ಗುಬ್ಬಿ: ನಿರಂತರ ಮಳೆ ಬಂದ ಕಾರಣ ಪಟ್ಟಣದ ಸರ್ಕಾರಿ ಪದವಿ ಕಾಲೇಜು ನೀರಿನಿಂದ ಆವೃತವಾಗಿದೆ. ಈ ಜೊತೆಗೆ ಕೊಳಚೆ ನೀರು ಸಹ ಕಾಲೇಜು ವಾತವರಣ ಸಂಪೂರ್ಣ ಕಲುಷಿತಗೊಂಡು ವಿದ್ಯಾರ್ಥಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ಆರೋಪಿಸಿ ಎಬಿವಿಪಿ ಕಾರ್ಯಕರ್ತರು ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ತಾಲ್ಲೂಕು ಕಚೇರಿ ಮುಂದೆ ಜಮಾಯಿಸಿದ ವಿದ್ಯಾರ್ಥಿಗಳು ಮಳೆ ನೀರು ಈಗಾಗಲೇ ಅನಾರೋಗ್ಯಕ್ಕೆ ಕಾರಣವಾಗಿದೆ. ಈ ಬಗ್ಗೆ ಹಲವು ಬಾರಿ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ. ಸ್ಥಳೀಯ ಪಟ್ಟಣ ಪಂಚಾಯಿತಿ ನಮ್ಮ ಕಷ್ಟ ಅಳಿಸಿ ಶೀಘ್ರ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಸುಮಾರು 1300 ವಿದ್ಯಾರ್ಥಿಗಳು ಇರುವ ಈ ಪದವಿ ಕಾಲೇಜು ಇರುವ ಸ್ಥಳ ಈ ಹಿಂದೆ ಕೆರೆ ಎನ್ನಲಾಗುತ್ತಿದೆ. ಮಳೆ ಬಂದರೆ ಇಡೀ ಕಟ್ಟಡವೇ ದ್ವೀಪದಂತಾಗುತ್ತದೆ. ನಿಂತ ನೀರು ಹೊರಗಡೆ ಹೋಗದೇ ವಾರಗಟ್ಟಲೇ ನಿಲ್ಲುತ್ತದೆ. ಈ ಜೊತೆಗೆ ಎರಡು ಬಡಾವಣೆಯ ಚರಂಡಿ ನೀರು ಸಹ ಕಾಲೇಜು ಆವರಣಕ್ಕೆ ಸೇರುತ್ತದೆ. ಒಟ್ಟಾರೆ ನಿಂತ ನೀರು ಮಾರಕ ಸಾಂಕ್ರಾಮಿಕ ರೋಗಗಳಿಗೆ ಮೂಲವಾಗುತ್ತದೆ. ಸೊಳ್ಳೆಗಳು, ಹುಳು ಉಪ್ಪಟೆ ಹೆಚ್ಚಾಗಿದ್ದು ಹಾವುಗಳ ಸಹ ಕಾಲೇಜಿನಲ್ಲಿ ಕಾಣಿಸಿಕೊಂಡಿವೆ. ಇದು ಅಲ್ಲಿನ ವಿದ್ಯಾರ್ಥಿಗಳಿಗೆ ಭಯ ಹುಟ್ಟಿಸಿದೆ. ಈ ಕೂಡಲೇ ನಿಂತ ನೀರು ಹೊರ ಹಾಕಿ ಕೊಳಚೆ ನೀರು ಒಳಬಾರದಂತೆ ಮಾಡುವಂತೆ ಎಬಿವಿಪಿ ವಿಭಾಗ ಸಂಘಟನಾ ಕಾರ್ಯದರ್ಶಿ ಅಪ್ಪು ಪಾಟೀಲ್ ಆಗ್ರಹಿಸಿದರು.
ಕಾಲೇಜು ಹತ್ತು ಎಕರೆಯಲ್ಲಿ ನಿರ್ಮಾಣವಾಗಿದೆ. ಇಲ್ಲಿ ಕ್ರೀಡಾ ಮೈದಾನ ಸಹ ನೀರಿನಿಂದ ತುಂಬಿದೆ. ವಿದ್ಯಾರ್ಥಿಗಳಿಗೆ ಕ್ರೀಡಾ ಚಟುವಟಿಕೆ ನಡೆಸಲಾಗದ ದುಸ್ಥಿತಿ ಎದುರಾಗಿದೆ. ಪಕ್ಕದಲ್ಲೇ ನಿರ್ಮಾಣವಾದ ಲೈಬ್ರರಿಗೆ ಯಾವ ವಿದ್ಯಾರ್ಥಿ ಸಹ ತೆರಳಲು ಆಗುತ್ತಿಲ್ಲ. ಕಾಲೇಜು ಮುಂಭಾಗ ಕಸ ವಿಲೇವಾರಿ ಘಟಕವಾಗಿ ನಿರ್ಮಾಣವಾಗಿದೆ. ಕಸದ ರಾಶಿ ದುರ್ವಾಸನೆ ವಿದ್ಯಾರ್ಥಿಗಳು ಮೂಗು ಹಿಡಿದು ಓಡಾಡುವಂತಾಗಿದೆ. ಶಿಕ್ಷಣಕ್ಕೆ ಪೂರಕ ವಾತಾವರಣ ಇಲ್ಲಿಲ್ಲ. ಈ ಬಗ್ಗೆ ಕಾಲೇಜು ಆಡಳಿತ ಮಂಡಳಿ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ವಿದ್ಯಾರ್ಥಿನಿ ಚೈತ್ರಾ ದೂರಿದರು.
ನಂತರ ತಹಶೀಲ್ದಾರ್ ಬಿ.ಆರತಿ ಹಾಗೂ ಪಪಂ ಅಧ್ಯಕ್ಷ ಜಿ.ಎನ್. ಅಣ್ಣಪ್ಪಸ್ವಾಮಿ, ಮುಖ್ಯಾಧಿಕಾರಿ ಮಂಜುಳಾದೇವಿ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಎಬಿವಿಪಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಗಣೇಶ್, ಮಣಿಕಂಠ, ನಿತಿನ್ ಕುಮಾರ್, ನವೀನ್ ಕುಮಾರ್, ದೇವರಾಜ್, ಮಂಜುಳಾ, ನಂದಿನಿ, ಪಪಂ ಸದಸ್ಯರಾದ ಶೋಕತ್ ಆಲಿ, ಬಸವರಾಜು, ಪ್ರಕಾಶ್ ಇತರರು ಇದ್ದರು.