ಬಗರ್ ಹುಕುಂ ಕಮಿಟಿಯಿಂದ ಶಾಸಕರ ಬೆಂಬಲಿಗರಿಗೆ ಜಮೀನು : ಕಾಂಗ್ರೆಸ್ ಮುಖಂಡ ಹೊನ್ನಗಿರಿಗೌಡ ನೇರ ಆರೋಪ.

ಗುಬ್ಬಿ: ಭೂ ಕಬಳಿಕೆ ಪ್ರಕರಣ ತನಿಖೆ ಒಳಪಟ್ಟಂತೆ ಬಗರ್ ಹು ಕಮಿಟಿ ಮೂಲಕ ಮಂಜೂರಾದ ಜಮೀನುಗಳ ಬಗ್ಗೆ ಕೂಲಂಕುಷ ತನಿಖೆ ಆಗಬೇಕು. ಇಲ್ಲಿ ಶಾಸಕರ ಬೆಂಬಲಿಗರೇ ಹೆಚ್ಚು ಜಮೀನು ಮಾಡಿಕೊಂಡು ಡಿಸಿಸಿ ಬ್ಯಾಂಕ್ ಮೂಲಕ ಹತ್ತು ಲಕ್ಷ ರೂಗಳ ಸಾಲ ಪಡೆದಿದ್ದಾರೆ. ಗುಬ್ಬಿ ಪಟ್ಟಣದ ನಿವಾಸಿಗಳಾದ ಬೆಂಬಲಿಗರು ಹಾಗಲವಾಡಿ ಹೋಬಳಿಯಲ್ಲಿ ಜಮೀನು ಪಡೆದಿದ್ದಾರೆ. ಅರ್ಜಿ ಸಲ್ಲಿಸಿದ ಹಾಗೂ ಕಿಮ್ಮತ್ತು ಕಟ್ಟದ ಬೆಂಬಲಿಗರಿಗೆ ಜಮೀನು ಮಂಜೂರು ಮಾಡಿದ ಭ್ರಷ್ಟ ಅಧಿಕಾರಿಗಳು ಹಾಗೂ ಸಮಿತಿಯ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಕಾಂಗ್ರೆಸ್ ಮುಖಂಡ ಹೊನ್ನಗಿರಿಗೌಡ ಆಗ್ರಹಿಸಿದರು.

ಪಟ್ಟಣದ ಬಸ್ ನಿಲ್ದಾಣದಿಂದ ಮೆರವಣಿಗೆ ಮೂಲಕ ತಾಲ್ಲೂಕು ಕಚೇರಿ ತಲುಪಿದ ಕಾಂಗ್ರೆಸ್ ಕಾರ್ಯಕರ್ತರ ಬೃಹತ್ ಪ್ರತಿಭಟನೆಯಲ್ಲಿ ಮಾತನಾಡಿದ ಅವರು ಹತ್ತಾರು ವರ್ಷದಿಂದ ನಡೆದ ಈ ಅವ್ಯವಹಾರದಲ್ಲಿ ಜನ ಪ್ರತಿನಿಧಿಗಳ ಕೈವಾಡ ಇದೆ. ಶಾಸಕರ ಬೆಂಬಲಿಗರ ಪಾತ್ರ ಇರುವುದು ದಾಖಲೆ ಸಹಿತ ರುಜುವಾತು ಮಾಡಲಾಗಿದೆ. ಈ ಭ್ರಷ್ಟಾಚಾರವನ್ನು ಬಯಲಿಗೆ ತರಲು ತೀವ್ರ ತನಿಖೆ ಮಾಡಬೇಕಿದೆ. ಆದರೆ ಕಳೆದ ವಾರದಿಂದ ತನಿಖೆ ಮಂದಗತಿ ಕಂಡಿದೆ. ಇಲ್ಲೂ ಬಿಜೆಪಿ ಜಾಣ ಮೌನ ವಹಿಸಿದೆ. ಜಿಲ್ಲೆಯಲ್ಲಿರುವ ಮೂವರು ಸಚಿವರು, ಸಂಸದರು ಈ ಬಗ್ಗೆ ಚಕಾರ ಎತ್ತಿಲ್ಲ. ಈ ಮೌನವೇ ತಿಳಿಸುತ್ತೆ ಈ ಪ್ರಕರಣ ಹಳ್ಳ ಹಿಡಿಸುವ ಪ್ರಯತ್ನ ನಡೆದಿದೆ ಎಂದು ನೇರ ಆರೋಪ ಮಾಡಿದರು.

