ಮಧುಗಿರಿ : 2023 ರ ವಿಧಾನಸಭಾ ಚುನಾವಣೆಯೇ ನನ್ನ ಕೊನೆಯ ಚುನಾವಣೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ ಎನ್ ರಾಜಣ್ಣ ತಿಳಿಸಿದರು.
ಪಟ್ಟಣದ ಎಂ.ಎನ್.ಕೆ ಸಮುದಾಯ ಭವನದಲ್ಲಿ ಭಾನುವಾರ ಸಿದ್ದರಾಮಯ್ಯನವರ 75ನೇ ಹುಟ್ಟುಹಬ್ಬದ ಅಂಗವಾಗಿ ದಾವಣಗೆರೆಯಲ್ಲಿ ನಡೆಯಲಿರುವ ಅಮೃತ ಮಹೋತ್ಸವ ಕಾರ್ಯಕ್ರಮ ಮತ್ತು ಆಗಸ್ಟ್ 15 ರಂದು ಬೆಂಗಳೂರಿನಲ್ಲಿ ನಡೆಯುವ ಸ್ವಾತಂತ್ರ್ಯದ ನಡಿಗೆ ಅಂಗವಾಗಿ ತಾಲೂಕಿನಲ್ಲಿ ಗ್ರಾ.ಪಂ ಕೇಂದ್ರದಿಂದ ಹೋಬಳಿ ಕೇಂದ್ರಕ್ಕೆ ನಡೆಯಲಿರುವ 75 ಕಿಲೋಮೀಟರ್ ಪಾದಯಾತ್ರೆಯ ಪೂರ್ವಭಾವಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಚುನಾವಣಾ ರಾಜಕೀಯದಿಂದ ನಿವೃತ್ತಿಯಾದರೂ ಸಕ್ರಿಯ ರಾಜಕಾರಣದಲ್ಲಿ ಇರುತ್ತೇನೆ ಎಂದರು.
ಸಿದ್ದರಾಮಯ್ಯನವರು ನಡೆದು ಬಂದ ದಾರಿಯನ್ನು ಯುವ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ದಾವಣಗೆರೆಯಲ್ಲಿ ಅಮೃತ ಮಹೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ 6 ಲಕ್ಷಕ್ಕೂ ಹೆಚ್ಚು ಮಂದಿ ಭಾಗವಹಿಸಲಿದ್ದು, ಕಾಂಗ್ರೆಸ್ ಪಕ್ಷದ ನಾಯಕರಾದ ರಾಹುಲ್ ಗಾಂಧಿ ಯವರೂ ಕಾರ್ಯಕ್ರಮದಲ್ಲಕ ಭಾಗವಹಿಸಲಿದ್ದಾರೆ. ಅಮೃತ ಮಹೋತ್ಸವ ಕಾರ್ಯಕ್ರಮದ ಅಧ್ಯಕ್ಷ ಸ್ಥಾನ ನನಗೆ ನೀಡಿರುವುದು ಜಿಲ್ಲೆಗೆ ಮತ್ತು ತಾಲೂಕಿಗೆ ತಂದ ಗೌರವ ಎಂದರು.
ಕಳೆದ ಕೆಲವು ದಿನಗಳಿಂದ ನನ್ನ ವಿರುದ್ದ ನಿರಂತರವಾಗಿ ರಾಜಕೀಯ ಸಂಘರ್ಷ ನಡೆಯುತ್ತಿದ್ದು, ವಿನಾ ಕಾರಣ ನನ್ನ ವಿರುದ್ದ ಅಪಪ್ರಚಾರ ಮಾಡಲಾಗುತ್ತಿದೆ. ನನ್ನನ್ನು ನಂಬಿರುವ ಕಾರ್ಯಕರ್ತರಿಗೆ ಧ್ವನಿ ಇಲ್ಲದವರಿಗೆ ತಳಸಮುದಾಯಕ್ಕೆ ರಾಜಕೀಯ ಅಧಿಕಾರ ನೀಡಲು ನಿರಂತರವಾಗಿ ಶ್ರಮಿಸುತ್ತೇನೆ. 2013 ರಿಂದ 18 ರ ವರೆಗೆ ತಾಲೂಕಿನಲ್ಲಿ 16000 ಮನೆಗಳನ್ನು ಮನೆಗಳನ್ನು ನಿರ್ಮಿಸಿದ್ದು, ಪ್ರಸ್ತುತ 60 ಮನೆಗಳನ್ನು ನಿರ್ಮಿಸಲು ಸಾಧ್ಯವಾಗಿಲ್ಲ ಎಂದು ಆರೋಪಿಸಿದರು.
ತಾಲೂಕಿನಲ್ಲಿ ಮತದಾರರ ನೋಂದಣಿ ಮಾಡಿಸುವ ಅಭಿಯಾನ ನಡೆಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಜಿ.ಜೆ. ರಾಜಣ್ಣ, ಡಿಸಿಸಿ ಬ್ಯಾಂಕ್ ನಿರ್ದೇಶಕರುಗಳಾದ ಬಿ.ನಾಗೇಶ್ ಬಾಬು, ಹನುಮಾನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನಯ್ಯ, ಪುರಸಭೆ ಮಾಜಿ ಅಧ್ಯಕ್ಷರುಗಳಾದ ಎಂ ಕೆ ನಂಜುಂಡಯ್ಯ, ಎಂ ಗಂಗಣ್ಣ, ಕೆ.ಪ್ರಕಾಶ್, ಸದಸ್ಯ ಎಂ.ಎಸ್ ಚಂದ್ರಶೇಖರ್, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಕೆಂಚಪ್ಪ, ಮಾಜಿ ಅಧ್ಯಕ್ಷ ಚಿಕ್ಕರಂಗಪ್ಪ, ಮುಖಂಡರುಗಳಾದ ಪಿ.ಟಿ ಗೋವಿಂದಯ್ಯ, ಡಿ. ಹೆಚ್ ನಾಗರಾಜು, ಜಿ.ಡಿ ವೆಂಕಟೇಶ್, ಗ್ರಾ.ಪಂ ಅಧ್ಯಕ್ಷ ಸಿದ್ದಾಪುರ ವೀರಣ್ಣ ಮತ್ತಿತರರಿದ್ದರು.