವಾಹ ಮಾಡಿದರೆ ಅದು ಕಾನೂನು ಬಾಹಿರ ಚಟುವಟಿಕೆ ಜೊತೆಗೆ ಮಕ್ಕಳ ಆರೋಗ್ಯದ ಮೇಲೆ ದುಷ್ಪಾರಿಣಾಮ ಬೀರಿ ಪ್ರಾಣಕ್ಕೆ ಕುತ್ತು ಬರುತ್ತದೆ.ಹಾಗಾಗಿ 18 ದಾಟಿದ ಮೇಲೆ ಮಕ್ಕಳ ಮದುವೆ ಮಾಡಬೇಕು,ಅಷ್ಟೊತ್ತಿಗೆ ಬದುಕುವ ಸ್ತೈರ್ಯ ಜ್ಞಾನ ಬರುತ್ತದೆ ಎಂದು ಸಲಹೆ ನೀಡಿದರು.
ಜಿಲ್ಲಾ ಪಂಚಾಯಿತಿ ಸದಸ್ಯೆ ಗೌರಮ್ಮ.ಎ ಮಾತನಾಡಿ ಶ್ರೀ ಧರ್ಮಸ್ಥಳ ಸಂಘದವರು ಕೇವಲ ಸಾಲಗಳನ್ನು ಕೊಟ್ಟು ಜನರ ಬದುಕನ್ನ ಉಜ್ವಲಗೊಳಿಸುವುದಲ್ಲದೆ. ಸಾಮಾಜಿಕ ಕಾಳಜಿಯುಳ್ಳ ಜಾಗೃತಿ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಸ್ಪೂರ್ತಿಯಾಗುತ್ತಾರೆ ಎಂದರು.
ವಿಶೇಷವಾಗಿ ವಾಲ್ಮೀಕಿ ಕಲಾ ತಂಡದವರು ಬಾಲ್ಯ ವಿವಾಹ ಮತ್ತು ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವ ಬೀದಿ ನಾಟಕ ನಡೆಸಿಕೊಟ್ಟರು.
ಈ ವೇಳೆ ಎ.ಎಸ್.ಐ ಹನುಮನಾಯ್ಕ,ಜ್ಞಾನ ವಿಕಾಸ ಸಮನ್ವಯಾಧಿಕಾರಿ ಉಷಾರಾಣಿ, ಮೇಲ್ವಿಚಾರಕ ದಯಾನಂದ್ ಸೇರಿದಂತೆ ಹಲವರು ಇದ್ದರು.