ಗುಬ್ಬಿ: ಕೃಷಿ ಬಿಕ್ಕಟ್ಟು ತೀವ್ರವಾಗಿ ನಡೆಯುತ್ತಿರುವ ಸರ್ಕಾರ ಸಲ್ಲದ ಕಾಯಿದೆ, ತೀರ್ಮಾನ ಹಾಗೂ ಕ್ರಮಗಳನ್ನು ಕೈಗೊಂಡು ಬಡ ರೈತರಿಗೆ ಅನ್ಯಾಯ ಮಾಡುತ್ತಿದೆ. ಈ ನಿಟ್ಟಿನಲ್ಲಿ ರೈತರ ಹಲವು ಹಕ್ಕೊತ್ತಾಯ ಈಡೇರಿಸುವಂತೆ ಆಗ್ರಹಿಸಿ ಗುಬ್ಬಿ ತಾಲ್ಲೂಕು ಕಚೇರಿಗೆ ಮುತ್ತಿಗೆ ಹಾಕಿದ ಪ್ರಾಂತ ರೈತ ಸಂಘದ ಸದಸ್ಯರು ಪ್ರತಿಭಟನೆ ನಡೆಸಿದರು.
ಪಟ್ಟಣದ ಬಸ್ ನಿಲ್ದಾಣದಿಂದ ಮೆರವಣಿಗೆ ಮೂಲಕ ತಾಲ್ಲೂಕು ಕಚೇರಿ ತಲುಪಿದ ಪ್ರಾಂತ ರೈತ ಸಂಘದ ಸದಸ್ಯರು ತಾಲ್ಲೂಕಿನಲ್ಲಿ ನಡೆದ ಭೂ ಕಬಳಿಕೆ ಪ್ರಕರಣವನ್ನು ಖಂಡಿಸಿದರು. ಹಲವಾರು ವರ್ಷದಿಂದ ಉಳುಮೆ ಮಾಡುತ್ತಿದ್ದ ರೈತರಿಗೆ ಬಗರ್ ಹುಕಂ ಸಮಿತಿ ಭೂಮಿ ನೀಡಬೇಕು. ಸಿರಿವಂತರ ಪಾಲಾದ ಜಮೀನು ಮುಟ್ಟುಗೋಲು ಹಾಕಿಕೊಂಡು ಅರ್ಹ ರೈತರಿಗೆ ನೀಡುವಂತೆ ಆಗ್ರಹಿಸಿದರು.
ಐತಿಹಾಸಿಕ ಹೋರಾಟ ಮಾಡಿದ ರೈತರ ಶ್ರಮದ ಫಲ ಕರಾಳ ಕೃಷಿ ಕಾಯಿದೆಯನ್ನು ಕೇಂದ್ರ ಸರ್ಕಾರ ಹಿಂಪಡೆದರೂ ರಾಜ್ಯ ಸರ್ಕಾರ ಮಾತ್ರ ಭೂ ಸುಧಾರಣಾ ಕಾಯಿದೆ, ಎಪಿಎಂಸಿ ತಿದ್ದುಪಡಿ ಕಾಯಿದೆ ಸೇರಿದಂತೆ ಇನ್ನಿತರ ಕಾನೂನು ಹಾಗೆಯೇ ಉಳಿಸಿಕೊಂಡಿದೆ. ಉಳುವವನಿಗೆ ಭೂಮಿ, ರೈತರೇ ದೇಶದ ಬೆನ್ನೆಲುಬು ಹೀಗೆ ಹಲವು ಘೋಷಣೆ ಹೇಳುತ್ತಲೇ ಸರ್ಕಾರ ರೈತರ ಬದುಕನ್ನು ಬೀದಿಗೆ ತಂದಿದೆ. ಈ ಜೊತೆಗೆ ಬಗರ್ ಹುಕುಂ ಸಮಿತಿಯಲ್ಲಿ ಮಂಜೂರಾಗುವ ಭೂಮಿಗೆ ರೈತರ ಒಡೆತನವಿಲ್ಲ ಎಂಬ ಹೇಳಿಕೆ ಈ ಕೂಡಲೇ ವಾಪಸ್ ಪಡೆಯಬೇಕು ಎಂದು ಪ್ರಾಂತ ರೈತ ಸಂಘದ ಜಿಲ್ಲಾ ಸಂಚಾಲಕ ಅಜ್ಜಪ್ಪ ಒತ್ತಾಯಿಸಿದರು.
