75 ನೇ ಸ್ವಾಂತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಅದ್ದೂರಿ ಮೆರವಣಿಗೆ : ಗುಬ್ಬಿ ಹಿತ ರಕ್ಷಣಾ ಸಮಿತಿ ಪೂರ್ವಭಾವಿ ಸಭೆ.

ಗುಬ್ಬಿ: 75 ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ನಡೆಯುವ ವಿಶೇಷ ಅಮೃತ ಮಹೋತ್ಸವವನ್ನು ಗುಬ್ಬಿ ಪಟ್ಟಣದಲ್ಲಿ ಅದ್ದೂರಿ ಮೆರವಣಿಗೆ ಮೂಲಕ ದೇಶಭಕ್ತಿಯ ಅನಾವರಣ ಮಾಡಲು ಗುಬ್ಬಿ ಹಿತ ರಕ್ಷಣಾ ಸಮಿತಿಯು ವಿವಿಧ ಸಂಘ ಸಂಸ್ಥೆಗಳ ಪೂರ್ವಭಾವಿ ಸಭೆ ನಡೆಸಿತು.

ಪಟ್ಟಣದ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಸಭಾಂಗಣದಲ್ಲಿ ಗುಬ್ಬಿ ಹಿತ ರಕ್ಷಣಾ ಸಮಿತಿ ಅಧ್ಯಕ್ಷ ಎಚ್.ಡಿ.ಯಲ್ಲಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ತಹಶೀಲ್ದಾರ್ ಬಿ.ಆರತಿ ಅವರ ನೇತೃತ್ವ ವಹಿಸಿದ್ದರು. ದೇಶ ಪ್ರೇಮ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಈ ಅಮೃತ ಮಹೋತ್ಸವ ಮೆರವಣಿಗೆ ಪಟ್ಟಣದ ಒಟ್ಟು 12 ಶಾಲೆಯ 2,200 ಮಕ್ಕಳು ಪಾಲ್ಗೊಂಡು ಅದ್ದೂರಿಯಾಗಿ ನಡೆಯಲಿದೆ. ಈ ಭವ್ಯ ಮೆರವಣಿಗೆ ಸಕಲ ರೀತಿ ಸಿದ್ಧತೆಗೆ ಸ್ಥಳೀಯ ಪಟ್ಟಣ ಪಂಚಾಯಿತಿ ಸಹಕಾರ ಪಡೆದು ನಡೆಸಲು ಚರ್ಚಿಸಲಾಯಿತು.

ಆಗಸ್ಟ್ ತಿಂಗಳ 15 ರಂದು ಸರ್ಕಾರಿ ಕಾರ್ಯಕ್ರಮ ವಿಶೇಷವಾಗಿ ನಡೆಯಲಿದೆ. ಇಲ್ಲಿ ಸರ್ಕಾರಿ ನೌಕರರು, ಶಾಲಾ ಮಕ್ಕಳು ಹೆಚ್ಚಾಗಿ ಪಾಲ್ಗೊಳ್ಳಲಿದ್ದಾರೆ. ಆದರೆ ಸಾರ್ವಜನಿಕರ ಸಹಭಾಗಿತ್ವ ಅತೀ ಮುಖ್ಯವಾದ ಕಾರಣ ಎಲ್ಲಾ ಸಾಮಾಜಿಕ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಅದ್ದೂರಿ ಮೆರವಣಿಗೆ ನಡೆಸಲು ಹಿತ ರಕ್ಷಣಾ ಸಮಿತಿ ಸಜ್ಜಾಗಿದೆ. ಹಾಗಾಗಿ ಆಗಸ್ಟ್ 13 ರ ಶನಿವಾರ ಪಟ್ಟಣದ ಶಾಲಾ ಮಕ್ಕಳು ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸೇರಿದಂತೆ ನಾಗರೀಕರ ಸಹಕಾರದಲ್ಲಿ ನಡೆಸಲು ಎಲ್ಲಾ ವ್ಯವಸ್ಥೆ ಬಗ್ಗೆ ಸಂಚಾಲಕ ಸಿ.ಆರ್.ಶಂಕರ್ ಕುಮಾರ್ ವಿವರಿಸಿದರು.

ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಬೆಳಿಗ್ಗೆ 9 ಕ್ಕೆ ಎಲ್ಲಾ ಶಾಲಾ ಮಕ್ಕಳು ಅವರ ಸಮವಸ್ತ್ರದಲ್ಲಿ ಹಾಜರಾಗಲಿದ್ದಾರೆ. ಶಾಲೆಗೆ ಒಂದು ರಾಷ್ಟ್ರ ಧ್ವಜ ನೀಡಿ ಮೆರವಣಿಗೆ ಆರಂಭವಾಗಿ ಪಟ್ಟಣದ ರಾಜಬೀದಿಗಳಲ್ಲಿ ಸಂಚರಿಸಿ ಮರಳಿ ಸರ್ಕಾರಿ ಜೂನಿಯರ್ ಕಾಲೇಜು ಮೈದಾನಕ್ಕೆ ಬರಲಿದೆ. ನಂತರ ಮಕ್ಕಳಿಗೆ ಲಘು ಉಪಹಾರ ನೀಡಲಾಗುವುದು. ಈ ಜಾಗೃತಿ ಮೆರವಣಿಗೆಗೆ ಮುನ್ನ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಪರಮೇಶ್ವರಪ್ಪ ಅವರಿಗೆ ಸನ್ಮಾನ ಮಾಡಿ ಗೌರವಿಸಲಾಗುವುದು ಎಂದು ಹೇಳಿದರು.

ಪಪಂ ಅಧ್ಯಕ್ಷ ಜಿ.ಎನ್. ಅಣ್ಣಪ್ಪಸ್ವಾಮಿ ಮಾತನಾಡಿ ಅಮೃತ ಮಹೋತ್ಸವ ಮೆರವಣಿಗೆ ನಾಗರೀಕರಲ್ಲಿ ದೇಶ ಭಕ್ತಿ ಮೂಡಿಸುವ ಕೆಲಸವಾಗಿದೆ. ಈ ಕಾರ್ಯಕ್ಕೆ ಪಟ್ಟಣ ಪಂಚಾಯಿತಿ ಸಹಕಾರ ನೀಡಲಿದೆ. ಮೆರವಣಿಗೆಗೆ ಅಗತ್ಯವಾದ ಬೆಳ್ಳಿ ರಥ ಹಾಗೂ ಭಾರತ ಮಾತೆಯ ಭಾವಚಿತ್ರ ಒದಗಿಸಲಾಗುವುದು. ದೇಶ ಭಕ್ತಿ ಗೀತೆಗಳನ್ನು ಒಳಗೊಂಡ ಸೌಂಡ್ ಸಿಸ್ಟಮ್, ಸಾಂಪ್ರದಾಯಕ ನಾದ ಸ್ವರ ವಾದ್ಯ, ನೀರಿನ ವ್ಯವಸ್ಥೆ ಮಾಡುವ ಭರವಸೆ ನೀಡಿದರು.

ಮೆರವಣಿಗೆ ಭವ್ಯತೆ ಹೆಚ್ಚಿಸಲು ಅನೇಕ ಸಲಹೆ ಸೂಚನೆ ನೀಡಿದ ಮುಖಂಡರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಈ 75 ನೇ ಸ್ವಾತಂತ್ರ್ಯ ದಿನಾಚರಣೆ ನೆನಪಿನಲ್ಲಿ ಉಳಿಯುವಂತೆ ನಡೆಸಲು ಮತ್ತಷ್ಟು ಮೆರಗು ಕಟ್ಟುವ ಸಲಹೆ ನೀಡಿದರು. ಆರ್ಥಿಕ ಕ್ರೋಢೀಕರಣ ಬಗ್ಗೆ ಸಹ ಚರ್ಚಿಸಿದರು. ದೇಶ ಪ್ರೇಮದ ದಾನಿಗಳ ಸಹಕಾರ ಪಡೆಯಲು ಪಟ್ಟಿ ಸಿದ್ಧ ಮಾಡಲಾಯಿತು. ಕೆಲವರು ಸ್ಥಳದಲ್ಲೇ ತಮ್ಮ ಸಹಕಾರ ವ್ಯಕ್ತಪಡಿಸಿದರು.

ನಂತರ ತಹಶೀಲ್ದಾರ್ ಬಿ.ಆರತಿ, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಪರಮೇಶ್ವರಪ್ಪ ಹಾಗೂ ಎಚ್.ಡಿ.ಯಲ್ಲಪ್ಪ ಮಾತನಾಡಿದರು.

ಸಭೆಯಲ್ಲಿ ಪಪಂ ಸದಸ್ಯರಾದ ಜಿ.ಆರ್.ಶಿವಕುಮಾರ್, ಜಿ.ಸಿ.ಕೃಷ್ಣಮೂರ್ತಿ, ಶೋಕತ್ ಆಲಿ, ಲಯನ್ಸ್ ಕ್ಲಬ್ ಅಧ್ಯಕ್ಷ ಸಿದ್ದಪ್ಪ, ಸಲಿಂಪಾಶ, ಕೆ.ಆರ್. ಅಶೋಕ್ ಕುಮಾರ್, ಹೋಟೆಲ್ ಮಾಲೀಕರ ಸಂಘದ ಕಾಂತರಾಜ್, ರಾಜ್ ಕುಮಾರ್ ಸಂಘದ ಅಧ್ಯಕ್ಷ ಗೋಪಾಲ್, ಪಪಂ ಮುಖ್ಯಾಧಿಕಾರಿ ಮಂಜುಳಾದೇವಿ ಇತರರು ಇದ್ದರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!