ಶಾಸಕರ ಬೆಂಬಲಿಗರ ಪಟ್ಟಿ ಮಾಡಿ ಅವರಿಗೆ ಜಮೀನು ಮಂಜೂರು ಆಗಿರುವ ದಾಖಲೆ ಸಹಿತ ಪ್ರಸ್ತಾಪಿಸಿದ ಅವರು ತಾಲ್ಲೂಕು ಕಚೇರಿ ಗುಮಾಸ್ತ ತಾತಾನಾಯಕ ಎಂಬಾತ ತನ್ನ ಬಾಮೈದುನನಿಗೆ ಮೂರು ಎಕರೆ ಜಮೀನು ನೀಡಿದ್ದಾನೆ. ಶಾಸಕರ ಬಲಗೈ ಭಂಟರಾದ ವಿಜಯ್ ಕುಮಾರ್ ಮತ್ತು ರೇಣುಕಾಪ್ರಸಾದ್ ಅವರಿಗೆ ಈಗಾಗಲೇ ಈ ದಾಖಲೆ ಮೇಲೆ ಹತ್ತು ಲಕ್ಷ ಸಾಲವನ್ನು ಡಿಸಿಸಿ ಬ್ಯಾಂಕ್ ನೀಡಿದೆ. ಇಂತಹ ಸಾಲಗಳ ಬಗ್ಗೆ ಬ್ಯಾಂಕ್ ಸಹ ತನಿಖೆ ನಡೆಸಬೇಕು. ಅರ್ಹ ರೈತನಿಗೆ ಸಿಗದ ಸಾಲ ನಕಲಿ ದಾಖಲೆಗೆ ಸಿಕ್ಕಿರುವುದು ವಿಷಾದನೀಯ. ಇಂತಹ ಮೋಸ ಮಾಡುವ ಪುಡಾರಿಗಳು ಹಿಂಡು ಇಲ್ಲಿವೆ. 137 ಜನರ ದಾಖಲೆ ಹೊರ ಬಂದು 450 ಎಕರೆ ಜಮೀನು ಪರಭಾರೆ ಬಗ್ಗೆ ತಿಳಿದ ಮೇಲೆ ಇನ್ನೂ ಕ್ರಿಮಿನಲ್ ಯೋಚನೆಗಳು ಹುಟ್ಟಿವೆ. ರೆಕಾರ್ಡ್ ರೂಂ ಭದ್ರಗೊಳಿಸದಿದ್ದರೆ ರೆಕಾರ್ಡ್ ಗಳಿಗೆ ಬೆಂಕಿ ಹಾಕುವುದಕ್ಕೂ ಸೈ ಎನಿಸಿಕೊಂಡವರು ಇಲ್ಲಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಖಂಡ ಜಿ.ಎಸ್.ಪ್ರಸನ್ನಕುಮಾರ್ ಮಾತನಾಡಿ ಕಳೆದ ಹದಿನೈದು ವರ್ಷದಿಂದ ಅತೀ ಹಿಂದುಳಿದ ಗುಬ್ಬಿ ತಾಲ್ಲೂಕಿಗೆ ಅನುದಾನ ಕೇಳಿದ ಗುಬ್ಬಿ ಶಾಸಕರು ಸಿಎಂ ಬೊಮ್ಮಾಯಿ ಅವರಿಗೆ ಪತ್ರ ಬರೆಯುವ ಮುನ್ನ ತಾವೇ ಹದಿನೈದು ವರ್ಷದ ಶಾಸಕರು ಎಂಬುದು ಮರೆತಿದ್ದೀರಿ. ಬಡವರ ಭೂಮಿಯನ್ನು ಕಿತ್ತುಕೊಂಡ ತಮ್ಮ ಬೆಂಬಲಿಗರ ಬಗ್ಗೆ ಪ್ರತಿಕ್ರಿಯೆ ನೀಡಬೇಕು. ಯಾವುದೇ ಅಭಿವೃದ್ದಿ ಕಾಣದ ಗುಬ್ಬಿ ತಾಲ್ಲೂಕು ಬಗ್ಗೆ ಪತ್ರ ಬರೆದು ನೂರು ಕೋಟಿ ಅನುದಾನ ಕೇಳಿದ್ದೀರಿ. ಅದೇ ಈ ಮೊದಲು ಜೆಡಿಎಸ್ ಪಕ್ಷದಲ್ಲಿದ್ದಾಗ ಈ ಆಸಕ್ತಿ ಇರಲಿಲ್ಲವೇಕೆ. ಈ ಹಿಂದೆ ಗುಬ್ಬಿ ಪಟ್ಟಣದಲ್ಲಿ ನಡೆದ ಯುಜಿಡಿ ಕಾಮಗಾರಿ 27 ಕೋಟಿ ಗುಳುಂ ಆಗಿದೆ. ಕೆಲಸ ಅಪೂರ್ಣಗೊಂಡು ಜನರಿಗೆ ಅನ್ಯಾಯವಾಗಿದೆ. ಈಗ ಚುನಾವಣೆಗೆ ಕೆಲ ತಿಂಗಳು ಬಾಕಿ ಇರುವಾಗ ಅನುದಾನ ಕೇಳಿದ್ದು ಚುನಾವಣೆಯ ಗಿಮಿಕ್ ಎಂದರು.