ರೈತ ಮುಖಂಡ ಮಲ್ಲೇಶಯ್ಯ ಮಾತನಾಡಿ ಬಗರ್ ಹುಕುಂ ಸಮಿತಿಯಲ್ಲಿ ಮಂಜೂರಾದ ಜಮೀನು ಅನರ್ಹರಿಗೆ ನೀಡಲಾಗಿದೆ. ವ್ಯಾಪಕ ಭ್ರಷ್ಟಾಚಾರ ನಡೆದು ಗುಬ್ಬಿ ತಾಲ್ಲೂಕಿನಲ್ಲೇ 450 ಎಕರೆ ಆಕ್ರಮ ದಾಖಲೆ ಸೃಷ್ಟಿಸಿದ ಪ್ರಕರಣ ಸಾಕ್ಷಿಯಾಗಿದೆ. ಹಾಗಲವಾಡಿ ಹೋಬಳಿಯಲ್ಲಿರುವ ಮುಗ್ದ ರೈತರಿಗೆ ಸಾಕಷ್ಟು ಅನ್ಯಾಯವಾಗಿದೆ. ನಲವತ್ತು ವರ್ಷದಿಂದ ಅನುಭವದಲ್ಲಿರುವ ರೈತರಿಗೆ ಭೂಮಿ ನೀಡದೆ ವ್ಯಾಪಾರಸ್ಥರು, ಗುತ್ತಿಗೆದಾರರು, ಉದ್ದಿಮೆದಾರರು ಹೀಗೆ ಸಿರಿವಂತರ ಪಾಲು ಮಾಡಿದ ಭ್ರಷ್ಟ ಅಧಿಕಾರಿಗಳು ತಮ್ಮ ಕುಟುಂಬಕ್ಕೂ ಜಮೀನು ಮಾಡಿರುವ ಉದಾಹರಣೆ ನಮ್ಮಲ್ಲೇ ಇದೆ. ಈ ನಿಟ್ಟಿನಲ್ಲಿ ಭ್ರಷ್ಟರನ್ನು ಬಂಧಿಸಿ ವಂಚನೆಯಾದ ಭೂಮಿ ಮರಳಿ ಅರ್ಹ ರೈತರಿಗೆ ನೀಡಬೇಕು ಎಂದು ಒತ್ತಾಯಿಸಿದರು.
ರೈತ ಸಂಘದ ತಾಲ್ಲೂಕು ಅಧ್ಯಕ್ಷ ದೊಡ್ಡನಂಜಯ್ಯ ಮಾತನಾಡಿ ಬಂಡವಾಳಶಾಹಿಗಳಿಗೆ ಭೂಮಿ ನೀಡಿದ್ದು ಅಲ್ಲದೆ ಅಭಿವೃದ್ದಿ ಹೆಸರಿನಲ್ಲಿ ಲಕ್ಷಾಂತರ ಎಕರೆ ಫಲವತ್ತಾದ ಜಮೀನು ವಶಕ್ಕೆ ಪಡೆಯಲಾಗುತ್ತಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಬಗರ್ ಹುಕಂ ಸಮಿತಿಯ ಅರ್ಜಿ 50, 53, 57 ನಲ್ಲಿನ ಅನುಭದಲ್ಲಿರುವ ಅರ್ಹ ರೈತರಿಗೆ ನೀಡಬೇಕು. ಅರಣ್ಯ ಹಕ್ಕು ಮಾನ್ಯತೆ ಕಾಯಿದೆ ತಿದ್ದುಪಡಿ ತಂದು ರೈತರಿಗೆ ಹಕ್ಕುಪತ್ರ ನೀಡಬೇಕು. ಚೆನ್ನೈ ಬೆಂಗಳೂರು ಮುಂಬೈ ಕಾರಿಡಾರ್ ಯೋಜನೆ ಕೈ ಬಿಡಬೇಕು ಎಂದು ಒತ್ತಾಯಿಸಿದರು.
ನಂತರ ವಲಯ ಅರಣ್ಯಾಧಿಕಾರಿ ದುಗ್ಗಪ್ಪ ಅವರ ದೌರ್ಜನ್ಯ ಬಗ್ಗೆ ರೈತರು ಇಲ್ಲಿ ಹೇಳಿದರು. ಗಂಗಯ್ಯನಪಾಳ್ಯ ರೈತರ ವಿರುದ್ಧ ಅರಣ್ಯ ಇಲಾಖೆ ಸಾಕಷ್ಟು ತೊಂದರೆ ನೀಡುತ್ತಿದೆ. ಬಹಳ ವರ್ಷದಿಂದ ಅನುಭದಲ್ಲಿರುವ ಈ ಗ್ರಾಮವನ್ನೇ ಒಕ್ಕಲೆಬ್ಬಿಸುವ ಬೆದರಿಕೆ ಹಾಕಿದ್ದಾರೆ. ಕಂದಾಯ ಇಲಾಖೆ ಅಧಿಕಾರಿಗಳ ಬಗ್ಗೆ ಲಘುವಾಗಿ ಮಾತನಾಡಿ ದರ್ಪ ತೋರಿದ್ದಾರೆ ಎಂದು ಮನವಿ ಸ್ವೀಕರಿಸಲು ಆಗಮಿಸಿದ ಗ್ರೇಡ್ 2 ತಹಶೀಲ್ದಾರ್ ಶಶಿಕಲಾ ಅವರಲ್ಲಿ ದೂರಿದರು.
ಈ ಸಂದರ್ಭದಲ್ಲಿ ರೈತ ಪ್ರಾಂತ ಸಂಘದ ಬಸವರಾಜು, ನರಸಿಂಹಮೂರ್ತಿ, ಕೋದಂಡಸ್ವಾಮಿ, ಚಂದ್ರಯ್ಯ, ಉಮೇಶ್, ನಂಜುಂಡಯ್ಯ, ಶಿವರಾಜು, ರಾಮಕ್ಕ, ವಸಂತ, ಮಂಜುಳಾ ಇತರರು ಇದ್ದರು.