ಕಾಡು ಗೊಲ್ಲರ ಅಭಿವೃದ್ದಿ ನಿಗಮಕ್ಕೆ ಕನಿಷ್ಠ 300 ಕೋಟಿ ರೂಗಳ ಅನುದಾನ ಮೀಸಲಿಡಲಿ : ಕಾಡು ಗೊಲ್ಲರ ಸಂಘದ ತಾಲ್ಲೂಕು ಕಾರ್ಯಾಧ್ಯಕ್ಷ ಗುಡ್ಡದಹಳ್ಳಿ ಬಸವರಾಜು ಆಗ್ರಹ

ಗುಬ್ಬಿ: ಶಿರಾ ಉಪ ಚುನಾವಣೆ ಸಂದರ್ಭದಲ್ಲಿ ಕೊಟ್ಟ ಮಾತಿನಂತೆ ನಡೆದುಕೊಂಡ ಬಿಜೆಪಿ ಸರ್ಕಾರ ಕಾಡು ಗೊಲ್ಲರ ಅಭಿವೃದ್ದಿ ನಿಗಮಕ್ಕೆ ಅಧ್ಯಕ್ಷರಾಗಿ ಚಂಗಾವರ ಮಾರಣ್ಣ ಅವರನ್ನು ನೇಮಕ ಮಾಡಿರುವುದು ಇಡೀ ಕಾಡು ಗೊಲ್ಲ ಸಮಾಜಕ್ಕೆ ಸಂತಸ ತಂದಿದೆ. ಈ ಜೊತೆಗೆ ನಿಗಮದಲ್ಲಿ ಮೀಸಲಿಟ್ಟ 50 ಕೋಟಿ ರೂಗಳನ್ನು ಕನಿಷ್ಠ 300 ಕೋಟಿಗೆ ಏರಿಕೆ ಮಾಡಿ ಬುಡಕಟ್ಟು ಸಮಾಜವನ್ನು ಮುಖ್ಯವಾಹಿನಿಗೆ ತರಲು ಸಹಕರಿಸುವಂತೆ ಕಾಡು ಗೊಲ್ಲರ ಸಂಘದ ತಾಲ್ಲೂಕು ಕಾರ್ಯಾಧ್ಯಕ್ಷ ಗುಡ್ಡದಹಳ್ಳಿ ಬಸವರಾಜು ಮನವಿ ಮಾಡಿದರು.

ಪಟ್ಟಣದ ಶ್ರೀ ಪಂಚಮುಖಿ ಆಂಜನೇಯಸ್ವಾಮಿ ದೇವಾಲಯದ ಸಭಾಂಗಣದಲ್ಲಿ ಕಾಡು ಗೊಲ್ಲರ ಸಂಘ ಆಯೋಜಿಸಿದ್ದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಬಹುದಿನದ ಬೇಡಿಕೆಯಾಗಿರುವ ಕಾಡು ಗೊಲ್ಲರನ್ನು ಎಸ್ಟಿ ವರ್ಗಕ್ಕೆ ಸೇರಿಸುವ ಬಗ್ಗೆ ಕೂಡಲೇ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ನಿಗಮದ ಹೆಸರು ಬದಲಿಸುವ ಬಗ್ಗೆ ಗೊಂದಲ ಏರ್ಪಟ್ಟು ಕೊಂಚ ತಡವಾಗಿ ಚಾಲ್ತಿಗೆ ಬಂದ ಕಾಡು ಗೊಲ್ಲರ ಅಭಿವೃದ್ದಿ ನಿಗಮ ಚುರುಕಿನ ಕೆಲಸ ಮಾಡಬೇಕು. ಶಿಕ್ಷಣ ವಂಚಿತ ಜನರೇ ಹೆಚ್ಚಾಗಿರುವ ಈ ಬುಡಕಟ್ಟು ಗೊಲ್ಲರು ಕುರಿಗಾಹಿಗಳಾಗಿ ಜೀವನ ಸಾಗಿಸುತ್ತಾರೆ. ಊರಿಂದ ಊರಿಗೆ ಕುರಿ ಸಾಕುವ ಈ ಜನಾಂಗಕ್ಕೆ ಮೊದಲು ಕುರಿಗಳ ಮೇಲಿನ ವಿಮೆ ಹೆಚ್ಚಳ ಮಾಡಬೇಕು. ಮೃತಪಟ್ಟ ಕುರಿಗಾಹಿಗೆ 5 ಲಕ್ಷ ರೂಗಳ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ ಅವರು ಕಾಡು ಗೊಲ್ಲರ ಅಭಿವೃದ್ದಿ ನಿಗಮ ಚಾಲನೆಗೆ ಸಹಕರಿಸಿದ ಜಿಲ್ಲೆಯ ಎಲ್ಲಾ ಮಂತ್ರಿಗಳು, ಸಂಸದರು ಹಾಗೂ ಶಾಸಕರಿಗೂ ಅಭಿನಂದನೆಯನ್ನು ಇಡೀ ಸಮಾಜದ ಪರವಾಗಿ ಸಲ್ಲಿಸುತ್ತೇವೆ ಎಂದರು.

ಕಾಡು ಗೊಲ್ಲರ ಸಂಘದ ಜಿಲ್ಲಾ ಉಪಾಧ್ಯಕ್ಷ ಡಿ.ಕೆ.ಗಂಗಾಧರ್ ಮಾತನಾಡಿ ನಿಗಮದ ಅಧ್ಯಕ್ಷರಾಗಿ ಚಂಗವಾರ ಮಾರಣ್ಣ ಅವರ ಆಯ್ಕೆಗೆ ಇಡೀ ಸಮಾಜದ ಸಹಮತವಿದೆ. ನಿಗಮ ಮೂಲಕ ನಾಗರೀಕತೆಯಿಂದ ದೂರವಿದ್ದ ಬುಡಕಟ್ಟು ಗೊಲ್ಲರಿಗೆ ಸಾಮಾಜಿಕ, ಶೈಕ್ಷಣಿಕ ಪ್ರಗತಿಗೆ ಪೂರಕ ಕೆಲಸ ನಿಗಮ ಮಾಡಲಿ. ಮಾತಿನಂತೆ ನಡೆದ ಸರ್ಕಾರ ನಮ್ಮ ಸಮಾಜಕ್ಕೆ ಅವಶ್ಯ ಸವಲತ್ತು ಒದಗಿಸಬೇಕು. ಈ ನಿಗಮ ಮೂಲಕ ರಾಜಕೀಯ ಶಕ್ತಿ ಬೆಳೆಸಿಕೊಂಡು ರಾಜ್ಯದಲ್ಲಿ ಮುನ್ನಲೆಗೆ ಬರಬೇಕು. ಇಂತಹ ಕಾರ್ಯಕ್ಕೆ ಸಹಕಾರ ನೀಡಿದ ಜನ ಪ್ರತಿನಿಧಿಗಳಿಗೆ ಅಭಿನಂದನೆ ಸಲ್ಲಿಸುವುದು ನಮ್ಮ ಸಮಾಜದ ಕರ್ತವ್ಯ ಎಂದರು.

ಈ ಸಂದರ್ಭದಲ್ಲಿ ಕಾಡು ಗೊಲ್ಲರ ಮುಖಂಡರಾದ ಜುಂಜೇಗೌಡ, ಸದಾಶಿವ, ತಿಮ್ಮಪ್ಪನಹಟ್ಟಿ ಸಣ್ಣತಿಮ್ಮಯ್ಯ, ಶಿವರಾಜ್, ಲಕ್ಷ್ಮಣ ಇತರರು ಇದ್ದರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!