ವಕೀಲ ಟಿ.ಆರ್.ಚಿಕ್ಕರಂಗಯ್ಯ ಮಾತನಾಡಿ ಬಗರ್ ಸಮಿತಿಯಿಂದ ಅನ್ಯಾಯಕ್ಕೆ ಒಳಗಾದ ರೈತರು ಕಾಂಗ್ರೆಸ್ ಮುಖಂಡರನ್ನು ಭೇಟಿ ಮಾಡಿ ನಿಮ್ಮ ದಾಖಲೆ ನೀಡಿ ನ್ಯಾಯಾಲಯದಲ್ಲಿ ಉಚಿತವಾಗಿ ಕೇಸು ನಡೆಸಿಕೊಡುತ್ತೇವೆ. ಭೂ ಕಬಳಿಕೆ ತುಂಬಾ ಆಳವಾಗಿ ಬೇರೂರಿದೆ. ನ್ಯಾಯಯತವಾಗಿ ಹೋರಾಟ ಒಂದೇ ಮಾರ್ಗ. ಎಲ್ಲರೂ ಪಕ್ಷಾತೀತವಾಗಿ ಕೈ ಜೋಡಿಸಿ ಎಂದು ಕರೆ ನೀಡಿದರು.

ನಂತರ ತಹಶೀಲ್ದಾರ್ ಬಿ.ಆರತಿ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಕೆಪಿಸಿಸಿ ವಕ್ತಾರ ಮುರುಳಿಧರ ಹಾಲಪ್ಪ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್.ರಾಮಕೃಷ್ಣ, ಉಪಾಧ್ಯಕ್ಷ ಹೆಚ್.ಸಿ. ಹನುಮಂತಯ್ಯ, ಉಸ್ತುವಾರಿ ರೇವಣಸಿದ್ದಯ್ಯ, ಜಿಲ್ಲಾ ಕಾರ್ಯದರ್ಶಿ ಶಂಕರಾನಂದ, ಗುಬ್ಬಿ ಬ್ಲಾಕ್ ಅಧ್ಯಕ್ಷ ಎಸ್.ಎಲ್.ನರಸಿಂಹಯ್ಯ, ನಿಟ್ಟೂರು ಬ್ಲಾಕ್ ಅಧ್ಯಕ್ಷ ನಿಂಬೇಕಟ್ಟೆ ಜಯಣ್ಣ, ಮುಖಂಡರಾದ ಕೆ.ಆರ್.ತಾತಯ್ಯ, ಸಲಿಂಪಾಶ, ಜಿ.ಎಂ.ಶಿವಾನಂದ, ಜಿ.ವಿ.ಮಂಜುನಾಥ್, ತ್ಯಾಗಟೂರು ವಸಂತಮ್ಮ, ರೂಪ, ಲಾವಣ್ಯ, ಬೃಂದಾ ಇತರರು ಇದ್ದರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!